‘ಹೆಣ್ಣು ಮಕ್ಕಳಿಗೆ ದೇಗುಲಕ್ಕೆ ಪ್ರವೇಶ ಕೊಡದವರು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದಾರೆ ಎಂದು ಒಮ್ಮೆ ಪ್ರಶ್ನೆ ಹಾಕಿಕೊಳ್ಳಬೇಕು’
ಬೀದರ್
‘ಬಸವತತ್ವ ಸಮಾಜದಲ್ಲಿ ಆಚರಣೆಗೆ ಬಂದರೆ ಇಡೀ ಸಮಾಜ ಬದಲಾವಣೆ ಕಾಣಲು ಸಾಧ್ಯ. ಬಸವಣ್ಣ, ಬಸವತತ್ವ ಇರುವುದು ಬರೀ ಪೂಜೆಗಲ್ಲ, ಆಚರಣೆಗೆ ಬರಬೇಕು. ಅಕ್ಕಮಹಾದೇವಿ ಬರೀ ವಚನಗಳನ್ನು ಹೇಳಲಿಲ್ಲ. ಈ ಜೀವನವನ್ನು ಹೇಗೆ ಎದುರಿಸಬೇಕೆಂದು ತಿಳಿಸಿಕೊಟ್ಟಿದ್ದಾರೆ’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ನೆನಪಿಸಿದರು.
ಬಸವ ಸೇವಾ ಪ್ರತಿಷ್ಠಾನದಿಂದ ನಗರದ ಪಾಪನಾಶ ಸಮೀಪದ ಬಸವಗಿರಿಯಲ್ಲಿ ಹಮ್ಮಿಕೊಂಡಿರುವ 23ನೇ ವಚನ ವಿಜಯೋತ್ಸವದ ಎರಡನೇ ದಿನವಾದ ಮಂಗಳವಾರ ನಡೆದ ಸ್ತ್ರಿ ಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ದೌರ್ಜನ್ಯಗಳಾದರೆ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಠಾಣೆಗೆ ಹೋಗಿ ದೂರು ಕೊಟ್ಟರೂ ಪೊಲೀಸರು ಸ್ಪಂದಿಸದಿದ್ದರೆ ಠಾಣೆಯಲ್ಲಿ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ‘ಲೋಕಸ್ಪಂದನ’ಕ್ಕೆ ದೂರು ಸಲ್ಲಿಸಿದರೆ ಅದು ಮೇಲಧಿಕಾರಿಗಳಿಗೆ ತಲುಪುತ್ತದೆ. ಈ ಅರಿವು ಬೆಳೆಸಿಕೊಳ್ಳಬೇಕು, ಎಂದು ಹೇಳಿದರು.
‘ಪ್ರಜಾವಾಣಿ’ ಮುಖ್ಯ ಉಪ ಸಂಪಾದಕಿ ರಶ್ಮಿ ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ಪತ್ನಿ ಶೈನಿ ಗುಂಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ತ್ರೀ ಶಕ್ತಿ ಸಮಾವೇಶದ ಅಂಗವಾಗಿ ಸಾಮೂಹಿಕ ವಚನ ಪಾರಾಯಣಯವು ಭಕ್ತಿ, ಭಾವ ಶೃದ್ದೆಯಿಂದ ನಡೆಯಿತು.
ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಬಿಕಾ ಅಕ್ಕ ವಚನಗಳಲ್ಲಿ ಶರಣರ ದರ್ಶನವಿದೆ. ಮನೆ-ಮನಗಳಲ್ಲಿ ವಚನ ಸಾಹಿತ್ಯ ಹರಡಲಿ ಎಂದು ಪ್ರತಿವರ್ಷ ವಚನ ವಿಜಯೋತ್ಸವದಲ್ಲಿ ಸಾಮೂಹಿಕ ವಚನ ಪಾರಾಯಣ ಹಮ್ಮಿಕೊಳ್ಳಲಾಗುತ್ತಿದೆ, ಎಂದು ಹೇಳಿದರು.
ಮಹಿಳೆಯರನ್ನು ಸಮಾಜದಲ್ಲಿ ಹಿಂದೆ ತಳ್ಳುವ ಕೆಲಸ ಮಾಡಲಾಗುತ್ತಿದೆ. ಅನೇಕ ದೇವಾಲಯಗಳಲ್ಲಿ ಈಗಲೂ ಮಹಿಳೆಯರಿಗೆ ಪ್ರವೇಶವಿಲ್ಲ. ಹೆಣ್ಣು ಮಕ್ಕಳಿಗೆ ದೇಗುಲಕ್ಕೆ ಪ್ರವೇಶ ಕೊಡದವರು ಯಾರ ಹೊಟ್ಟೆಯಲ್ಲಿ ಹುಟ್ಟಿದ್ದಾರೆ ಎಂದು ಒಮ್ಮೆ ಪ್ರಶ್ನೆ ಹಾಕಿಕೊಳ್ಳಬೇಕು’ ಎಂದು ಹೇಳಿದರು.

ಸೊಲ್ಲಾಪೂರದ ಸಿಂಧೂತಾಯಿ ಕಾಡಾದಿ ಅವರಿಗೆ ಶರಣ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಬಳ್ಳಾರಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಶಾರದಮ್ಮತಾಯಿ ಬಳ್ಳಾರಿ ಅನುಭಾವ ನೀಡಿ, ವಚನಗಳಲ್ಲಿ ತತ್ವಜ್ಞಾನವಿದೆ, ಸಾಹಿತಿಕ ಅಂಶವಿದೆ. ಎಲ್ಲರಿಗೂ ನಿರಾಶೆಗೊಳಿಸದೆ ತೃಪ್ತಿಯನ್ನು ನೀಡುವ ವಿಶೇಷತೆ ವಚನ ಸಾಹಿತ್ಯದಲ್ಲಿದೆ, ಎಂದು ಹೇಳಿದರು.
ಬೀದರನ ಸಿದ್ಧಾರೆಡ್ಡಿ ಫೌಂಢೆಶನ್ ಅಧ್ಯಕ್ಷರಾದ ಡಾ. ಗುರಮ್ಮಾ ಸಿದ್ಧಾರೆಡ್ಡಿ ವಚನ ಪಠಣ ಮಾಡುವುದರ ಮೂಲಕ ಉದ್ಘಾಟಿಸಿದರು. ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕ್ರೆಪ್ಪಾ ಹೊನ್ನಾ ಅಧ್ಯಕ್ಷತೆ ವಹಿಸಿದರು. ಅತ್ತಿವೇರಿಯ ಬಸವೇಶ್ವರಿ ಮಾತಾಜಿ, ಬಸವಕಲ್ಯಾಣದ ಸತ್ಯದೇವಿ ತಾಯಿ ನೇತೃತ್ವ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಿದ್ರಾಮಪ್ಪಾ ಕಪಲಾಪೂರೆ, ಸುನೀಲ ಹೆಗಣೆ ಇವರಿಗೆ ಶರಣಾ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಬೀದರ ಮಕ್ಕಳಿಂದ ನಡೆದ ಸಾಮೂಹಿಕ ವಚನ ಗಾಯನ ಸೇರಿದ ಜನರ ಮನಸೂರೆಗೊಂಡವು. ನಿವೇದಿತಾ ಆರ್. ಸ್ವಾಮಿ ವಚನ ಸಂಗೀತ ನಡೆಸಿಕೊಟ್ಟರೆ, ನಾಟ್ಯಶ್ರೀ ನೃತ್ಯಾಲಯ ಮಕ್ಕಳಿಂದ ವಚನ ನೃತ್ಯ ಜರಗಿದವು.
ಪ್ರಭಾವತಿ ನಂದಿ ಸ್ವಾಗತಿಸಿದರೆ, ಮೀರಾಖೇಣಿ ನಿರೂಪಿಸಿದರು. ವಿಜಯಲಕ್ಷ್ಮಿ ಪಾಟೀಲ ಶರಣು ಸಮರ್ಪಿಸಿದರು.