ಇಳಕಲ್ಲ ಶಾಖಾಮಠದಲ್ಲಿ 3 ದಿನಗಳ ಗಡಿನಾಡ ಸಾಂಸ್ಕೃತಿಕ ಉತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಮೊಳಕಾಲ್ಮುರು

ತಾಲ್ಲೂಕಿನ ಸಿದ್ದಯ್ಯನಕೋಟೆ ಇಳಕಲ್ಲ ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಫೆ.15ರಿಂದ 17ರವರೆಗೆ 3 ದಿನಗಳ ಕಾಲ ಗಡಿನಾಡ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ.

ಬಸವಕೇಂದ್ರ, ಚಿತ್ತರಗಿ ವಿಜಯ ಮಹಾಂತೇಶ್ವರ ಮಠ, ಚಿತ್ತರಗಿ ಚಿಜ್ಯೋತಿ ಸಾಂಸ್ಕೃತಿಕ ಕಲಾವೇದಿಕೆ ಮತ್ತು ಕ್ರೀಡಾ ಯುವಕ ಸಂಘ, ಬಸವ ಅಂಬೇಡ್ಕರ್ ಜನಕಲ್ಯಾಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.15ರಂದು ಇಳಕಲ್ಲ ವಿಜಯ ಮಹಾಂತ ಗುರುಪೀಠದ ಗುರುಮಹಾಂತ ಸ್ವಾಮೀಜಿ ಸಮಗ್ರ ಕಾರ್ಯಕ್ರಮದ ಉದ್ಘಾಟನೆಯ ಸಾನ್ನಿಧ್ಯ ವಹಿಸುವರು. ಡಾ. ರಾಜಶೇಖರ ನಾರನಾಳ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಪಾರ್ವತಮ್ಮ ಬೋಸಯ್ಯ ಅಧ್ಯಕ್ಷತೆ ವಹಿಸುವರು.

ಸಂಜೆ 5.30ಕ್ಕೆ ‘ಶೈಕ್ಷಣಿಕ ಕ್ಷೇತ್ರದಲ್ಲಿ ಶರಣರ ಪಾತ್ರ’ ವಿಚಾರಗೋಷ್ಠಿ ನಡೆಯಲಿದೆ. ಚಿತ್ರದುರ್ಗ ಬೃಹನ್ಮಠದ ಬಸವಕುಮಾರ ಸ್ವಾಮೀಜಿ, ಲಿಂಗಸಗೂರಿನ ಸಿದ್ದಲಿಂಗ ಸ್ವಾಮೀಜಿ, ಗುಳೇದಗುಡ್ಡದ ಗುರುಸಿದ್ದ ಪಟ್ಟದಾರ್ಯ ಸ್ವಾಮೀಜಿ, ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ಸಂಜಯ ಬಿ.ಶೆಟ್ಟೆಣ್ಣವರ, ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಭಾಗವಹಿಸಲಿದ್ದಾರೆ.

ಫೆ.16ರಂದು ಸಂಜೆ ,6.30ಕ್ಕೆ ಮಹಾಂತ ‘ಗುರುಕಾರುಣ್ಯ’ ಪ್ರಶಸ್ತಿ ಪ್ರಧಾನ ನಡೆಯಲಿದೆ. ಉದ್ಘಾಟನೆಯನ್ನು ಸಚಿವ ಎಚ್‌.ಸಿ. ಮಹಾದೇವಪ್ಪ ಮಾಡಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎನ್.ವೈ. ಗೋಪಾಲಕೃಷ್ಣ ವಹಿಸಲಿದ್ದಾರೆ. ಸಾನ್ನಿಧ್ಯವನ್ನು ತಿಮ್ಮಾಪುರ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಮುದಗಲ್ಲ ಇವರು ವಹಿಸಲಿದ್ದಾರೆ. ಗೃಹಸಚಿವ ಜಿ.ಪರಮೇಶ್ವರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಚಿವರಾದ ಡಿ. ಸುಧಾಕರ, ಆರ್.ಬಿ. ತಿಮ್ಮಾಪುರ, ಮಾಜಿ ಸಚಿವ ಎಚ್‌.ಆಂಜನೇಯ, ಶಾಸಕರಾದ ಟಿ. ರಘುಮೂರ್ತಿ, ಡಾ. ಎನ್.ಟಿ. ಶ್ರೀನಿವಾಸ, ವಿಜಯಾನಂದ ಕಾಶಪ್ಪನವ‌ರ, ಕೆ.ಸಿ. ವೀರೇಂದ್ರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಫೆ.17ರಂದು ಬೆಳಿಗ್ಗೆ 10.30ಕ್ಕೆ ಬಸವತತ್ವ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಗುರುಮಹಾಂತ ಸ್ವಾಮೀಜಿ ವಹಿಸುವರು. ಚಿತ್ರದುರ್ಗ ಮಾದಾರ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಸಂಸದ ಗೋವಿಂದ ಕಾರಜೋಳ, ಸಚಿವ ಶಿವರಾಜ ಎಸ್‌.ತಂಗಡಗಿ, ವೀರಶೈವ ಸಮಾಜದ ಅಧ್ಯಕ್ಷ ಎಂ.ಡಿ. ಮಂಜುನಾಥ, ದಾವಣಗೆರೆ ಹುಚ್ಚಪ್ಪ ಬಳಗದ ಹುಚ್ಚಪ್ಪ ಮಾಸ್ತ‌ರ್ ಭಾಗವಹಿಸುವರು. ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ, ಜಾತ್ರಾ ಸಮಿತಿ ಅಧ್ಯಕ್ಷ ಪಟೇಲ್ ಜಿ. ಪಾಪನಾಯಕ, ಪಾಲಯ್ಯ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *