“ಏಕದೇವೋಪಾಸಕರಾಗಿ ನಿಷ್ಠೆಯಿಂದ ಇಷ್ಟಲಿಂಗವನ್ನು ಪೂಜಿಸಿದರೆ, ನಮ್ಮೊಳಗೇ ಇರುವ ದೇವರು ನಮಗೆ ಕಾಣಿಸುತ್ತಾನೆ.”
ಮಸ್ಕಿ
ಮಸ್ಕಿ ತಾಲ್ಲೂಕಿನ ಹೊಗರನಾಳ ಗ್ರಾಮದ ನಾಲ್ಕು ಶರಣ ಕುಟುಂಬದವರು ಕಾಲ್ಪನಿಕ ದೇವರ ಫೋಟೋ, ಲೋಹ, ಕಟ್ಟಿಗೆ ಮೂರ್ತಿಗಳನ್ನು ತಮ್ಮ ಜಗಲಿಯಿಂದ ತೆಗೆದು ಮನಗೂಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮೀಜಿ ಅವರ ಜೋಳಿಗೆಗೆ ಹಾಕಿದರು.
ಬಸವರಾಜಗೌಡ್ರು ವರದಾಪುರ, ಅಮರೇಗೌಡ ಮಾಲಿಪಾಟೀಲ, ಬಸವರಾಜ ಮಾಲಿಪಾಟೀಲ, ರುದ್ರಪ್ಪ ಮಟ್ಟೂರ ಅವರ ಮನೆಯವರು ಈಗ ಧರ್ಮಗುರು ಬಸವಣ್ಣನವರ ಭಾವಚಿತ್ರ ಕೂಡ್ರಿಸಿ, ಅವರನ್ನು ಸ್ಮರಣೆ ಮಾಡುತ್ತಿದ್ದಾರೆ.
ಗ್ರಾಮದ ಲಿಂಗೈಕ್ಯ ಅಮರೇಗೌಡ ಮಾಲಿ ಪಾಟೀಲರ ನೆನಹು ಕಾರ್ಯಕ್ರಮಕ್ಕೆ ವಿರತೀಶಾನಂದ ಶ್ರೀಗಳು ಗ್ರಾಮಕ್ಕೆ ಭೇಟಿಕೊಟ್ಟಾಗ ಈ ಕಾರ್ಯ ನಡೆಯಿತು.
ನಾವು ಕಾಲ್ಪನಿಕ ದೇವರುಗಳ ಮೌಡ್ಯ ಆಚರಣೆಗಳನ್ನು ಮಾಡಬಾರದು. ನಾವು ಜಗಲಿಯ ಮೇಲೆ ಧರ್ಮಗುರು ಬಸವಣ್ಣನವರ ಭಾವಚಿತ್ರವನ್ನು ಮಾತ್ರ ಇಡಬೇಕು ಮತ್ತು ಆ ಭಾವಚಿತ್ರವನ್ನು ಪೂಜಿಸಬಾರದು, ಕೇವಲ ಅವರ ಸ್ಮರಣೆ ಮಾಡಬೇಕು ಎಂದು ಶ್ರೀಗಳು ಹೇಳಿದರು.

ದಿನಾಲು ನಾವು ಬಸವಣ್ಣನವರು ಕೊಟ್ಟ ಇಷ್ಟಲಿಂಗವನ್ನು ವಚನ ಪಠಣದೊಂದಿಗೆ ಪೂಜಿಸಬೇಕು, ಲಿಂಗಾನುಸಂಧಾನ ಮಾಡಬೇಕು. ಇಷ್ಟಲಿಂಗದಲ್ಲಿಯೇ ನಾವು ಎಲ್ಲವನ್ನೂ ಕಾಣಬೇಕು.
ಏಕದೇವೋಪಾಸಕರಾಗಿ ನಿಷ್ಠೆಯಿಂದ ಇಷ್ಟಲಿಂಗವನ್ನು ಪೂಜಿಸಿದರೆ, ನಮ್ಮೊಳಗೇ ಇರುವ ದೇವರು ನಮಗೆ ಕಾಣಿಸುತ್ತಾನೆ, ಅದರ ಅರಿವು ನಮಗೆ ಮೂಡುತ್ತದೆ ಅದುವೇ ನಿಜಸುಖ ಎಂದರು. ದೇವರನ್ನು ತಂದೆ-ತಾಯಿ, ಅತ್ತೆ-ಮಾವಂದಿರಲ್ಲೂ ಕಾಣಬೇಕು ಎಂದು ವಿರತೀಶಾನಂದ ಸ್ವಾಮೀಜಿ ಹೇಳಿದರು.

ಭಕ್ತರಲ್ಲಿ ಈ ಮಹತ್ವದ ಬದಲಾವಣೆ ಬರಲು ಕಾರಣವೇನೆಂದು ಕೇಳಿದಾಗ ಭಕ್ತರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇವೆ, ಅವರಿಗೆ ಶರಣರ ವಚನ ಓದಲು ಹಚ್ಚುತ್ತೇವೆ. ಇದರಿಂದ ಅವರಲ್ಲಿ ಕ್ರಮೇಣ ಅರಿವು ಮೂಡಿ ಅವರು ಸಮಾಜವನ್ನು ನೋಡುವ ರೀತಿ, ಜಡ ವಸ್ತುಗಳ ಪೂಜೆ ಮಾಡುವ ರೀತಿ ಪ್ರಜ್ಞಾಪೂರ್ವಕವಾಗಿ ಬದಲಾಗಿದೆ ಎಂದರು.

ಗ್ರಾಮದ ಅನೇಕ ಮನೆಯವರು ನಮ್ಮ ಮನೆಗೂ ಬನ್ನಿರಿ, ನಮ್ಮ ಜಗುಲಿಯ ಮೇಲಿನ ದೇವರುಗಳನ್ನು ಸಹ ತೆರವುಗೊಳಿಸಲು ಈಗಾಗಲೇ ವಿನಂತಿಸಿಕೊಂಡಿದ್ದಾರೆ, ಮುಂದೆ ಅವರ ಅಪೇಕ್ಷೆಯನ್ನು ನೆರವೇರಿಸುತ್ತೇವೆ ಎಂದು ಸ್ವಾಮೀಜಿ ಹೇಳಿದರು.

ಉತ್ತಮ ಬೆಳವಣಿಗೆ,
ಪೂಜ್ಯರಿಗೆ & ಆ ಕುಟುಂಬದವರಿಗೆ ಶರಣು ಶರಣಾಥಿ೯ಗಳು.