ಸರಿಯಾದ ಆಹಾರಪದ್ಧತಿಯಿಂದ ಆರೋಗ್ಯಕರ ಬದುಕು ಸಾಧ್ಯ: ಸಿದ್ಧರಾಮ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಸರಿಯಾದ ಆಹಾರಪದ್ಧತಿ ಅನುಸರಿಸುವದರಿಂದ ಮನುಷ್ಯ ಆರೋಗ್ಯವಾಗಿ ಬದುಕಲು ಸಾಧ್ಯವಾಗುತ್ತದೆ. ಆಹಾರಪದ್ಧತಿಯಲ್ಲಿ ವ್ಯತ್ಯಾಸವಾದಾಗ ಅನಾರೋಗ್ಯ ಕಾಡುತ್ತವೆ, ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೩೨ ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶರಣರು ವಚನಗಳಲ್ಲಿ ಮನುಷ್ಯನ ಆಹಾರಪದ್ಧತಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ‘ಕಿರಿದು ಮಾಡಿರಣ್ಣ ಆಹಾರವ, ಕಿರಿದು ಮಾಡಿರಣ್ಣ’ ಎಂಬ ವಚನ ಆಹಾರ ಪದ್ಧತಿಯ ಮಹತ್ವವನ್ನು ತಿಳಿಸಿಕೊಡುತ್ತದೆ.

ಕ್ಯಾನ್ಸರ್ ರೋಗ ಮಾರಕವಾದ ರೋಗ. ೧೫೦ ವರ್ಷಗಳಿಂದ ಕ್ಯಾನ್ಸರ್ ರೋಗಕ್ಕೆ ಪೂರ್ಣಪ್ರಮಾಣದಲ್ಲಿ ಔಷಧಿ ಸಿಕ್ಕಿಲ್ಲ. ದುಶ್ಚಟಗಳಿಂದ ದೂರವಿದ್ದು, ಯೋಗ ಪ್ರಾಣಾಯಾಮಗಳಿಂದ ಆರೋಗ್ಯ ಕಾಯ್ದುಕೊಳ್ಳಬೇಕು. ಒತ್ತಡರಹಿತ ಜೀವನ ನಮ್ಮದಾಗಬೇಕು ಎಂದು ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಸ್ಪರ್ಶ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಧನೇಶ ದೇಸಾಯಿ ಮಾತನಾಡಿ, ಕ್ಯಾನ್ಸರ್ ರೋಗ ಬಹಳ ಅಪಾಯಕಾರಿ. ಅದು ಏಡಿ ಇದ್ದಂತೆ. ಹಿಡಿದರೆ ಬಿಡುವುದಿಲ್ಲ. ಭಾರತದಲ್ಲಿ ೧೫ ಲಕ್ಷ ಜನ ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಕ್ಯಾನ್ಸರ್ ರೋಗ ದೇಹದ ಯಾವುದೇ ಭಾಗದಲ್ಲಿ ಬರಬಹುದು. ಇದು ಒಂದು ಕಡೆ ಬಂದರೆ ದೇಹವನ್ನೆಲ್ಲಾ ವ್ಯಾಪಿಸಿ ಬಿಡುತ್ತದೆ. ತಂಬಾಕು ಸೇವನೆಯಿಂದ ತುಟಿಗೆ ಬರುತ್ತದೆ. ಅಲ್ಕೋಹಾಲ್‌ನಿಂದ ಲೀವರ್ ಕ್ಯಾನ್ಸರ್ ಬರುತ್ತದೆ.

ಎ.ಸಿ ಉಪಯೋಗಿಸುವುದರಿಂದ, ಬಹುಲೈಂಗಿಕ ಕ್ರಿಯೆಯಿಂದ, ಫ್ಯಾಕ್ಟರಿಯಿಂದ, ಬಾಹ್ಯ ಮತ್ತು ಆಂತರಿಕ ಕಾರಣಗಳಿಂದಲೂ ಕ್ಯಾನ್ಸರ್ ಬರಬಹುದು. ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಚರ್ಮ ಕ್ಯಾನ್ಸರ್ ಹೀಗೆ ಅನೇಕ ಪ್ರಕಾರದ ಕ್ಯಾನ್ಸರ್ ಬಗ್ಗೆ ತಿಳಿಸಿ, ಲಕ್ಷಣ ಮತ್ತು ಪರಿಹಾರಗಳ ಬಗ್ಗೆ ಅವಶ್ಯಕ ಮಾಹಿತಿಯನ್ನು ನೀಡಿದರು.

ಮೊದಲ ಹಂತದೊಳಗೆ ವೈದ್ಯರನ್ನು ಕಂಡು ಸೂಕ್ತವಾದ ಸಲಹೆಯನ್ನು ಪಡೆದರೆ ಕ್ಯಾನ್ಸರ್ ರೋಗದಿಂದ ಬದುಕಬಹುದು. ಮನುಷ್ಯನ ಜೀವನಶೈಲಿ ಬದಲಾಗಬೇಕು. ಆಹಾರ ಪದ್ದತಿ ಸುಧಾರಿಸಬೇಕು. ಮಿತ ಆಹಾರ ಸೇವನೆ ಇರಬೇಕು. ಪ್ರತಿ ದಿನ ಹಣ್ಣು ಹಾಲು ತರಕಾರಿ, ಮೊಳಕೆ ಕಾಳು ಸೇವಿಸಬೇಕು. ನಿದ್ದೆ ಚೆನ್ನಾಗಿ ಮಾಡಬೇಕು. ಕಿಮೋ ತೆರಪಿ, ರೇಡಿಯೋ ತೆರಪಿ, ಇಮಿನೋ ತೆರಪಿ ಬಗ್ಗೆ ತಿಳಿಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಮುರುಗೇಶ ಬಡ್ನಿ ಉಪಸ್ಥಿತರಿದ್ದರು. ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿದರು. ಧರ್ಮಗ್ರಂಥ ಪಠಣವನ್ನು ಐಶ್ವರ್ಯ ವಿ. ಕವಿಶೆಟ್ಟಿ, ವಚನ ಚಿಂತನವನ್ನು ಖುಷಿ ಎಂ. ಲಕ್ಕುಂಡಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ದಿ. ಮಹಾಂತಪ್ಪ ಬಡ್ನಿ ಇವರ ಸ್ಮರಣಾರ್ಥ ಶ್ರೀಮತಿ ಪುಷ್ಪಲತಾ ಮಹಾಂತಪ್ಪ ಬಡ್ನಿ ಹಾಗೂ ಕುಟುಂಬ ವರ್ಗದವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಸಹಚೇರ್ಮನ್ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.

ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಅತಿಥಿಗಳ ಪರಿಚಯ ಡಾ. ಉಮೇಶ ಪುರದ ಮಾಡಿದರು. ಅಶೋಕ್ ಹಾದಿ ಕಾರ್ಯಕ್ರಮ ನಿರೂಪಿಸಿದರು.

Share This Article
Leave a comment

Leave a Reply

Your email address will not be published. Required fields are marked *