ಅಂಬೇಡ್ಕರ್ ಸಂವಿಧಾನದ‌ ಪೀಠಿಕೆಯಲ್ಲೇ ಬಸವ ತತ್ವವಿದೆ: ಡಾ. ಜಿ.ಪರಮೇಶ್ವರ

ಬಸವ ಮೀಡಿಯಾ
ಬಸವ ಮೀಡಿಯಾ

ಸಿದ್ದಯ್ಯನಕೋಟೆ

ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ಸಮಾಜದ ನ್ಯೂನತೆಗಳನ್ನು ಅರ್ಥ ಮಾಡಿಕೊಂಡು, ಜಾತಿ-ಧರ್ಮ ಮನುಷ್ಯ ಕುಲಕ್ಕೆ ಅಪಮಾನ ಎಂದು ತಿಳಿದು ಸಮಾನತೆಯ ತತ್ವವನ್ನು ಎಲ್ಲೆಡೆ ಸಾರಿದರು. ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ‌ ಪೂರ್ವಪೀಠಿಕೆಯಲ್ಲಿ ಉಲ್ಲೇಖವಾಗಿರುವ ಸಮಾನತೆ, ಭ್ರಾತೃತ್ವದ ಪದಗಳು ಬಸವಣ್ಣನವರ ತತ್ವಗಳಾಗಿವೆ, ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಸಿದ್ದಯ್ಯನಕೋಟೆಯ ಚಿತ್ತರಗಿ ಇಳಕಲ್ಲ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠ ಹಾಗೂ ಬಸವ ಅಂಬೇಡ್ಕರ್ ಜನಕಲ್ಯಾಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ‘ಗಡಿನಾಡ ಸಾಂಸ್ಕೃತಿಕ ಉತ್ಸವ-2025’ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿ ಶ್ರೀ ಮಠದ ಶ್ರೀಗಳಿಗೆ ಗುರು ವಂದನೆ ಸಲ್ಲಿಸಿದರು.

ಬಡ ಮಕ್ಕಳಿಗೆ ಆಶ್ರಯ, ಶಿಕ್ಷಣ ನೀಡುವ ಮಠದ ಮಹತ್ವದ ಕಾರ್ಯಕ್ಕೆ ಯಶಸ್ಸಾಗಲಿ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಾಖಾಮಠ ವತಿಯಿಂದ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರಿಗೆ ‘ಚಿತ್ತರಗಿ ಮಹಾಂತ ಗುರು ಕಾರುಣ್ಯ’ ಪ್ರಶಸ್ತಿಯನ್ನು ನೀಡಿ ಶನಿವಾರ ಆಶಿರ್ವದಿಸಲಾಯಿತು.

ಇಳಕಲ್ಲ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಮಹಾಸ್ವಾಮಿಗಳು, ಸಿದ್ದಯ್ಯನಕೋಟೆಯ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.

ಶನಿವಾರದಿಂದ ಶುರುವಾದ ಮೂರುದಿನಗಳ ಮಠದ ಗಡಿನಾಡ ಸಾಂಸ್ಕೃತಿಕ ಉತ್ಸವಕ್ಕೆ ಶರಣ ದಂಪತಿ ವಿಜಯಲಕ್ಷ್ಮಿ ಮತ್ತು ರಾಜಶೇಖರ್ ನಾರನಾಳ ಅವರು ಷಟ್ಸ್ಥಲ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.

ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ ಮಾತಾಡಿದ ಡಾ.ರಾಜಶೇಖರ ನಾರನಾಳ , ಸಿದ್ದಯ್ಯನ ಕೋಟೆ ಮಠ ನಡೆದುಬಂದ ಹಾದಿ ಮತ್ತು ಮಠದ ಪ್ರಾರಂಭದಿಂದ ಇಂದಿನವರೆಗೂ ಬಸವಲಿಂಗ ಮಹಾ ಸ್ವಾಮಿಗಳು ಮಾಡಿದ ಸಮಾಜ ಸೇವೆ ಮತ್ತು ಕಾಯಕ ನಿಷ್ಠೆಯ ಬಗ್ಗೆ ಮಾತಾಡುತ್ತಾ, ಸಿದ್ದಯ್ಯನ ಕೋಟೆಯ ಮಠ, ಬರಡು ಭೂಮಿಯಲ್ಲೊಂದು ಆಧ್ಯಾತ್ಮಿಕ ಹಸಿವು ತಣಿಸುವ ಹಸಿರು ತಾಣದಂತಿದೆ.

ಪೂಜ್ಯರು ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ, ಬಸವತತ್ವವನ್ನು ಮನೆ ಮನಗಳಲ್ಲಿ ಬಿತ್ತಿದ್ದಾರೆ. ಜನರ ದುಶ್ಚಟಗಳನ್ನು ಜೋಳಿಗಿಗೆ ಬೇಡುತ್ತಾ, ಸುತ್ತಮುತ್ತ ಹಳ್ಳಿಗಳಲ್ಲಿ ದುಶ್ಚಟಗಳಿಂದ ಯುವಕರನ್ನು ದೂರ ಮಾಡಲು ಪ್ರಯತ್ನ, ಬಸವತತ್ವದ ಕಡೆ ಅವರು ಮುಖ ಮಾಡುವಂತೆ ಮಾಡಿದ್ದಾರೆ.

ತಾವೆ ಖುದ್ದಾಗಿ ಕೃಷಿ ಕಾಯಕವ ಮಾಡುತ್ತಾ, ಹೊಲದಲ್ಲಿ ಭತ್ತ ಬೆಳೆದು ಅದರಿಂದ ದಾಸೋಹ ಮಾಡುವ ನಿಜ ಕಾಯಕಯೋಗಿ ಆಗಿದ್ದಾರೆ. ಅವರ ಈ ಕಾಯಕವನ್ನು ಗುರುತಿಸಿ ಕಾಯಕಯೋಗಿ ರೈತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರು ಬರಿ ಪ್ರಸಾದ ದಾಸೋಹಿಗಳು ಅಷ್ಟೇ ಅಲ್ಲ, ಜ್ಞಾನ ದಾಸೋಹಿಗಳು ಸಹ. ಮಠದಲ್ಲಿ 150 ಮಕ್ಕಳಿಗೆ ವಸತಿ ಮತ್ತು ಅನ್ನದಾಸೋಹ ಮಾಡುತ್ತಾ, ತಾವೆ ಸ್ವತಃ ತಮ್ಮ ಕೈಯಾರೆ ಪ್ರಸಾದ ತಯಾರಿಸಿ ಮಕ್ಕಳಿಗೆ ಉಣಬಡಿಸುವ ತಾಯಿ ಹೃದಯಿ ಸ್ವಾಮಿಗಳು ಆಗಿದ್ದಾರೆ. ಸಮಾಜದ ಬಗೆಗಿನ ಇಂತಹ ಕರುಣೆ, ಪ್ರೀತಿ, ಮಮತೆಯಿರುವ ಸ್ವಾಮಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ವೇದಿಕೆಯ ಮೇಲೆ ಡಾ. ರಂಗಪ್ಪ ನಿರ್ದೇಶಕರು, ಪಶುಸಂಗೋಪನೆ ಇಲಾಖೆ, ಸಿ. ಭಕ್ತಪ್ರಹ್ಲಾದ, ಜಿಂಕಾ ಶ್ರೀನಿವಾಸಮೂರ್ತಿ, ಡಿ. ಬಸವರಾಜ, ಎಸ್. ಖಾದರ್ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ರಾಮಾಪುರ ಗ್ರಾಂ.ಪಂ. ಅಧ್ಯಕ್ಷೆ ಪಾರ್ವತಮ್ಮ ಬೋಸಯ್ಯ ವಹಿಸಿದ್ದರು.

ವಚನ ಪ್ರಾರ್ಥನೆಯನ್ನು ಶರಣೆ ವಿಜಯಲಕ್ಷ್ಮಿ ನಾರನಾಳ ಮಾಡಿದರು. ನಿರೂಪಣೆಯನ್ನು ಶರಣೆ ಪ್ರತಿಭಾ ಅವರು ನಡೆಸಿಕೊಟ್ಟರು. ನೂರಾರು ಶರಣ-ಶರಣೆಯರು ಉಪಸ್ಥಿತರಿದ್ದರು.

ಮೊಳಕಾಲ್ಮೂರು ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಮಾಜಿ ಸಚಿವರಾದ ಹೆಚ್.ಆಂಜನೇಯ ಮುಂತಾದ ಮುಖಂಡರು ಉಪಸ್ಥಿತರಿದ್ದರು.

ಸಚಿವ ಪರಮೇಶ್ವರ ರವರು, ಬಳಿಕ ಮಿನಿ ಒಲಂಪಿಕ್ಸ್‌ನಲ್ಲಿ ಭಾಗವಹಿಸಿ ವಿಜೇತಾರಾಗಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

Share This Article
Leave a comment

Leave a Reply

Your email address will not be published. Required fields are marked *