ಹರಪನಹಳ್ಳಿ
ಹರಪನಹಳ್ಳಿಯಲ್ಲಿ ಜನದನಿ ಸಾಹಿತ್ಯ ವೇದಿಕೆ ಮತ್ತು ಇತರ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ತಾಲ್ಲೂಕು ಪಂಚಾಯತ ಸಾಮರ್ಥ್ಯ ಸೌಧದಲ್ಲಿ ಪ್ರಗತಿಪರ ಚಿಂತಕ ಶಿವಸುಂದರ್ ಅವರು ರಚಿಸಿರುವ ಸಂವಿಧಾನ V/S ಸನಾತನವಾದ ಪುಸ್ತಕ (ಲಡಾಯಿ ಪ್ರಕಾಶನ) ಬಿಡುಗಡೆ ಕಾರ್ಯಕ್ರಮ ನೆರವೇರಿತು.
ಪುಸ್ತಕವನ್ನು ಅಕ್ಷರದಾಸೋಹ, ಅಂಗನವಾಡಿ, ಆಶಾ, ಶಿಕ್ಷಕಿ ಹೀಗೆ ಐದು ಜನ ಶ್ರಮಜೀವಿ ವರ್ಗದ ಪ್ರತಿನಿಧಿಗಳಾದ ಪದ್ಮಲತಾ, ಎ.ಪಿ. ಪುಷ್ಪ, ಬಸಮ್ಮ, ನಿರ್ಮಲ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.

ಭಾರತದಲ್ಲಿ ಮತ್ತೆ ಸನಾತನವಾದವನ್ನು ಪುನರುಜ್ಜೀವನಗೊಳಿಸಲು ಪಣತೊಟ್ಟ ಆರೆಸ್ಸೆಸ್ ಹಾಗೂ ಅದರ ಅಂಗ ಸಂಸ್ಥೆಗಳು ಸ್ವಾತಂತ್ರ್ಯ ಬಂದಾಗಿನಿಂದಲೂ ಸಂವಿಧಾನವನ್ನು ವಿರೋಧಿಸುತ್ತಿವೆ ಎಂದು ಚಿಂತಕ, ವಕೀಲ ಸುಧೀರಕುಮಾರ ಮರೋಳಿ ಹೇಳಿದರು.
ಲೇಖಕ ಶಿವಸುಂದರ್ ಮಾತನಾಡಿ, ಸಿಟಿಜನ್ ಫಾರ್ ಸೋಶಿಯಲ್ ಜಸ್ಟಿಸ್ ಹೆಸರಿನಲ್ಲಿ ಸಂಘ ಪರಿವಾರ ಕಳೆದ ಕೆಲ ತಿಂಗಳಿಂದ ಸಂವಿಧಾನ ಅಭಿಯಾನ ನಡೆಸುತ್ತಿದೆ. ಅದರಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಸುಳ್ಳು ಹಾಗೂ ಅಪಪ್ರಚಾರ ಮಾಡುತ್ತಿದೆ. ಇದನ್ನು ಜನರ ಮುಂದೆ ಬಿಚ್ಚಿಡುವ ಉದ್ಧೇಶದಿಂದ ಈ ಕಿರು ಹೊತ್ತಿಗೆ ಬರೆದು ಬಿಡುಗಡೆ ಮಾಡಲಾಗಿದೆ ಎಂದರು.

ದೇಶದಲ್ಲಿ ದ್ವೇಷದ ಗಾಳಿ ಬೀಸುತ್ತಿದೆ. ರಾಜಕಾರಣಿಗಳು ಯುವಕರನ್ನು ಭಾವನಾತ್ಮಕವಾಗಿ ಹಿಡಿದುಕೊಳ್ಳುವ ತಂತ್ರ ಮಾಡುತ್ತಿದ್ದಾರೆ ಎಂದು ಚಿಂತಕ ಇಸ್ಮಾಯಿಲ್ ಎಲಿಗಾರ ಹೇಳಿದರು.
ಎಂ.ವಿ. ಅಂಜಿನಪ್ಪ, ರಾಮನಮಲಿ, ಬಸವರಾಜ ಸಂಗಪ್ಪನವರ, ಶೇಖರ ನಾಯ್ಕ್, ಗಂಗಾಧರ ಸಿ. ಬಿ. ಸಿದ್ಧಪ್ಪ, ಮೇಟಿ ಕೊಟ್ರಪ್ಪ, ಡಿ. ಎಂ. ಬಡಿಗೇರ, ಪ್ರದೀಪಕುಮಾರ, ಹರಪನಹಳ್ಳಿ, ಚಂದ್ರಪ್ಪ, ಗುಡಿಹಳ್ಳಿ ಹಾಲೇಶ್, ಎಚ್. ಎಂ. ಸಂತೋಷ ಸೇರಿದಂತೆ ನೂರಾರು ಜನರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು, ಇದನ್ನು ಮಾಲತೇಶ ಮರೇಗೌಡರ ನಡೆಸಿಕೊಟ್ಟರು.

