ರಾಯಚೂರು
ಬಸವಣ್ಣನವರು ಸ್ವಯಂಕೃತ, ಸ್ವತಂತ್ರ ವಿಚಾರವಾದಿ, ಸರ್ವ ಸಮಾನತೆಯ ಹರಿಕಾರ. 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ, ಅಲ್ಲಿಗೆ ಎಲ್ಲರನ್ನೂ ಬರಮಾಡಿಕೊಂಡರು. ಸಮಾಜದಲ್ಲಿ ವಂಚಿತ ಜನಾಂಗವನ್ನು ಎತ್ತಿ ಹಿಡಿದರು. ಅವರ ಕಾಯಕಕ್ಕೆ ಮಹತ್ವ ನೀಡಿದ ಮಹಾನ್ ಪುರುಷ ಅವರೆಂದು ಪೂಜ್ಯ ಡಾ. ಸಿದ್ದಲಿಂಗ ಸ್ವಾಮಿಗಳು, ವಿರಕ್ತಮಠ, ಚಿಕ್ಕಸೂಗೂರು ಹೇಳಿದರು.

ಶನಿವಾರ ನಗರದ ಬಸವ ಕೇಂದ್ರದಲ್ಲಿ ಲಿಂಗಾಯತ ಧರ್ಮ ನಿಜಾಚರಣೆ, ಶಿವಯೋಗ-ಇಷ್ಟಲಿಂಗ ಕಮ್ಮಟ ಮೊದಲ ದಿನದ ಸಾನಿಧ್ಯ ವಹಿಸಿ, ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಿ, ವೇದಿಕೆ ಮೇಲಿರುವ ಗಣ್ಯರೊಂದಿಗೆ ಸಸಿಗೆ ನೀರು ಹಾಕುವುದರ ಮೂಲಕ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಮ್ಮಟದ ಆಶಯವನ್ನು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ಮಾತನಾಡಿ, ಬಸವಣ್ಣನವರು ಲಿಂಗಾಯತ ಜನಸಮೂಹಕ್ಕೆ ಪ್ರಜ್ಞೆ ಕೊಡುವಲ್ಲಿ ಮಾಡಿದ ಸಾಧನೆ ಅಪಾರ. ಇಂದು ನಾವು ಶರಣರ ಆದರ್ಶಗಳನ್ನು, ಅವರ ಕಾರ್ಯಗಳನ್ನು ಜನಮಾನಸಕ್ಕೆ ಮುಟ್ಟಿಸುವಲ್ಲಿ ವಿಫಲರಾಗಿದ್ದೇವೆ.

ಇಂತಹ ಕಮ್ಮಟಗಳ ಮೂಲಕ ಲಿಂಗಾಯತ ಸಮುದಾಯವನ್ನು ಎಚ್ಚರಿಸುವ ಕಾರ್ಯ ಹೆಚ್ಚು ನಡೆಯಬೇಕು. ಈ ಮೂಲಕ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳು, ಶರಣರು ಮಾಡಿದ ಸಾಧನೆ ಹಾಗೂ ಧರ್ಮದ ಇತಿಹಾಸ ಜನಸಾಮಾನ್ಯರು ಅರಿತು ಕೊಳ್ಳಲು ಸಾಧ್ಯವೆಂದರು.

ಯಾರಲ್ಲಿ ಈ ಪ್ರಜ್ಞೆ ಅರಳಿದೆಯೊ ಅವರಿಗೆ ಬಸವಣ್ಣನವರ ವಿಚಾರಗಳು ಅರ್ಥವಾಗುತ್ತದೆ. ಶರಣರು ಸೃಷ್ಟಿಯ ಆಳವನ್ನು ಅಭ್ಯಸಿಸಿ ಕಂಡು ಹಿಡಿದವರೆಂದರು. ಹಾಗೂ ಶರಣರ ದೃಷ್ಟಿಯಲ್ಲಿ ಸೃಷ್ಟಿ ಮತ್ತು ದೇವರ ಸಂಬಂಧಗಳನ್ನು ವಿಸ್ತೃತವಾಗಿ ರುದ್ರಪ್ಪ ತಿಳಿಸಿಕೊಟ್ಟರು.

ಅತಿಥಿ ಅನುಭಾವಿ ಎಸ್. ಎನ್. ಅರಭಾವಿ ಅವರು ಗರ್ಭದೀಕ್ಷಾ ಸಂಸ್ಕಾರ ಮತ್ತು ಶರಣ ತತ್ವದ ಅಡಿಯಲ್ಲಿ ಮಗುವಿನ ನಾಮಕರಣ ವಿಧಿ ವಿಧಾನಗಳನ್ನು ತಿಳಿಸಿಕೊಟ್ಟು, ಗರ್ಭವತಿಯಾದ ಮಹಿಳೆಗೆ ಈ ರೀತಿ ಗರ್ಭದೀಕ್ಷೆ ಕೊಟ್ಟಲ್ಲಿ ಮಗು ಸಂಸ್ಕಾರವಂತನಾಗಿ ಬೆಳೆದು, ಆದರ್ಶ ವ್ಯಕ್ತಿಯಾಗುವಲ್ಲಿ ಸಂಶಯವಿಲ್ಲವೆಂದರು.

ಮುಖ್ಯ ಅತಿಥಿಗಳಾದ ಡಾ. ಜೆ. ಎಸ್. ಪಾಟೀಲ, ವಿಶ್ರಾಂತ ಕುಲಪತಿಗಳು ಮಾನ್ವಿ ಮಾತನಾಡಿ, ಬಸವಾದಿ ಶರಣರು ತೋರಿಸಿದ ಕಾಯಕವನ್ನು ನಿಷ್ಠೆಯಿಂದ ಮಾಡಿದಲ್ಲಿ ಜೀವನದಲ್ಲಿ ಏನನ್ನಾದರು ಸಾಧಿಸಬಹುದೆಂದರು.

ಕಲಬುರ್ಗಿಯ ಮಹಾಂತೇಶ ಕುಂಬಾರ, ಸೃಷ್ಟಿಕರ್ತನ ಪಂಚಕೃತ್ಯಗಳನ್ನು ಮೀರುವ ಭಕ್ತನ ಆಚಾರಗಳೇ ಪಂಚಾಚಾರಗಳು ಎಂಬ ವಿಷಯ ಕುರಿತು ಅನುಭಾವ ಮಾಡಿದರು.

ಶರಣರ ದೃಷ್ಟಿಯಲ್ಲಿ ಗುರು ಪ್ರವೇಶ ಕಾರ್ಯಕ್ರಮದ ಪ್ರಾತ್ಯಕ್ಷತೆಯನ್ನು ಅನುಭಾವಿ ಎಸ್. ಎನ್. ಅರಭಾವಿ ಮತ್ತು ಎಂ.ಎಂ. ಸಂಗೊಳ್ಳಿ ಅವರು ತಿಳಿಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಹಿರಿಯರಾದ ಷಣ್ಮುಖಪ್ಪ, ಮಿರ್ಜಾಪುರ, ಚಂದ್ರಶೇಖರ ಹಾಗೂ ಚುಕ್ಕಿ ಸೂಗಪ್ಪ, ಗಿರಿಜಾ ಶಂಕರ ಭಾಗವಹಿಸಿದ್ದರು. ಉಪಾಧ್ಯಕ್ಷ ಚನ್ನಬಸವ ಇಂಜಿನಿಯರ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಬಸವ ಕೇಂದ್ರ ಉಪಾಧ್ಯಕ್ಷ ವಿಜಯಕುಮಾರ ಸಜ್ಜನ ಹಾಗೂ ಜಾಗತಿಕ ಮಹಾಸಭೆ ತಾ. ಅಧ್ಯಕ್ಷ ಜೆ.ಬಸವರಾಜ ಅವರು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಡಾ. ಜೆ. ಎಸ್. ಪಾಟೀಲರನ್ನು ಸನ್ಮಾನಿಸಿದರು.

ವಚನ ಪ್ರಾರ್ಥನೆ ಪಾರ್ವತಿ ಪಾಟೀಲ ಮಾಡಿದರು, ಹಿರಿಯ ಸದಸ್ಯ ಹರವಿ ನಾಗನಗೌಡರು ಸ್ವಾಗತ ಕೋರಿದರು, ಜಯಶ್ರೀ ಮಹಾಜನಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಮಲ್ಲಿಕಾರ್ಜುನ ಗುಡಿಮನಿ ವಂದಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆ, ಬಸವ ಕೇಂದ್ರ, ಅಕ್ಕನ ಬಳಗ, ಕದಳಿ ವೇದಿಕೆ, ವಿಶ್ವ ವಚನ ಫೌಂಡೇಶನ್ ಹಾಗೂ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ನಡೆದಿರುವ ಕಮ್ಮಟ ರವಿವಾರ ಮುಂದುವರೆಯುತ್ತದೆ.
