ದಾವಣಗೆರೆಯಲ್ಲಿ 5 ಲಕ್ಷ ಜನ ಸೇರಿಸಿ ಲಿಂಗಾಯತ ಸಮಾವೇಶ: ರೇಣುಕಾಚಾರ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರರ ಆಪ್ತ ರೇಣುಕಾಚಾರ್ಯ ಮಂಗಳವಾರ ನಗರದಲ್ಲಿ ವೀರಶೈವ ಲಿಂಗಾಯತ ಮಹಾಸಂಗಮ ಪೂರ್ವಭಾವಿ ಸಭೆ ನಡೆಸಿದರು.

ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ನಡೆದ ಸಭೆಯಲ್ಲಿ ಚಾಮರಾಜನಗರ, ಮೈಸೂರು, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಹಾಸನ ಜಿಲ್ಲೆಗಳ ಪ್ರತಿನಿಧಿಗಳು ಹಾಜರಿದ್ದರು.

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ‘ಯಡಿಯೂರಪ್ಪ ಅವರನ್ನು ಗೌರವಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಐದು ಲಕ್ಷ ಜನ ಸೇರಿಸಿ ಬೃಹತ್‌ ಸಮಾವೇಶ ನಡೆಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗಗಳಲ್ಲೂ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದರು.

ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಯಡಿಯೂರಪ್ಪನವರ ಬೆಂಬಲ ಬಹುಮುಖ್ಯ. ಜೊತೆಗೆ ವೀರಶೈವ ಲಿಂಗಾಯತರ ಒಗ್ಗಟ್ಟು ಮುಖ್ಯವಾಗುತ್ತದೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನೆಲಮಂಗಲದ ಬಸವಣ್ಣ ದೇವರಮಠದ ಸಿದ್ದಲಿಂಗ ಮಹಾಸ್ವಾಮಿ, ತುಮಕೂರಿನ ಖಾರದೇಶ್ವರ ಮಠ, ತಿ.ನರಸೀಪುರದ ವಿರಕ್ತಮಠ, ನೆಲಮಂಗಲದ ಕುಲುಮೆ ಮಠ, ಕೋಲಾರದ ಬೆಳ್ಳಾವಿ ಮಠ, ವಿಜಯಪುರದ ಬಸವಕಲ್ಯಾಣ ಮಠದ ಸ್ವಾಮೀಜಿ, ಮಾಜಿ ಶಾಸಕರಾದ ಸಿ.ಎಸ್‌.ನಿರಂಜನ ಕುಮಾರ್‌, ಡಿ.ಎಸ್‌.ಸುರೇಶ್‌, ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

Share This Article
Leave a comment

Leave a Reply

Your email address will not be published. Required fields are marked *