ಗುಳೇದಗುಡ್ಡ
ಶನಿವಾರ ಸಂಜೆ ಜರುಗಿದ ಮನೆಯಲ್ಲಿ ಮಹಾಮನೆಯು ಶರಣ ಪ್ರಶಾಂತ ಚಂದ್ರಶೇಖರ ಮುರುಡಿ ಅವರ ಮನೆಯಲ್ಲಿ ಜರುಗಿತು. ಅನುಭಾವಕ್ಕೆ ಆಯ್ದುಕೊಂಡ ವಚನ ಧರ್ಮಸಂಸ್ಥಾಪಕ ಬಸವ ತಂದೆಗಳವರದು.
ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯ!
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯ!
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯ!
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯ!
ಸಹಜ ಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೇ ದೇವ.
ಈ ವಚನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತ ಪ್ರೊ. ಸುರೇಶ ರಾಜನಾಳ ಅವರು, ಈ ವಚನವು ಅಂದಿನ ಕಾಲದ ಮೂರ್ತಿ ಪೂಜೆಯಲ್ಲಿ ಬಳಸುತ್ತಿದ್ದ ಹಲವು ಕ್ಷುದ್ರ ದೇವತೆಗಳನ್ನು ಕುರಿತು ಹೇಳುತ್ತದೆ. ಅಲ್ಲದೆ ಮಾರಿ, ಮಸಣೆ, ಒನಕೆ, ಕಲ್ಲು, ಮಣ್ಣು ಇತ್ಯಾದಿ ದೇವತೆಗಳನ್ನು ಪೂಜಿಸುತ್ತಿದ್ದರು. ಇದೇ ಕಾಲಕ್ಕೆ ಜನರು ಮೌಢ್ಯಕ್ಕೆ ಒಳಗಾಗಿ ಶೋಷಣೆಗೆ ಒಳಗಾಗಿ ಬದುಕುತ್ತಿದ್ದರು. ಅಂಥ ಜನರ ಆತ್ಮೋದ್ಧಾರಕ್ಕೆ, ಸಾಮಾಜಿಕ, ಧಾರ್ಮಿಕ ಸಮಾನ ಬದುಕಿಗೆ ಬಸವಣ್ಣನವರು ಆಸರೆಯಾಗಿ ಬಂದರು.
ಕರಗುವ, ಮಾರುವ, ಮುರುಟುವ ಹಾಗೂ ಹೂಳುವ ದೈವವನ್ನು ಪೂಜಿಸುವ ಬಗೆಯನ್ನು ಖಂಡಿಸಿದರು. ಸಹಜವಾದ ಏಕದೇವೋಪಾಸನೆಯನ್ನು ಬೋಧಿಸಿದರು. ಆ ಏಕದೇವೋಪಾಸನೆಯ ದೇವರನ್ನೇ ಕೂಡಲಸಂಗಮದೇವ ಎಂದು ವಿಸ್ತೃತವಾಗಿ ತಿಳಿಹೇಳಿದರು.
ಇದೇ ವಚನದ ಅನುಭಾವವನ್ನು ಮುಂದುವರೆಸಿದ ಶರಣ ಚಿದಾನಂದ ಕಾಟವಾ ಅವರು, ಏಕದೇವೋಪಾಸನೆ ಬಹು ಮುಖ್ಯವಾದುದು. ಮನುಷ್ಯ ಮಾಡಿದ ದೇವರನ್ನು ಪೂಜಿಸುವುದಕ್ಕಿಂತ ಮನುಷ್ಯರನ್ನು ಮಾಡಿದ ದೇವರನ್ನು ಪೂಜಿಸುವುದು ಸೂಕ್ತವಾದುದು. ಭಗವಂತ ಎಂಬುದು ನಾಮ ರೂಪಗಳಿಲ್ಲದ ವಸ್ತು. ಅದೊಂದು ವಿಶ್ವಚೈತನ್ಯ. ಅದನ್ನು ಕಲ್ಲು, ಮಣ್ಣಿನಲ್ಲಿ ಕಾಣುವದು ಸರಿಯಲ್ಲ. ನಮ್ಮೊಳಗಿರುವ ಆ ಚೈತನ್ಯವನ್ನೇ ದೇವರೆಂದು ಪರಿಭಾವಿಸಬೇಕು. ತನ್ನನ್ನು ತಾನು ರಕ್ಷಿಸಿಕೊಳ್ಳದ ದೇವರು ಜಗವನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ. ಕಾರಣ ಮನುಷ್ಯ ತನ್ನ ತಾನು ತಿಳಿದು ಅರುಹನ್ನು ಪಡೆದು ತಾನೇ ದೇವನಾಗಬೇಕು. ಅದೇ ಕೂಡಲಸಂಗಮನ ಸ್ಥಿತಿ ಎಂದು ವಿವರಿಸಿದರು.
ಪ್ರೊ. ಮಹಾದೇವಯ್ಯ ಪಂಚಾಕ್ಷರಿಸ್ವಾಮಿ ನೀಲಕಂಠಮಠ ಅವರು ಅನುಭಾವ ಗೈಯುತ್ತ, ಏಕದೇವೋಪಾಸನೆಯೇ ಮುಖ್ಯವಾದುದು. ಹಲವು ದೈವಂಗಳ ನಂಬಿ ಮೋಸ ಹೋಗುವುದಕ್ಕಿಂತ ಕರದೊಳಗಿನ ಇಷ್ಟಲಿಂಗದ ಮೂಲಕ ತನ್ನನ್ನು ತಾನು ಅರಿಯುವುದೇ ಮುಖ್ಯವಾದುದು. ಅರಗಿನಿಂದ ಮಾಡಿದ ನಾನಾ ದೇವರ ಹೆಸರಿನ ಮೂರ್ತಿಗಳು ಬಿಸಿಲಾಗಲು ಕರಗಿ ಬಿಡುತ್ತವೆ. ಪ್ಲಾಸ್ಟಿಕ ಮೊದಲಾದ ವಸ್ತುಗಳಿಂದ ಮಾಡಿದ ದೇವರ ಮೂರ್ತಿಗಳು ಉರಿಯ ಝಳಕ್ಕೆ ಮುರುಟಿ ಬಿಡುತ್ತವೆ.

ಹಾಗೆಯೇ ಮನುಷ್ಯನ ಬದುಕಿನಲ್ಲಿ ಕಷ್ಟ ಕಾರ್ಪಣ್ಯಗಳು ಬಂದಾಗ ಒಡಲ ಹೊರೆಯಲು ಬೆಳ್ಳಿ, ಬಂಗಾರ ಮೊದಲಾದ ಲೋಹಗಳಿಂದ ಮಾಡಿದ ದೇವರ ಮೂರ್ತಿಗಳನ್ನು ಮಾರಬೇಕಾಗುತ್ತದೆ. ಅಷ್ಟೇ ಅಲ್ಲ ವಾವಾಚಾರ ಮೊದಲಾದ ಪೂಜೆಯಲ್ಲಿ ದೇವರ ಮೂರ್ತಿಗಳನ್ನೇ ಹೊಳಬೇಕಾಗುತ್ತದೆ. ವಿಚಾರಿಸಿ ನೋಡಿದರೆ ನಮ್ಮ ದಡ್ಡತನಕ್ಕೆ ನಮಗೆ ನಾಚಿಕೆಯುಂಟಾಗುತ್ತದೆ. ಇಂಥ ದೇವರ ಮೂರ್ತಿ ಪೂಜೆಗೆ ಒಳಗಾಗಿ ದೈಹಿಕವಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವ ಜನರನ್ನು ಇನ್ನೊಂದು ಕಡೆಗೆ, ಅಂಚುವವರ ಮೇಲೆ ಅರಿವೆ ಹಾವು ಎಸೆದಂತೆ – ಇಂಥ ದೇವರನ್ನು ಮುಂದೆ ಮಾಡಿ ಶೋಷಣೆಗೆ ಒಳಗಾಗುತ್ತಿರುವ ಜನರನ್ನು ಕಂಡು ಬಸವಣ್ಣನವರು ಮರುಗಿ ಅವರನ್ನು ಉದ್ಧರಿಸಲು ಏಕದೇವೋಪಾಸನೆಗೆ ಒತ್ತು ಕೊಟ್ಟು ಅಗಮ್ಯ ಅಗೋಚರ ಅಪ್ರತಿಮವಾದ ಶಕ್ತಿಗೆ ಕೂಡಲಸಂಗಮನೆಂದು ಹೆಸರಿಟ್ಟು, ಅದರ ಕುರುಹಾಗಿ ಕರಸ್ಥಲಕ್ಕೆ ಇಷ್ಟಲಿಂಗವನ್ನು ದಯಪಾಲಿಸಿದರು.
ಕಾರಣ ನೂರಾರು ದೇವರನ್ನು ನಂಬಿ ಹಾಳಾಗುವುದಕ್ಕಿಂತ ಒಬ್ಬನೇ ದೇವನನ್ನು ನಂಬಿ ಉದ್ಧಾರವಾಗುವುದು ಲೇಸು ಎಂದು ಈ ವಚನಕ್ಕೆ ಪೂರಕವಾದ ವಚನಗಳನ್ನು ಉಲ್ಲೇಖಿಸುವುದರೊಂದಿಗೆ ಪ್ರತಿಪಾದಿಸಿದರು.
ಕೊನೆಯಲ್ಲಿ ಮಾತನಾಡಿದ ಅನುಭಾವಿಗಳಾದ ಪ್ರೊ. ಸಿದ್ದಲಿಂಗಪ್ಪ ಬರಗುಂಡಿಯವರು – ಶರಣರು ಪ್ರತಿಪಾದಿಸುವ ಕೂಡಲಸಂಗಮದೇವ, ಗುಹೇಶ್ವರ, ಚೆನ್ನಮಲ್ಲಿಕಾರ್ಜುನ, ಕಲಿದೇವರದೇವಾ ಮೊದಲಾದವುಗಳೆಲ್ಲ ಕೇವಲ ವಚನಾಂಕಿತಗಳೇ ವಿನಃ ಸ್ಥಾವರ ದೇವರುಗಳಲ್ಲ. ಅವುಗಳನ್ನು ಅವರು ಅರುಹಿನ ಕುರುಹುಗಳನ್ನಾಗಿ ಬಳಸಿದರೇ ವಿನಃ ಬೇರೇನಲ್ಲ. ಇಷ್ಟಲಿಂಗವನ್ನು ಆ ನಿಟ್ಟಿನಲ್ಲಿ ಹೆಸರಿಸಿದರು. ಅದರೊಳಗಿನ ಮಹಾಲಿಂಗಕ್ಕೆ ಒತ್ತುಕೊಟ್ಟರು. ಈ ವಿಶ್ವ ಅದರ ರಚನೆ, ಅದರಲ್ಲಿ ಜೀವಸಂಕುಲಗಳ ಬಗ್ಗೆ ಶರಣರು ಬೇರೆಯಾಗಿಯೇ ಕಂಡಿದ್ದಾರೆ. ಕಾಣಬರುವುದೆಲ್ಲ ಕೂಡಲಸಂಗಮ, ಇದೊಂದು ರೂಪವಲ್ಲ. ರೂಪದಾಚೆ ಇರುವ ನಿರೂಪ, ಬಯಲು, ಘನ. ಆ ಘನ ಚುಳುಕಾಗಿ ಕರಸ್ಥಲಕೆ ಬಂದಿದೆ.

ಇದರ ಮೂಲಕ ತನುವಿನ ಮಲವನ್ನು ಕಳೆದುಕೊಂಡು ಪ್ರಾಣಲಿಂಗದ ಮೂಲಕ ಮನಸ್ಸಿನ ಮಲವನ್ನು ಕಳೆದುಕೊಂಡು ಭಾವಲಿಂಗದ ಮೂಲಕ ಮಹಾಲಿಂಗವೇ ಆಗಬೇಕು. ಆ ಸ್ಥಿತಿಯೇ ಕೂಡಲಸಂಗಮದೇವನ ಕೂಡವ ಸ್ಥಿತಿ. ಹೀಗೆ ಅರಿವಿನ ಮೂಲಕ ಸಾಗಿ ಅಂಗನ ಲಿಂಗವಾಗುವ ಸ್ಥಿತಿಯನ್ನು ತೊರೆದು ದೇವರ ಹೆಸರಿನಲ್ಲಿ ನಾನಾ ಸ್ಥಾವರ ದೇವತೆಗಳನ್ನು ಹೆಸರಿಸಿ ಮೌಢ್ಯಕ್ಕೆ ಒಳಗಾಗಿ, ಅಂಥ ಭಿನ್ನ ಭಿನ್ನ ದೇವ ದೇವತೆಗಳ ಹೆಸರಿನಲ್ಲಿ ವಿಘಟನೆಯಾಗುತ್ತ ತಾಮಸ ಪ್ರವೃತ್ತಿಯನ್ನು ಬೆಳೆಸಿಕೊಂಡು ವ್ಯಕ್ತಿಗಳು ಜೀವನವನ್ನು ಹಾಳು ಮಾಡಿಕೊಳ್ಳುವುದಲ್ಲದೆ ಸಮಾಜ ಕಂಟಕವಾಗಿಯೂ ವರ್ತಿಸುತ್ತಾನೆ.
ಸರ್ವ ಸಮಭಾವವನ್ನು ಹೊಂದುವದು. ಬೇಧವಿಲ್ಲದೆ ಬದುಕುವುದು. ಸಮಸ್ಥಿತಿಯನ್ನು ಹೊಂದುವದು ಮನುಷ್ಯನ ಗುರಿಯಾಗಬೇಕು. ಮೂಲ ಸ್ವರೂಪವನ್ನು ಅರಿಯುವುದೇ ಸಹಜ ಸ್ಥಿತಿ, ಆ ಮಹಾಶಕ್ತಿ ಅಥವಾ ಮಹಾಲಿಂಗದಲ್ಲಿಯೇ ಒಂದಾಗುವುದೇ ನಿಜೈಕ್ಯ ಸ್ಥಿತಿ. ಅಲ್ಲಿ ಯಾವ ಬೇಧ ಭಾವಗಳಿಲ್ಲ ಎಲ್ಲರೂ ಸಮಾನವಾಗಿರುವ ಸ್ಥಿತಿ ಹಾಗೂ ಜೀವ ಪರಮರ ಐಕ್ಯಸ್ಥಿತಿಯೇ ಕೂಡಲಸಂಗಮವಾಗಿದೆ. ಹಾಗಾಗಿ ದೇವರ ಹೆಸರಿನಲ್ಲಿ ನಾವುಗಳು ಭಿನ್ನರಾಗದೇ ಮಹಾಲಿಂಗದ ಅರ್ಥವನ್ನು ಮಾಡಿಕೊಂಡು ನಿಜವಾದ ದೇವತ್ವದ ಅರ್ಥ ಗ್ರಹಿಸಿ ಒಂದಾಗಿ ಬದುಕುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಶರಣೆಯರಾದ ದಾನಮ್ಮ ಕುಂದರಗಿ, ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ ಅವರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯವರಾದ ಶರಣ ಪ್ರಶಾಂತ ಚಂದ್ರಶೇಖರ ಮುರುಡಿ ಹಾಗೂ ಕುಟುಂಬದವರಿಗೆ ಕಾರ್ಯಕ್ರಮದ ಕಾರ್ಯದರ್ಶಿಗಳು ಶರಣು ಸಮರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶರಣಾದ ಪ್ರೊ. ಬಸಯ್ಯ ಕಂಬಾಳಿಮಠ, ಶಿವಾನಂದ ಸಿಂದಗಿ, ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಸಿದ್ಧಯ್ಯ ರೇವಣಸಿದ್ಧೇಶ್ವರ ಮಠ, ಪ್ರಶಾಂತ ಲೋಕೂರ, ಮಾಗುಂಡಪ್ಪ ಅಂಗಡಿ, ಶರಣೆಯರಾದ ಗೀತಾ ತಿಪ್ಪಾ, ಸುರೇಖಾ ಗೆದ್ದಲಮರಿ, ಶ್ರೀದೇವಿ ಶೇಖಾ, ಶೇಖಮ್ಮ ಸಂಪಗಾವಿ, ಮುರುಡಿ ಹಾಗೂ ಪರಿವಾರದವರು ಸೇರಿದಂತೆ ಓಣಿಯ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿದ್ದರು.