ಧರ್ಮವನ್ನು ಸರಿಯಾಗಿ ಅಧ್ಯಯನ ಮಾಡಿದರೆ ವಚನಗಳು ವೈದಿಕ ಧರ್ಮಕ್ಕಿಂತ ಭಿನ್ನ ಎಂಬುದು ಅವಿದ್ಯಾವಂತರಿಗೂ ಗೊತ್ತಾಗುತ್ತದೆ.
ಧಾರವಾಡ
ಇತ್ತೀಚೆಗೆ ಕೆಲವರು ಉಪನಿಷತ್ತುಗಳಲ್ಲಿ ಇದ್ದುದನ್ನೆ ವಚನಕಾರರು ಕನ್ನಡದಲ್ಲಿ ಬರೆದು ಮನೆ ಮನೆಗೂ ತಲುಪಿಸಿದರು ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದನ್ನು ನಂಬುವವರು ಅ-ಲಿಂಗಾಯತರಿರುವಂತೆ ಲಿಂಗಾಯತರೂ ಇರುವುದು ಆಶ್ಚರ್ಯಕರವಾದರೂ ವಿಷಾದನೀಯ. ಇಂಥ ಸುಳ್ಳು ಸುದ್ದಿಗೆ ನಾವು ಮೂರು ರೀತಿಯ ಪ್ರತಿಕ್ರಿಯೆ ತೋರಿಸಬಹುದು.
- ಈ ನಂಬಿಕೆ ಮೇಲ್ನೋಟಕ್ಕೆ ಸರಿ ಎನಿಸಿದರೂ, ಸ್ವಲ್ಪ ಒಳ ಹೊಕ್ಕು ನೋಡಿದರೆ ಇದು ಸುಳ್ಳು ಸುದ್ದಿ ಎಂಬುದು ಗೊತ್ತಾಗುತ್ತದೆ. ಉಪನಿಷತ್ಕಾರರು ಹೇಳಿದುದನ್ನೆ ವಚನಕಾರರು ಕನ್ನಡಕ್ಕೆ ಅನುವಾದಿಸಿದ್ದರೆ ಅವರ ಅನುಭಾವಕ್ಕೆ ಏನೂ ಪ್ರಾಶಸ್ತ್ಯವಿಲ್ಲ ಎಂದರ್ಥ. ಆದರೆ ಅವರು ಅಹಂ ಬ್ರಹ್ಮಾಸ್ಮಿ ಎಂಬ ಔಪನಿಷದಿಕ ಸತ್ಯವನ್ನು ಅನುಭವಿಸಿ ನಾನೇ ಲಿಂಗ ಎಂದರು. ಇದನ್ನು ಈ ಕೆಳಗಿನಂತೆ ಪ್ರಸ್ತುತಪಡಿಸಬಹುದು.
ಕಲ್ಲಪ್ಪ: ನಾನು ಸಕ್ಕರೆ ತಿಂದೆ, ಅದರ ಸಿಹಿಯನ್ನು ಅನುಭವಿಸಿದೆ.
ಮಲ್ಲಪ್ಪ: ನಾನೂ ಸಕ್ಕರೆ ತಿಂದೆ, ಅದು ಸಿಹಿಯಾಗಿದೆ.
ಇಲ್ಲಿ ಇಬ್ಬರೂ ಸಕ್ಕರೆಯ ಸಿಹಿಯನ್ನು ಅನುಭವಿಸಿ ಅದು ಸಿಹಿಯಾಗಿದೆ ಎನ್ನುತ್ತಿದ್ದಾರೆಯೇ ಹೊರತು ಒಬ್ಬ ಇನ್ನೊಬ್ಬನ ಮಾತನ್ನು ನಕಲು ಮಾಡುತ್ತಿಲ್ಲ ಎಂಬುದನ್ನು ನಾವು ಗಮನಿಸಬೇಕು. ಹಾಗೆಯೇ ಬಸವಾದಿ ಪ್ರಮಥರು ತಮ್ಮ ಸ್ವಂತ ಲಿಂಗಾನುಭವದ ಆಧಾರದ ಮೇಲೆ ಲಿಂಗಾಯತ ಧರ್ಮದ ಸಿದ್ಧಾಂತಗಳನ್ನು ರೂಪಿಸಿದರೆ ಹೊರತು ಉಪನಿಷತ್ತುಗಳ ಆಧಾರದ ಮೇಲಲ್ಲ.
ಕಲ್ಲುಮಠದ ಪ್ರಭುದೇವ ಹೇಳುವ ಹಾಗೆ, ಬಸವಾದಿ ಪ್ರಮಥರ ಶಿವಾನುಭೂತಿಯೇ ವಚನಗಳಾಗಿ ಉಕ್ಕಿ ಹರಿಯಿತು. ವಚನಕಾರರ ಭಾಷೆ, ಉಪನಿಷತ್ತುಗಳ ಭಾಷೆ ಒಂದೇ ತರ ಇರಬಹುದು; ಅವುಗಳ ತತ್ತ್ವಮೀಮಾಂಸೀಯ ಸಿದ್ಧಾಂತಗಳು ಒಂದೇ ತರ ಇರಬಹುದು. ಆದರೆ ವಚನಕಾರರು ಸಹ ಉಪನಿಷತ್ಕಾರರಂತೆ ಅವುಗಳನ್ನು ಅನುಭವಿಸಿಯೇ ಬರೆದಿದ್ದಾರೆ.
ಒಂದೇ ತರದ ನೋವುಂಡ ಇಬ್ಬರ ಭಾಷೆ ಒಂದೇ ತರ ಇದ್ದ ಮಾತ್ರಕ್ಕೆ ಒಬ್ಬ ಇನ್ನೊಬ್ಬನ ಮಾತನ್ನು ಅನುವಾದ ಮಾಡುತ್ತಿದ್ದಾನೆ ಎಂದರ್ಥವಲ್ಲ. ಕ್ರಿಶ್ಚಿಯನ್ ಅನುಭಾವಿಗಳ ಭಾಷೆ, ಉಪನಿಷತ್ಕಾರರ ಭಾಷೆ ಒಂದೇ ತರನಾಗಿದ್ದ ಮಾತ್ರಕ್ಕೆ ಕ್ರೈಸ್ತ ಅನುಭವಿಗಳು ಉಪನಿಷತ್ತುಗಳನ್ನು ನಕಲು ಮಾಡಿದರು ಎಂದರ್ಥವಲ್ಲ. ಇದು ಗೊತ್ತಿಲ್ಲದ ನಮ್ಮ ಕೆಲವು ಸ್ವಾಮಿಗಳು.
ಕಲ್ಲಪ್ಪನ ಹೇಳಿಕೆಯನ್ನು ಮಲ್ಲಪ್ಪ ನಕಲು ಮಾಡುತ್ತಿದ್ದಾನೆ ಎಂದು ನಂಬುತ್ತಾರೆ. ಮತ್ತು ಹಾಗೆ ಹೇಳುವ ಲಿಂಗಾಯತೇತರರ ಹೇಳಿಕೆಯನ್ನು ಪುಷ್ಟೀಕರಿಸುತ್ತಾರೆ.
- ವಚನಗಳ ಸಿದ್ಧಾಂತಗಳಿಗೂ ಉಪನಿಷತ್ತುಗಳ ಸಿದ್ಧಾಂತಗಳಿಗೂ ವ್ಯತ್ಯಾಸವಿದೆ. ವೇದಗಳ ಕರ್ಮಕಾಂಡವು ಬಹುದೇವತಾವಾದ, ಪ್ರಾಣಿಬಲಿಯನ್ನೊಳಗೊಂಡ ಯಜ್ಞಯಾಗಾದಿಗಳ ಆಚರಣೆ, ಜಾತಿತಾರತಮ್ಯವನ್ನು ಬೋಧಿಸುತ್ತದೆ. ಏಕಂ ಸತ್ ಬಹುಧಾ ವಿಪ್ರಾಃ ವದಂತಿಃ ಮತ್ತು ಯಾಗಕ್ಕಿಂತ ತ್ಯಾಗ ಮುಖ್ಯ ಹೆಚ್ಚೆಂದು ಉಪನಿಷತ್ತುಗಳು ಹೇಳಿದರೂ, ಬ್ರಾಹ್ಮಣನಾದವನು ಯಜ್ಞ ಮಾಡಲೇಬೇಕೆಂಬ ವಿಧಿಯನ್ನು ಪಾಲಿಸಲು ಬಹುದೇವತಾವಾದ, ಯಜ್ಞಯಾಗಾದಿಗಳ ಆಚರಣೆ ಮತ್ತು ಜಾತಿತಾರತಮ್ಯವನ್ನು ಉಳಿಸಿಕೊಳ್ಳಲೇ ಬೇಕಾಯಿತು.
ಎಂ.ಆರ್. ಶ್ರೀ. ಅವರು ತಮ್ಮ ವಚನಧರ್ಮಸಾರದಲ್ಲೂ ರಂ.ರಾ. ದಿವಾಕರರು ತಮ್ಮ ವಚನ ಶಾಸ್ತ್ರ ರಹಸ್ಯದಲ್ಲೂ ಅನೇಕ ವಚನಗಳನ್ನು ಉದ್ಧರಿಸಿ ಅವುಗಳಿಗೂ ಉಪನಿಷತ್ತುಗಳಿಗೂ ಸೈದ್ಧಾಂತಿಕ ಸಾಮ್ಯ ಇದೆ ಎಂದು ಸಿದ್ಧ ಮಾಡಿದ್ದಾರೆ (ಆದರೆ ದಿವಾಕರರು ವಚನಗಳಲ್ಲಿ ಇತರ ಸಿದ್ಧಾಂತಗಳೂ ಇವೆ, ಅವುಗಳನ್ನು ನಾನು ಪ್ರಸ್ತಾಪಿಸುವುದಿಲ್ಲ ಎಂದಿದ್ದಾರೆ). ಈ ಇಬ್ಬರ ಕೆಲಸ ಶ್ಲಾಘನೀಯ ಕೆಲಸವೇ.
ಇದಕ್ಕೆ ವಿರುದ್ಧವಾಗಿ ವಚನಕಾರರು ಏಕೈಕದೈವವಾದ, ನಿರ್ಜಾತಿವಾದ, ಶುದ್ಧ ಭಕ್ತಿ, ಅನುಭಾವ ಮತ್ತು ಕಾಯಕ-ದಾಸೋಹಗಳನ್ನೊಳಗೊಂಡ ಧರ್ಮವನ್ನು ಬೋಧಿಸಿದರು. ಉಪನಿಷತ್ತುಗಳ ಸಿದ್ಧಾಂತಗಳನ್ನು ಅನುಸರಿಸಿದ್ದಕ್ಕೆ ಯಾರಿಗೂ ಶಿಕ್ಷೆ ಆಗಲಿಲ್ಲ. ಆದರೆ ಬಸವಣ್ಣನವರ ಲಿಂಗಾಯತ ಧರ್ಮದ ಹೊಸ ಬೋಧನೆಗಳನ್ನು ಅನುಸರಿಸಿದ್ದಕ್ಕೆ, ಅಂದರೆ ವೇದಗಳಿಗೆ ವಿರುದ್ಧವಾಗಿ ಹರಳಯ್ಯನ ಮಗನಿಗೂ ಮಧುವಯ್ಯನ ಮಗಳಿಗೂ ಮದುವೆ ಮಾಡಿಸಿದುದಕ್ಕೆ ಅವರಿಗೆ ಘೋರ ಶಿಕ್ಷೆಯಾಯಿತು.
ಉಪನಿಷತ್ತುಗಳಲ್ಲಿ ಇದ್ದುದನ್ನೇ ಬಸವಾದಿ ಶರಣರು ಪುನರುಚ್ಚರಿಸಿದ್ದರೆ ಕಲ್ಯಾಣ ಕ್ರಾಂತಿ ಆಗುತ್ತಿರಲಿಲ್ಲ. ರಂ.ರಾ. ದಿವಾಕರರು “ಉಪನಿಷತ್ತುಗಳಲ್ಲಿರುವುದೆಲ್ಲ ವಚನಗಳಲ್ಲಿದೆ, ಆದರೆ ವಚನಗಳಲ್ಲಿರುವುದೆಲ್ಲ ಉಪನಿಷತ್ತುಗಳಲ್ಲಿ ಇಲ್ಲ” ಎಂದು ಹೇಳಿದುದನ್ನು ನಾವು ಮರೆಯಬಾರದು.
- ಉಪನಿಷತ್ತುಗಳಿಗೂ ವಚನಗಳಿಗೂ ದಾರ್ಶನಿಕ ಸಿದ್ಧಾಂತಗಳ ಬಗ್ಗೆ ಒಮ್ಮತ ಇರುವುದು ಸರ್ವವಿದಿತ. ಆ ಬಗ್ಗೆ ಸಾವಿರಾರು ಜನ ಬರೆದಿದ್ದಾರೆ; ಇನ್ನೂ ಬರೆಯುತ್ತಲೇ ಇದ್ದಾರೆ. ಬ್ರಹ್ಮನ್ ಒಬ್ಬನೇ, ಅವನು ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣ, ನಮ್ಮ ಆತ್ಮಗಳೇ ಬ್ರಹ್ಮನ ಅಂಶಗಳು, ನಾವು ಅವಿದ್ಯೆಯಿಂದಾಗಿ ನಮ್ಮ ನಿಜ ಸ್ವರೂಪವನ್ನು ಮರೆತು ಸ್ವಾರ್ಥಕ್ಕಾಗಿ ಮಾಡಿದ ಕರ್ಮಗಳ ಪರಿಣಾಮವಾಗಿ ಭವದಲ್ಲಿ ಸಿಲುಕಿಕೊಂಡಿದ್ದೇವೆ, ಅವಿದ್ಯೆಯನ್ನು ಹೋಗಲಾಡಿಸಿ, ಅರಿವನ್ನು ಪಡೆದರೆ ನಾನೇ ಬ್ರಹ್ಮ ಎಂಬುದು ಗೊತ್ತಾಗುತ್ತದೆ, ಈ ಅರಿವೇ ಮೋಕ್ಷ – ಈ ಸಿದ್ಧಾಂತಗಳೆಲ್ಲ ಉಪನಿಷತ್ತುಗಳಲ್ಲಿ ಇರುವಂತೆ ವಚನಗಳಲ್ಲಿಯೂ ಇವೆ, ಎಂಬುದನ್ನು 1927ನೆಯ ಇಸವಿಯಿಂದಲೂ ಜನರು ಬರೆಯುತ್ತಲೇ ಇದ್ದಾರೆ.
ಇದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಇವೆಲ್ಲ ತತ್ತ್ವಮೀಮಾಂಸೀಯ ಸಿದ್ಧಾಂತಗಳೇ ಹೊರತು ಧಾರ್ಮಿಕ ಸಿದ್ಧಾಂತಗಳಲ್ಲ. ಈ ಔಪನಿಷದಿಕ ತತ್ತ್ವಮೀಮಾಂಸೀಯ ಸಿದ್ಧಾಂತಗಳನ್ನು ಬೌದ್ಧ ಧರ್ಮವೂ ಜೈನಧರ್ಮವೂ ಸಿಖ್ ಧರ್ಮವೂ ಒಪ್ಪಿಕೊಂಡಿವೆ.
ಧಾರ್ಮಿಕ ಸಿದ್ಧಾಂತಗಳನ್ನು ತುಲನಾತ್ಮಕವಾಗಿ, ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿದರೆ ವಚನಗಳು ಬೋಧಿಸುವ ಸಿದ್ಧಾಂತಗಳು ವೈದಿಕ ಧರ್ಮದದಿಂದ ಭಿನ್ನ ಎಂಬುದು ಯಾವ ಅವಿದ್ಯಾವಂತನಿಗೂ ಗೊತ್ತಾಗುತ್ತದೆ. ಆದರೆ ಇದು ವೈದಿಕ ಧರ್ಮ ಪ್ರಿಯರಿಗೆ ಸಹನೆ ಆಗುವುದಿಲ್ಲ. ಉಪನಿಷತ್ತುಗಳಲ್ಲಿ ಇರುವುದೆಲ್ಲಾ ವಚನಗಳಲ್ಲಿದೆ, ಅದರಲ್ಲಿ ಹೊಸತೇನೂ ಇಲ್ಲ ಎಂದು ಗಳಹುತ್ತಾರೆ. ಅವರ ಈ ನಿಲವಿಗೆ ತತ್ತ್ವವಮೀಮಾಂಸೆಯೇ ಧರ್ಮ ಎಂಬ ಅಜ್ಞಾನವೇ ಕಾರಣ.
ಈ ಅಜ್ಞಾನಕ್ಕೆ ವಶವಾದವರಲ್ಲಿ ಡಾ. ಎಸ್.ಸಿ. ನಂದಿಮಠ, ಮುಂತಾದ ವಿದ್ವಾಂಸರೂ ಸೇರಿದ್ದಾರೆ. ಅವರ ಈ ನಿಲುವು ಎಷ್ಟು ಅಸಮರ್ಥನೀಯ ಎಂಬುದನ್ನು ಒಂದು ಉದಾಹರಣೆಯೊಂದಿಗೆ ತೋರಿಸಿಕೊಡಬಹುದು.
ಕ್ರೈಸ್ತ ಧರ್ಮಕ್ಕೂ ಯಹೂದಿ ಧರ್ಮಕ್ಕೂ ಒಂದೇ ತತ್ತ್ವಮೀಮಾಂಸೆಯನ್ನುಳ್ಳ ಬೈಬಲ್ಲಿನ ಹಳೆ ಒಡಂಬಡಿಕೆ ಮಾನ್ಯ. ಅದರಲ್ಲಿ ದೇವರು ಒಬ್ಬನೇ, ಅವನು ಸರ್ವ ಶಕ್ತ, ಅವನ ಜಗತ್ತನ್ನು ಆರು ದಿನಗಳಲ್ಲಿ ಸೃಷ್ಟಿಸಿ ಏಳನೆಯ ದಿನ ವಿಶ್ರಾಂತಿ ತೆಗೆದುಕೊಂಡ, ಮಾನವನು ದೇವರಲ್ಲ, ಸತ್ತ ನಂತರ ದೇವನಿರುವ ಲೋಕಕ್ಕೆ ಹೋಗುವುದೇ ಆಧ್ಯಾತ್ಮಿಕ ಜೀವನದ ಗುರಿ, ಮುಂತಾದ ಸಿದ್ಧಾಂತಗಳಿವೆ.
ಈ ತತ್ತ್ವಮೀಮಾಂಸೆಯನ್ನು ಒಪ್ಪಿಕೊಂಡ ಆ ಎರಡು ಧರ್ಮಗಳು ಒಂದೇ ಆಗಬೇಕಾಗಿತ್ತು. ಆದರೆ ಹಾಗಿಲ್ಲ. ಕ್ರೈಸ್ತ ಧರ್ಮ ಬೇರೆ, ಯಹೂದಿ ಧರ್ಮ ಬೇರೆ. ತಮಿಳು ಶೈವದ 36 ತತ್ವಗಳನ್ನು ಅಳವಡಿಸಿಕೊಂಡಿರುವ ಲಿಂಗಾಯತ ಧರ್ಮವು ತಮಿಳು ಶೈವರನ್ನು ಭವಿಶೈವರು, ಯಜ್ಞಯಾಗಾದಿಗಳನ್ನು ಮಾಡುವ ಶೈವ ಕರ್ಮಿಗಳು ಎಂದು ತುಚ್ಛವಾಗಿ ಕಾಣುತ್ತಾರೆ.
ಅಂದಮೇಲೆ ಲಿಂಗಾಯತ ಧರ್ಮ ತಮಿಳು ಶೈವವಲ್ಲ. ಅದೇ ರೀತಿ ಬಹುದೇವತಾರಾಧನೆ, ಯಜ್ಞಯಾಗಾದಿಗಳ ಆಚರಣೆ, ಗುಡಿ ಸಂಪ್ರದಾಯ, ಜಾತಿತಾರತಮ್ಯ, ಕಾಯಕ ತಾರತಮ್ಯ, ಲಿಂಗ ತಾರತಮ್ಯ ಪಂಚಸೂತಕಗಳು, ತೀರ್ಥಯಾತ್ರೆಗಳು ಈ ಎಲ್ಲಾ ವೇದ ಪ್ರಣೀತ ಧರ್ಮಾಚರಣೆಗಳನ್ನು ನಿರಾಕರಿಸುವ ಲಿಂಗಾಯತ ಧರ್ಮವು ವೈದಿಕ ಧರ್ಮವಲ್ಲ.
(ಕೃಪೆ ಜಾಗತಿಕ ಲಿಂಗಾಯತ ಮಹಾಸಭಾ ವಾರ್ತಾ ಪತ್ರ)
DR N G ಮಹಾದೇವಪ್ಪ ಅವರ ಸವಿಸ್ತಾರವಾದ ನಿಲುವು, ವಿವರಣೆ, ಉದಾಹರಣೆ, ದೃಷ್ಟಾಂತ ಇತ್ಯಾದಿ,.ಬಹಳ ಸಮರ್ಪಕವಾಗಿ ತಿಳಿಸಿದ್ದಾರೆ. ತುಂಬು ಹೃದಯದಿಂದ ನನ್ನ ಧನ್ಯವಾದಗಳು. ಶರಣು ಶರಣಾರ್ಥಿ. ಸಲಿಮಠರವರು ಈ ಎಲ್ಲ ವಿಷಯಗಳನ್ನು ಸವಿಸ್ತಾರವಾಗಿ ತಿಳಿಯಲಿ, ಮತ್ತು ಪರಾಮರ್ಶೆ ಮಾಡಿಕೊಳ್ಳಲಿ. ಪಂಚ ಪೀಠ, ವೈದಿಕ ಆಚರಣೆ ನಿಜಕ್ಕೂ ಬಹಳ ಭಿನ್ನವಾಗಿವೆ. ಆಚರಣೆ ಎಂತು ಬಹಳ ವಿಭಿನ್ನವಾಗಿವೆ.
ಮಾತುಗಳು ಹೇಳಿಕೆಗಳು ಒಂದೇತರಹ ಇವೆ ಎಂದಮಾತ್ರಕ್ಕೆ ಒಂದೇಹೇಗಾಗುತ್ತವೆ. ಬಾಶೆಲಮಿಷನ್ನಿಗೆ ವಚನಶಾಸತ್ರ್ಸಾರ ವಚನಗಳನ್ನು ಛಪಾಯಿಸಲು ಕಳುಹಿಸಿದ ಹಳಕಟ್ಟಿಯವರ ಮನವಿಯನ್ನು ಬಾಷೆಲ್ ಹೀಗೆ ಹೇಳುತ್ತೆ, ನಮ್ಮ ತತ್ವಗಳು ನಿಮ್ಮ ಧರ್ಮ ಸಿಧಾಂತಗಳು ಒಂದೇತರಹ ಇರುವ ಕಾರಣ ನಮ್ಮ ಸಿಧಾಂತಕ್ಕೆ ಅಡಚಣೆ ಉಂಟಾಗುವ ಕಾರಣಕ್ಕೆ ನಮಗೆ ಪ್ರಕಟಣೆ ಮಾಡಲು ಆಗುವುದಿಲ್ಲ ಎಂದ ಮಾತ್ರಕ್ಕೆ ಅವೆರಡು ಒಂದನೊಂದು ನಕಲು ಆಗಲು ಸಾಧ್ಯವಿಲ್ಲ. ಇದು ಮನುವಾದಿ ಆರ್ ಎಸ್ ಎಸ್ ಗಳ ಹೀನಮನಸ್ಥಿತಿ
ಸಂಗ್ರಹ ಯೋಗ್ಯ ಲೇಖನ
ಮಾನ್ಯರೆ.
ಲಿಂಗಾಯತ ಧರ್ಮದ ಚಿರ ಸತ್ಯವನ್ನು ತಿಳಿಸಿ ಅಂಧರನ್ನು ಜಾಗೃತಗೊಳಿಸುವ ನಿಮ್ಮ ಈ ಕಾರ್ಯಕ್ಕೆ ಅನಂತ ವಂದನೆಗಳು