ವಚನ ದರ್ಶನಕ್ಕೆ ಲಿಂಗಾಯತ ಮಠಾಧೀಶರನ್ನು ಬಳಸಿಕೊಂಡ ಆರ್.ಎಸ್.ಎಸ್: ಜಾಮದಾರ್

ಇಳಕಲಿನಲ್ಲಿ ‘ಮಿಥ್ಯ-ಸತ್ಯ’ ಲೋಕಾರ್ಪಣೆ, ಜೆಎಲ್ಎಂ ತಾಲ್ಲೂಕು ಉದ್ಘಾಟನೆ

ಇಳಕಲ್

‘ಬಸವಾದಿ ಶರಣರ ತತ್ವಗಳನ್ನು ಹಾಗೂ ಸಮಾನತೆಯ ನಿಲುವುಗಳನ್ನು ತಿರುಚುವ ಹಾಗೂ ಅಲ್ಲಗಳೆಯುವ ಕುತಂತ್ರವನ್ನು ಆರ್.ಎಸ್.ಎಸ್ ನಿರಂತರವಾಗಿ ಮಾಡುತ್ತಲೇ ಬಂದಿದ್ದು, ಎಚ್ಚೆತ್ತಿರುವ ಲಿಂಗಾಯತ ಧರ್ಮಿಯರು ಈಗ ತಕ್ಕ ಉತ್ತರ ನೀಡುತ್ತಾರೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ ಹೇಳಿದರು.

ಇಳಕಲ್ ವಿಜಯ ಮಹಾಂತೇಶ್ವರ ಸಂಸ್ಥಾನಮಠದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ‘ವಚನ ದರ್ಶನ ಮಿಥ್ಯ ವಿರುದ್ಧ ಸತ್ಯ’ ಪುಸ್ತಕದ ಲೋಕಾರ್ಪಣೆಯನ್ನು ಶಿವಾನಂದ ಜಾಮದಾರ, ಟಿ.ಆರ್.ಚಂದ್ರಶೇಖರ ನೆರವೇರಿಸಿದರು. ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಕೆಲವು ಲಿಂಗಾಯತ ಮಠಾಧೀಶರನ್ನು ಬಳಸಿಕೊಂಡು ಆರ್.ಎಸ್.ಎಸ್ ಬಸವಾದಿ ಶರಣರ ವಚನಗಳ ಸಮಾನತೆಯ ಆಶಯಗಳನ್ನು ಹಾಗೂ ಸಮಾಜೋಧಾರ್ಮಿಕ ಸುಧಾರಣಾ ನಿಲುವುಗಳನ್ನು ಅಲ್ಲಗಳೆದು ವಚನ ದರ್ಶನ ಪುಸ್ತಕ ಬರೆಸಿದೆ. ಶರಣರ ಅನುಭಾವದಲ್ಲಿ ಮೂಡಿದ ವಚನಗಳನ್ನು ವೇದ ಮತ್ತು ಉಪನಿಷತ್ತುಗಳ ಕನ್ನಡೀಕರಣ ಎಂದು ನಿರಾಧಾರ ಹಾಗೂ ಕುಚೋದ್ಯದ ಪ್ರತಿಪಾದನೆ ಮಾಡುತ್ತಿದ್ದಾರೆ. ಅನುಭವ ಮಂಟಪವೇ ಇರಲಿಲ್ಲ ಎಂದು ವೀಣಾ ಬನ್ನಂಜೆ, ಅನುಭವ ಮಂಟಪ ಇತ್ತು, ಆದರೆ ಶೂನ್ಯಪೀಠ ಇರಲಿಲ್ಲ ಎಂದು ಸುಬ್ಬಾರಾವ್ ಎನ್ನುವವರು ಹೇಳುತ್ತಾರೆ.

ಈ ಎಲ್ಲ ಸುಳ್ಳುಗಳನ್ನು ಬಯಲುಗೊಳಿಸಲು ಇವತ್ತು ಫ.ಗು. ಹಳಕಟ್ಟಿಯವರು ಸಂಪಾದಿಸಿಕೊಟ್ಟ ಶರಣರ ವಚನಗಳಿವೆ. ಲಿಂಗಾಯತರು ಈಗ ಓದಿಕೊಂಡಿದ್ದಾರೆ. ಹಿಂದೆ ಪದೇ ಪದೇ ಸುಳ್ಳು ಹೇಳಿ ನಂಬಿಸಿದಂತೆ, ಇವಾಗ ನಂಬಿಸಲಾಗದು. ಆರ್.ಎಸ್.ಎಸ್ ಗೆ ತಕ್ಕ ಉತ್ತರ ಕೊಡುವುದಕ್ಕಾಗಿಯೇ ಬಹುಹಿಂದೆ ಡಿ.ಸಿ. ಪಾವಟೆ, ಹಿರೇಮಲ್ಲೂರು ಈಶ್ವರನ್, ಜಿ.ಎಸ್.ಶಿವರುದ್ರಪ್ಪ, ಚಂಪಾ, ಎಂ.ಎಸ್. ಹುಣಶ್ಯಾಳ, ನೀಲಗಂಗಯ್ಯ ಪೂಜಾರ್ ಮತ್ತೀತರರು ಬರೆದ ಲೇಖನಗಳನ್ನು ಸಂಪಾದಿಸಿ ಈ ಪುಸ್ತಕ ತಂದಿದ್ದೇವೆ. ಆರ್.ಎಸ್.ಎಸ್ ವಚನ ದರ್ಶನವನ್ನು 9 ಜಿಲ್ಲೆಗಳಲ್ಲಿ ಬಿಡುಗಡೆ ಮಾಡಿದ್ದರೆ, ನಾವು ಪ್ರಮುಖ ಜಿಲ್ಲೆಗಳು ಸೇರಿ 18ಕ್ಕೂ ಹೆಚ್ಚು ಕಡೆ ಈ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತೇವೆ’ ಎಂದು ಹೇಳಿದರು.

ಲಿಂಗಾಯತರೂ ಶಿವನ ಆರಾಧಕರು, ಹಾಗಾಗಿ ಹಿಂದೂಗಳು ಎನ್ನುವ ವಾದವನ್ನು ಆರ್.ಎಸ್.ಎಸ್ ಪ್ರಮುಖ ಮುಕುಂದ ಎನ್ನುವವರು ಮುಂದಿಡುತ್ತಾರೆ. ಶರಣರ ಪರಿಕಲ್ಪನೆಯ ಶಿವ ಶೈವ ಪಂಥದ ಶಿವನಲ್ಲ. ಪೌರಾಣಿಕ ಶಿವನಿಗಿಂತ ವಚನಕಾರರ ಶಿವ, ದೈವ ಸಂಪೂರ್ಣ ಭಿನ್ನ. ಅಲ್ಲಮನ 11 ವಚನಗಳ 142 ಸಾಲುಗಳಲ್ಲಿ ಇವರಿಗೆ ಸ್ಪಷ್ಟ ಉತ್ತರವಿದೆ. ಪ್ರಾಂಜಲ ಮನಸ್ಸಿನಿಂದ ಓದಬೇಕಷ್ಟೇ’ ಎಂದು ಜಾಮದಾರ ಹೇಳಿದರು.

ಪುಸ್ತಕದ ಸಂಪಾದಕ ಟಿ.ಆರ್. ಚಂದ್ರಶೇಖರ ಮಾತನಾಡಿ, ‘ಲಿಂಗಾಯತ ಧರ್ಮದ ಮೇಲೆ, ಬಸವಣ್ಣನ ಮೇಲೆ ಬ್ರಾಹ್ಮಣ್ಯದ ದಾಳಿಯನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಲಿಂಗಾಯತ ಮಠಗಳಲ್ಲಿರುವ ಕುಂಕುಮಧಾರಿಗಳ ದಾಳಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಬಸವ ತಾಲಿಬಾನಿಗಳು ಎನ್ನುವ ಕನ್ಹೇರಿ ಶ್ರೀ ಹೇಳಿಕೆ, ಬಸವಣ್ಣ ಹೊಳೆ ಹಾರಿದ ಎನ್ನುವ ಬಸನಗೌಡ ಯತ್ನಾಳರ ಕುಹಕ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರವಿರಬೇಕು ಎನ್ನುವ ಬಿದರಿಯವರ ಸಲಹೆ ಹಿಂದೆ ಆರ್.ಎಸ್.ಎಸ್ ಇದೆ. ಇದು ಬಸವಾದಿ ಶರಣರ ತಾತ್ವಿಕತೆಯನ್ನು ಗೌಣವಾಗಿಸುವ, ಭ್ರಷ್ಟಗೊಳಿಸುವ ಕುತಂತ್ರ’ ಎಂದು ಆರೋಪಿಸಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ನೂರಾರು ವಚನಗಳಲ್ಲಿ ವೇದಾಗಮಗಳನ್ನು, ವರ್ಣಾಶ್ರಮ ಧರ್ಮವನ್ನು ತಿರಸ್ಕರಿಸಿದ್ದಾರೆ. ವೇದ ನಡ ನಡುಗಿತ್ತು ಏಕೆಂದರೆ ಕೂಡಲಸಂಗಮದೇವನು ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿ ಉಂಡ ಕಾರಣಕ್ಕೆ ಎನ್ನುವ ಬಸವಣ್ಣನವರ ನಿಲುವು ವೇದಗಳ ವಿಚಾರವಾಗಿ ಸ್ಪಷ್ಟವಾಗಿದೆ. ಆದರೂ ಮತ್ತೆ ಮತ್ತೆ ವಚನಕಾರರನ್ನು ತಿರುಚುವ, ತಪ್ಪಾಗಿ ಅರ್ಥೈಸುವ ಹುನ್ನಾರ ಏಕೆ ? ಎಂದು ಪ್ರಶ್ನಿಸಿದರು.

ಸಾನ್ನಿಧ್ಯ ವಹಿಸಿದ್ದ ಗುರು ಮಹಾಂತ ಶ್ರೀ ಮಾತನಾಡಿ, ‘ಲಿಂಗಾಯತರಿಗೆ ಬಸವಣ್ಣ ಧರ್ಮಗುರು, ವಚನ ಸಾಹಿತ್ಯ ಧರ್ಮಗ್ರಂಥ, ವಚನ ಸಮ್ಮತ ನಿಜಾಚರಣೆಗಳನ್ನು ರೂಢಿಸಿಕೊಂಡು, ಮೌಢ್ಯದಿಂದ ಹೊರಬನ್ನಿ’ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬರಗುಂಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಕಾರ್ಯದರ್ಶಿ ಮಹಾಂತೇಶ ಪಾಟೀಲ ಮಾತನಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಕಡಪಟ್ಟಿ, ಪ್ರಧಾನ ಕಾರ್ಯದರ್ಶಿ ರವಿ ಯಡಹಳ್ಳಿ, ಇಳಕಲ್ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಬೆಳವಣಿಕಿ, ಹುನಗುಂದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್.ಕಡಿವಾಲ, ಹುನಗುಂದ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಾ ಭಾವಿಕಟ್ಟಿ, ಗುಳೆದಗುಡ್ಡ ತಾಲ್ಲೂಕು ಘಟಕದ ಅಧ್ಯಕ್ಷ ರಾಚಪ್ಪ ಕೆರೂರ, ಜಮಖಂಡಿ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಬಾಂಗಿ, ನೂರಾರು ಶರಣ ಶರಣೆಯರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
1 Comment

Leave a Reply

Your email address will not be published. Required fields are marked *