ಬಸವ ಜಯಂತಿ: ಸಿದ್ಧತಾ ಸ್ಥಳಕ್ಕೆ ಸಚಿವ ಶರಣಪ್ರಕಾಶ ಪಾಟೀಲ ಭೇಟಿ

ಕಲಬುರಗಿ:

ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 892ನೇ ಜಯಂತ್ಯುತ್ಸವ ನಿಮಿತ್ತ ಕಲಬುರಗಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಹಾಗೂ ವಿವಿಧ ಕಾಯಕ ಸಮಾಜ, ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಚರಿಸುವ ನಿರ್ಧಾರ ಕೈಗೊಂಡಿದ್ದಾರೆ.

ಜಯಂತಿಯನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಶಾಸಕ ಎಂ.ವೈ. ಪಾಟೀಲ ಅವರನ್ನು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

29ರಂದು ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಸಂಜೆ 5 ಗಂಟೆಗೆ ಬಹಿರಂಗ ಸಭೆ ನಡೆಸಲಾಗುವುದು.‌ 30ರಂದು ಮೆರವಣಿಗೆ ಕಾರ್ಯಕ್ರಮ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ.

ಜಯಂತ್ಯುತ್ಸವದ ಕಾರ್ಯಕ್ರಮಕ್ಕಾಗಿ ಜನರನ್ನು ಸೇರಿಸಲು ಜಿಲ್ಲೆಯ ಎಲ್ಲ ತಾಲ್ಲೂಕು, ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಿ ಆಗಮಿಸಲು ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ಸ್ಥಳಕ್ಕೆ ಸೋಮವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾವೇಶಕ್ಕೆ 25 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಬಸವಾಭಿಮಾನಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಬಸವಾದಿ ಶರಣರ ಬದುಕು ಹಾಗೂ ಬೋಧನೆ, ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಸಮಾಜ ನಿರ್ಮಾಣ ಸಾಧ್ಯವಾಗಿದ್ದು, ಬಸವಣ್ಣನವರ ವಿಚಾರಧಾರೆ ಜನಮಾನಸಕ್ಕೆ ಮುಟ್ಟಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಪಾರ್ಕಿಂಗ್ ವ್ಯವಸ್ಥೆ, ಊಟದ ವ್ಯವಸ್ಥೆ, ವೇದಿಕೆ ಸಿದ್ಧತೆ ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಸಿ ಕಾರ್ಯಕ್ರಮ ಯಶಸ್ವಿಗೆ ಪೂರ್ವ ಸಿದ್ಧತೆ ನಡೆಸಿ ಎಂದು ಸಲಹೆ ನೀಡಿದರು.

ಅ. ಭಾ. ವೀರಶೈವ-ಲಿಂಗಾಯತ ಮಹಸಭಾ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಮೋದಿ, ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ರಾಷ್ಟ್ರೀಯ ಬಸವ ದಳದ ಆರ್.ಜಿ. ಶೆಟಗಾರ, ಅ.ಭಾ. ವೀರಶೈವ-ಲಿಂಗಾಯತ ಮಹಸಭಾ ಕಲಬುರಗಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಸೋಮಶೇಖರ ಹಿರೇಮಠ, ಉದಯಕುಮಾರ ಜೇವರ್ಗಿ, ಶಾಂತರೆಡ್ಡಿ ಪೇಠಶಿರೂರ, ಮುಖಂಡರಾದ ಡಾ. ಕಿರಣ ದೇಶಮುಖ ಇತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
Leave a comment

Leave a Reply

Your email address will not be published. Required fields are marked *