ಜಮಖಂಡಿ
‘ಬಸವಾದಿ ಶಿವಶರಣರು ಪರಿಶುದ್ಧವಾದ ಕಾಯಕ ಮಾಡಿ ಅನುಭವಕ್ಕೆ ತಂದುಕೊಂಡು ಆನಂದಪಡುವ ಉಮೇದಿನಿಂದ ವಚನಗಳು ರಚನೆಯಾಗಿವೆ. ವಚನ ಸಾಹಿತ್ಯ ಕಾಯಕ ಜೀವಿಗಳಿಂದ ರಚನೆಯಾಗಿದೆ. ವಚನಗಳನ್ನು ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳಲು ಬರುತ್ತದೆ’ ಎಂದು ಹಿಪ್ಪರಗಿಯ ಸಂಗಮೇಶ್ವರ ಮಠದ ಪ್ರಭುಜಿ ಬೆನ್ನಾಳಿ ಮಹಾರಾಜರು ಹೇಳಿದರು.
ನಗರದ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಆನಂದ ದೇವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ ಬುಧವಾರ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ದೇವರು ಕಾಣುವುದಿಲ್ಲ. ದೇವರಿಗೆ ರೂಪ, ಬಣ್ಣ, ಆಕಾರವಿಲ್ಲ. ದೇವರು ನಿರ್ಗುಣ, ನಿರಾಕಾರ, ಅವ್ಯಕ್ತನಿದ್ದಾನೆ. ದೇವರನ್ನು ಪರಮಸತ್ಯ ಎನ್ನುತ್ತಾರೆ. ಆತ್ಮವೇ ಸತ್ಯ. ಆತ್ಮನೇ ನಾನು. ಆತ್ಮ ಪರಮಾತ್ಮನ ಅಂಶ. ಪರಮಾತ್ಮನೇ ಆತ್ಮ. ತಾನೇ ಪರಮಾತ್ಮ ಎಂಬ ಸತ್ಯವನ್ನು ಅರಿಯಲು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ದೇವರನ್ನು ನೆನಪು ಮಾಡಿಕೊಳ್ಳಲು ವಚನಗಳು ಬೇಕು’ ಎಂದು ತಿಳಿಸಿದರು.
ಝುಂಜರವಾಡದ ಬಸವ ರಾಜೇಂದ್ರ ಶರಣರು ಮಾತನಾಡಿ, ‘ಮನುಷ್ಯರಾದವರು ಮಹಾದೇವನನ್ನು ಪ್ರಚುರ ಪಡಿಸಿಕೊಳ್ಳಲು ಸಂಸ್ಕಾರ ಅಗತ್ಯ. ಮನುಷ್ಯನಿಗೆ ಸಂಸ್ಕಾರ ಕೊಟ್ಟರೆ ಮಹಾದೇವನಾಗಿ ಬಿಡುತ್ತಾನೆ’ ಎಂದರು.
ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಮಾಮೂನರಶೀದ ಪಾರತನಳ್ಳಿ, ಎ.ಆರ್. ಶಿಂಧೆ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಬಿ. ಅಜ್ಜನವರ, ನಿವೃತ್ತ ಉಪಪ್ರಾಚಾರ್ಯ ಎನ್.ಬಿ. ಬಿರಾದಾರ ಮಾತನಾಡಿದರು.
ಸಾಹಿತಿ ಬಸವರಾಜ ಯಡಹಳ್ಳಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಏಗಪ್ಪ ಸವದಿ, ಮಲ್ಲಿಕಾರ್ಜುನ ಲಿಂಗನೂರ, ನಗರಸಭೆ ಸದಸ್ಯ ಪ್ರಶಾಂತ ಚರಕಿ, ಮಹಾನಂದಾ ಕಲೂತಿ, ಮಹಾನಂದಾ ಪಾಟೀಲ, ಜಯಶ್ರೀ ಪಾಟೀಲ ಇದ್ದರು. ಶ್ರಾವಣಿ ಕೊಕಟನೂರ ಭರತನಾಟ್ಯ ಪ್ರದರ್ಶಿಸಿದರು. ಪೂರ್ಣಿಮಾ ಮಾಳಿ, ಪ್ರತಿಭಾ ಅಕ್ಕಿ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಜಾಗೃತಿ ಮೂಡಿಸಿದರು.
ವಾಣಿಶ್ರೀ, ವರ್ಷಾ ಪ್ರಾರ್ಥನೆ ಗೀತೆ ಹಾಡಿದರು. ರಘು ಲಗಳಿ ಸ್ವಾಗತಿಸಿದರು. ಈರಪ್ಪ ಜಮಖಂಡಿ ನಿರೂಪಿಸಿದರು. ಓಲೇಮಠದ ಆನಂದ ದೇವರು ಶರಣು ಸಮರ್ಪಿಸಿದರು.