ಗಜೇಂದ್ರಗಡ
ಬಸವಣ್ಣನವರು ದಯಪಾಲಿಸಿದ ಇಷ್ಟಲಿಂಗವನ್ನು ನಿಷ್ಟೆಯಿಂದ ಪೂಜಿಸಿ ಬಸವಾದಿ ಶರಣರ ಮಾರ್ಗದಲ್ಲಿ ಲಿಂಗಾಯತರು ನಡೆಯಬೇಕು. ಪರಮ ಪತಿವ್ರತೆಗೆ ಗಂಡನೊಬ್ಬನೆ ಎಂಬಂತೆ ಲಿಂಗನಿಷ್ಠೆಯನ್ನು ನಾವು ಹೊಂದಬೇಕು ಎಂದು ಮೈಸೂರು ಸಂಸ್ಥಾನ ಮಠದ ಪೂಜ್ಯ ವಿಜಯಮಹಾಂತ ಸ್ವಾಮೀಜಿ ಹೇಳಿದರು.
ಅವರು ಮೈಸೂರು ಮಠದಲ್ಲಿ ನಡೆದ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಗಜೇಂದ್ರಗಡ – ಉಣಚಗೇರಿಯ 13ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ರೋಣ ಶಾಸಕ ಹಾಗೂ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಬಣಜಿಗ ಸಮಾಜವು ರಾಜಕೀಯ, ಶೈಕ್ಷಣಿಕ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡುತ್ತ ಬಂದಿದೆ. ಸಮಾಜದ ಶ್ರೇಯೋಭಿವೃದ್ಧಿಗೆ ಹಾಗೂ ಸಮಾಜದಿಂದ ನಿರ್ಮಾಣಗೊಳ್ಳಲಿರುವ ಸಮುದಾಯ ಭವನಕ್ಕೆ 50 ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಘೋಷಿಸಿದರು.
ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ ಅವರು ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ.90 ಹಾಗೂ ಪಿಯುಸಿಯಲ್ಲಿ ಶೇ.85 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸ್ತುತ್ಯಾರ್ಹವಾದುದು. ಸಮಾಜ ಇನ್ನೂ ಇಂತಹ ಹಲವಾರು ರಚನಾತ್ಮಕ ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳಬೇಕು, ಜೊತೆಗೆ ರಾಜ್ಯ ಸಂಘದ ಸದಸ್ಯತ್ವ ಪಡೆಯಲು ಪ್ರತಿಯೊಬ್ಬರೂ ಮುಂದಾಗಬೇಕೆಂದರು.
ಸಮಾಜದ ನೂತನ ಯುವ ಘಟಕಕ್ಕೆ ಅಂದಪ್ಪ ಜವಳಿ ಅವರು ಪ್ರಮಾಣ ವಚನ ಬೋಧಿಸಿದರು.

ಸಮಾರಂಭದಲ್ಲಿ ಶ್ರೀ ಜ್ಯೊತಿ ಅಕಾಡೆಮಿ ಅವರ ವಚನನೃತ್ಯ ಪ್ರದರ್ಶನ ಹಾಗೂ ಕುಮಾರಿ ಅಪೇಕ್ಷಾ ನಿಡಶೇಸಿ ಮತ್ತು ಸಂಗಡಿಗರು ಪ್ರದರ್ಶಿಸಿದ ಭರತನಾಟ್ಯದ ಹಾಡು ಎಲ್ಲರ ಗಮನ ಸೆಳೆಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಗೌರವ ಸನ್ಮಾನ ನಡೆಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಮೇಶ ಮೆಣಸಗಿ ವಹಿಸಿದ್ದರು. ಗೌರವಾಧಕ್ಷ ಡಾ. ಬಿ. ವ್ಹಿ. ಕಂಬಳ್ಯಾಳ ಉಪಸ್ಪಿತರಿದ್ದರು. ಸಂಘದ ಪ್ರದಾನ ಕಾರ್ಯದರ್ಶಿ ಬಿ. ಎಸ್. ಶೀಲವಂತರ ಪ್ರಾಸ್ತಾವಿಕ ನುಡಿಯಲ್ಲಿ ಸಂಘದ ರೂಪುರೇಷೆ ಹೇಳಿ, ಸಮಾಜದ ಅಭಿವೃದ್ದಿಗೆ ಎಲ್ಲರೂ ಶ್ರಮಿಸೋಣ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈಶಣ್ಣ ಮುನವಳ್ಳಿ, ನರೇಗಲ್ಲ ಅಧ್ಯಕ್ಷ ಜಿ.ಎ. ಬೆಲ್ಲದ, ಯಲಬುರ್ಗಾ ಅಧ್ಯಕ್ಷ ಬಿ.ಕೆ. ಕಜ್ಜಿ, ಕುಷ್ಟಗಿಯ ವ್ಹಿ.ಜಿ. ಕಣ್ಣೂರ, ಎಸ್.ಎಸ್. ವಾಲಿ, ಶ್ರೀಮತಿ ಎಸ್.ಎಸ್. ನಂದಿಹಾಳ, ಕೀರ್ತಿ ಕೊಟಗಿ, ಮಹಾಂತೇಶ ಅರಳಿ, ವಿ.ಜಿ. ಶೆಟ್ಟರ ಮತ್ತಿತರರು ವೇದಿಕೆ ಮೇಲಿದ್ದರು.
ರೋಣ ತಾಲೂಕ ಅಧ್ಯಕ್ಷ ಮುತ್ತಣ್ಣ ಸಂಗಳದ ಅವರು ಸ್ಥಳೀಯ ಸಮಾಜದ ಅಭಿವೃದ್ಧಿಗೆ ಒಂದು ಲಕ್ಷದಾ ಒಂದು ನೂರಾ ಒಂದು ರೂ. ದೇಣಿಗೆ ನೀಡುವುದಾಗಿ ಹೇಳಿದರು. ಪ್ರಸಾದ ದಾಸೋಹ ಸೇವೆ ಮಾಡಿದ ಬಸವರಾಜ ಕೊಟಗಿ ಮತ್ತು ಕೀರ್ತಿ ಕೊಟಗಿ ದಂಪತಿಗೆ ಸತ್ಕಾರ ನಡೆಯಿತು.
ಸಂಘದ ಕಾರ್ಯಕಾರಿ ಮಂಡಳಿ, ಸಲಹಾ ಸಮಿತಿ ಸದಸ್ಯರು, ಮಹಿಳಾ ಮತ್ತು ಯುವ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಈಶ್ವರ ಬದಾಮಿ, ಮಹಾಂತೇಶ ಕಡಗದ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.