ಕೂಡಲಸಂಗಮ
ಪ್ರವಚನದ ಮೂಲಕ ಬಸವತತ್ವವನ್ನು ನಾಡಿಗೆ ಪರಿಚಯಿಸಿ ವಚನ ಸಾಹಿತ್ಯ ಭಿತ್ತರಿಸಿದ ಶ್ರೇಯಸ್ಸು ಲಿಂಗಾನಂದ ಸ್ವಾಮೀಜಿಯವರಿಗೆ ಸಲ್ಲುವುದು ಎಂದು ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠದ ಶರಣ ಲೋಕದಲ್ಲಿ ಸೋಮವಾರ ನಡೆದ ಲಿಂಗಾನಂದ ಸ್ವಾಮೀಜಿ ೩೦ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಬಸವತತ್ವ ನಿಷ್ಠೆಯ ಜಂಗಮಮೂರ್ತಿಗಳನ್ನು ನಾಡಿಗೆ ಪರಿಚಯಿಸಿದವರೆ ಲಿಂಗಾನಂದ ಶ್ರೀಗಳು. ಇಂದು ಬಸವತತ್ವ ಹೇಳುವ ಬಹುತೇಕ ಜಂಗಮಮೂರ್ತಿಗಳು ಅವರ ಶಿಷ್ಯರೆ ಆಗಿದ್ದಾರೆ.
ಸಮಾಜದಲ್ಲಿ ಜಿಡ್ಡುಗಟ್ಟಿದ ಸಂಪ್ರದಾಯ, ಮೂಡನಂಭಿಕೆಗಳ ವಿರುದ್ದ ಸ್ವಾಮೀಜಿ ನಿರಂತರ ಹೋರಾಟ ಮಾಡಿದರು. ಅನೇಕ ಕಷ್ಟಗಳನ್ನು ಎದುರಿಸಿದರು. ಜಂಗಮತ್ವ ಅರ್ಹತೆಯಿಂದ ಬರಬೇಕು ಎಂದು ಪ್ರತಿಪಾಧಿಸಿದ ಅವರು ನಮ್ಮೊಂದಿಗೆ ಇರದೇ ಇದ್ದರು ಅವರು ಪ್ರತಿಪಾದಿಸಿದ ತತ್ವ ಸಿದ್ದಾಂತಗಳು ಇವೆ.
೧೯೭೦ರಲ್ಲಿಯೇ ಲಿಂಗಾಯತರನ್ನು ಸಂಘಟಿಸುವ ಕಾರ್ಯವನ್ನು ಲಿಂಗಾನಂದ ಸ್ವಾಮೀಜಿ ಮಾಡಿದರು. ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಲ್ಲಿ ಬಸವತತ್ವ ಸಮ್ಮೇಳನದ ಮೂಲಕ ನೆರೆಯ ರಾಜ್ಯದ ಲಿಂಗಾಯತರನ್ನು ಸಹ ಸಂಘಟಿಸಿದ ಶ್ರೇಯಸ್ಸು ಶ್ರೀಗಳಿಗೆ ಸಲ್ಲುತ್ತದೆ. ಅವರ ಸಾಹಿತ್ಯ ಹಲವಾರು ಸಾಮಾಜಿಕ ಬದಲಾವಣೆಗೆ ಕಾರಣವಾಯಿತು ಎಂದರು.
ಕಾರ್ಯಕ್ರಮದಲ್ಲಿ ಪ್ರವೀಣ, ಯಲ್ಲಮ್ಮ, ಸಂಗಮ್ಮ ಕುಂಬಾರ, ಲೋಹಿತಾದೇವಿ ಮುಂತಾದವರು ಇದ್ದರು.