ಮಗ ದೂರದ ದೆಹಲಿಯಲ್ಲಿ ನಿಧನರಾದಾಗಲೂ ವಚನಗಳನ್ನು ತಿದ್ದುವ ಕಾರ್ಯದಲ್ಲೇ ಮಗ್ನರಾಗಿದ್ದರು.
ಶಹಾಪುರ
(ಇಂದು ವಚನ ಸಂರಕ್ಷಣಾ ದಿನ ಹಾಗೂ ಡಾ. ಫ. ಗು. ಹಳಕಟ್ಟಿಯವರ ೧೪೫ ನೇ ಜನ್ಮದಿನ.)
ಕೆಲವು ವ್ಯಕ್ತಿಗಳು ತಮ್ಮ ಜೀವನವನ್ನು ಒಂದು ಮಹಾನ್ ಧ್ಯೇಯಕ್ಕಾಗಿ ಮುಡುಪಾಗಿಡುತ್ತಾರೆ. ಅಂತಹವರಲ್ಲಿ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಹೆಸರು ಅಗ್ರಗಣ್ಯ. ವಚನಗಳ ಮೂಲಕ ಜಗತ್ತಿಗೆ ಬೆಳಕು ನೀಡಿದ ಮಹಾತ್ಮ ಬಸವಣ್ಣನವರಾದರೆ, ಆ ವಚನ ಸಾಹಿತ್ಯವೆಂಬ ಅಕ್ಷಯ ನಿಧಿಯನ್ನು ಜನಮಾನಸಕ್ಕೆ ತಲುಪಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ.
ಬಡತನದಲ್ಲಿ ಹುಟ್ಟಿ, ಬೆಳೆದು, ಬಡತನವನ್ನೇ ಅಪ್ಪಿಕೊಂಡ ಕುಟುಂಬದಿಂದ ಬಂದವರಾದರೂ, ಹಳಕಟ್ಟಿ ಅವರು ಎಂದಿಗೂ ಬಡತನಕ್ಕೆ ಅಂಜದೆ, ತಮ್ಮ ಬದುಕಿನುದ್ದಕ್ಕೂ ಭಾವಶ್ರೀಮಂತಿಕೆಯನ್ನು ಉಳಿಸಿಕೊಂಡು ಬಂದ ಅಪರೂಪದ ಜೀವಿಯಾಗಿದ್ದರು. ಕಲಿತ ವಿದ್ಯೆಯಿಂದ ವಕೀಲರಾಗಿ, ನಗರಸಭಾ ಅಧ್ಯಕ್ಷರಾಗಿ, ಎಮ್.ಎಲ್.ಸಿ.ಯಾಗಿ, ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಿ ಬ್ಯಾಂಕುಗಳನ್ನು ಪ್ರಾರಂಭಿಸಿ ಜನರ ಹಿತದೃಷ್ಟಿಯಿಂದ ಕೆಲಸ ಮಾಡಿದರೇ ಹೊರತು, ತಮ್ಮ ಹಿತದ ಕಡೆಗೆ ಎಂದಿಗೂ ಕಣ್ಣೆತ್ತಿ ನೋಡದ ಸಂತಪ್ರಾಯರಾಗಿದ್ದರು.
ವಚನ ಸಾಹಿತ್ಯದ ಸಂರಕ್ಷಕ
ವಕೀಲರಾಗಿದ್ದಾಗ ಒಮ್ಮೆ ಕಕ್ಷಿದಾರರ ಮನೆಗೆ ಹೋದಾಗ, ಜಗುಲಿಯ ಮೇಲಿದ್ದ ತಾಳೆಗರಿಗಳ ಕಟ್ಟನ್ನು ನೋಡಿ ಅವು ವಚನಗಳೆಂದು ಅರಿತರು. ಅವುಗಳನ್ನು ತಮ್ಮ ಮನೆಗೆ ತಂದು ಓದಿದ ನಂತರ, ಅವುಗಳನ್ನು ಪುಸ್ತಕ ರೂಪದಲ್ಲಿ ಏಕೆ ತರಬಾರದೆಂದು ಯೋಚಿಸಿದರು. ಮುದ್ರಣಕ್ಕಾಗಿ ಮದ್ರಾಸ್‌ಗೆ ಕಳಿಸಿದಾಗ, ಮುದ್ರಕರು ವಚನ ಸಾಹಿತ್ಯದ ಈ ಕೃತಿ ಹೊರಬಂದರೆ ತಮ್ಮ ಕ್ರಿಶ್ಚಿಯನ್ ಧರ್ಮಕ್ಕೆ ಹಿನ್ನಡೆಯಾಗಬಹುದೆಂದು ಮುದ್ರಿಸದೆ ಹಿಂದಿರುಗಿಸಿದರು.
ಆಗ ಹಳಕಟ್ಟಿ ಅವರು ತೆಗೆದುಕೊಂಡ ನಿರ್ಧಾರ ಅವರ ಅಚಲ ಸಂಕಲ್ಪಕ್ಕೆ ಸಾಕ್ಷಿ. ತಮ್ಮ ಮನೆಯನ್ನೇ ಮಾರಿ, “ಹಿತಚಿಂತಕ” ಎಂಬ ಮುದ್ರಣಾಲಯವನ್ನು ಸ್ಥಾಪಿಸಿ, ವಚನ ಸಾಹಿತ್ಯವನ್ನು ಪ್ರಕಟಿಸಿ, ಮನೆ ಮನೆಗೆ ತಲುಪುವಂತೆ ಮಾಡಿದರು. ಅವರ ಈ ಮಹತ್ಕಾರ್ಯವನ್ನು ವಚನ ಸಾಹಿತ್ಯಾಭಿಮಾನಿಗಳು ಎಂದಿಗೂ ಮರೆಯಲಾಗದು.

ತ್ಯಾಗಮಯಿ ಜೀವನ
ಹಳಕಟ್ಟಿ ಅವರು ಎಂದಿಗೂ ತಮ್ಮ ಬಗ್ಗೆ ಚಿಂತಿಸಲಿಲ್ಲ ಎಂಬುದಕ್ಕೆ ಅವರ ಜೀವನದ ಹಲವು ಘಟನೆಗಳು ಉದಾಹರಣೆ. ಧಾರವಾಡ ವಿಶ್ವವಿದ್ಯಾಲಯದವರು ಅವರಿಗೆ ಗೌರವ ಡಾಕ್ಟರೇಟ್ ನೀಡಿದಾಗ, ಸಾಮಾನ್ಯವಾಗಿ ಅಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಎಲ್ಲರೂ ತಮ್ಮ ಕೋಟ್ ಬಿಚ್ಚಿಟ್ಟು ಊಟಕ್ಕೆ ಕುಳಿತುಕೊಳ್ಳುತ್ತಾರೆ. ಹಳಕಟ್ಟಿ ಅವರಿಗೆ “ಸರ್, ತಾವು ಕೋಟ್ ಕಳಚಿಡಿ” ಎಂದಾಗ, “ಇರಲಿ ಬಿಡಿ” ಎಂದರು. ಆಗ ಕುಲಪತಿಗಳಾಗಿದ್ದ ಒಡೆಯರ್ ಅವರು ಒತ್ತಾಯಿಸಿದಾಗ, ಅವರನ್ನು ಕರೆದು ಕಿವಿಯಲ್ಲಿ “ಸರ್, ಒಳಗಿನ ಅಂಗಿ ಹರಿದಿದೆ, ತೆಗೆದರೆ ಕಾಣುತ್ತದೆ, ಬೇಡ” ಎಂದು ಹಾಗೆಯೇ ಕುಳಿತುಕೊಂಡರು.
ವಿಶ್ವವಿದ್ಯಾಲಯದ ದೊಡ್ಡ ಸಮಾರಂಭದಲ್ಲಿ, ಅದರಲ್ಲೂ ತಮಗೆ ಡಾಕ್ಟರೇಟ್ ಕೊಟ್ಟಾಗಲೂ ಸಹ, ಹೊಸ ಅಂಗಿ ಹೊಲಿಸಿಕೊಂಡು ಬಾರದೆ ಹಳೆಯ ಅಂಗಿಯಲ್ಲೇ ಕೋಟ್ ಹಾಕಿಕೊಂಡು ಬಂದ ಅವರ ಸ್ಥಿತಿ ಕರುಣಾಜನಕ ಎನಿಸಿದರೂ, ಅವರಿಗೆ ವಚನ ಸಾಹಿತ್ಯವನ್ನು ಜನರಿಗೆ ತಲುಪಿಸುವ ಹುಚ್ಚಿತ್ತೇ ಹೊರತು ತಮ್ಮ ಮತ್ತು ತಮ್ಮ ಮನೆಯ ಕಡೆ ನೋಡಲು ಅವರಿಗೆ ಪುರುಸೊತ್ತಿರಲಿಲ್ಲ. ತಮ್ಮ ಕಡೆ ನೋಡಿದವರಿಂದ ಸಮಾಜದ ಕಡೆ ನೋಡಲು ಸಾಧ್ಯವಿಲ್ಲ ಎಂಬುದಕ್ಕೆ ಇವರ ಬದುಕೇ ಸಾಕ್ಷಿ, ಇದಕ್ಕೆ ಬಸವಣ್ಣನವರ ಜೀವನವೇ ಪ್ರತಿಸಾಕ್ಷಿಯಾದೀತು.
ಅವರ ಮಗ ದೂರದ ದೆಹಲಿಯಲ್ಲಿ ನಿಧನರಾದಾಗಲೂ, ಅವರು ವಚನಗಳನ್ನು ತಿದ್ದುವ ಕಾರ್ಯದಲ್ಲೇ ಮಗ್ನರಾಗಿದ್ದರೆಂದರೆ, ಅವರ ಮನಸ್ಥಿತಿ ಎಷ್ಟೊಂದು ಬದ್ಧತೆಯಿಂದ ಕೂಡಿತ್ತು ಎಂಬುದನ್ನು ನೆನೆಸಿಕೊಂಡರೆ ಕಣ್ಣುಗಳು ತುಂಬಿ ಬರುತ್ತವೆ.
ಇಂತಹ ಜೀವಗಳು ನಾಡಿಗಾಗಿ, ಒಂದು ತತ್ವಕ್ಕಾಗಿ ಬದುಕಿದರೇ ಹೊರತು ತಮಗಾಗಿ ಅಲ್ಲ ಎಂಬುದನ್ನು ನಾವು ನೀವೆಲ್ಲ ಮರೆಯಬಾರದು. ಅವರ ನೆನಪನ್ನು, ವಚನ ಸಾಹಿತ್ಯವನ್ನು ಓದುವ ಮೂಲಕ ನಾವು ಜೀವಂತವಾಗಿಡಬೇಕು.