ಲೋಕಸಭಾ ಸದಸ್ಯೆ ಪ್ರಣತಿ ಶಿಂಧೆಯವರಿಂದ ಕಾರ್ಯಕ್ರಮದ ಉದ್ಘಾಟನೆ
ಸೊಲ್ಲಾಪುರ
ಶರಣೆ ಲಿಂ. ಶಾಂತಬಾಯಿ ಗುರುಪಾದಪ್ಪ ಮಸೂತೆ ಇವರ ಪ್ರಥಮ ಲಿಂಗೈಕ್ಯ ಸಂಸ್ಮರಣೆ ನಿಮಿತ್ಯವಾಗಿ ಲಿಂಗಾಯತ ಧರ್ಮ ಅಧ್ಯಯನ ಮತ್ತು ತರಬೇತಿ ಕೇಂದ್ರದಿಂದ ಜುಲೈ 13, 2025 ಭಾನುವಾರದಂದು ಬಸವತತ್ವ ಸಮಾವೇಶ ಮತ್ತು ವಿಶ್ವ ಕಲ್ಯಾಣ ಮಹಾಮನೆ ಟ್ರಸ್ಟ್ ಉದ್ಘಾಟನೆ ಹಾಗೂ ಪದವಿ ವಿದ್ಯಾರ್ಥಿಗಳ ಶಿಕ್ಷಣದ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಲಿಂಗಶೆಟ್ಟಿ ಮಂಗಲ ಕಾರ್ಯಾಲಯ, ಬಾಳಿವೇಶ ಸೋಲಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಥಮ ಲಿಂಗೈಕ್ಯ ಸಂಸ್ಮರಣೆ:
ಶರಣೆ ಲಿಂ ಶಾಂತಬಾಯಿ ಗುರುಪಾದಪ್ಪ ಮಸೂತೆಯವರು ಮೂಲತಃ ಮಾದನಹಿಪ್ಪರಗಾದವರಾಗಿದ್ದು, ಬಸವ ತತ್ವದ ಅಡಿಯಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದರು. ಕಳೆದ ವರ್ಷ ಅವರು ತಮ್ಮ 80ನೇ ವರ್ಷದ ವಯೋ ಸಹಜ ಕಾರಣದಿಂದ ಲಿಂಗೈಕ್ಯರಾದರು. ಅವರಿಗೆ ಶ್ರೀಶೈಲ ಮಸೂತೆ, ಇಬ್ಬರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರ ಹಿರಿಯ ಮಗನಾದ ಶ್ರೀಶೈಲ ಮಸೂತೆಯವರು ರಸಾಯನ ವಿಭಾಗದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಸೇವಾ ನಿವೃತ್ತಿಯನ್ನು ಹೊಂದಿದರು. ಸಮಾಜೋ-ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡ ಅವರು, ತಾಯಿಯ ಆಶಯದಂತೆ ಬೆಂಗಳೂರಿನ….ಬಡಾವಣೆಯಲ್ಲಿ ‘ಬಸವಾಶ್ರಯ’ ಹೆಸರಿನಲ್ಲಿ ವೃದ್ಧಾಶ್ರಮವನ್ನು ಕಟ್ಟಿ ಡಿವೈನ್ ಲೈಪ್ ಸಂಸ್ಥೆಗೆ ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಈಗ ತಾಯಿಯ ಪ್ರಥಮ ಲಿಂಗೈಕ್ಯ ಸಂಸ್ಮರಣೆಯನ್ನು ಆಚರಿಸುವ ಮೂಲಕ ಸಮಾಜೋ-ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇಮಾಭಿವೃದ್ಧಿಗಾಗಿ ಅನೇಕ ಕ್ರಿಯಾಯೋಜನೆಗಳನ್ನು ಹಮ್ಮಿಕೊಂಡು, ಅವುಗಳನ್ನು ಸಾಕಾರಗೊಳಿಸಲು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.
ಬಸವ ತತ್ವ ಸಮಾವೇಶ:
ಹನ್ನೆರಡನೇ ಶತಮಾನದಲ್ಲಿ ಗುರು ಬಸವಣ್ಣನವರು ಹಾಗೂ ಕಾಯಕ ಮೂಲದ ಶರಣರು ಹುಟ್ಟು ಹಾಕಿದ ಧರ್ಮ ಲಿಂಗಾಯತ ಧರ್ಮ. ಈ ಧರ್ಮದ ವಚನ ಸಿದ್ಧಾಂತದ ತತ್ವಗಳು ವಿಶ್ವದಾದ್ಯಂತ ಮುಟ್ಟಬೇಕೆಂಬ ಕಳಕಳಿಯಿಂದ ಮತ್ತು ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಪಡೆಯುವ ಉದ್ಧೇಶದಿಂದ ಲಿಂಗಾಯತ ಧರ್ಮ ಅಧ್ಯಯನ ಮತ್ತು ತರಬೇತಿ ಕೇಂದ್ರದಿಂದ ಬಸವತತ್ವ ಸಮಾವೇಶ ಸೊಲ್ಲಾಪುರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ವಿಶ್ವ ಕಲ್ಯಾಣ ಮಹಾಮನೆ ಚಾರಿಟೇಬಲ್ ಸಂಸ್ಥೆ ಉದ್ಘಾಟನೆ:
ವಿಶ್ವಗುರು ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಸಮಾಜೋ-ಧಾರ್ಮಿಕ ಚಳುವಳಿ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನೊಳಗೊಂಡ ಲಿಂಗಾಯತ ಧರ್ಮವನ್ನು ಸಂಸ್ಥಾಪಿಸಿಕೊಟ್ಟರು. ತನ್ಮೂಲಕ ಸಮಾಜದಲ್ಲಿರುವ ಮೂಢನಂಬಿಕೆ, ಅಂಧಶ್ರದ್ಧೆ, ಜಾತಿಯತೆಗಳನ್ನು ಬುಡ ಸಮೇತ ಕಿತ್ತೆಸೆಯಲು ಪ್ರಯತ್ನಿಸಿದರು. ದುಡಿಯುವ ವರ್ಗದ ಪರವಾಗಿ ನಿಂತು, ಜ್ಞಾನ ಮತ್ತು ದುಡಿಮೆಗೆ ಏಕಕಾಲದಲ್ಲಿ ಸಮ ಸಮವಾಗಿ ಪ್ರಾಶಸ್ತ್ಯ ನೀಡಿ ಕಾಯಕ ಧರ್ಮದ ಮೊದಲ ಪ್ರವಾದಿ ಎನಿಸಿಕೊಂಡರು. “ಲಿಂಗವ ನೋಡುವ ಅಣ್ಣಗಳಿರಾ ಜಂಗಮವ ನೋಡಿರೇ” ಎಂಬ ವಚನದ ಘೋಷವಾಕ್ಯದೊಂದಿಗೆ ಜೀವ ಸಂಕುಲದಲ್ಲಿ ಪರಮಾತ್ಮನನ್ನು ಕಂಡು, ಮಾನವ ಹಕ್ಕುಗಳ ಪ್ರತಿಪಾದನೆಗಾಗಿ ದುಡಿದರು. ದಯೆ ಧರ್ಮದ ಮೂಲವೆಂದು ದಯೆಯ ತಳಹದಿಯ ಮೇಲೆ ಜನಪರ ಧರ್ಮವನ್ನು ಕಟ್ಟಿ “ಇವನಾರವ ಇವನಾರವ ಇವನಾರವ ಎನ್ನದೇ ಇವನಮ್ಮವ ಇವನಮ್ಮವ ಇವನಮ್ಮವ ಎಂದು ಯಾವುದೇ ಜಾತಿ ಮತ ಪಂಥ ಪಂಗಡಗಳ ಬೇಧಗಳಿಲ್ಲದೆ ಎಲ್ಲರನ್ನೂ ಅಪ್ಪಿಕೊಂಡರು. ಗುರು ಬಸವಾದಿ ಶರಣರ ಮಾರ್ಗದಲ್ಲಿ ಮಾನವೀಯ ಸಂದೇಶಗಳನ್ನು ಪಸರಿಸುವ ಮತ್ತು ಅನುಷ್ಠಾನಕ್ಕೆ ತರುವ ಉದ್ಧೇಶವನ್ನು ಹೊತ್ತುಕೊಂಡು ‘ವಿಶ್ವಕಲ್ಯಾಣ ಮಹಾಮನೆ ಚಾರಿಟೇಬಲ್ ಸಂಸ್ಥೆ’ಯನ್ನು ಉದ್ಘಾಟಿಸಲಾಗುತ್ತಿದೆ.
ಶೈಕ್ಷಣಿಕ ವಿಧ್ಯಾಭ್ಯಾಸಕ್ಕಾಗಿ ದತ್ತು ಸ್ವೀಕಾರ:
ವಿಶ್ವ ಕಲ್ಯಾಣ ಮಹಾಮನೆ ಸಂಸ್ಥೆಯ ಅಡಿಯಲ್ಲಿ ಇದೀಗ ಪ್ರಸಕ್ತ ಸಾಲಿಗೆ (2025-2026) ಪದವಿಪೂರ್ವ ಮತ್ತು ಪದವಿ ಶಿಕ್ಷಣದ ಕೋರ್ಸುಗಳಲ್ಲಿ ಓದಬಯಸುವ ಹಿಂದುಳಿದ ಬಡ ಕಾಯಕ ಸಮುದಾಯ ಮತ್ತು ಪ್ರತಿಭಾನ್ವಿತ 10 ರಿಂದ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸಲು ಆಯ್ಕೆ ಮಾಡಲಾಗಿದೆ.
ಚಿನ್ಮೂಲಾದ್ರಿ ಚಿತ್ಕಳೆ ಪ್ರಶಸ್ತಿ ಪ್ರಧಾನ:
ಶ್ರೀಶೈಲ ಮಸೂತೆಯವರು ಲಿಂಗಾಯತ ಧರ್ಮ ಅಧ್ಯಯನ ಮತ್ತು ತರಬೇತಿ ಕೇಂದ್ರದ ವತಿಯಿಂದ ಪ್ರತಿವರ್ಷ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ ದೀಕ್ಷಾ ಗುರುಗಳಾದ ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿಯವರ ಸವಿ ನೆನಪಿಗಾಗಿ ಚಿನ್ಮೂಲಾದ್ರಿ ಚಿತ್ಕಳೆ ಪ್ರಶಸ್ತಿಯನ್ನು ಕೊಡಮಾಡುತ್ತಿದ್ದಾರೆ. ಈ ವರ್ಷದ ಪ್ರಶಸ್ತಿಯನ್ನು ಸೋಲಾಪುರದ ಶರಣೆ ರಾಜಶ್ರೀ ಥಳಂಗೆಯವರು ನಿರ್ದೇಶಿಸಿ ಮುನ್ನೆಡೆಸುತ್ತಿರುವ ಅಮರಜ್ಯೋತಿ ಅಕ್ಕಮಹಾದೇವಿ ರೂಪಕಕ್ಕೆ ನೀಡುತ್ತಿದ್ದಾರೆ. ಪ್ರಶಸ್ತಿಯು ಫಲಕ ಮತ್ತು 10 ಸಾವಿರ ರೂ. ಬಹುಮಾನ ಒಳಗೊಂಡಿದೆ.
ಕಾರ್ಯಕ್ರಮದ ವಿವರ:
ಅಂದು ನಡೆಯುವ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಜಗದ್ಗುರು ಗುರುಸಿದ್ಧೇಶ್ವರ ಬೃಹನ್ಮಠ ಗುಳೇದಗುಡ್ಡದ ಪೂಜ್ಯ ಶ್ರೀ ಮದ್ ಹಿಮವತ್ಕೇದಾರ ಸ್ವಾಮೀಜಿಯವರು ವಹಿಸಲಿದ್ದು, ದಿವ್ಯ ನೇತೃತ್ವ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ ಅವರು ವಹಿಸಲಿದ್ದಾರೆ. ತೋಂಟದಾರ್ಯ ಅನುಭವ ಮಂಟಪ ಆಳಂದದ ಪೂಜ್ಯ ಶ್ರೀ ಕೊರಣೇಶ್ವರ ಸ್ವಾಮೀಜಿಯವರು, ಸಸ್ತಾಪೂರ-ಬಸವಕಲ್ಯಾಣದ ಪೂಜ್ಯ ಶ್ರೀ ಸದಾನಂದ ಸ್ವಾಮೀಜಿ, ಮೈಂದರ್ಗಿಯ ಪೂಜ್ಯ ಶ್ರೀ ಸದ್ಗುರು ಮಹಾನಂದ ತಾಯಿ, ಸಲಗರರಾಮಲಿಂಗ ಮಠದ ಪೂಜ್ಯ ಶ್ರೀ ಸದ್ಗುರು ಡಾ. ಈಶ್ವರಾನಂದ ಸ್ವಾಮೀಜಿ, ಮೈಂದರ್ಗಿಯ ಪೂಜ್ಯ ಶ್ರೀ ಷ.ಬ್ರ.ಅಭಿನವ ರೇವಣಸಿದ್ಧ ಪಟ್ಟದ್ದೇವರು, ಮಂಡ್ಯದ ಪೂಜ್ಯ ಶ್ರೀ ಓಂಕಾರೇಶ್ವರ ಸ್ವಾಮೀಜಿ ದಿವ್ಯ ಸಮ್ಮುಖವನ್ನು ವಹಿಸಲಿದ್ದಾರೆ.
ಸೋಲಾಪುರದ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಪ್ರಣತಿ ಶಿಂಧೆಯವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದು, ಶಾಸಕರಾದ ಸನ್ಮಾನ್ಯ ಶ್ರೀ ವಿಜಯಕುಮಾರ ದೇಶಮುಖ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಶರಣೆ ಸಿಂಧು ತಾಯಿ ಕಾಡಾದಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಬುರಗಿಯ ಶರಣೆ ಡಾ. ಮೀನಾಕ್ಷಿ ಬಾಳಿಯವರು ಮತ್ತು ವಿಜಾಪುರದ ಶರಣ ಡಾ. ಜೆ. ಎಸ್ ಪಾಟೀಲ ಅವರು ವಿಶೇಷ ಉಪನ್ಯಾಸ ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಜೆ. ಎಸ್. ಪಾಟೀಲ ಅವರು ಬರೆದ ನಾಟಕ ಕೃತಿ ‘ಎಳೆಹೂಟೆ’ ಬಿಡುಗಡೆಯಾಗಲಿದೆ.
ಕಾರ್ಯಕ್ರಮದಲ್ಲಿ ಅಮರಜ್ಯೋತಿ ಅಕ್ಕಮಹಾದೇವಿ ರೂಪಕಕ್ಕೆ ಚಿನ್ಮೂಲಾದ್ರಿ ಚಿತ್ಕಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ, ಇತ್ತೀಚೆಗೆ ಸೋಲಾಪುರ ವಿಶ್ವ ವಿದ್ಯಾಲಯದಿಂದ ಪಿ ಎಚ್ ಡಿ ಪದವಿ ಪಡೆದ ಶ್ರೀದೇವಿ ಎ. ಪಾಟೀಲ ಅವರಿಗೆ ವಿಶೇಷ ಸನ್ಮಾನ ಮಾಡಲಾಗುತ್ತದೆ.
ಮುಖ್ಯ ಅತಿಥಿಯಾಗಿ ಕಲಬುರಗಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಶರಣ ದಯಾನಂದ, ಬೆಂಗಳೂರಿನ ಅಕ್ಕ ಐ.ಎ.ಎಸ್ ಅಕಾಡೆಮಿ ಕೇಂದ್ರದ ನಿರ್ದೇಶಕರಾದ ಶರಣ ಶಿವಕುಮಾರ, ಬಾಗಲಕೋಟ ಬಸವಾನುಭಾವಿಗಳಾದ ಶರಣ ಅಶೋಕ ಬರಗುಂಡಿ, ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ಬಿ. ವಿ. ಪೂಜಾರಿ, ನಿವೃತ್ತ ಕೆಎಎಸ್ ಅಧಿಕಾರಿ ಎಸ್. ದಿವಾಕಾರ್, ಪುಣೆಯ ನ್ಯಾಯಾವಾದಿಗಳಾದ ಶರಣೆ ಮನಿಷಾ ಭಂಗಿ ಮಹಾಜನ್, ಸೋಲಾಪುರದ ಶರಣೆ ಲೀಲಾವತಿ ಮಡಕಿ, ಚಿತ್ರದುರ್ಗದ ಶರಣ ಡಾ. ಸಂಗಮೇಶ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಸೋಲಾಪುರದ ಜಾ.ಲಿ.ಮಹಾಸಭಾ ಅಧ್ಯಕ್ಷರಾದ ಶರಣ ಶಿವಾನಂದ ಗೋಗಾಂವ, ಶರಣ ವಿಜಯಕುಮಾರ ಹತ್ತೂರೆ, ಶರಣ ಭದ್ರೇಶ್ವರ ಮಠ, ಕರ್ನಾಟಕ ರಾಜ್ಯ ಹಟಗಾರ ಸಮಾಜದ ಅಧ್ಯಕ್ಷರಾದ ಅಶೋಕ ಅಂಕಲಗಿ, ಸೋಲಾಪುರ ಹಠಗಾರ ಸಮಾಜದ ಅಧ್ಯಕ್ಷರಾದ ಶರಣ ಸಿದ್ಧಾರೂಢ ಶಿವಶರಣ ಹಿಟ್ನಳ್ಳಿ ಹಾಗೂ ಹಟಗಾರ, ಮಡಿವಾಳ, ಕುಂಬಾರ, ಲಿಂಗಾಯತ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.
