ಕನ್ನಡ ಭಾಷೆ ಶ್ರೀಮಂತಗೊಳಿಸಿದ ಫ.ಗು. ಹಳಕಟ್ಟಿ: ಅಶೋಕ ಬರಗುಂಡಿ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ

ಬಸವಾದಿ ಶರಣರ ವಚನಗಳನ್ನು ಡಾ. ಫ.ಗು. ಹಳಕಟ್ಟಿಯವರು ಸಂರಕ್ಷಿಸಿ, ಪ್ರಕಟಿಸದೇ ಹೋಗಿದ್ದರೆ ಕನ್ನಡ ಭಾಷೆ ಬಡವಾಗಿರುತ್ತಿತ್ತು. ಕನ್ನಡದ ವಚನ ಸಾಹಿತ್ಯ ಜಗತ್ತಿನ ಸಾಹಿತ್ಯಕ್ಕೂ ಆಕರವಾಗಿರುವ ಸಾಮರ್ಥ್ಯ ಹೊಂದಿದೆಯೆಂದು ಶರಣತತ್ವ ಚಿಂತಕರಾದ ಅಶೋಕ ಬರಗುಂಡಿಯವರು ನುಡಿದರು.

ಅವರು ಬುಧವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ನಗರಸಭೆ ಮತ್ತು ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ. ಫ.ಗು. ಹಳಕಟ್ಟಿ ಜನ್ಮದಿನ ‘ವಚನ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಫಕೀರಪ್ಪ ತಂದೆ ಗುರುಬಸಪ್ಪ ಹಳಕಟ್ಟಿ ಅವರು ಕಾನೂನು ಪದವಿ ಪಡೆದು ವೃತ್ತಿಯಿಂದ ವಕೀಲರಾಗಿ, ಸಾಹಿತಿ, ಸಹಕಾರಿಗಳಾಗಿ, ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಸಮಾಜಕ್ಕಾಗಿ ತನು-ಮನ ಧನವನ್ನು ನೀಡಿ ವಚನ ಸಾಹಿತ್ಯವನ್ನು ಉಳಿಸಿದ್ದಾರೆ. ಅವರು ತಮ್ಮ ಬದುಕನ್ನು ವಚನಗಳ ಜೋಡಣೆಗೆ ಮುಡಿಪಾಗಿಟ್ಟರು, ಬಸವಣ್ಣ ನವರ ಆಶಯಗಳನ್ನು ಉಳಿಸುವುದಕ್ಕಾಗಿ ಶ್ರಮಿಸಿದ ಹಳಕಟ್ಟಿ ಅವರನ್ನು ವಚನ ಸಾಹಿತ್ಯದ ಪಿತಾಮಹ ಎಂದು ಕರೆಯುತ್ತಾರೆ. ಸಮಸಮಾಜ ನಿರ್ಮಾಣ ಸಾಧ್ಯವಾಗಿಸುವ ವಚನಗಳ ರಕ್ಷಣೆಗೆ ಶ್ರಮಿಸಿದ ಹಳಕಟ್ಟಿಯವರು ನಮ್ಮ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ.

ವಚನಸಾಹಿತ್ಯ ಅಮೂಲ್ಯವಾಗಿದೆಯೆಂದರೆ ಅದರಲ್ಲಿರುವ ಸುಲಭ ಸಾಧ್ಯವಾದ ಆಧ್ಯಾತ್ಮಿಕತೆ, ನೇರವಾದ ಭಾಷೆ ಮತ್ತು ಆಳವಾದ ಭಾವನೆಗಳು, ಆಚರಣೆಗಳ ವಿಮರ್ಶೆ, ಸರ್ವಕಾಲಿಕ ಪ್ರಸ್ತುತತೆ, ಸತ್ಯವಚನಗಳು ನಿತ್ಯವಾದವು, ಸರಳ, ಶಕ್ತಿ ಸಾಮರ್ಥ್ಯದಿಂದಾಗಿವೆ, ಮಾತೃಭಾಷೆಯ ಬಲವಿದೆ, ಸಾಹಿತ್ಯದ ಪ್ರಜಾಪ್ರಭುತ್ವೀಕರಣ, ಹೊಸ ರೂಪದ ಸಾಹಿತ್ಯ ವಿಕಾಸ, ವ್ಯಷ್ಟಿ-ಸಮಷ್ಟಿಗಳ ವಿಕಾಸ ಇದೆ.

ಲಿಂಗಾಯತ ಸಮುದಾಯಕ್ಕೆ ಅಸ್ತಿತ್ವ ಇದೆಯೆಂದರೆ, ಘನತೆ ಇದೆಯೆಂದರೆ, ಒಂದು ಸ್ವತಂತ್ರ ಧರ್ಮ ಅರ್ಹತೆ ಹೊಂದಿದೆಯೆಂದರೆ ; ಅದಕ್ಕೆ ಡಾ ಫ. ಗು. ಹಳಕಟ್ಟಿಯವರೇ ಕಾರಣ ಎಂದು ಬರಗುಂಡಿ ಹೇಳಿದರು.

ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳಿಗೆ ಬಹಳ ವಿಶೇಷ ಸ್ಥಾನವಿದ್ದು, ಡಾ. ಫ.ಗು. ಹಳಕಟ್ಟಿಯವರು ವಚನಗಳ ರಕ್ಷಣೆಗೆ ಶ್ರಮಿಸಿದವರಾಗಿದ್ದರು ಎಂದು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿನ ಜನ ಸಮುದಾಯಕ್ಕೆ ನಟ, ನಟಿಯರು ಆದರ್ಶ ವ್ಯಕ್ತಿಗಳಾಗಿದ್ದಾರೆ. ಆದರೆ, ನಿಜವಾಗಲು ಆದರ್ಶವಾಗಬೇಕಿರುವುದು ಡಾ. ಫ.ಗು. ಹಳಕಟ್ಟಿ ಅವರಂತಹ ಮಹನೀಯರು. ಹಳಕಟ್ಟಿಯವರು ವಚನಗಳ ಸಂಗ್ರಹಣೆ ಮಾಡದೇ ಹೋಗಿದ್ದರೆ, ನಮಗೆ ವಚನ ಸಾಹಿತ್ಯ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಮಹಾನ್ ವ್ಯಕ್ತಿಯ ಜಯಂತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ನಮ್ಮ ಭಾರತದ ಸಂವಿಧಾನದಲ್ಲಿರುವ ಎಲ್ಲಾ ಆಶಯಗಳನ್ನು ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಹೇಳಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಬಸವ ಸಮಿತಿ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎನ್. ಹೊರಪೇಟಿ ಕಾರ್ಯಕ್ರಮ ನಿರೂಪಿಸಿದರು.

ಫ.ಗು.ಹಳಕಟ್ಟಿ ವೃತ್ತದಲ್ಲಿ ಕಾರ್ಯಕ್ರಮ:
ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿರುವ ಫ.ಗು. ಹಳಕಟ್ಟಿ ವೃತ್ತದಲ್ಲಿ ನಡೆದ ಧ್ವಜಾರೋಹಣ ಹಾಗೂ ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮದ ನಡೆಯಿತು.

ಕೊಪ್ಪಳ ಸಂಸದರಾದ ರಾಜಶೇಖರ ಬಸವರಾಜ ಹಿಟ್ನಾಳ, ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಮಾಜಿ ಶಾಸಕರಾದ ಕೆ. ಶರಣಪ್ಪ, ನಗರಸಭೆ ಸದಸ್ಯರಾದ ರಾಜಶೇಖರ ಆಡೂರ, ಗುರುರಾಜ ಹಲಿಗೇರಿ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಗುಡದಪ್ಪ ಹಡಪದ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಹನಮೇಶ ಕಲ್ಮಂಗಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅರ್ಚನಾ ಸಸಿಮಠ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಶೇಖರ ಇಂಗಳದಾಳ, ಜಿಲ್ಲಾ ರಾಷ್ಟ್ರೀಯ ಬಸವದಳದ ಶಿವಬಸಯ್ಯ ವೀರಾಪೂರ, ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಗಾಣದ ಕಣ್ಣಪ್ಪ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶಿವಸಂಗಪ್ಪ ವಣಗೇರಿ, ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಷತ್ತು ಅಧ್ಯಕ್ಷ ಶಿವಕುಮಾರ ಕುಕನೂರು, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಗವಿಸಿದ್ದಪ್ಪ ಕೊಪ್ಪಳ, ಶರಣತತ್ವ ಚಿಂತಕ ಡಾ. ಸಂಗಮೇಶ ಕಲಹಾಳ, ಪ್ರಕಾಶ ಚಿನಿವಾಲರ, ವೀರೇಶ ಕೊತಬಾಳ, ಡಾ. ಬಸವರಾಜ ಕ್ಯಾವಟರ್, ಶರಣಪ್ಪ ಹ್ಯಾಟಿ, ಸುಧಾ ಶೆಟ್ಟರ್, ಗಿರಿಜಾ ಮೆಳ್ಳಿಕೇರಿ, ಸವಿತಾ ಬೋರಟ್ಟಿ, ಕೊಪ್ಪಳ ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸೇರಿದಂತೆ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *