ಬಸವಕಲ್ಯಾಣ
ನಮ್ಮ ದೇಶಕ್ಕಾಗಿ, ಧರ್ಮಕ್ಕಾಗಿ, ಸಮಾಜಕ್ಕಾಗಿ ಹಗಲಿರುಳು ದುಡಿದವರಿಗೆ ಕೃತಜ್ಞತೆ ಸಲ್ಲಿಸುವುದು ಮಾನವನ ಸಹಜ ಗುಣವಾಗಿರಬೇಕು, ಬಸವ ಧರ್ಮಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ಚೇತನಗಳಾದ ಡಾ. ಫ ಗು ಹಳಕಟ್ಟಿ ಮತ್ತು ಪೂಜ್ಯ ಲಿಂಗಾನಂದ ಸ್ವಾಮಿಗಳನ್ನು ನಾವು ಎಂದು ಮರೆಯುವಂತಿಲ್ಲ ಅವರನ್ನು ನಾವು ಸ್ಮರಿಸುವುದು ಕೃತಜ್ಞತೆ ಸಂಕೇತವಾಗಿದೆ ಎಂದು ಬೀದರಿನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷರಾದ ಬಸವಕುಮಾರ ಪಾಟೀಲ ಮಾತನಾಡಿದರು.
ಬಸವಕಲ್ಯಾಣ ನಗರದ ಅರಿವು ಆಚಾರ ಅನುಭಾವ ಕೇಂದ್ರ ಶಿವ ಸದನದಲ್ಲಿ ಕಲ್ಯಾಣ ಮಹಾಮನೆ ಹಮ್ಮಿಕೊಂಡ ಡಾ. ಫ ಗು ಹಳಕಟ್ಟಿ ಮತ್ತು ಲಿಂಗಾನಂದ ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಕನ್ನಡ ನಾಡು ನುಡಿಗಾಗಿ, ಮಹಿಳೆಯರ ಸಬಲೀಕರಣಕ್ಕಾಗಿ ದುಡಿದವರು ಫ ಗು ಹಳಕಟ್ಟಿಯವರು.
ಅವರು ಬರದಿದ್ದರೆ ಇಂದು ನಮಗೆ ವಚನ ಸಾಹಿತ್ಯ ಸಿಗುತ್ತಿರಲಿಲ್ಲ, ವಚನ ಸಾಹಿತ್ಯ ನಮ್ಮ ಕೈಗೆ ಸಿಕ್ಕಿರಲಿಲ್ಲವಾಗಿದ್ದರೆ ನಾವು ಯಾರು ಬಸವ ಧರ್ಮಿಯರಾಗಿ ಉಳಿಯುತ್ತಿರಲಿಲ್ಲ ಅವರ ಸತತ ಪರಿಶ್ರಮದ ಸಂಶೋಧನೆ ಕಾರಣವಾಗಿ ವಚನ ಸಾಹಿತ್ಯ ದೊರಕಿದೆ ಆದ್ದರಿಂದ ಅವರು ಸದಾ ಸ್ಮರಣೀಯರು. ಅವರ ಜೀವನದ ಸಾಧನೆಗೆ ಬಹಳಷ್ಟು ಬಿರುದುಗಳು ಬಂದಿವೆ ಆದರೆ ಜನ ಸಾಮಾನ್ಯರು ಕೊಟ್ಟ ವಚನ ಪಿತಾಮಹ ಬಿರುದು ಇಂದು ಅಜರಾಮರವಾಗಿ ಉಳಿದಿದೆ ಆ ಕಾರಣಕ್ಕಾಗಿಯೇ ಕನ್ನಡದ ಪುರೋಹಿತ ಬಿ ಎಮ್ ಶ್ರೀ ಕಂಠಯ್ಯನವರು ವಚನ ಗುಮ್ಮಟ ಎಂದು ಕರೆಯಲು ಸಾಧ್ಯವಾಗಿದೆ ಎಂದು ಬಣ್ಣಿಸಿದರು.

ಲಿಂಗಾನಂದ ಸ್ವಾಮಿಗಳಿಗೂ ಪ್ರವಚನ ಪಿತಾಮಹ ಎಂಬ ಬಿರುದು ಜನ ಸಾಮಾನ್ಯರೆ ಕೊಟ್ಟಿರುವುದು ಎಂಬುದು ಗಮನಾರ್ಹ. ಫ ಗು ಹಳಕಟ್ಟಿಯವರು ವಚನ ಸಾಹಿತ್ಯ ಸಂಶೋಧಿಸಿ ಪುಸ್ತಕ ರೂಪದಲ್ಲಿ ಹೊರತಂದರೆ, ಲಿಂಗಾನಂದ ಸ್ವಾಮಿಗಳು ಮನೆ ಮನೆಗೆ ಪ್ರವಚನದ ಮೂಲಕ ತಲುಪಿಸುವಲ್ಲಿ ಸಾಕಷ್ಟು ಶ್ರಮಿಸಿದವರು. ಯಾವುದೇ ವೈಯಕ್ತಿಕ ಆಶೆ ಆಮಿಷಕ್ಕೆ ಒಳಗಾಗಿದೆ ನೇರ ದಿಟ್ಟ ನುಡಿಗಳಿಂದ ಬಸವ ಧರ್ಮವನ್ನು ಜನ ಸಾಮಾನ್ಯರ ಹೃದಯಕ್ಕೆ ಮುಟ್ಟುವಂತೆ ಪ್ರವಚನ ಗೈಯುತ್ತಿದ್ದರು.
ಇಂದಿನ ಮಠಾಧೀಶರಿಗೆ ದಿವ್ಯ ಪ್ರೇರಣೆ ಲಿಂಗಾನಂದ ಶ್ರೀಗಳು ಎಂದರಲ್ಲದೆ ಲಿಂಗನಂದ ಸ್ವಾಮಿಗಳಲ್ಲಿ ಹೃದಯವಂತಿಕೆಯ ಪ್ರೀತಿ ಮನೆ ಮಾಡಿತ್ತು, ಅವರು ನಿಗರ್ವಿಗಳಾಗಿದ್ದರು ಯಾವುದೇ ಶಿಕ್ಷಣ ಸಂಸ್ಥೆ ತೆರಯದೆ ಬಸವ ಧರ್ಮ ಪ್ರಚಾರವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದರು ಆದ್ದರಿಂದ ಇಂದು ಲಕ್ಷಾಂತರ ಬಸವ ಭಕ್ತರು ತಯಾರಾದರು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಮಾತನಾಡಿ ಗುರು ಬಸವಣ್ಣನವರು ಧರ್ಮದ ಗುಮ್ಮಟವಾದರೆ, ಫ ಗು ಹಳಕಟ್ಟಿಯವರು ವಚನ ಗುಮ್ಮಟ, ಲಿಂಗಾನಂದ ಮಹಾ ಸ್ವಾಮಿಗಳು ಪ್ರವಚನ ಗುಮ್ಮಟವಾಗಿದ್ದಾರೆ ಎಂದರು. ಇಬ್ಬರು ಮಹನಿಯರು ತಮ್ಮ ಜೀವವನ್ನು ಶ್ರೀಗಂಧದಂತೆ ಸವೆದು ಬಸವ ಧರ್ಮಕ್ಕೆ ದಿಕ್ಷೂಚಿ ಒದಗಿಸಿದ್ದಾರೆ ಇಂದು ಬಸವ ಧರ್ಮ ಪ್ರಚಾರ ಮಾಡಲು ನಮಗೇನು ಕಷ್ಟವಿಲ್ಲ ನಮಗೆ ಬದ್ಧತೆ ಬೇಕಾಗಿದೆ. ಇಂದು ಬಸವ ಧರ್ಮ ಪ್ರಚಾರ ಮಾಡುವ ಸಂಘ ಸಂಸ್ಥೆಗಳಲ್ಲಿ ಆ ಬದ್ಧತೆ ಇಲ್ಲದೆ ದ್ವೇಷ ವೈಷಮ್ಯ ಪ್ರತಿಷ್ಟೆ ಮನೆ ಮಾಡಿದೆ ಅದರಿಂದ ಹೊರ ಬಂದು ಬಸವಧರ್ಮದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಈ ನಿಟ್ಟಿನಲ್ಲಿ ಫ ಗು ಹಳಕಟ್ಟಿ ಮತ್ತು ಲಿಂಗಾನಂದ ಸ್ವಾಮಿಗಳು ನಮಗೆ ಆದರ್ಶವಾಗಿದ್ದಾರೆ ಎಂದರು.
ನೇತೃತ್ವ ವಹಿಸಿದ ಪೂಜ್ಯ ಬಸವರಾಜ ಪಂಡಿತ ಮಾತನಾಡಿ ಬಸವ ಧರ್ಮದ ಎರಡು ನೇತ್ರಗಳು ಫ ಗು ಹಳಕಟ್ಟಿ ಮತ್ತು ಲಿಂಗಾನಂದ ಸ್ವಾಮಿಗಳಾಗಿದ್ದಾರೆ. ಬಸವ ಧರ್ಮವನ್ನು ಆಳವಾಗಿ ಅವರು ಅರಿತಿದ್ದರಿಂದ ಅಷ್ಟೆಲ್ಲ ಕಾರ್ಯ ಮಾಡಿದರು. ನಾವು ಸಹಿತ ಬಸವ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿ ತತ್ವ ಪ್ರಚಾರಕ್ಕೆ ಇಳಿಯಬೇಕು. ಜಗತ್ತಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ವಚನ ಸಾಹಿತ್ಯದಲ್ಲಿದೆ, ವಚನಗಳನ್ನು ಕೇವಲ ಕಂಠ ಪಾಠ ಮಾಡಿದರೆ ಸಾಲದು ಅವುಗಳನ್ನು ಅರ್ಥೈಸಿಕೊಂಡು ಬದುಕಲು ಪ್ರಯತ್ನಿಸಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ನ್ಯಾಯಾಧೀಶರಾದ ಎಸ್ ಎಸ್ ನಾಗರಾಳೆ ಮಾತನಾಡಿ ಬಸವ ಧರ್ಮದ ಧೃವತಾರೆಯಂತೆ ಕಂಗೊಳಿಸಿದವರು ಫ ಗು ಹಳಕಟ್ಟಿಯವರು ಒಂದು ಕಡೆ ಉಳಿದು ವಚನ ಸಾಹಿತ್ಯ ಬೆಳವಣಿಗೆಗಾಗಿ ಶ್ರಮಿಸಿದರೆ ಲಿಂಗಾನಂದ ಸ್ವಾಮಿಗಳು ಜಂಗಮಾತ್ಮಕವಾಗಿ ಹಳ್ಳಿ, ಪಟ್ಟಣಗಳಲ್ಲಿ ಹೋಗಿ ಧರ್ಮ ಪ್ರಚಾರ ಮಾಡಿದ್ದು ಅವಿಸ್ಮರಣೀಯ ಎಂದು ಬಣ್ಣಿಸಿದರು.
ಷಟಸ್ಥಲ ಧ್ವಜಾರೋಹಣ ಮಾಡಿದ ಬಸವ ತತ್ವ ಪ್ರಚಾರ ಮತ್ತು ಪ್ರಸಾರ ಕೇಂದ್ರದ ಅಧ್ಯಕ್ಷರಾದ ಜಯಪ್ರಕಾಶ ಸದಾನಂದೆ ಮತ್ತು ಅಕ್ಕನ ಬಳಗದ ಅಧ್ಯಕ್ಷರಾದ ಸುಲೋಚನಾ ಮಾಮನೆ ಮಾತನಾಡಿದರು.
ಆಕಾಶ ಮೋಳಕೇರಾ, ಶ್ರೀದೇವಿ ಉಜಳಂಬೆ, ಕವಿತಾ ಸಜ್ಜನಶೆಟ್ಟಿ, ಗಿರಿಜಾ ಸಿದ್ಧಣ್ಣ, ಲಕ್ಷ್ಮಿಬಾಯಿ ಪಾಟೀಲ ವಚನ ಗಾಯನ ಮಾಡಿದರು.
ಶ್ರೀ ಶೈಲ ಹುಡೇದ, ಭೀಮಾಶಂಕರ, ವೀರಶೆಟ್ಟಿ ಪಾಟೀಲ, ಶಾಮರಾವ್ ನೀಲಕಂಠಯ್ಯ ಸ್ವಾಮಿ, ಚಂದ್ರಕಾಂತ ಗುಂಗೆ, ರಾಮ ಮಜಿಗೆ, ಗಣಪತಿ ಖಾಸ್ತೆ, ಪುಷ್ಪಾ ಮಾಮನೆ, ಜಯಶ್ರೀ ಪಾಟೀಲ, ಜಯಶ್ರೀ ಬಿರಾಜದಾರ, ರಾಣಿ ವಡ್ಡೆ, ಅಂಬಿಕಾ ನಾಗರಾಳೆ, ಪಂಡಿತ ನಾಗರಾಳೆ, ಕಲ್ಯಾಣರಾವ ಮದರಗಾವ ಉಪಸ್ತಿತರಿದ್ದರು.
ಸುಮಿತ್ರಾ ದಾವಣಗಾವೆ ಸ್ವಾಗತಿಸಿದರೆ, ಸಂಗಮೇಶ ತೊಗರಖೇಡೆ ನಿರೂಪಿಸಿದರು, ರೇಣುಕಾ ಮಾಮನೆ ವಂದಿಸಿದರು.