ಯಶಸ್ವಿ ಅಭಿಯಾನ ನಡೆಸಲು ಬೀದರ ಬಸವ ಸಂಘಟನೆಗಳ ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಜಿಲ್ಲೆಯಲ್ಲಿ ಸೆಪ್ಟೆಂಬರ್ 3ರಂದು ರಾಜ್ಯದ ಗಮನ ಸೆಳೆಯುವ ರೀತಿಯಲ್ಲಿ ಅರ್ಥಪೂರ್ಣ ಬಸವ ಸಂಸ್ಕೃತಿ ಅಭಿಯಾನ ನಡೆಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಎಲ್ಲ ಬಸವ ಪರ ಸಂಘಟನೆಗಳು ನಿರ್ಧರಿಸಿದವು.

ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ರಾಜ್ಯ ಸರ್ಕಾರ ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿದ ಪ್ರಯುಕ್ತ ಬಸವ ಸಂಸ್ಕೃತಿಯನ್ನು ಮನೆ ಮನೆಗೆ ತಲುಪಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಎಲ್ಲ ಬಸವ ಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ಸೆ. 1 ರಿಂದ ಅಕ್ಟೋಬರ್ 1 ರವರೆಗೆ ರಾಜ್ಯಾದ್ಯಂತ ಅಭಿಯಾನ ನಡೆಯಲಿದೆ. ಅಭಿಯಾನ ಪ್ರತಿ ಜಿಲ್ಲೆಯಲ್ಲಿ ಒಂದು ದಿನ ಜರುಗಲಿದೆ. ಅಭಿಯಾನದ ಯಶಸ್ವಿಗೆ ಈಗಾಗಲೇ ಎಲ್ಲಕಡೆ ಭರದ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.

199
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...

ಬಸವ ಸಂಸ್ಕೃತಿ ವಿಶ್ವದ ಶ್ರೇಷ್ಠ ಸಂಸ್ಕೃತಿ. ಅಭಿಯಾನದ ಮೂಲಕ ಅದನ್ನು ಪರಿಚಯಿಸುವ ಅವಕಾಶ ಒದಗಿ ಬಂದಿದೆ. ಇದನ್ನು ಯಶಸ್ವಿಗೊಳಿಸೋಣ. ಬೀದರ ಜಿಲ್ಲೆಯಲ್ಲಿ ಅಭಿಯಾನ ಮಾದರಿ ಆಗಿ ನಡೆಸೋಣ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

ಅಭಿಯಾನದ ರಥ ಸೆ. 3 ರಂದು ಬೀದರ ನಗರಕ್ಕೆ ಬರಲಿದೆ. ಅಭಿಯಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಬಸವ ಸಂಸ್ಕೃತಿ ಪಥ ಸಂಚಲನ, ಬಹಿರಂಗ ಸಭೆ, ಜಂಗಮದೆಡೆಗೆ ನಾಟಕ ಪ್ರದರ್ಶನ, ವಚನ ನೃತ್ಯ, ವಚನ ಸಂಗೀತ ಮೊದಲಾದವು ನಡೆಯಲಿವೆ ಎಂದು ತಿಳಿಸಿದರು.

ಬಸವಣ್ಣನವರ ತತ್ವಗಳ ಪ್ರಚಾರಕ್ಕಾಗಿ ಅಭಿಯಾನ ಅವಶ್ಯಕವಾಗಿದೆ. ಇದರ ಯಶಸ್ವಿಗೆ ಎಲ್ಲರೂ ಕಂಕಣಬದ್ಧರಾಗಿದ್ದೇವೆ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.

ನಾಡಿನ ಲಿಂಗಾಯತ ಮಠಾಧಿಪತಿಗಳೆಲ್ಲ ಒಗ್ಗೂಡಿ ಈ ಅಭಿಯಾನ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಲಿಂಗಾಯತ, ಬಸವಪರ ಸಂಘಟನೆಗಳು ಇದಕ್ಕೆ ಸಂಪೂರ್ಣ ಕೈಜೋಡಿಸಲಿ. ಅಭಿಯಾನದ ಯಶಸ್ಸಿಗೆ ಎಲ್ಲಾ ಸಂಘಟನೆಗಳನ್ನು ಒಳಗೊಂಡ ಸಮಿತಿ, ಉಪಸಮಿತಿಗಳನ್ನು ಮಾಡಿ ಕಾರ್ಯಗಳನ್ನು ಕೈಕೊಳ್ಳಬೇಕು, ಎಂದು ಬೆಲ್ದಾಳ ಸಿದ್ದರಾಮ ಶರಣರು ಹೇಳಿದರು.

ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬುವಾಲಿ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಪ್ರಮುಖರಾದ ಶ್ರೀಕಾಂತಸ್ವಾಮಿ, ರಾಜೇಂದ್ರಕುಮಾರ ಗಂದಗೆ, ಸುವರ್ಣಾ ಚಿಮಕೋಡೆ, ಮಲ್ಲಮ್ಮ ಆರ್. ಪಾಟೀಲ ಅಭಿಯಾನದ ಯಶಸ್ಸು ಕುರಿತು ಮಾತನಾಡಿದರು.

ಬಸವಕಲ್ಯಾಣದ ಬಸವ ಮಹಾಮನೆಯ ಸಿದ್ಧರಾಮೇಶ್ವರ ಸ್ವಾಮೀಜಿ, ಮಹಾಲಿಂಗ ದೇವರು, ಮಾತೆ ಮೈತ್ರಾದೇವಿ, ಪ್ರಮುಖರಾದ ಜೈರಾಜ ಖಂಡ್ರೆ, ಕುಶಾಲ ಪಾಟೀಲ ಖಾಜಾಪುರ, ಆನಂದ ದೇವಪ್ಪ, ಚಂದ್ರಕಾಂತ ಶೆಟಕಾರ, ಕಾಶಿನಾಥ ಶೆಟಕಾರ, ಶಂಭುಲಿಂಗ ಕಾಮಣ್ಣ, ಉಷಾ ಮಿರ್ಚೆ, ಸುವರ್ಣಾ ಧನ್ನೂರ, ಜಯದೇವಿ ಯದಲಾಪುರೆ, ಡಾ. ವಿಜಯಶ್ರೀ ಬಶೆಟ್ಟಿ, ಸುಮಾ ಭೂಶೆಟ್ಟಿ, ಸುನೀತಾ ದಾಡಗೆ ಸೇರಿದಂತೆ ಬಸವ ಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಗಣ್ಯರು ಹಾಗೂ ಬಸವಾನುಯಾಯಿಗಳು ಪಾಲ್ಗೊಂಡಿದ್ದರು.

ರಾಜೇಂದ್ರ ಜೊನ್ನಿಕೇರಿ ಸ್ವಾಗತಿಸಿದರು, ಯೋಗೇಂದ್ರ ಯದಲಾಪುರೆ ನಿರೂಪಿಸಿದರು, ರೇವಣಪ್ಪ ಮೂಲಗೆ, ಕಂಟೆಪ್ಪ ಗಂಧಿಗುಡೆ ಹಾಗು ನಿರ್ಮಲಾ ಮಸೂದಿ ವಚನಗಾಯನ ನೇರವೇರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *