ದಾವಣಗೆರೆ
ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ ವತಿಯಿಂದ ಅಮೆರಿಕಾದ ಮಿಚಿಗನ್ ರಾಜ್ಯದ ಡೆಟ್ರಾಯಿಟ್ ನಗರದಲ್ಲಿ ಜುಲೈ 4 ರಿಂದ 6 ರವರೆಗೆ ಸಂಭ್ರಮದ ಬಸವ ಜಯಂತಿ ಮಹೋತ್ಸವ ನಡೆಯಿತು. ಜೊತೆಗೆ ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನ ಕೂಡ ಆಯೋಜಿಸಲಾಗಿತ್ತು.
ಬಸವ ತತ್ತ್ವ, ಶರಣ ಸಂಸ್ಕೃತಿ ಮತ್ತು ಲಿಂಗಾಯತ ಪರಂಪರೆಯ ವಿಶಾಲತೆಯನ್ನು ವಿಶ್ವಮಟ್ಟದಲ್ಲಿ ಪಸರಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ಭಾಗವಹಿಸಿದರು.

ಬಸವ ಜಯಂತಿ ಮಹೋತ್ಸವದಲ್ಲಿ ಜರುಗಿದ ವಚನ ವಿಜಯೋತ್ಸವ ಹಾಗೂ ಬಸವ ಪಲ್ಲಕ್ಕಿ ಉತ್ಸವದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು, ಕೆ ಎಲ್ ಇ ಸಂಸ್ಥೆಯ ಚೇರಮನ್ನರಾದ ಪ್ರಭಾಕರ್ ಕೋರೆ, ಮಾಜಿ ಸಚಿವರಾದ ಮುರುಗೇಶ ನಿರಾಣಿ ಹಾಗೂ ಸಾವಿರಾರು ಲಿಂಗಾಯತ ವೀರಶೈವ ಸಮುದಾಯದ ಸದ್ಭಕ್ತರು ಪಾಲ್ಗೊಂಡರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಕೆ. ನವೀನ್, ಇತರ ಗಣ್ಯರು ಉಪಸ್ಥಿತರಿದ್ದರು.ಈ ಸಂತಸಪೂರ್ಣ ಸಂದರ್ಭದಲ್ಲಿ, ವಿ.ಎಸ್.ಎನ್.ಎ ಅಧ್ಯಕ್ಷ ತುಮಕೂರು ದಯಾನಂದ, ಸಮ್ಮೇಳನ ಅಧ್ಯಕ್ಷ ಮಹೇಶ ಪಾಟೀಲ ಹಾಗೂ ಸಾವಿರಾರು ವೀರಶೈವ-ಲಿಂಗಾಯತ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡರು.