ವಿಧಾನ ಪರಿಷತ್ತಿನಲ್ಲಿ ೪೫ ವರ್ಷ ಪೂರೈಸಿದ ಬಸವರಾಜ ಹೊರಟ್ಟಿಗೆ ಸನ್ಮಾನ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಕಳೆದ ೫ ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದು, ವಿಧಾನ ಪರಿಷತ್ ಸದಸ್ಯರಾಗಿ ೪೫ ವರ್ಷಗಳನ್ನು ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿಯವರ ಜೀವಮಾನದ ಸಾಧನೆಗಳು ಬೆರಗುಗೊಳಿಸುವಂಥದ್ದು ಎಂದು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ೨೭೫೩ನೇ ಶಿವಾನುಭವದ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಬಸವರಾಜ ಹೊರಟ್ಟಿಯವರ ಬದುಕು, ಸಾಧನೆಯ ಅವಲೋಕನ, ಫ.ಗು. ಹಳಕಟ್ಟಿ ಹಾಗೂ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು ಕುರಿತು ಏರ್ಪಡಿಸಿದ್ದ ವಿಶೇಷ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದರು.

ಯಡಹಳ್ಳಿ ಎಂಬ ಸಣ್ಣ ಗ್ರಾಮದಿಂದ ಬಂದ ಬಸವರಾಜ ಹೊರಟ್ಟಿಯವರು ೮ ಬಾರಿ ಶಾಸಕರಾಗಿ, ಸಚಿವರಾಗಿ, ಸಭಾಪತಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಕನ್ನಡಿಗ ಎಂಬ ಹೆಮ್ಮೆ ನಮಗಿದೆ. ಶಿಕ್ಷಕರೊಬ್ಬರು ಇಷ್ಟೊಂದು ಜೀವಮಾನದ ಸಾಧನೆ ಮಾಡಿದ್ದು, ಶಿಕ್ಷಕ ಸಮೂಹಕ್ಕೆ ಗೌರವ ತಂದಿದೆ. ಶಿಕ್ಷಕರ ಪ್ರಾಣವೇ ಹೊರಟ್ಟಿಯವರಾಗಿದ್ದಾರೆ. ಇವರು ಶ್ರೀಮಠದೊಂದಿಗೆ ಕಳೆದ ೫ ದಶಕಗಳಿಂದ ಒಡನಾಟವನ್ನು ಇಟ್ಟುಕೊಂಡು ಬಂದು ಹಿಂದಿನ ಶ್ರೀಗಳ ಆಶೀರ್ವಾದವಿಲ್ಲದೆ ಯಾವೊಂದು ಕೆಲಸ ಮಾಡಿದ ನಿದರ್ಶನವಿಲ್ಲ.

ಇಂದಿಗೂ ಅದೇ ವಿಶ್ವಾಸ, ಪ್ರೀತಿ, ಗೌರವವನ್ನು ನಮ್ಮ ಜೊತೆ ಹಾಗೂ ಶ್ರೀಮಠದ ಜೊತೆ ಇಟ್ಟುಕೊಂಡು ಬಂದಿದ್ದಾರೆ. ಅವರು ಇನ್ನೂ ಹೆಚ್ಚೆಚ್ಚು ನಾಡಿನ ಸೇವೆ ಮಾಡುವಂತ ಅವಕಾಶಗಳು ಸಿಗಲೆಂದು ಸಭಾಪತಿ ಹೊರಟ್ಟಿಯವರನ್ನು ಸನ್ಮಾನ ಮಾಡಿ ಹಾರೈಸಿದರು.

ಹೊರಟ್ಟಿಯವರ ಹೋರಾಟದ ಕುರಿತು ಪ್ರಾಚಾರ್ಯ ಶಿವಾನಂದ ಪಟ್ಟಣಶೆಟ್ಟಿಯವರು ಸುದೀರ್ಘವಾಗಿ ಮಾತನಾಡಿ, ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯವರೆಗಿನ ಎಲ್ಲ ಶಿಕ್ಷಕರ ಹಿತ ಕಾಯ್ದುಕೊಂಡು ಬಂದವರು ಹೊರಟ್ಟಿಯವರು. ಅಲ್ಲದೇ ಶ್ರೀಮಠದ ಅಭಿವೃದ್ಧಿಯಲ್ಲಿಯೂ ಹೊರಟ್ಟಿಯವರ ಮಾರ್ಗದರ್ಶನ ಇದೆ. ಹೀಗಾಗಿ ಶ್ರೀಮಠ ಅವರನ್ನು ಸದಾಕಾಲ ಗೌರವಿಸುತ್ತಾ ಬಂದಿದೆ.

ವಚನ ಪಿತಾಮಹ ಫ.ಗು. ಹಳಕಟ್ಟಿ ಹಾಗೂ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಪ್ರಾಚಾರ್ಯ ರಮೇಶ ಕಲ್ಲನಗೌಡ್ರ ಉಪನ್ಯಾಸ ನೀಡಿ, ವಚನ ಸಾಹಿತ್ಯ ಇಂದು ಜೀವಂತವಾಗಿ ಉಳಿದಿದ್ದರೆ ಅದಕ್ಕೆ ಕಾರಣೀಭೂತರು ಫ.ಗು. ಹಳಕಟ್ಟಿಯವರು. ತಮ್ಮ ಎಲ್ಲ ಆಸ್ತಿಯನ್ನು ಮಾರಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ, ವಚನ ಸಾಹಿತ್ಯವನ್ನು ಮುದ್ರಣ ಮಾಡುವ ಮೂಲಕ ನಾಡಿಗೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ, ಪೂಜ್ಯ ಲಿಂಗಾನಂದರು ಕೂಡಾ ವಚನ ಸಾಹಿತ್ಯ, ಶರಣ ಸಾಹಿತ್ಯಕ್ಕೆ ಹೊಸತನ ತರುವ ಮೂಲಕ ಈ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇವರು ಸದಾಕಾಲ ಸ್ಮರಣೀಯರೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ ಧಾರವಾಡ ಮಾತನಾಡಿ, ಬಸವರಾಜ ಹೊರಟ್ಟಿಯವರು ಶಿಕ್ಷಕ ಸಮೂಹದ ಅತ್ಯಂತ ನಂಬಿಗಸ್ಥ ನಾಯಕರು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನನ್ನೆಲ್ಲ ಶ್ರೇಯಸ್ಸು ನಾನು ನಂಬಿಕೊಂಡು ಬಂದ ಶಿಕ್ಷಕರ ಸಮೂಹಕ್ಕೆ ಸಲ್ಲಬೇಕು. ನಾ ಇಂದು ಏನೇ ಆಗಿದ್ದರೂ ಅದಕ್ಕೆ ಕಾರಣ ಶಿಕ್ಷಕರು. ನನ್ನ ತಾಯಿಯ ಆಶೀರ್ವಾದ, ನಮ್ಮ ತಂದೆಯ ಆದರ್ಶಗಳು ಶ್ರೀಮಠದ ಸಹಕಾರದಿಂದ ಸಾಧ್ಯವಾಗಿದೆ. ತಮ್ಮ ಪ್ರೀತಿಯ ಸನ್ಮಾನವನ್ನು ಅತ್ಯಂತ ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆಂದು ಭಾವುಕರಾಗಿ ನುಡಿದರು.

ಇದೇ ಸಂದರ್ಭದಲ್ಲಿ ಶ್ರೀಮಠಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ ಬಸವಣ್ಣನವರ ಅನುಭವ ಮಂಟಪದ ಅಪರೂಪದ ಭಾವಚಿತ್ರವನ್ನು ಅರ್ಪಿಸಿದರು.

ಧರ್ಮಗ್ರಂಥ ಪಠಣವನ್ನು ಕು. ಅಪೇಕ್ಷಾ ಎಸ್. ಹೊನಗಣ್ಣವರ, ವಚನ ಚಿಂತನವನ್ನು ಕು. ಸೃಷ್ಟಿ ವಿ. ಪೂಜಾರ ಮಾಡಿದರು. ದಾಸೋಹ ಸೇವೆಯನ್ನು ನಿವೃತ್ತ ಶಿಕ್ಷಕರಾದ ಮಹಾಂತೇಶ ಗಂಗಾಧರ ಹೂಗಾರ ಮತ್ತು ಕುಟುಂಬದವರು ಕೈಗೊಂಡಿದ್ದರು. ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿಕೊಟ್ಟರು.

ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾ ಪ್ರಭು ಗಂಜಾಳ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವಿ ದಂಡಿನ, ಉದ್ದಿಮೆದಾರ ಅಶೋಕ ಜೈನ, ಎಸ್.ಎಂ. ಅಗಡಿ, ಕೊಟ್ರೇಶ ಅಂಗಡಿ, ಎಸ್.ಎಸ್. ಗಡ್ಡದ, ಹೆಚ್.ಡಿ. ಪೂಜಾರ, ರವಿ ಕೊಣ್ಣೂರು, ಎಂ.ಎಚ್. ಪೂಜಾರ, ಎಸ್.ಜಿ. ಕೋಲ್ಮಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡರ, ಉಪಾಧ್ಯಕ್ಷರಾದ ಉಮೇಶ ಪುರದ, ಕಾರ್ಯದರ್ಶಿಗಳಾದ ವೀರಣ್ಣ ಗೋಟಡಕಿ, ಕೋಶಾಧ್ಯಕ್ಷರಾದ ಬಸವರಾಜ ಸಿ. ಕಾಡಪ್ಪನವರ, ಸಹ ಕಾರ್ಯದರ್ಶಿ ಸೋಮಶೇಖರ ಪುರಾಣಿಕ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ನಾಗರಾಜ ಹಿರೇಮಠ, ಶಿವಾನುಭವ ಸಮಿತಿ ಚೇರಮನ್ನರಾದ ಆಯ್.ಬಿ. ಬೆನಕೊಪ್ಪ, ಶಿವಾನಂದ ಫ. ಹೊಂಬಳ ಮುಂತಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *