ಹುಲಕೋಟಿ
12ನೇ ಶತಮಾನದ ಶರಣರು, ವಚನಕಾರರು ರಚಿಸಿದ ವಚನಗಳು ಕೇವಲ ಸಾಹಿತ್ಯವಾಗಿರದೆ ಅವುಗಳು ಸರ್ವಕಾಲಕ್ಕೂ ಸಲ್ಲುವ ಜೀವನದ ಅನುಭವಗಳನ್ನು ಸಮಾಜಕ್ಕೆ ತಿಳಿಸಿ ಕೊಡುವ ಸಾಮಾಜಿಕ, ನೈತಿಕ ಮೌಲ್ಯಗಳನ್ನು ಸರಳವಾಗಿ ತಿಳಿಸುವ ವಿಧಾನವಾಗಿದೆ.
ಇಂದು ಇವುಗಳ ತತ್ವ, ಸಾರವನ್ನು ಕೇವಲ ಬಾಯಿ ಮಾತಿನಲ್ಲಿ ಹೇಳದೆ ನಿಜ ಜೀವನದಲ್ಲಿ, ನಡೆ-ನುಡಿಯಲ್ಲಿ ಅಳವಡಿಸಿಕೊಳ್ಳುವ ತುರ್ತು ಅವಶ್ಯಕತೆ ಇದೆ ಎಂದು ಮಾಜಿ ಶಾಸಕರು, ಸಂತ ರಾಜಕಾರಣಿಗಳು ಆದ ಶ್ರೀ ಡಿ.ಆರ್. ಪಾಟೀಲ ಅವರು ಅಭಿಪ್ರಾಯಪಟ್ಟರು.
ಅವರು ವಚನ ಸಂರಕ್ಷಣಾ ದಿನದ ಅಂಗವಾಗಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಹುಲಕೋಟಿ ಇವುಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ .ಗು. ಹಳಕಟ್ಟಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ನಾಡಿನ ಸಾಧು ಸಂತರು, ಶರಣರ ವಿಚಾರಗಳನ್ನು ನಾವೆಲ್ಲರೂ ಹೇಳುವುದು ಕೇಳುವುದು ಸಾಕಷ್ಟು ಆಗಿ ಹೋಗಿದೆ. ಆದರೆ ಅವುಗಳನ್ನು ನಮ್ಮ ಜೀವನ ಪೂರ್ತಿ ಪ್ರತಿ ಹಂತದಲ್ಲೂ ಅಳವಡಿಸಿಕೊಂಡು ಅದರಂತೆ ನಡೆಯುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಂಗಮೇಶ ಲೋಕಾಪುರ ಮಾತನಾಡಿ, ವಚನ ಸಾಹಿತ್ಯ ನೂರಾರು ವರ್ಷಗಳಿಂದ ಉಳಿದುಕೊಂಡು ಬಂದು ಇಂದು ನಮ್ಮೆಲ್ಲರಿಗೂ ಸುಲಭವಾಗಿ ಲಭ್ಯವಾಗಲು ಅವುಗಳನ್ನು ಪ್ರಕಟಿಸುವಲ್ಲಿ ಫ .ಗು. ಹಳಕಟ್ಟಿಯವರು ತಮ್ಮ ಬದುಕನ್ನು ಮುಡುಪಾಗಿಟ್ಟವರು. ಹಾಳಾಗಿ ಹೋಗುತ್ತಿದ್ದ ವಚನಗಳನ್ನು ನಿಸ್ವಾರ್ಥ ಸೇವೆಯಿಂದ ಜನರ ಮನೆಮನೆಗೆ ತೆರಳಿ ಸಂಗ್ರಹಿಸಿ, ಪ್ರಕಟಿಸಿ ಜನಸಾಮಾನ್ಯರಿಗೆ ಮುಟ್ಟಿಸಿ ನೂರಾರು ವಚನಕಾರರನ್ನು ಈ ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ ಜನ್ಮದಿನವನ್ನು ವಚನ ಸಂರಕ್ಷಣಾ ದಿನವೆಂದು ಸರ್ಕಾರ ಘೋಷಿಸಿರುವುದು ಅರ್ಥಪೂರ್ಣ ಎಂದು ಅವರು ಅಭಿಪ್ರಾಯಪಟ್ಟರು.
ಇನ್ನೋರ್ವ ಅತಿಥಿಗಳಾದ ಸಾಹಿತಿ ಶ್ರೀ ಜೆ.ಕೆ. ಜಮಾದಾರ ಮಾತನಾಡಿ, ನಮ್ಮ ಭಾಗದ ಶ್ರೇಷ್ಠ ವ್ಯಕ್ತಿಗಳಾದ ಫ.ಗು. ಹಳಕಟ್ಟಿ ಅವರು ಮಾಡಿದ ಕಾರ್ಯ ಇತಿಹಾಸದ ಪುಟದಲ್ಲಿ ಉಳಿಯುವಂತದ್ದು. ಅವರ ಕಾರ್ಯ ಸ್ಮರಣೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎ ಬಳಿಗೇರ ಮಾತನಾಡಿ, ಇಂದಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಚನಕಾರರ ತತ್ವ- ವಿಚಾರ, ವಚನಗಳು ಬಹಳಷ್ಟು ಉಪಯುಕ್ತವಾಗಿದ್ದು, ಅವುಗಳನ್ನು ಎಂದಿಗೂ ಅಚ್ಚಳಿಯದಂತೆ ಈ ಸಮಾಜಕ್ಕೆ ಸಮರ್ಪಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ನಿವೃತ್ತ ಉಪನಿರ್ದೇಶಕರಾದ ಎ.ಎನ್ ನಾಗರಳ್ಳಿ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಪ್ರೇಮಾ ಮೇಟಿ, ಶಿರಹಟ್ಟಿ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಕೆ ಲಮಾಣಿ, ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಚಾರ್ಯರಾದ ಪ್ರಿಯಾ ಪಾಟೀಲ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಸುಧಾ ಹುಚ್ಚಣ್ಣವರ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಬೂದಪ್ಪ ಅಂಗಡಿ ನಿರ್ವಹಿಸಿದರು. ಗದಗ ಗ್ರಾಮೀಣ ತಾಲೂಕ ಘಟಕದ ಅಧ್ಯಕ್ಷರಾದ ಎಸ್.ಎಂ. ಮರಿಗೌಡರ ಕಾರ್ಯಕ್ರಮ ನಿರೂಪಿಸಿದರು.