ಹರಿಹರ
ತಾಲೂಕಿನ ಮಲೆಬೆನ್ನೂರು ಪಟ್ಟಣದ ರಾಜಕುಮಾರ ಬಡಾವಣೆಯಲ್ಲಿ ನಿರ್ಮಾಣ ಹಂತದ ಬಸವ ಮಂಟಪದಲ್ಲಿ, ಗುರುವಾರ ಬಸವಾದಿ ಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಶರಣೆ ರಾಜೇಶ್ವರಿ ಹಾಗೂ ಕುಂಬಳೂರಿನ ಕುಬೇರಪ್ಪ ಇವರು ಹಡಪದ ಅಪ್ಪಣ್ಣನವರ ಕುರಿತು ಉಪನ್ಯಾಸ ನೀಡುತ್ತಾ, ಅಪ್ಪಣ್ಣನವರು 250 ಕ್ಕೂ ಹೆಚ್ಚು ವಚನಗಳನ್ನು ರಚಿಸಿ, ಬಸವಣ್ಣನವರ ಅನುಯಾಯಿಯಾಗಿ ಅವರ ಸೇವೆಯನ್ನು ನಿರ್ವಹಿಸಿದರು. ಶಿವಯೋಗವನ್ನು ಇಷ್ಟಲಿಂಗವನ್ನು ವೇದ ಉಪನಿಷತ್ತುಗಳು ಏನೆಂಬುದ ಬಲ್ಲವರಾಗಿದ್ದ ಅಪ್ಪಣ್ಣ ಅತಿಥಿ ಸತ್ಕಾರಕ್ಕೆ ಒಲವು ತೋರಿದರು ಎಂದರು.
ಅಕ್ಕನ ಬಳಗದ ಶರಣೆಯರಾದ ಸೌಮ್ಯ ಮಂಜುಳಾ ಮತ್ತು ಜನನಿ ಶಾಲೆಯ ಮಕ್ಕಳು ವಚನಗೀತೆ, ಭಕ್ತಿಗೀತೆ ಹಾಡಿದರು.
ದಾವಣಗೆರೆ ಜಿಲ್ಲಾ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶರಣ ನರೇಶಪ್ಪ ಹಾಗೂ 50ಕ್ಕೂ ಹೆಚ್ಚು ಶರಣ ಶರಣೆಯರು ಭಾಗಿಯಾಗಿ ಬಸವಣ್ಣ ಹಾಗೂ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಅರ್ಚರಿ ಆಟದಲ್ಲಿ ಬಂಗಾರದ ಪದಕ ಪಡೆದ ಕವನ ಅವರನ್ನು ಗೌರವಿಸಲಾಯಿತು.