ವಿಜಯನಗರದಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯನಗರ (ಹೊಸಪೇಟೆ)

ಹನ್ನೆರಡನೆಯ ಶತಮಾನದ ವಚನ ಚಳುವಳಿ, ಅನುಭವ ಮಂಟಪದ ಮಹಾನುಭಾವಿ, ಅನುಪಮ ಚೇತನ ಹಾಗೂ ಬಸವಣ್ಣನವರ ನಿಕಟವರ್ತಿಯಾಗಿದ್ದ ಹಡಪದ ಅಪ್ಪಣ್ಣನವರ ವಚನಗಳ ಸಾರವನ್ನರಿತು ಅವರ ತತ್ವಾದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಏರ್ಪಡಿಸಿದ್ದ, ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗುರುವಾರ ಅವರು ಮಾತನಾಡಿದರು.

ಕಲ್ಯಾಣದಲ್ಲಿ ಸರ್ವ ಶಿವಶರಣರ ನಿಕಟ ಸಂಪರ್ಕ ಹೊಂದಿದ್ದ ಅಪ್ಪಣ್ಣನವರು, ಶುದ್ಧ ಮನಸ್ಸಿನ ಬಲದಿಂದ ಬಸವಣ್ಣನವರಿಗೆ ಬಲಗೈ ಭಂಟನೆಂದೆ ಹೆಸರು ಪಡೆದಿದ್ದರು. ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಇವರ ಸ್ಥಾನಮಾನವಿತ್ತು. ಬೆಳಗಿನಿಂದ ರಾತ್ರಿಯವರೆಗೆ ಬಸವಣ್ಣನವರ ಜೊತೆಯಲ್ಲೆ ಇರುತ್ತಿದ್ದ ಅಪ್ಪಣ್ಣನವರು ಅವರು ಒಡನಾಡಿಯಾಗಿ, ಆತ್ಮಜ್ಞಾನಿಗಳಾದವರು. ಸಮಾಜ ಸುಧಾರಣೆಗಾಗಿ ಜಾತಿ, ಧರ್ಮ, ವರ್ಣ, ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಅಸ್ಪಶ್ಯತೆ, ಜಾತಿ ವ್ಯವಸ್ಥೆ ವಿರುದ್ಧ ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದವರು.

ತಮ್ಮ ಜೀವನ ಅನುಭವದ ಮೂಲಕ ವಚನಗಳನ್ನು ರೂಪಿಸಿದ್ದು ಅವುಗಳನ್ನು ಅರ್ಥೈಸಿಕೊಂಡು ದಿನನಿತ್ಯದ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಅಂತವರ ತತ್ವ ಸಿದ್ದಾಂತಗಳು ಒಂದೇ ದಿನಕ್ಕೆ ಸೀಮಿತವಾಗಿರದೇ, ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಮಹನೀಯರನ್ನು ಸ್ಮರಿಸಬೇಕಿದೆ ಎಂದು ಬಾಲಕೃಷ್ಣಪ್ಪ ಹೇಳಿದರು.

ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಎಸ್. ಶಿವಾನಂದ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಚೆನ್ನವೀರಪ್ಪ, ದೇವಕ್ಕೆಮ್ಮನವರ ಸುಪುತ್ರನಾಗಿದ್ದು, ದೇಗಿನಾಳ ಗ್ರಾಮದ ಜೀರನಾಗಪ್ಪ ಚೆನ್ನಬಸಮ್ಮನವರ ಮಗಳಾದ ಲಿಂಗಮ್ಮ ಅಪ್ಪಣ್ಣನ ಪತ್ನಿಯಾಗಿದ್ದರು. ಇವರ ಕಾಲವನ್ನು ಕ್ರಿ.ಶ.1160 ಎಂದು ಗುರುತಿಸಲಾಗಿದೆ. ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತ ನಾಮದಲ್ಲಿ ಸುಮಾರು 250 ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಇವರ ಪತ್ನಿ ಶಿವಶರಣೆ ಲಿಂಗಮ್ಮ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ ಅಂಕಿತದಲ್ಲಿ 114 ವಚನಗಳನ್ನು ರಚಿಸಿದ್ದಾರೆ.

ಹಡಪದ (ಕ್ಷೌರಿಕ) ಕಾಯಕ ಇವರದು. ಕಾಯಕನಿಷ್ಠೆ, ಜೀವನ ನಿಷ್ಠೆ ಇವರ ವ್ಯಕ್ತಿತ್ವದ ವಿಶೇಷತೆಗಳಾಗಿವೆ. ಇವರ ವಚನಗಳನ್ನು ಗಮನಿಸಿದರೆ ಅವರ ಪಾಂಡಿತ್ಯದ ಪರಿಚಯ ಆಗುತ್ತದೆ. ಅಪ್ಪಣ್ಣ ಇತರೆ ವಚನಕಾರರಿಗಿಂತ ಭಿನ್ನವಾಗಿ ಮಹಾಜ್ಞಾನಿಯಾಗಿ ಕಾಣುತ್ತಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ ಸೇರಿದಂತೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಹಡಪದ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *