ಜಮಖಂಡಿ
‘ಮಹಿಳೆಯರಿಗೆ ಲಿಂಗಾಯತ ಧರ್ಮದ ಅರಿವು’ ಎಂಬ ಕಾರ್ಯಕ್ರಮ ಈಚೆಗೆ ಬಸವ ಭವನದಲ್ಲಿ ನಡೆಯಿತು.
ಬಸವ ಕೇಂದ್ರ ಹಾಗೂ ಬಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮ ಷಟಸ್ಥಲ ಧ್ವಜಾರೋಹಣದೊಂದಿಗೆ ಚಾಲನೆಗೊಂಡಿತು.
ಸಾನಿಧ್ಯವನ್ನು ಇಳಕಲ್ಲ ವಿಜಯಮಹಾಂತ ಮಠದ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳು ವಹಿಸಿದ್ದರು. ಅವರು ಮಾತನಾಡುತ್ತ, ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಲ್ಲರು. ಅವರು ಗಟ್ಟಿಯಾಗಿ ನಿಂತು ಲಿಂಗಾಯತ ಧರ್ಮ ಪಾಲಿಸಬೇಕು. ಬಸವತತ್ವವನ್ನು ಅರಿತು ನಿಮ್ಮ ಮನೆಗಳಲ್ಲಿ ಆಚರಣೆಗೆ ತರಬೇಕು. ಮಕ್ಕಳಿಗೆ ಬಸವಾದಿ ಶರಣರ ವಚನ ಸಂಸ್ಕಾರ ಕಲಿಸಿಕೊಡಿ ಎಂದರು.

ಜಮಖಂಡಿ ಓಲೆಮಠದ ಪೂಜ್ಯ ಆನಂದ ದೇವರು ಸಮ್ಮುಖ ವಹಿಸಿ ಮಾತನಾಡಿದರು.
‘ಲಿಂಗಾಯತ ಧರ್ಮ ಸಂಸ್ಕಾರಗಳು ಹಾಗೂ ಬಸವಾದಿ ಶರಣರ ವಚನಗಳು’ ಕುರಿತು ಶರಣ ಅಶೋಕ ಬರಗುಂಡಿ ಅನುಭಾವ ನೀಡಿದರು.
‘ಲಿಂಗಾಯತ ಧರ್ಮಾಚರಣೆ ಹಾಗೂ ಬಸವಾದಿ ಶರಣರ ವಚನಗಳು’ ಕುರಿತು ಶರಣ ಡಾ. ಜೆ. ಎಸ್. ಪಾಟೀಲ ಉಪನ್ಯಾಸ ನೀಡಿದರು. ಉಪನ್ಯಾಸಗಳ ಮೇಲೆ ಶರಣೆಯರು ಸಂವಾದ ನಡೆಸಿದರು.

ಇದೇ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಮಹಿಳಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಗೊಳಿಸಲಾಯಿತು. ಘಟಕದ ಪದಾಧಿಕಾರಿಗಳಿಗೆ ಜಿಲ್ಲಾ ಅಧ್ಯಕ್ಷರಾದ ಅಶೋಕ ಬರಗುಂಡಿ ಅವರು ಸೇವಾದೀಕ್ಷೆಯ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ಬಸವತತ್ವ ಅಳವಡಿಸಿಕೊಂಡು, ಬಸವ ಸಂಸ್ಕೃತಿ, ಬಸವ ಧರ್ಮ ಉಳಿಸುವ ಬೆಳೆಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

ನೂರಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶರಣೆ ಗಂಗಾಶ್ರೀ ಪಾಟೀಲ, ಶರಣೆ ಸರೋಜಿನಿ ಕೋಟಿ, ಶರಣೆ ಪ್ರಮೀಳಾ ಮಠಪತಿ ಅವರುಗಳು ಮಾತನಾಡಿ, ಇಂದು ಬಸವತತ್ವದ ಅವಶ್ಯಕತೆಯಿದ್ದು, ಅದನ್ನು ನಾವೆಲ್ಲ ಬದುಕಿನಲ್ಲಿ ಅಳವಡಿಸಿಕೊಂಡು ಬೆಳೆಸುವ ಕೆಲಸ ಮಾಡುತ್ತೇವೆ ಎಂದರು.
ಶರಣ ರವಿ ಯಡಹಳ್ಳಿ ಸ್ವಾಗತ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣ ಅಣ್ಣಾಸಾಬ ಜಗದೇವ ನಿರೂಪಿಸಿ, ವಂದನಾರ್ಪಣೆ ಮಾಡಿದರು. ವಚನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.