ಕಲಬುರ್ಗಿಯಲ್ಲಿ ವಚನ ಆಷಾಡ ಪ್ರವಚನದ ಸಮಾರೋಪ ಸಮಾರಂಭ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರ್ಗಿ

ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ ಸಮಾರೋಪ ಸಮಾರಂಭ ನಡೆಯಿತು.

ಪ್ರವಚನ ಮಾಡಿದ ಬಸವಬೆಳವಿಯ ಚರಂತೇಶ್ವರ ಮಠದ ಪೂಜ್ಯ ಶರಣಬಸವ ಮಹಾಸ್ವಾಮಿಗಳಿಗೆ ಹಾಗೂ ಸಂಗೀತ ಕಲಾವಿದರಿಗೆ ಸನ್ಮಾನಿಸಲಾಯಿತು. ಪೂಜ್ಯರು ತಮ್ಮ ಅನುಭವ ಹಂಚಿಕೊಂಡು, ಪ್ರಶ್ನೋತ್ತರ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬಸವ ಶರಣಬಸವ ಸ್ವಾಮಿಗಳು
ಬಸವಾದಿ ಶರಣರು ನಿರಾಶವಾದಿಗಳಲ್ಲ ಆಶಾವಾದಿಗಳು. 12ನೇ ಶತಮಾನದಲ್ಲಿ ಶರಣರು ಬಿತ್ತಿದ ಅಧ್ಯಾತ್ಮ ಬೀಜ 21ನೇ ಶತಮಾನದಲ್ಲಿ ಫಲವಾಗಿ ಬೆಳೆದಿದೆ. ಪುರೋಹಿತಶಾಹಿತ್ವ ನಮ್ಮ ದೇಶದ ಸಂಸ್ಕೃತಿಯಲ್ಲ, ಶರಣ ಸಂಸ್ಕೃತಿಯೇ ಭಾರತದ ನೈಜ ಸಂಸ್ಕೃತಿಯಾಗಿದೆ. ಸೊಲ್ಲಾಪುರದ ಸಿದ್ಧರಾಮೇಶ್ವರರು ತಾನು ನಂಬಿದ ಪೂರ್ವದ ಸಿದ್ಧಾಂತವನ್ನು ತೊರೆದು ಬಸವ ಸಿದ್ದಾಂತವನ್ನು ಒಪ್ಪಿದಂತೆ ಇಂದಿನ ಸಂಪ್ರದಾಯವಾದಿಗಳು ತಮ್ಮ ಪೂರ್ವದ ಸೂತಕವನ್ನು ತೊರೆದು ಬಸವ ಸಿದ್ದಾಂತ ಒಪ್ಪಿಕೊಳ್ಳಬೇಕು.

ಶರಣ ಸಿದ್ದಾಂತ ಬರಿ ಹೇಳಲಿಕ್ಕಲ್ಲ, ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ವಿನೀತ ಭಾವವನ್ನು ಎಲ್ಲರೂ ರೂಡಿಸಿಕೊಳ್ಳಬೇಕು. ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ ಲಿಂಗವೇ ಕಾಣಬಹುದು ಎಂದರು.

ಸಮಾರೋಪ ನುಡಿಗಳನ್ನಾಡಿದ ಬೆಂಗಳೂರು ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ ಅವರು, ಪ್ರಸ್ತುತ ಸಂದರ್ಭದಲ್ಲಿ ಬಸವ ಸಮಿತಿ ನೈಜ ಬಸವ ಸಿದ್ಧಾಂತವನ್ನು ಜನರಲ್ಲಿ ಬಿತ್ತುತ್ತಿದೆ, ಬಸವಣ್ಣನವರ ವಚನಗಳನ್ನು ಚೈನಿಸ್, ಜರ್ಮನ್, ಸ್ಪ್ಯಾನಿಷ್ ಸೇರಿದಂತೆ ದೇಶ ವಿದೇಶದ 45 ಭಾಷೆಗಳಿಗೆ ಬಸವ ಸಮಿತಿ ಅನುವಾದಿಸಿ ಜಗತ್ತಿನಾದ್ಯಂತ ಶರಣ ಸಿದ್ಧಾಂತ ತಲುಪುವಂತೆ ಮಾಡಿದೆ ಎಂದರು. ಕೊನೆಗೆ ವಚನ ಸಂವಿಧಾನ ಬೋಧಿಸಿದರು, ಎಲ್ಲರೂ ಸ್ವೀಕರಿಸಿದರು.

ಪತ್ರಕರ್ತರಾದ ಸಂಗಮನಾಥ ರೇವತ್ಗಾವ್, ಶಿವಶರಣಪ್ಪ ಚೆನ್ನುರವರನ್ನು ಸನ್ಮಾನಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವ್ಕರ, ಸೆಪ್ಟೆಂಬರ್ 2ರಂದು ಕಲಬುರಗಿ ನಗರಕ್ಕೆ ಬರುವ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸುವ ಕುರಿತು ಮಾತನಾಡಿದರು.

ಬೆಳಿಗ್ಗೆ ಶರಣ ಬಸವರಾಜ ವೆಂಕಟಾಪುರ ಅವರು 30 ಜನರಿಗೆ ಲಿಂಗ ದೀಕ್ಷೆ ನೀಡಿದರು. ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ 300 ಜನ ಭಾಗಿಯಾಗಿದ್ದರು.

ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ, ನಿವೃತ ನ್ಯಾಯಮೂರ್ತಿಗಳಾದ ಚೆನ್ನಮಲ್ಲಪ್ಪ ಬೆನಕನಹಳ್ಳಿ, ರೇವಣಸಿದ್ದ ಮಹಾಸ್ವಾಮಿಗಳು ರಟ್ಕಲ್, ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ ಪಾಳಾ, ಡಾ. ಕೆ.ಎಸ್. ವಾಲಿ, ಬಂಡಪ್ಪ ಕೇಸುರ ಅವರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *