ಬೆಳಗಾವಿ
೧೨ನೇ ಶತಮಾನದಲ್ಲಿ ಬಸವಾದಿ ಶಿವಶರಣರಿಂದ ಸಮಾಜೋ-ಧಾರ್ಮಿಕ ಕ್ರಾಂತಿಯೊಂದು ಕನ್ನಡದ ನೆಲದಲ್ಲಿ ಸಂಭಿವಿಸಿತು. ಈ ಕ್ರಾಂತಿಯ ಪರಿಣಾಮವಾಗಿ ಶೂನ್ಯಪೀಠವೊಂದು ಅಸ್ತಿತ್ವಕ್ಕೆ ಬಂದಿತು. ಈ ಶೂನ್ಯಪೀಠದ ಮೊದಲ ಅಧಿಪತಿ ಅಲ್ಲಮಪ್ರಭುದೇವರು. ಕಲ್ಯಾಣಕ್ರಾಂತಿಯ ತರುವಾಯ ಈ ಶೂನ್ಯಪೀಠ ಮೂರು ನೂರು ವರ್ಷಗಳ ಕಾಲ ಅನಾಥಪ್ರಜ್ಞೆಯನ್ನು ಅನುಭವಿಸಿತು.
ಈ ಶೂನ್ಯಪೀಠವನ್ನು ೧೫ನೇ ಶತಮಾನದಲ್ಲಿ ಮತ್ತೆ ಪುನರುಜ್ಜೀವನಗೊಳಿಸಿದ ಕೀರ್ತಿ ಅನಾದಿ ನಿರಂಜನ ಜಗದ್ಗುರು ತೋಂಟದ ಸಿದ್ಧಲಿಂಗ ಶಿವಯೋಗಿಗಳವರಿಗೆ ಸಲ್ಲುತ್ತದೆ. ಅಂತೆಯೆ ಘನಲಿಂಗಿದೇವರು ಅವರನ್ನು ‘ ತೋಂಟದ ಅಲ್ಲಮ ’ ಎಂದು ಕರೆದರು, ಉಳಿದ ಶಿಷ್ಯರು ‘ ದ್ವಿತೀಯ ಅಲ್ಲಮ ’ ಎಂದು ಕರೆದರು. ‘ ಷಟ್ಸ್ಥಲ ಜ್ಞಾನ ಚಕ್ರವರ್ತಿ ’, ‘ ಚರಕುಲ ಸಾರ್ವಭೌಮ ’ ಎಂದು ಖ್ಯಾತರಾದವರು.
ಭವ್ಯವಾದ ಶೂನ್ಯಪೀಠಕ್ಕೆ ಬುನಾದಿಯನ್ನು ಹಾಕಿದವರು ಅಲ್ಲಮಪ್ರಭುದೇವರಾದರೆ, ಅದಕ್ಕೆ ಹೊಂಗಳಸವನ್ನಿತ್ತವರು ತೋಂಟದ ಸಿದ್ಧಲಿಂಗೇಶ್ವರರು. ಮುನ್ನೂರು ವರ್ಷಗಳ ಬಳಿಕ ಮತ್ತೆ ವಿರತಿಯ ನಿರಂಜನತೆಯ ಬಾವುಟವನ್ನು ಬಾನೆತ್ತರಕ್ಕೆ ಬಿತ್ತರವಾಗಿ ಹಾರಿಸಿದರು. ಅಂತೆಯೆ ಅಲ್ಲಮಪ್ರಭುದೇವರು ಶೂನ್ಯಪೀಠಕ್ಕೆ ಭವಿತವ್ಯ ಒದಗಿ ಬಂದರೆ, ಸಿದ್ಧಲಿಂಗ ಯತಿಗಳಿಂದ ಭದ್ರವಾದ ಭಾಗ್ಯವೊದಗಿತು. ಭವ್ಯತೆಗೆ ಭಾಜನವಾಯಿತು. ಬಸವಾದಿ ಶಿವಶರಣರ ತತ್ವ ಸಂದೇಶಗಳು ಜನಮನಕ್ಕೆ ತಲುಪಬೇಕಾದರೆ, ಮಠಗಳು ಎಂಬ ವ್ಯವಸ್ಥೆ ಸಾಂಸ್ಥೀಕರಣಗೊಳ್ಳಬೇಕೆಂದು ಸಿದ್ಧಲಿಂಗ ಯತಿಗಳು ಭಾವಿಸಿ ಏಳು ನೂರೊಂದು ವಿರಕ್ತರ ಶಿಷ್ಯ ಪಡೆಯನ್ನೇ ನಿರ್ಮಾಣ ಮಾಡಿದರು.
ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ವಿರಕ್ತರು ಬಸವಾದಿ ಶರಣರ ತತ್ವ ಸಂದೇಶಗಳನ್ನು ಜನಮನಕ್ಕೆ ಮುಟ್ಟಿಸುವ ಮಹಾಮಣಿಹವನ್ನು ಪೂರೈಸಿದರು. ಅಂತೆಯೆ ನಾಡಿನೆಲ್ಲೆಡೆ ಸಾವಿರಾರು ವಿರಕ್ತಮಠಗಳು ಅಸ್ತಿತ್ವಕ್ಕೆ ಬಂದವು. ಸಿದ್ಧಲಿಂಗ ಯತಿಗಳು ಶೂನ್ಯತತ್ವದ ಪರಿಪೂರ್ಣವೂ ಅಖಂಡವೂ ಆದ ಮೂಲಭೂತ ಸಿದ್ಧಾಂತವನ್ನು ಗುರುತಿಸಿ ನೂರೊಂದು ನಿರಂಜನರ ಪರಮ ಪ್ರಭುವಾದರು. ಶಿವಶರಣರ ದಿವ್ಯತೇಜೋ ಪ್ರಭೆ ಸಿದ್ಧಲಿಂಗ ಯತಿಗಳಲ್ಲಿ ಪ್ರತಿಭೆಯಾಗಿ ನಾಡನ್ನು ಬೆಳಗಿತು.
ಸಿದ್ಧಲಿಂಗ ಯತಿಗಳು ಏಳು ನೂರೊಂದು ವಚನಗಳನ್ನು ರಚಿಸಿ, ‘ಷಟ್ಸ್ಥಲಜ್ಞಾನ ಸಾರಾಮೃತ’ ಎಂಬ ಮೌಲಿಕವಾದ ವಚನ ಕೃತಿರತ್ನವೊಂದನ್ನು ಲೋಕದ ಜನರ ಮನದ ಮೈಲಿಗೆ ತೊಳೆಯಲು ಕೊಟ್ಟವರು. ನೂರಾರು ಕಾಪಾಲಿಕ-ಕಾಳಾಮುಖ ಮಠಗಳನ್ನು ಲಿಂಗಾಯತ ಮಠಗಳನ್ನಾಗಿ ರೂಪಾಂತರಿಸಿದವರು. ಆಸೇತು ಹಿಮಾಚಲದವರೆಗೆ ಲೋಕ ಸಂಚಾರ ಮಾಡಿ, ಭಕ್ತರುದ್ಧಾರ ಕಾರ್ಯ ಮಾಡಿದವರು.
ಅಲ್ಲಮಪ್ರಭು ಸಲ್ಲಲಿತ ಸನ್ಮಾರ್ಗವನ್ನು ತೋಂಟದಾರ್ಯ ಪರಂಪರೆಯಾಗಿ ಬೆಳಗಾವಿ ಸಿದ್ಧಲಿಂಗ ಯತಿಗಳು ಆ ಕಾಲದ ರಾಜ ಮಹಾರಾಜರಿಗೆ ರಾಜಗುರುಗಳಾಗಿ, ಸಾಮಾನ್ಯ ಭಕ್ತರಿಗೆ ಜಂಗಮಯೋಗಿಯಾಗಿ ಕಂಗೊಳಿಸಿದವರು. ವಿಜಯನಗರದ ಉತ್ತುಂಗ ವೈಭವಕ್ಕೆ ಆಶೀರ್ವಾದ ಮಾಡಿದವರು. ಕೆಳದಿ, ಕೊಡಗು, ಸೋದೆ ಅರಸು ಮನೆತನಗಳಿಂದ ಗುರುಭಕ್ತಿಯನ್ನು ಪಡೆದವರು. ಎಡೆಯೂರು ಪುಣ್ಯಕ್ಷೇತ್ರದಲ್ಲಿ ನಿರ್ವಿಕಲ್ಪ ಸಮಾಧಿಸ್ಥರಾದ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯ ಪ್ರಶಿಷ್ಯ ಪರಂಪರೆ ನಾನಾ ಶಾಖೆಗಳಾಗಿ ಬೆಳೆದು, ಇಂದು ನಾಡಿನಾದ್ಯಂತ ತಮ್ಮ ಕ್ರಿಯಾಶೀಲ ಚಟುವಟಿಕೆಗಳಿಂದ ಗಮನ ಸೆಳೆದಿವೆ.
ಗದುಗಿನ ತೋಂಟದಾರ್ಯಮಠ, ಸಿದ್ಧಗಂಗಾಮಠ, ಚಿತ್ರದುರ್ಗ ಮುರುಘಾಮಠ, ಹುಬ್ಬಳ್ಳಿ ಮೂರುಸಾವಿರಮಠವನ್ನು ಒಳಗೊಂಡ ಎಲ್ಲ ಸಮಯಭೇದದ ಮಠಗಳು ಸಿದ್ಧಲಿಂಗ ಯತಿ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ.
ಕಳೆದ ವರ್ಷ ೨೦೨೪ರ ಶ್ರಾವಣ ಮಾಸದ ಮೂವತ್ತು ದಿನಗಳ ಪರ್ಯಂತ ನಾನು “ಚನ್ನಬಸವಣ್ಣನವರ ಚರಿತ್ರೆ ಮತ್ತು ಸಿದ್ಧಾಂತ” ಕುರಿತು ಚಿಂತನೆಗಳನ್ನು ಬರೆದಿದ್ದೆ. ಆ ಚಿಂತನೆಗಳೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿ ಸಾವಿರಾರು ಜನರಿಗೆ ತಲುಪಿದವು. ಇತ್ತೀಚೆಗೆ ಲಿಂಗಾಯತ ಕ್ರಾಂತಿ ಸಂಪಾದಕರಾದ ಶರಣ ಶಿವಾನಂದ ಮೆಟ್ಯಾಲ ಅವರು ತಮ್ಮ ಲಿಂಗಾಯತ ಕ್ರಾಂತಿ ಪ್ರಕಾಶನದಿಂದ ” ಚನ್ನಬಸವಣ್ಣನವರ ಚರಿತ್ರೆ ಮತ್ತು ಸಿದ್ಧಾಂತ ” ಎಂಬ ಹೆಸರಿನಿಂದ ಗ್ರಂಥರೂಪದಲ್ಲಿ ಪ್ರಕಟ ಮಾಡಿರುವುದು ಸಂತೋಷದ ಸಂಗತಿಯಾಗಿದೆ.
ಇದರಿಂದ ಪ್ರೇರಿತನಾದ ನಾನು ಈ ವರ್ಷದ ಶ್ರಾವಣ ಮಾಸದ ಪರ್ಯಂತ ಚಿಂತನ ಮಾಲೆ ಬರೆಯಬೇಕೆಂದು ಸಂಕಲ್ಪ ಮಾಡಿರುವೆ. ಈ ವರ್ಷದ ಚಿಂತನೆ ಮಾಲೆಗೆ ಎಡೆಯೂರು ತೋಂಟದ ಸಿದ್ಧಲಿಂಗ ಶಿವಯೋಗಿಗಳವ ಜೀವನ ಮತ್ತು ಸಂದೇಶ ಕುರಿತು ಬರೆಯಬೇಕೆಂದು ನಿರ್ಧರಿಸಿರುವೆ.
ಈ ಕುರಿತು ಶಿವಮೊಗ್ಗ ಬಸವ ಕೇಂದ್ರ, ಚಿಕ್ಕಮಗಳೂರಿನ ಬಸವತತ್ವಪೀಠದ ಪೀಠಾಧ್ಯಕ್ಷರಾದ ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರೊಂದಿಗೆ ಚರ್ಚೆ ಮಾಡಿದೆ. ಪೂಜ್ಯರು ಈ ಕುರಿತು ನನಗೆ ಸರಿಯಾದ ಮಾರ್ಗದರ್ಶನ ಮಾಡಿ, ಖಂಡಿತ ಈ ಚಿಂತನ ಮಾಲೆಯನ್ನು ಬರೆಯಬೇಕೆಂದು ಆಶೀರ್ವಾದ ಮಾಡಿದರು. ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡಿದ ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರಿಗೆ ಅನಂತ ಶರಣುಗಳು.
ಎಡೆಯೂರು ಸಿದ್ಧಲಿಂಗೇಶ್ವರರ ಕುರಿತು ಈ ವರೆಗೆ ಅನೇಕ ಕೃತಿಗಳು ಪ್ರಕಟ ವಾಗಿವೆ. ಆದರೆ ಅವೆಲ್ಲ ಪವಾಡಮಯವಾಗಿರುವುದರಿಂದ ಅವರ ಚಾರಿತ್ರಿಕ ಚಿಂತನೆಯ ಕೃತಿಗಳು ಕೇವಲ ಬೆರಳಣಿಕೆಯಷ್ಟು ಇರುವುದನ್ನು ಗಮನಿಸಿದೆ. ಹೀಗಾಗಿ ಪವಾಡ ಜೀವನದಿಂದ ಸಿದ್ಧಲಿಂಗೇಶ್ವರರನ್ನು ಮುಕ್ತಮಾಡಿ, ಅವರೊಬ್ಬ ಅತ್ಯುತ್ತಮ ಸಮಾಜ ಸಂಘಟಕರು, ಲಿಂಗಾಯತ ಧರ್ಮವನ್ನು ಉದ್ಧರಿಸಿದ ಮಹಾತ್ಮರು, ಮೇಲಾಗಿ ಕನ್ನಡ ವಚನ ಸಾಹಿತ್ಯ ಸಿರಿವಂತಗೊಳ್ಳುವಲ್ಲಿ ಸ್ವತಃ ಯೋಗದಾನ ಮಾಡುವುದರ ಜೊತೆಗೆ ತಮ್ಮ ಶಿಷ್ಯ ಪ್ರಶಿಷ್ಯ ಪರಂಪರೆಗೆ ಪ್ರೇರಣೆ ನೀಡಿದವರು.
ಕೋಳಿ ಕೂಗಿದೆಲ್ಲೆಡೆ ಮಠ ನಿರ್ಮಾಣವಾಗಲಿ ಎಂದು ಏಳುನೂರೊಂದು ವಿರಕ್ತರ ಪಡೆಯನ್ನು ನಿರ್ಮಿಸಿ, ಕರ್ನಾಟಕದಲ್ಲಿ ಲಿಂಗಾಯತ ಮಠಗಳನ್ನು ಅಸ್ತಿತ್ವಕ್ಕೆ ತಂದ ಮಹಾನುಭಾವರು ಎಂಬುದನ್ನು ನಮ್ಮ ಪೀಳಿಗೆಯ ಜನಸಮೂಹಕ್ಕೆ ಪರಿಚಯಿಸಬೇಕೆಂಬ ಹಂಬಲ ನನ್ನದು.
ಬಸವೋತ್ತರ ಯುಗದ ಪರಿಸ್ಥಿತಿ, ಗೋಸಲ ಸಿದ್ಧೇಶ್ವರ ಪರಂಪರೆ, ಗೋಸಲ ಚನ್ನಬಸವೇಶ್ವರರಿಂದ ಸಿದ್ಧಲಿಂಗೇಶ್ವರರ ಗುರುಕಾರುಣ್ಯ ಪ್ರಸಂಗ, ಲೋಕ ಸಂಚಾರ, ಶೂನ್ಯಪೀಠದ ಅಧಿಪತಿಯಾಗಿ ಸಿದ್ಧಲಿಂಗರು ಅಧಿಕಾರ ವಹಿಸಿಕೊಂಡ ತರುವಾಯ ಮಾಡಿದ ಸಮಾಜೋದ್ಧಾರದ ಕಾರ್ಯಗಳು, ರಾಜಮನೆತನಗಳಿಗೆ ಮಾಡಿದ ಆಶೀರ್ವಾದ, ಅವರು ರಚಿಸಿದ ವಚನ ಸಾಹಿತ್ಯದ ವಿಹಂಗಮ ನೋಟ, ಬೆಡಗಿನ ವಚನಗಳ ಬೆಡಗು, ಸಿದ್ಧಲಿಂಗ ಯತಿಗಳನ್ನು ಕುರಿತು ರಚನೆಯಾದ ಪುರಾಣಗಳು, ಸಾಂಗತ್ಯಗಳು, ರಗಳೆ, ಲಘು ಕೃತಿಗಳ ಸಮೀಕ್ಷೆ, ಅವರ ವಚನಗಳಲ್ಲಿ ಪ್ರತಿಪಾದಿತವಾದ ಧಾರ್ಮಿಕ ಮೌಲ್ಯಗಳು, ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ, ಶಿವಯೋಗ- ಲಿಂಗಾಂಗ ಸಾಮರಸ್ಯ ಮೊದಲಾದ ದಾರ್ಶನಿಕ ಚಿಂತನೆಗಳು ಮೊದಲಾದ ವಿಷಯಗಳನ್ನು ಕುರಿತು ಈ ಶ್ರಾವಣ ಮಾಸದ ಪರ್ಯಂತ ಚಿಂತನೆ ಮಾಡಬೇಕೆಂಬುದು ನನ್ನ ಆಶಯ.
ಕಳೆದ ವರ್ಷದಂತೆಯೇ ಈ ವರ್ಷವೂ ಓದುಗರು ಇಲ್ಲಿಯ ಚಿಂತನೆಗಳನ್ನು ಓದಿ ನಿಷ್ಪಕ್ಷಪಾತವಾದ ಅಭಿಪ್ರಾಯ ನೀಡುವ ಮೂಲಕ ನನ್ನ ಬರವಣಿಗೆಗೆ ಒಂದು ಮೂರ್ತಸ್ವರೂಪವನ್ನು ನೀಡಬೇಕೆಂದು ವಿನಂತಿಸುತ್ತೇನೆ.