ವ್ಯಕ್ತಿಯನ್ನು ಕೊಂದಷ್ಟು ಅವರ ಚಿಂತನೆಯನ್ನು ಕೊಲ್ಲುವುದು ಸುಲಭವಲ್ಲ
ಬೆಂಗಳೂರು
(ಕಲಬುರ್ಗಿ ಹುತಾತ್ಮರಾಗಿ 10 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಬಸವ ಮೀಡಿಯಾದಲ್ಲಿ ಪ್ರಕಟವಾಗುತ್ತಿರುವ ವಿಶೇಷ ಲೇಖನ.)
ಸತ್ಯ ಶೋಧಕ ಸಂಶೋಧಕ ಡಾ ಎಂ ಎಂ ಕಲಬುರ್ಗಿ ಹತ್ಯೆಯಾಗಿ ಈ ಆಗಸ್ಟ್ ೩೦ಕ್ಕೆ 10 ವರುಷ. ಅವರನ್ನು ಬಲಿ ತೆಗೆದುಕೊಂಡ ದ್ವೇಷ, ಅಸಹನೆ ಇನ್ನೂ ಕಾಡ್ಗಿಚ್ಚಿನಂತೆ ಹಬ್ಬಿ ಸಂವಿಧಾನ, ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಎಂದು ನೆಚ್ಚಿಕೊಂಡಿದ್ದವರೆಲ್ಲ ಬೆಚ್ಚಿಬೀಳುವಂತೆ ಮಾಡಿದೆ.
ನಮ್ಮ ದೇವಸ್ಥಾನಗಳಲ್ಲಿ ಕಾಣಿಸುವ ಸ್ವಯಂಉದ್ಭವ ಮೂರ್ತಿಗಳಂತೆ ತನಗೆ ತಾನೆ ಈ ದ್ವೇಷ ಹುಟ್ಟಿಕೊಂಡಿಲ್ಲ. ಇದನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿ, ಜನರು ನಂಬುವಂತ ಸಿದ್ದಾಂತ ಲೇಪಿಸಿ, ರಾಜಕೀಯಕ್ಕೆ ಬಳಸಿಕೊಂಡು, ಸಮಾಜವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಕೆಲವರು ಪ್ರಯತ್ನ ಪಡುತ್ತಿದ್ದಾರೆ.
ಒಂದು ವರ್ಗ ಇಡೀ ಸಮಾಜದ ಮೇಲೆ ಪ್ರಾಬಲ್ಯ ಸಾಧಿಸುವ ದುಶ್ಚಟ ಇತಿಹಾಸದ ಉದ್ದಕ್ಕೂ ಕಾಣಿಸುತ್ತದೆ. ಕೆಲವೊಮ್ಮೆ ಇದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ಬಂದು ಕೋಲಾಹಲವಾಗುತ್ತದೆ. ೧೨ನೇ ಶತಮಾನದ ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಶ್ರಮಿಕ ವರ್ಗಗಳು ಹೊಸ ದಾರಿ ತುಳಿದು ಒಂದು ಸಂಚಲನ ಸೃಷ್ಟಿಸಿದರು.
ಬಲಿಷ್ಠರು ಹೇರಿರುವ ಮೌನ
ಆದರೆ ಶೋಷಣೆಗೆ ಈ ರೀತಿಯ ಪ್ರತಿರೋಧ ಅಪರೂಪದ ಘಟನೆ. ಒಂದು ವರ್ಗ ಪ್ರಬಲವಾಗಿ ಬೆಳೆಯುತ್ತಿದ್ದಂತೆ ಅದಕ್ಕೆ ಬೇರೆಯವರಿಂದ ಬರುವ ಸಾಮಾನ್ಯ ಪ್ರತಿಕ್ರಿಯೆಯೆಂದರೆ ಮೌನ. ತಮಗೆ ಕೊಟ್ಟಿರುವ ಸ್ಥಾನವನ್ನು ಒಪ್ಪಿಕೊಂಡು ತಲೆ ಕೆಳಗೆ ಮಾಡಿಕೊಂಡು ನಡೆಯುವವರೇ ಈ ದೇಶದಲ್ಲಿ ಹೆಚ್ಚು.
ಕಲಬುರ್ಗಿ ಯವರು ಒಂದು ಸಂದರ್ಶನದಲ್ಲಿ ಹೇಳಿದಂತೆ ಇತಿಹಾಸದಲ್ಲಿ ಕಾಣುವ ಮೌನ ಸಾಮರಸ್ಯದ ಮೌನವಲ್ಲ. ಬಲಿಷ್ಠರು ಹೇರಿರುವ ಮೌನ. ಈ ಮೌನವನ್ನು ಭೇದಿಸುವುದು ಅವರ ಸಂಶೋಧನೆಯ ಮುಖ್ಯ ಕಾಳಜಿಯಾಯಿತು. ಆ ಕಾರ್ಯ ಎಷ್ಟು ಕಠಿಣ, ತಾನು ಎಂತಹ ಜೇನುಗೂಡಿಗೆ ಕೈಹಾಕುತ್ತಿದ್ದೇನೆ, ಅದರಿಂದ ಬರುವ ಗಂಡಾಂತರಗಳ ಬಗ್ಗೆ ಅವರಿಗೆ ಅರಿವು, ಅನುಭವ ಎರಡೂ ಇತ್ತು. ಆದರೆ ಕಲ್ಯಾಣದಲ್ಲಿ ಸಮ ಸಮಾಜ ಕಟ್ಟಲು ಹೋಗಿ ಹೊತ್ತಿಕೊಂಡು ಉರಿದಿದ್ದ ಶರಣ ಚಳುವಳಿಯ ಚೈತನ್ಯದಲ್ಲಿ ಸಂಪೂರ್ಣವಾಗಿ ಮುಳುಗಿದ್ದ ಅವರಿಗೆ ಬೇರೆ ಯಾವ ಮಾರ್ಗವೂ ಕಾಣಿಸಲಿಲ್ಲ ಎಂದು ಅನಿಸುತ್ತದೆ.
ಇತಿಹಾಸದಲ್ಲಿ ಕಾಣುವ ಮೌನ ಸಾಮರಸ್ಯದ ಮೌನವಲ್ಲ. ಬಲಿಷ್ಠರು ಹೇರಿರುವ ಮೌನ.
ಮಹಾತ್ಮರು, ಹುತಾತ್ಮರು
ಭಾರತದ ಪರಂಪರೆಯಲ್ಲಿ ವೈಯಕ್ತಿಕ ಮೋಕ್ಷಕ್ಕೆ ದಾರಿ ತೋರುವ ಆಧ್ಯಾತ್ಮಿಕ, ಮಾನವಿಕ ಚಿಂತನೆಯೇ ಅಧಿಕ. ಸಾಮಾಜಿಕ ಕಳಕಳಿ ವಿರಳ. ಎಲ್ಲರೂ ‘ಸತ್ಯವನ್ನು ಮಾತನಾಡು, ಸದಾಚಾರವನ್ನು ಆಚರಿಸು’ ಎನ್ನುತ್ತಾರೆ ಹೊರತು ‘ವಿಪ್ರನಿಂದ ಅಂತ್ಯಜನವರೆಗೆ ಎಲ್ಲರೂ ಒಂದೇ’ ಎನ್ನುವುದಿಲ್ಲ. “ಸಾಮಾನ್ಯ ಘೋಷಣೆಯ ಮೂಲಕ ಉಪದೇಶ ಮಾಡುವವರು ಮಹಾತ್ಮರಾಗುತ್ತಾರೆ. ನಿರ್ದಿಷ್ಟ ವಿಮರ್ಶೆರೂಪದ (ಸಾಮಾಜಿಕ) ಸಂದೇಶ ಸಾರುವವರು ಹುತಾತ್ಮರಾಗುತ್ತಾರೆ.” ಈ ಮಾತುಗಳನ್ನು ಕಲಬುರಗಿಯವರು ಹಂತಕರಿಗೆ ಬಲಿಯಾಗುವ ನಾಲ್ಕು ವರ್ಷಗಳ ಮುಂಚೆ ಭಾಷಣವೊಂದರಲ್ಲಿ ಹೇಳಿದ್ದರು.
ಇಲ್ಲಿ ‘ಹುತಾತ್ಮ’ ಪದ ತಟ್ಟನೆ ಮನಸ್ಸಿಗೆ ಹೊಳೆಯುವ ಪ್ರಯೋಗವಲ್ಲ, ಮೇಲ್ನೋಟಕ್ಕೆ ಸ್ವಲ್ಪ ಉತ್ಪ್ರೇಕ್ಷೆಯೆನಿಸಬಹುದು. ಆದರೆ ಪ್ರತಿರೋಧಕ್ಕೆ ಧ್ವನಿಗೂಡಿಸುವವರಿಗೆ ಸಿಗುವ ಬಳುವಳಿಯನ್ನು ಕಲ್ಬುರ್ಗಿಯವರು ಆಗಾಗಲೇ ಸಾಕಷ್ಟು ಅನುಭವಿಸಿದ್ದರು. ಈ ಪದ ಅವರ ಅರಿವಿಲ್ಲದೆ ಉಪಪ್ರಜ್ಞೆಯಿಂದ ಬಂದ ಹಾಗೆ ಭಾಸವಾಗುತ್ತದೆ.
ಇತಿಹಾಸದಲ್ಲಿ ಹೆಪ್ಪುಗಟ್ಟಿದ್ದ ಮೌನ ಮುರಿಯಲು ಮುಂದಾದವರಲ್ಲಿ ಕಲ್ಬುರ್ಗಿಯವರು ಮೊದಲನೆಯವರೇನಲ್ಲ. ಆದರೆ ಅಪರೂಪವಾದ ಕೆಲವು ವಿಶೇಷ ಅಸ್ತ್ರಗಳು ಇವರ ಬತ್ತಳಿಕೆಯಲ್ಲಿದ್ದವು. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವರು ಇತಿಹಾಸವನ್ನು ಶೋಧಿಸಲು ಶಿಲಾಶಾಸನಗಳನ್ನು ಓದಲು ಕಲಿತರು. ಯಾರಿಗೂ ಕಾಣದೆ ಕುಳಿತಿದ್ದ ಹಸ್ತಪ್ರತಿಗಳನ್ನು ಹೆಕ್ಕಿ, ಜನಪದವನ್ನೂ ಬಳಸಿಕೊಂಡು, ಸಾಹಿತ್ಯವನ್ನು, ಶಾಸನಗಳನ್ನು ಜಾಲಾಡಿ ತಮ್ಮ ಕಾಲದ ಅನಿವಾರ್ಯವಾದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರು.
ಬೆಳಕು ಚೆಲ್ಲಿದ ಸಂಶೋಧನೆ
ನಿದ್ದೆಗೆಟ್ಟು ಮಾಡಿದ ಅವರ ಸಂಶೋಧನೆಯಿಂದ ಕರ್ನಾಟಕದ ಸಾಮಾಜಿಕ ಇತಿಹಾಸದ ಚಿತ್ರಣವೇ ಬದಲಾಯಿತು. ಇದರ ಮುಖ್ಯ ಪ್ರಯೋಜನ ಪಡೆದುಕೊಂಡಿದ್ದು ಪ್ರತ್ಯೇಕ ಲಿಂಗಾಯತ ಧರ್ಮದ ಕೂಗೆಬ್ಬಿಸಿದ್ದ ಬಸವ ಅನುಯಾಯಿಗಳು.
ಕಲಬುರ್ಗಿ ಸಂಶೋಧನೆಯ ಮುಖ್ಯ ಪ್ರಯೋಜನ ಪಡೆದುಕೊಂಡಿದ್ದು ಬಸವ ಅನುಯಾಯಿಗಳು.
ಶತಮಾನದಷ್ಟು ಹಳೆಯ ಬೇಡಿಕೆಯಾದರೂ ಈ ಚಳುವಳಿ ಅನೇಕ ಗೊಂದಲಗಳಲ್ಲಿ ಸಿಲುಕಿಕೊಂಡಿತ್ತು. ಲಿಂಗಾಯತರು ಪ್ರತ್ಯೇಕ ಧರ್ಮೀಯರಾದರೆ ಅವರಲ್ಲಿ ವ್ಯಾಪಕವಾಗಿ ವೈದಿಕ ಆಚರಣೆಗಳೇಕೆ ಕಾಣಿಸಿಕೊಳ್ಳುತ್ತವೆ? ಲಿಂಗಾಯತರು ಯಾರು? ವೀರಶೈವರು ಯಾರು? ಜಾತಿ, ವರ್ಣ ಹಿಡಿದುಕೊಂಡು, ಹೋಮ ಹವನ ಮಾಡಿಕೊಂಡು ವೈದಿಕತೆಯ ಅವತಾರ ಮೂರ್ತಿಗಳಂತಿರುವ ಪಂಚಾಚಾರ್ಯರು ಬಸವಣ್ಣನವರಿಗಿಂತ ಪ್ರಾಚೀನರೇ, ಶ್ರೇಷ್ಠರೇ?
ಇತ್ತೀಚಿನ ತನಕ ಮಾಧ್ಯಮಗಳಲ್ಲಿ ಲಿಂಗಾಯತದ ಬದಲು ಬರೀ ವೀರಶೈವ ಹೆಸರೇ ಕಾಣಿಸಿಕೊಳ್ಳುತ್ತಿತ್ತು. ಅನೇಕ ವಿದ್ವಾಂಸರು ಕಲ್ಯಾಣದ ಶರಣರು ವರ್ಣ, ಜಾತಿಗಳನ್ನು ತಿರಸ್ಕರಿಸಿದ್ದರೂ ಕಾಲಕ್ರಮೇಣ ಸಾಮಾಜಿಕ ಒತ್ತಡದಿಂದ ವೈದಿಕ ಪ್ರಭಾವಕ್ಕೆ ತೆರೆದುಕೊಂಡರು ಎಂದು ನಂಬಿದ್ದರು. ಈ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದ್ದ ಪ್ರತಿಯೊಂದು ಪ್ರಶ್ನೆಯನ್ನು ದಾಖಲೆಗಳ ಸಹಾಯದಿಂದ ಉತ್ತರಿಸಿದ ಸಾಧನೆ ಕಲಬುರಗಿಯವರದು.
ವೈದಿಕತೆ ಹೇರಿದ ಪಂಚಪೀಠಗಳು
ಅವರು ತೋರಿಸಿದಂತೆ ಲಿಂಗಾಯತರು ತಾವಾಗಿಯೇ ಶರಣರ ಮೂಲ ತತ್ವಗಳಿಂದ ದೂರ ಸರಿಯಲಿಲ್ಲ. ಅವರ ತಲೆಯ ಮೇಲೆ ವೈದಿಕತೆಯನ್ನು ಹೇರುವ ವ್ಯವಸ್ಥಿತ ಯೋಜನೆಗೆ ಬಲಿಯಾದರು.
೧೨ನೇ ಶತಮಾನದಲ್ಲಿ ಬಸವಣ್ಣನವರ ಪ್ರಭಾವಕ್ಕೆ ಸಿಲುಕಿ ಅನೇಕ ಶೈವ ಪಂಥಗಳು ಶರಣ ಚಳುವಳಿಯಲ್ಲಿ ಕರಗಿ ಹೋದವು. ಅವುಗಳಲ್ಲಿ ಮುಖ್ಯವಾದವರು ಆಂಧ್ರದಲ್ಲಿ ಬಲಿಷ್ಠವಾಗಿದ್ದ ಶೈವ ಬ್ರಾಹ್ಮಣ ಆರಾಧ್ಯರು. ಇವರು ಒಳ ಬಂದರೂ ತಮ್ಮ ವೈದಿಕತೆ ಸಿದ್ದಾಂತ, ಆಚರಣೆಗಳನ್ನು ಬಿಡದೆ, ಇಷ್ಟಲಿಂಗಕ್ಕೆ ಜನಿವಾರ ಸೇರಿಸಿ ಒಂದು ಮಿಶ್ರ ಧರ್ಮವನ್ನು ಬೆಳೆಸಿದರು. ಅದನ್ನು ವೀರಶೈವ ಹೆಸರಿನಿಂದ ಪ್ರಚಾರ ಮಾಡಲು ಉಜ್ಜನಿ, ಕಾಶಿ, ಕೇದಾರ, ಬಾಳೆಹೊನ್ನೂರು, ಶ್ರೀಶೈಲಗಳಲ್ಲಿ ಪಂಚಾಚಾರ್ಯ ಮಠಗಳನ್ನೂ ಸ್ಥಾಪಿಸಿದರು. ಈ ಮಠಗಳಿಗೆ ಭಕ್ತವೃಂದ ಸೃಷ್ಟಿಸಲು ಕ್ಷೀಣವಾಗಿ ಉಸಿರುಬಿಡುತ್ತಿದ್ದ ಬಸವಪೂರ್ವ ಶೈವ ಮಠಗಳನ್ನು ಮತ್ತು ನಾಥ ಪಂಥದ ಶಾಖೆಗಳನ್ನು ವಶಪಡಿಸಿಕೊಂಡು ತಮ್ಮ ಪಂಚಾಚಾರ್ಯ ವ್ಯವಸ್ಥೆಯೊಳಗೆ ಸೇರಿಸಿಕೊಂಡರು.
ವೈದಿಕತೆಯನ್ನು ಹೇರುವ ವ್ಯವಸ್ಥಿತ ಯೋಜನೆಗೆ
ಲಿಂಗಾಯತರು ಬಲಿಯಾದರು.
ಪಂಚಾಚಾರ್ಯರು ೧೬ನೇ ಶತಮಾನದ ನಂತರ ಬಂದರೂ ಸಿದ್ದಾಂತ ಶಿಖಾಮಣಿಯಂತಹ ಕೃತಕ ಗ್ರಂಥಗಳ ಮೂಲಕ ಇಲ್ಲದ ಪ್ರಾಚೀನತೆ ಸೃಷ್ಟಿಸಿಕೊಂಡು, ತಾವು ಬಸವಣ್ಣನವರ ಹಿರಿಯರು ಎಂದು ಬಿಂಬಿಸಿಕೊಂಡರು.
ಪ್ರತ್ಯೇಕ ಧರ್ಮದ ಹೋರಾಟ
೧೩ರಿಂದ ೧೮ನೇ ಶತಮಾನಗಳವರೆಗೆ ಲಿಂಗಾಯತ ಸಮಾಜದಲ್ಲಾದ ಈ ಮಹತ್ತರ ಬದಲಾವಣೆಗಳನ್ನು ಕಲಬುರ್ಗಿಯವರು ಹಂತಹಂತವಾಗಿ ಶಾಸನ, ಸಾಹಿತ್ಯ ದಾಖಲೆಗಳ ಮೂಲಕ ತೋರಿಸಿದರು. ಪ್ರತ್ಯೇಕ ಧರ್ಮ ಸಾಧಿಸಲು ವೀರಶೈವದ, ಪಂಚಾಚಾರ್ಯರ ವೈದಿಕ ಪ್ರಭಾವದಿಂದ ದೂರವಾಗಿ ಶರಣ ಚಳುವಳಿಯ ಮೂಲ ತತ್ವಗಳಿಗೆ ಹಿಂತಿರುಗುವ ಅನಿವಾರ್ಯತೆಯನ್ನು ಪ್ರತಿಪಾದಿಸಿದರು. ಇವತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಡೆಯುತ್ತಿರುವುದು ಅವರು ಕೆತ್ತಿದ ಮಾರ್ಗದಲ್ಲಿಯೇ.
ಸಂಶೋದನೆ ವಿಶ್ವವಿದ್ಯಾಲಯದ ಗೋಡೆಗಳನ್ನು ಭೇದಿಸಿಕೊಂಡು ಲಕ್ಷಾಂತರ ಜನರ ಧೋರಣೆಗಳನ್ನು ರೂಪಿಸುತ್ತಿರುವ ಅಪರೂಪದ ನಿದರ್ಶನ ಇದು. ವ್ಯಕ್ತಿಯನ್ನು ಕೊಂದಷ್ಟು ಅವನ ಚಿಂತನೆಯನ್ನು ಕೊಲ್ಲುವುದು ಸುಲುಭವಲ್ಲ ಎನ್ನುವ ಮಾತು ಇಲ್ಲಿ ಜೀವಂತವಾಗಿದೆ. ಕಲಬುರಗಿಯವರ ಹತ್ಯೆಯ ನಂತರ ಲಿಂಗಾಯತರಲ್ಲಿ ಬಸವ ಪ್ರಜ್ಞೆ ಮತ್ತಷ್ಟು ವೇಗವಾಗಿ ಜಾಗೃತಿಯಾಗುತ್ತಿರುವ ಹಾಗೆ ಕಾಣುತ್ತದೆ. ‘ಈಗೇನಾದರೂ ಅಂತಹ ಘಟನೆಯಾದರೆ ಲಿಂಗಾಯತರು ದಂಗೆಯೇಳುತ್ತಾರೆ,’ ಎನ್ನುತ್ತಾರೆ ಲಿಂಗಾಯತ ಹೋರಾಟಗಾರರೊಬ್ಬರು.
ದ್ರಾವಿಡ ಪ್ರಜ್ಞೆ
ಬಸವಣ್ಣನವರನ್ನು ಬಿಟ್ಟರೆ ಅವರಿಗಿದ್ದ ಇನ್ನೊಂದು ಪ್ರಧಾನ ಕಾಳಜಿಯೆಂದರೆ ಕನ್ನಡ. ಲಿಂಗಾಯತರಲ್ಲಿ ಶೂದ್ರ ಪ್ರಜ್ಞೆಯನ್ನು ಮೂಡಿಸಲು ಪ್ರಯತ್ನಿಸಿದಂತೆ ಕನ್ನಡಿಗರಲ್ಲಿ ದ್ರಾವಿಡ ಪ್ರಜ್ಞೆಯನ್ನು ಬರಿಸಲು ಪ್ರಯತ್ನಿಸಿದರು. ಕನ್ನಡಿಗರು ರಾಜಕೀಯವಾಗಿ ಬಲಿಷ್ಟರಾಗಿ ಅರ್ಧ ಭಾರತವನ್ನು ಆಳಿದರೂ ಅವರ ಭಾಷೆ ಸಂಸ್ಕೃತ, ತಮಿಳು, ತೆಲುಗುಗಳ ಆರ್ಭಟದಲ್ಲಿ ಸೊರಗಿದ್ದು ಅವರ ಸಂಶೋದನೆಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಿಷಾದ.
ಪ್ರಾಚೀನ ಕರ್ನಾಟಕಕ್ಕೆ ಉತ್ತರ ಭಾರತದಿಂದ ಬೌದ್ಧ, ಜೈನ, ವೈದಿಕ, ಆಗಮಿಕ ಶೈವ ಧರ್ಮಗಳು ವಲಸೆ ಬಂದವು. ಇವುಗಳ ನಡುವೆ ಸ್ಥಳೀಯ ಪ್ರಾಬಲ್ಯಕ್ಕಾಗಿ ದೊಡ್ಡ ಹೋರಾಟ ನಡೆದು ಅದರಲ್ಲಿ ಕೊನೆಗೆ ಸಫಲವಾಗಿದ್ದು ವೈದಿಕ ಧರ್ಮ. ಅದರ ಭಾಷೆ ಸಂಸ್ಕೃತ ದೇವ ಭಾಷೆಯಾಯಿತು, ಜನರ ಭಾಷೆ ಕನ್ನಡ ಅಸ್ಪ್ರಶ್ಯವಾಯಿತು. ಕನ್ನಡದಲ್ಲಿ ಕೃತಿಗಳು ಬಂದರೂ ಅವುಗಳಲ್ಲಿ ರಾಮಾಯಣ, ಮಹಾಭಾರತಗಳಂತಹ ಉತ್ತರ ಭಾರತದಿಂದ ಎರವಲು ಬಂದ ವಿಷಯಗಳೇ ತುಂಬಿದ್ದವು.
ಸಂಸ್ಕೃತ ದೇವ ಭಾಷೆಯಾಯಿತು, ಜನರ ಭಾಷೆ ಕನ್ನಡ ಅಸ್ಪ್ರಶ್ಯವಾಯಿತು.
ಸೊರಗಿದ ಕನ್ನಡ
ಕನ್ನಡ ಪ್ರಜ್ಞೆ ಅರಳಲು ಮುಕ್ತ ಅವಕಾಶವಾಗಿದ್ದು ವಚನಯುಗದಲ್ಲಿ. ಸಂಸ್ಕೃತ ಭಾಷೆ, ಉತ್ತರ ಭಾರತದ ಪುರಾಣಗಳನ್ನು ತಿರಸ್ಕರಿಸಿದ ವಚನಕಾರರಿಗೆ ಕನ್ನಡ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಹಾಗೂ ಪ್ರತಿಭಟನೆಯ ಮಾಧ್ಯಮವಾಯಿತು. ಆದರೆ ಇತಿಹಾಸದ ಉದ್ದಕ್ಕೂ ನಮ್ಮ ರಾಜರು ಹೊರಗಿನ ಭಾಷೆಗಳಿಗೆ ಮಣೆ ಹಾಕಿದ್ದರಿಂದ ತನ್ನ ಮನೆಯಲ್ಲಿಯೇ ಕನ್ನಡ ಮಲ ಮಗನಂತಾಗಿ, ತಮ್ಮ ನೆಲದಲ್ಲೇ ಕನ್ನಡಿಗರು ಎರಡನೆ ದರ್ಜೆ ಪ್ರಜೆಗಳಾದರು. ಪರಕೀಯ ಭಾಷೆ, ಸಂಸ್ಕೃತಿ, ಸಿದ್ಧಾಂತಗಳು ಕನ್ನಡಿಗರ ಮೇಲೆ ಆಳವಾದ ಪರಿಣಾಮಬೀರಿ, ಅವರ ಹೊರಗಿನ ಅಸ್ತಿತ್ವ ಮತ್ತು ಒಳಗಿನ ಅಸ್ಮಿತೆಗಳೆರಡೂ ಕ್ಷೀಣಿಸಿ, ಸ್ವಾಭಿಮಾನಕ್ಕಿಂತ ಸಹನೆ ಬೆಳೆಸುಕ್ಕೊಳುವುದು ಅನಿವಾರ್ಯವಾಯಿತು, ಎನ್ನುವುದು ಕಲಬುರಗಿಯವರ ವಾದ.
ಸಂಪ್ರದಾಯ ಗಾಢವಾಗಿರುವ ಕಡೆ ಬೇರುಬಿಟ್ಟಿರುವ ನಂಬಿಕೆಗಳನ್ನು ಕೀಳುವುದು ಕಠಿಣ. ಪ್ರಜಾತಾಂತ್ರಿಕ ಪರಂಪರೆಯಿಲ್ಲದ ಸಮಾಜಗಳಲ್ಲಿ ಇದು ಇನ್ನೂ ಕಷ್ಟ. ಅಪ್ರಿಯವಾದ ಸತ್ಯ ನುಡಿದು, ಅಪ್ರಿಯವಾದ ಪರಿಣಾಮಗಳನ್ನು ತಮ್ಮ ಜೀವನದ ಉದ್ದಕ್ಕೂ ಕಲ್ಬುರ್ಗಿ ಎದುರಿಸಬೇಕಾಯಿತು. ಯಾವ ಬೆದರಿಕೆಗೂ, ಒತ್ತಡಕ್ಕೂ ಜಗ್ಗದೆ ನಮ್ಮ ಬದ್ಧತೆಯನ್ನು ನಿಭಾಯಿಸುವ ಅನಿವಾರ್ಯತೆಯನ್ನು ಅವರು ಸಾಧಿಸಿ ತೋರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತ ಇರುವ ಕಲಬುರ್ಗಿಯವರ ಒಂದು ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕು: “ನನ್ನ ಕಣ್ಣ ಮುಂದ ಎರಡು ಪ್ರಶ್ನೆಗಳಾದವ. ಕೆಟ್ಟ ವ್ಯವಸ್ಥೆಯೊಂದಿಗೆ ಹೊಂದಿಕೊಂಡು ವರ್ತಮಾನದಾಗ ಬದುಕಬೇಕೋ? ಕೆಟ್ಟ ವ್ಯವಸ್ಥೆಯನ್ನು ಪ್ರತಿಭಟಿಸಿ ಭವಿಷ್ಯತ್ತಿನಾಗ ಬದುಕಬೇಕೋ? ಇಲ್ಲಿ ಬದುಕಿದವರು, ಅಲ್ಲಿ ಸಾಯತಾರ, ಅಲ್ಲಿ ಬದುಕಬೇಕಾದವರು ಇಲ್ಲಿ ಸಾಯಬೇಕಾಗ್ತದ.”
ಬಹಳ ಅದ್ಭುತ ಈ ಚಿಂತನೆಗಳು ಲಿಂಗಾಯತರು ಅಭಿಮಾನದಿಂದ ಮೈಗೂಡಿಸಿಕೊಂಡು ಮೂಢನಂಬಿಕೆಗಳು ನಿಷೇಧಿಸಿ ಆಚಾರ ವಿಚಾರಗಳು ಶರಣರಂತೆ ಪಾಲಿಸಿದವರೆ ನಿಜ ಲಿಂಗಾಯತರು ಇದಕ್ಕೆ ಮಠಾಧೀಶರು ಮೊದಲು ಪಾಲಿಸಬೇಕು. ಜೈ ಬಸವೇಶ💐🙏🙏🙏
ಕಲಬುರ್ಗಿಯವರನ್ನು ಕುರಿತು ಅದ್ಭುತವಾದ ಲೇಖನ. ಕಲಬುರ್ಗಿಯವರನ್ನು ಅವರು ಇರುವಾಗ ನಾವು ಅರ್ಥಮಾಡಿಕೊಂಡಿದ್ದಕ್ಕಿಂತ ಹೆಚ್ಚು ಅವರ ಹತ್ಯೆಯಾದ ನಂತರ ನಾವು ಅರ್ಥ ಮಾಡಿಕೊಳ್ಳಲು ಮತ್ತು ಅವರ ಸಂಶೋಧನೆ ಮತ್ತು ಬರಹಗಳತ್ತ ತಿರುಗಿ ಹೊಸ ಅಧ್ಯಯನ ಮಾಡಬೇಕಿದೆ. ಕಲಬುರ್ಗಿಯವರನ್ನು ಇನ್ನಾದರೂ ಲಿಂಗಾಯತರು ಹೆಚ್ಚು ಉಪಯೋಗಿಸಿಕೊಳ್ಳಬೇಕಾಗಿದೆ.
ಕಲಬುರ್ಗಿ ಯವರು ಬಸವ ಧರ್ಮ ದ ಮೇಲೆ ನಿಜ ಕಾಳಜಿ ತೋರಿ ತಮ್ಮ ಜೀವನವನ್ನು ನಮಗೆ samarpisiddaare. ಆದರೆ ಲಿಂಗಾಯತ ರೇ ಲಿಂಗಾಯಿತ ರಾಗಿ badalaagilla. ಮ ನುವಾದಗಳ ಸಂಕೋಲೆ ಯಲ್ಲಿ ಸಿಲುಕಿದ್ದಾರೆ
An eye opening article, every Lingayat should read it
ಅಧ್ಯಯನದ ಕೊರತೆಯಿಂದ ಬಳಲುತ್ತಿರುವ , ವಿಚಾರ ಮಾಡುವುದನ್ನೇ ಮರೆತಿರುವ ಇಂದಿನ ಲಿಂಗಾಯತರು ವೈಧಿಕರ ಮಾತುಗಳೇ ಸತ್ಯ ಅನ್ನುವುದನ್ನು ಬಿಟ್ಟು ಕಲಬುರ್ಗಿ ಯಂತವರ ಪುಸ್ತಕ ಗಳನ್ನು ಓದಲು ಪ್ರಾರಂಭಿಸಿದರೆ ಲಿಂಗಾಯತ ಧರ್ಮ ಮತ್ತೆ ಮುಂಚೂಣಿಗೆ ಬರುತ್ತದೆ. ಲೇಖಕರಿಗೆ ಧನ್ಯವಾದಗಳು.