ಜಿಲ್ಲಾ ಸಮಿತಿ, 61 ಸಂಚಾಲಕರ ನೇಮಕ; 50 ಪೂಜ್ಯರ, 500 ಮುಖಂಡರ ಸಭೆ
ಚಾಮರಾಜನಗರ
ಸೆಪ್ಟೆಂಬರ್ 24 ಜಿಲ್ಲೆಗೆ ಆಗಮಿಸುವ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ವಿವಿಧ ಬಸವಪರ ಸಂಘಟನೆಗಳ ಪೂರ್ವಭಾವಿ ಸಭೆ ನಡೆಯಿತು.
ಅಭಿಯಾನ ಆಯೋಜಿಸಲು ರಚಿಸಿದ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಕೋಡಿಮೋಳೆ ರಾಜಶೇಖರ್ ಹಾಗೂ ಗೌರವ ಅಧ್ಯಕ್ಷರಾಗಿ ಸಂತೇಮರಹಳ್ಳಿ ವೇದಮೂರ್ತಿ ಅವರನ್ನು ನೇಮಕ ಮಾಡಲಾಯಿತು.
ಅಭಿಯಾನದ ಕಾರ್ಯದರ್ಶಿಯಾಗಿ ಎನ್‍ರಿಚ್ ಮಹದೇವಸ್ವಾಮಿ, ಖಜಾಂಚಿಯಾಗಿ ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಗೌರವ ಸಲಹೆಗಾರಗಾಗಿ ವಕೀಲ ಕಾಳನಹುಂಡಿ ವಿರೂಪಾಕ್ಷ ನೇಮಕವಾಗಿದ್ದಾರೆ.
61 ಸಂಚಾಲಕರ ನೇಮಕವಾಗಿದ್ದು ಸಭೆಯಲ್ಲಿ ಎಲ್ಲರ ಗಮನ ಸೆಳೆಯಿತು. “ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆಗಳಂತಹ ಸಂಘಟನೆಗಳ ಜಿಲ್ಲಾ, ತಾಲೂಕು ಘಟಕಗಳಿವೆ.
ಇದರ ಜೊತೆಗೆ ಬಹಳಷ್ಟು ಮಹದೇಶ್ವರರ, ಗುರು ಮಲ್ಲೇಶ್ವರರ ಹೆಸರಿನಲ್ಲಿ ಬಿಡಿ ಬಿಡಿ ಸಂಘಟನೆಗಳಿವೆ. ಅನೇಕ ಸಮುದಾಯಗಳ ಸಂಘಟನೆಗಳಿವೆ. ಉದಾಹರಣೆಗೆ 25,000 ಸದಸ್ಯರಿರುವ ಬೇಡಗಂಪಣ ಸಮುದಾಯದ ಸಂಘಟನೆಯಿದೆ. ಈ ಎಲ್ಲಾ ಸಂಘಟನೆಗಳ ಮುಖ್ಯಸ್ಥರನ್ನು ಸಂಚಾಲಕರನಾಗಿ ಮಾಡಿದ್ದೇವೆ,” ಎಂದು ಎನ್‍ರಿಚ್ ಮಹದೇವಸ್ವಾಮಿ ವಿವರಿಸಿದರು.
ಬಹಳ ವರ್ಷಗಳ ನಂತರ ಎಲ್ಲಾ ಸಂಘಟನೆಗಳನ್ನು ಒಂದೇ ವೇದಿಕೆ ಮೇಲೆ ತರುವ ಅವಕಾಶ ಅಭಿಯಾನ ಕಲ್ಪಿಸಿದೆ. ಇದು ಬಹಳ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಅಭಿಯಾನಕ್ಕೆ ಸಾವಿರಾರು ಜನರನ್ನು ಸೇರಿಸಲೂ ಒಂದು ಕ್ರಿಯಾಯೋಜನೆಯನ್ನು ಸಿದ್ದಪಡಿಸಲಾಗಿದೆ. ಸಮಿತಿಯ ಸದಸ್ಯರು, ಸಂಚಾಲಕರು ಒಂದು ತಿಂಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಶುರುಮಾಡಿದ್ದಾರೆ.
ಆಗಸ್ಟ್ 12 ಜಿಲ್ಲೆಯ 50 ಲಿಂಗಾಯತ ಸ್ವಾಮೀಜಿಗಳ ಸಭೆ ನಡೆಸಲಾಗುವುದು. ಈಗಾಗಲೇ ಎಲ್ಲಾ ಸ್ವಾಮೀಜಿಗಳಿಗೆ ಪತ್ರ ಬರೆದು ಆಹ್ವಾನಿಸಿದ್ದೇವೆ. ಪ್ರತಿಯೊಬ್ಬರನ್ನು ಮುಖಾಮುಖಿ ಭೇಟಿಯಾಗಿ ಖುದ್ದಾಗಿ ಅಹ್ವಾನ ನೀಡುತ್ತೇವೆ. ಸಭೆಯ ಹಿಂದಿನ ದಿನ ಮತ್ತೆ ಸಂಪರ್ಕಿಸಿ ನೆನಪು ಮಾಡಿಕೊಡುತ್ತೇವೆ. ಇಷ್ಟು ಗಂಭೀರವಾದ ಪ್ರಯತ್ನ ನಡೆಯುತ್ತಿದೆ, ಎಂದು ಮಹದೇವಸ್ವಾಮಿ ಹೇಳಿದರು.
ನಂತರ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ ಅವರ ನೇತೃತ್ವದಲ್ಲಿ ರಾಜಕೀಯದ ಮತ್ತು ಸಮಾಜದ ಮುಖಂಡರ ಸಭೆ ನಡೆಸಲಾಗುವುದು. ಮಾಜಿ ಶಾಸಕರು, ಪಂಚಾಯತ್ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ಹಳ್ಳಿಗಳಲ್ಲಿರುವ ಮುಖಂಡರು ಸೇರಿ 500 ಜನರ ಆಹ್ವಾನಿಸಿ ಸಭೆ ನಡೆಸಲಾಗುವುದು.
ಜಿಲ್ಲೆಯಲ್ಲಿರುವ ಎಲ್ಲಾ ಲಿಂಗಾಯತ ಮನೆಗಳಿಗೂ ಪತ್ರ ಬರೆಯಲಾಗುವುದು. ಜೊತೆಗೆ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಬಂದಿರುವ ಕರಪತ್ರವನ್ನೂ ಹಂಚಲಾಗುವುದು. ಕನಿಷ್ಠ ಒಂದು ಲಕ್ಷ ಮನೆಗಳನ್ನು ಮುಟ್ಟುವ ಗುರಿಯಿದೆ.
ಅಭಿಯಾನ ನಡೆಸಲು ಸಂಪನ್ಮೂಲಗಳನ್ನು ಒದಗಿಸುವ ಬಗ್ಗೆ ಆತಂಕವಿಲ್ಲ. ದುಡ್ಡು ಕೇಳುವುದಕ್ಕಿಂತಲೂ ನಿರ್ದಿಷ್ಟ ಜವಾಬ್ದಾರಿಯನ್ನು ವಹಿಸಿಕೊಟ್ಟುಬಿಡುತ್ತೇವೆ. ಮೆರವಣಿಗೆ, ಕಲಾವಿದರಂತಹ ಕೆಲವು ಖರ್ಚುಗಳಿಗೆ ಮಾತ್ರ ಹಣ ಬೇಕಾಗುತ್ತದೆ.
ಅಭಿಯಾನಕ್ಕೆ ಬೆಳಗ್ಗೆಯಿಂದ ರಾತ್ರಿಯವರೆಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ತಿಂಡಿ, ಊಟ, ಟಿಫನ್ ಎಲ್ಲವನ್ನೂ ಚಾಮರಾಜನಗರದ ಮಠದಲ್ಲಿ ಮಾಡಿ ಟೆಂಪೋದಲ್ಲಿ ಕಳಿಸುತ್ತೇವೆ. ಬಫೆ ಕೂಡ ಇರುತ್ತದೆ ಎಂದು ಹೇಳಿದರು.
ಬಹಳ ವರ್ಷಗಳ ಮೇಲೆ ಇಷ್ಟೊಂದು ಜನ ಬಸವ ಅನುಯಾಯಿಗಳು ಒಂದೇ ಕಡೆ ಸೇರುತ್ತಿರುವುದು ಸಂಭ್ರಮದ ವಿಷಯ. ನಮ್ಮ ಗಡಿ ಪ್ರದೇಶದಲ್ಲಿ ಬಸವ ತತ್ವ ಬಿತ್ತಲು ಇದು ಸುವರ್ಣಾವಕಾಶ, ಎಂದು ಮಹದೇವಸ್ವಾಮಿ ತಿಳಿಸಿದರು.
ಮಾಜಿ ಸೈನಿಕ ಗಂಗಾಧರ್, ಸುಂದರಪ್ಪ ಮೂಡಿಗುಂಡ, ಲೊಕೇಶ್ ಬಿಂದು, ಹೆಗ್ಗೋಠಾರ ವಿಜಿ, ಬಸವಣ್ಣ ಹೊನ್ನೂರು, ಶಿವಪ್ರಸಾದ್, ಶಿಕ್ಷಕಿ ನಿರ್ಮಲ, ಆನಾಪುರ ಉಮೇಶ್, ತಿಮ್ಮರಾಜಿಪುರ ಪುಟ್ಟಣ್ಣ, ನಂಜೇದೇವನಪುರ ಗುರುಸ್ವಾಮಿ, ಆರ್. ಪುಟ್ಟಮಲ್ಲಪ್ಪ, ಮುಡ್ಲುಪುರ ಮಹೇಶ್, ತೆರಣಾಂಬಿ ಹುಂಡಿ ರಾಮಣ್ಣ, ಹೆಗ್ಗೋಠಾರಶಿವಸ್ವಾಮಿ, ಕೆಂಪನಪುರಮಹದೇವಸ್ವಾಮಿ, ಅರಕಲವಾಡಿ ನಾಗಮಲ್ಲಪ್ಪ, ಘನಾಚಾರ ವೇದಿಕೆಯ ರಾಜ್ಯಾಧ್ಯಕ್ಷ ನವಿಲೂರು ಸಿದ್ದಮಲ್ಲಿಕಾರ್ಜುನಸ್ವಾಮಿ, ಅಂಕನಶೆಟ್ಟಿಪುರ ಪ್ರಸನ್ನ, ನಾಗರಾಜು ಸಭೆಯಲ್ಲಿ ಉಪಸ್ಥಿತರಿದ್ದರು.
Congratulations new team
Super