ಸಿದ್ದಗಂಗಾ ಶ್ರೀಗಳ ಸಾನಿಧ್ಯ; ತಾಲೂಕುಗಳಲ್ಲಿ ಪ್ರಚಾರಕ್ಕೆ ವಾಹನ
ತುಮಕೂರು
ಜಿಲ್ಲೆಯಲ್ಲಿ ಸೆಪ್ಟೆಂಬರ್ 27ರಂದು ನಡೆಯುವ ಬಸವ ಸಾಂಸ್ಕೃತಿಕ ಅಭಿಯಾನದ ಪೂರ್ವಭಾವಿ ಸಭೆಯನ್ನು, ಜಿಲ್ಲೆಯ ಲಿಂಗಾಯತ ಹಾಗೂ ಬಸವಪರ ಸಂಘಟನೆಗಳು ಸೇರಿಕೊಂಡು ಮುರುಘರಾಜೇಂದ್ರ ಸಭಾಭವನದಲ್ಲಿ ಗುರುವಾರ ನಡೆಸಿದವು.
ಬೆಟ್ಟದಹಳ್ಳಿ ಗವಿಮಠದ ಪೂಜ್ಯ ಚಂದ್ರಶೇಖರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತ, ಬಸವತತ್ವಾಚರಣೆಯನ್ನು ಜನಮನಕ್ಕೆ ತಲುಪಿಸಲು ಈ ಅಭಿಯಾನ ತುಂಬಾ ಮಹತ್ವದ್ದಾಗಿದೆ. ಎಲ್ಲರೂ ಒಗ್ಗೂಡಿಕೊಂಡು ವ್ಯವಸ್ಥಿತವಾಗಿ ನಮ್ಮ ಜಿಲ್ಲೆಯಲ್ಲಿ ಅಭಿಯಾನ ಯಶಸ್ವಿಗೊಳಿಸೋಣ ಎಂದರು.

ಇದೇ ಸಂದರ್ಭದಲ್ಲಿ ಸ್ವಾಗತ ಸಮಿತಿ, ಮೆರವಣಿಗೆ, ದಾಸೋಹ, ವೇದಿಕೆ, ಹಣಕಾಸು, ಪ್ರಚಾರ, ಮಹಿಳಾ, ಶ್ರೀಗಳ ಸ್ವಾಗತ ಸಮಿತಿ ಸೇರಿದಂತೆ ಒಟ್ಟು ಹತ್ತು ಸಮಿತಿಗಳನ್ನು ರಚಿಸಲಾಯಿತು.
ಪೂಜ್ಯ ಚಂದ್ರಶೇಖರ ಸ್ವಾಮೀಜಿ, ಬೆಟ್ಟದಹಳ್ಳಿ ಅವರು ಅಧ್ಯಕ್ಷರಾಗಿ, ನಾಗಭೂಷಣ, ಚಂದ್ರಶೇಖರ ಹಾಗೂ ಡಾ. ವಿಜಯಕುಮಾರ ಕಮ್ಮಾರ ಅವರನ್ನು ಕಾರ್ಯದರ್ಶಿಗಳಾಗಿ ಎಲ್ಲಾ ಸಮಿತಿಗಳ ಕಾರ್ಯ ನಿರ್ವಹಣೆಗೆ ನೇಮಕ ಮಾಡಲಾಯಿತು. ಎಲ್ಲ ಸಮಿತಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕೆ ಒತ್ತು ಕೊಟ್ಟು ಅವಕಾಶ ನೀಡಲಾಗಿದೆ. ಅದರಂತೆ ಎಲ್ಲ ಲಿಂಗಾಯತ, ಬಸವಪರ, ಪ್ರಗತಿಪರ ಸಂಘಟನೆಗಳ ಪ್ರಮುಖರನ್ನು ಸಮಿತಿಗಳಲ್ಲಿ ಒಳಗೊಳಿಸಲಾಗಿದೆ.

ಜಿಲ್ಲೆಯ 10 ತಾಲ್ಲೂಕುಗಳಿಗೆ ಸಮಿತಿ ರಚಿಸಿ, ಅಧ್ಯಕ್ಷರನ್ನು ಘೋಷಿಸಲಾಯಿತು. ತಾಲೂಕುಗಳಾದ್ಯಂತ ಪ್ರಚಾರ ವಾಹನ ಮೂಲಕ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಕರಪತ್ರ ಹಂಚಲಾಗುವುದು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಸವಪರ ಸಂಘಟನೆಗಳನ್ನು ಗುರುತಿಸಿ, ಅವರನ್ನು ಅಭಿಯಾನದಲ್ಲಿ ತೊಡಗಿಸಲಾಗುವುದು. ಎಲ್ಲ ತಾಲೂಕುಗಳಿಂದ ಜನರನ್ನು ಅಭಿಯಾನದಲ್ಲಿ ಪಾಲ್ಗೊಳಿಸಲು, ತಾಲೂಕು ಸಮಿತಿಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ.
ಈಗಾಗಲೇ ಜಿಲ್ಲೆಯ 35 ಮಠಾಧೀಶರನ್ನು ಗುರ್ತಿಸಿ ಅವರಿಗೆ ಅಭಿಯಾನದ ಕರಪತ್ರ ಹಾಗೂ ಸಭೆಯ ಆಮಂತ್ರಣ ಪತ್ರ ಕಳಿಸಿದ್ದೇವೆ, ಬರುವ ಗುರುವಾರ ಅವರನ್ನೊಳಗೊಂಡ ಸಭೆ ನಡೆಯಲಿದೆ. ಪ್ರತಿ ಗುರುವಾರ ಸಭೆಗಳನ್ನು ನಡೆಸಲಾಗುತ್ತದೆ.
ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳನ್ನು ಭೇಟಿಯಾಗಿ ಅಭಿಯಾನಕ್ಕೆ ಆಹ್ವಾನಿಸಿದ್ದೇವೆ, ಸಾನಿಧ್ಯ ವಹಿಸಲು ಮತ್ತು ಸಹಾಯ-ಸಹಕಾರ ಕೇಳಿಕೊಂಡಿದ್ದೇವೆ, ಅವರು ಸಮ್ಮತಿ ನೀಡಿದ್ದಾರೆ.

ಸಾಮೂಹಿಕವಾಗಿ ಹೋಗಿ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಉದ್ಯಮಿಗಳು, ಮತ್ತಿತರರು ಬಳಿ ತೆರಳಿ ಅಭಿಯಾನಕ್ಕೆ ಬೇಕಾದ ಸಂಪನ್ಮೂಲವನ್ನು ಸಂಗ್ರಹಿಸುತ್ತೇವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ತುಮಕೂರು ಜಿಲ್ಲಾ ಅಧ್ಯಕ್ಷ ನಾಗಭೂಷಣ ಹೇಳಿದರು.
ಡಾ. ಡಿ.ಎನ್. ಯೋಗೀಶ್ವರ, ಸಾಗರನಹಳ್ಳಿ ಪ್ರಭು, ಡಿ. ವಿ. ಶಿವಾನಂದ, ಸಿದ್ಧರಾಮಯ್ಯ, ಕಲ್ಪನಾ, ಆಶಾ ನಿರಂಜನ ಸೇರಿದಂತೆ ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ವಚನ ಸಾಹಿತ್ಯ ಮಂದಾರ ಫೌಂಡೇಶನ್, ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರ, ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್, ಕದಳಿ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲೆಯ ಎಲ್ಲಾ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರು.