ಸಂಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ಒಡಂಬಡಿಕೆ; 300 ವಿದ್ಯಾರ್ಥಿಗಳಿಗೆ ನೆರವು
ಮಲೆ ಮಹದೇಶ್ವರ ಬೆಟ್ಟ
ಮಲೆ ಮಹದೇಶ್ವರ ಬೆಟ್ಟದ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ₹ 4.77 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿದ್ಯಾರ್ಥಿನಿಲಯದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.
ಬೃಹನ್ಮಠದ ಹಿರಿಯ ಲಿಂಗೈಕ್ಯ ಶ್ರೀ ಪಟ್ಟದ ಗುರುಸ್ವಾಮಿ ಅವರ ಪುಣ್ಯ ಸಂಸ್ಮರಣೋತ್ಸವದ ಸಂದರ್ಭದಲ್ಲಿ ವಸತಿ ನಿಲಯ ಸ್ಥಾಪಿಸಲು ಸಾಲೂರು ಮಠ ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಡುವೆ ಒಡಂಬಡಿಕೆ ನಡೆಯಿತು.
ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗುಡ್ಡಗಳಲ್ಲಿ ನೆಲೆಸಿರುವ 18 ಹಳ್ಳಿಗಳ ಬೇಡಗಂಪಣ, ಸೋಲಿಗ ಸಮುದಾಯಗಳ ವಿದ್ಯಾರ್ಥಿಗಳಿಗೆ ವಸತಿಯುತ ಶಿಕ್ಷಣ ದೊರೆಯಲಿದೆ.

ಎಚ್‌ಎಎಲ್ ಸಂಸ್ಥೆಯ ಅನುದಾನ ಬಳಸಿಕೊಂಡು ಮೂರು ವರ್ಷಗಳಲ್ಲಿ ಸುಸಜ್ಜಿತ ವಸತಿ ನಿಲಯ ನಿರ್ಮಿಸಲಾಗುವುದು. ವಸತಿ ನಿಲಯದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅವಕಾಶ ದೊರೆಯಲಿದೆ ಎಂದು ಸಾಲೂರು ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ಮಲೆ ಮಹದೇಶ್ವರ ಬೆಟ್ಟ ಪ್ರದೇಶ ವ್ಯಾಪ್ತಿಯಲ್ಲಿರುವ ಹಲವು ಹಳ್ಳಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕ ಹಾಗೂ ರಸ್ತೆಯಂತಹ ಮೂಲಸೌಲಭ್ಯಗಳು ದೊರೆತಿಲ್ಲ.
ಒಡಬಂಡಿಕೆ ಪತ್ರಕ್ಕೆ ಸಹಿಹಾಕುವ ಕಾರ್ಯಕ್ರಮದಲ್ಲಿ ಎಚ್ಎಎಲ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಡಿ.ಕೆ.ಸುನಿಲ್, ಕಾರ್ಯಾಚರಣೆ ವಿಭಾಗದ ನಿರ್ದೇಶಕ ಕೆ.ರವಿ, ಹಣಕಾಸು ವಿಭಾಗದ ನಿರ್ದೇಶಕ ಬಿ.ಸೇನಾಪತಿ, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಜಿ.ಬಾಲಸುಬ್ರಹ್ಮಣ್ಯ, ಬಾಹ್ಯಾಕಾಶ ಮತ್ತು ರಕ್ಷಣೆಯ ವಿಶ್ಲೇಷಕ ಗಿರೀಶ್ ಲಿಂಗಣ್ಣ, ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಡಾ.ಶರತ್ ಚಂದ್ರ, ಮೈಸೂರು ವಿ.ವಿ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು, ಶಿಕ್ಷಣ ಸಂಸ್ಥೆಯ ಸದಸ್ಯ ಪೊನ್ನಾಚಿ ಮಹದೇವಸ್ವಾಮಿ ಇದ್ದರು.
1964ರಲ್ಲಿ ಆರಂಭಗೊಂಡ ಮಲೆ ಮಹದೇಶ್ವರ ಸ್ವಾಮಿ ಕೃಪಾ ಶಿಕ್ಷಣ ಸಂಸ್ಥೆ ಬೆಟ್ಟ ವ್ಯಾಪ್ತಿಯಲ್ಲಿ ಶಿಕ್ಷಣದ ಬೆಳಕು ಪಸರಿಸುತ್ತ ಬಂದಿದೆ. 21 ಶಿಕ್ಷಣ ಸಂಸ್ಥೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಕೃತ, ಯೋಗ, ಲಲಿತ ಕಲೆ, ಸಾಂಸ್ಕೃತಿಕ ಅಧ್ಯಯನವೂ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಆದಿ ಚುಂಚನಗಿರಿ ಮಠ, ಶರಶ್ಚಂದ್ರ ಸ್ವಾಮೀಜಿ, ಡಾ.ಚನ್ನಬಸವಸ್ವಾಮೀಜಿ ದೇಗುಲಮಠ ಕನಕಪುರ,ದಿವ್ಯಸಾನ್ನಿಧ್ಯ ವಹಿಸಿದ್ದರು.
ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾವಿರಾರು ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.