ಗೋವಾದಲ್ಲಿ ‘ಲಿಂಗಾಯತ ಸ್ವತಂತ್ರ ಧರ್ಮ’ ವಿಚಾರ ಸಂಕಿರಣ

ಕ್ಯಾಲಂಗುಟೆ

ಗೋವಾದ ನೀಲಮ್ಸ್ ಗ್ರ್ಯಾಂಡ್ ಕ್ಯಾಲಂಗುಟೆ ಸಂಭಾಂಗಣದಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಅರಿವು ಸಂಘಟನೆ ಅನುಷ್ಠಾನ ಕುರಿತು ವಿಚಾರ ಸಂಕಿರಣ ನಡೆಯಿತು.

ದಿವ್ಯ ಸಾನ್ನಿಧ್ಯ ವಹಿಸಿ ಬೆಟ್ಟಹಳ್ಳಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಭಾರತದ ಇತಿಹಾಸದಲ್ಲಿ ಮೂರು ಧರ್ಮಗಳು ಹುಟ್ಟಿ ಅವೈಧಿಕ ಧರ್ಮಗಳಾದವು. ಆದರೆ ಎರಡು ಧರ್ಮಗಳು ಮೂಲ ತತ್ವಗಳನ್ನು ಅರಿತುಕೊಂಡು ಮುಂದುವರಿಸಿಕೊಂಡು ಬಂದವು. ಆದರೆ ಲಿಂಗಾಯತ ಧರ್ಮದೊಳಗೆ ಇರುವ ಕುತಂತ್ರಿಗಳಿಂದ ಲಿಂಗಾಯತ ಧರ್ಮ ಹಾಗೆಯೇ ತಟಸ್ಥವಾಗಿದೆ. ಬಸವಣ್ಣನವರಿಗೆ ಕಾಯಕ ಆಶ್ರಯವೇ ಮುಖ್ಯವಾಗಿತ್ತೇ ಹೊರತು ರಾಜನ ಆಶ್ರಯ ಮುಖ್ಯವಾಗಿರಲಿಲ್ಲ. ಇತಿಹಾಸದಲ್ಲಿ ನೋವನ್ನು ಅನುಭವಿಸಿದ ಫಲವಾಗಿ ದೊಡ್ಡ ವ್ಯಕ್ತಿಯಾದರು.

ರಾಷ್ಟ್ರದಲ್ಲಿ ನೊಂದವರು ಅನೇಕರು. ಆದರೆ ನೊಂದವರ ನೋವುಗಳ ಕಣ್ಣೀರನ್ನು ಒರೆಸಿದವರು ಅಣ್ಣ ಬಸವಣ್ಣನವರು. ಲಿಂಗಾಯತ ಜಾತಿ ಸೂಚಕವಲ್ಲ; ಆಚಾರ, ವಿಚಾರ, ಸಿದ್ಧಾಂತ ಸೂತಕ. ಸಾಣೇಹಳ್ಳಿ ಪೂಜ್ಯರು ೨೦೧೯ರಲ್ಲಿ ಇಡೀ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ‘ಮತ್ತೆ ಕಲ್ಯಾಣ’ ಎನ್ನುವ ಅದ್ಭುತ ಕಾರ್ಯಕ್ರಮ ರೂಪಿಸಿ ಶರಣ ವಿಚಾರಗಳನ್ನು ಬಿತ್ತುವಂಥ ಕೆಲಸವನ್ನು ಮಾಡಿದರು. ಅದೇ ರೀತಿ ಕರ್ನಾಟಕದ ಮಠಾಧೀಶರ ಒಕ್ಕೂಟದಿಂದ ಬಸವ ಸಂಸ್ಕೃತಿ ಅಭಿಯಾನ ಕರ್ನಾಟಕದಾದ್ಯಂತ ಮಾಡುತ್ತಿದೆ. ಬಸವ ಪ್ರಜ್ಞೆಯನ್ನು ಅಂದು, ಇಂದು, ಮುಂದು ಎಂದಿಂದಿಗೂ ಉಳಿಸುವಂಥವರು, ಬೆಳೆಸುವಂಥವರು ಜನಪದರು.

ಮಠಗಳಲ್ಲಿ ಬಸವಣ್ಣನವರ ಫೋಟೊ ಇಟ್ಟು ಪೂಜೆ ಮಾಡುವುದಷ್ಟೇ ಅಲ್ಲ; ಅವರ ವಿಚಾರಗಳನ್ನು ಅಪ್ಪಿ ಒಪ್ಪಿಕೊಂಡು ವಿರಕ್ತ ಮಠಾಧೀಶರು ಗುರುವಾಗಿ ಒಪ್ಪಿಕೊಂಡಿದ್ದು ೨೦ನೆಯ ಶತಮಾನದಲ್ಲಿ. ಎಲ್ಲ ವಿರಕ್ತ ಮಠಾಧೀಶರು ಬಸವಣ್ಣನವರು ಗುರುವಾಗಿ ಒಪ್ಪಿಕೊಂಡಿದ್ದರೆ ಲಿಂಗಾಯತ ಸ್ವತಂತ್ರ ಹೋರಾಟದ ಅವಶ್ಯಕತೆ ಇರುತ್ತಿರಲಿಲ್ಲ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ; ಇತಿಹಾಸ ಮತ್ತು ಪುರಾಣ ಪ್ರಜ್ಞೆ ಎಂಬ ಎರಡು ರೀತಿಯ ಪ್ರಜ್ಞೆಗಳಿವೆ.

ಶರಣರು ಪುರಾಣ ಪ್ರಜ್ಞೆಯನ್ನು ವಿರೋಧಿಸಿ ಐತಿಹಾಸ ಪ್ರಜ್ಞೆಯನ್ನು ಜಾರಿಗೆ ತಂದರು. ಪುರಾಣ ಪ್ರಜ್ಞೆಯಿಂದ ಹೊರ ಬಂದು ನೈಜ ತತ್ವವನ್ನು ಸಮಾಜದ ಮುಂದೆ ಇಟ್ಟವರು ಬಸವಣ್ಣನವರು. ಕೆಲವು ಧರ್ಮಗಳಲ್ಲಿದ್ದ ಜೊಳ್ಳುಕಾಳುಗಳನ್ನು ತೂರಿ ಗಟ್ಟಿಕಾಳುಗಳನ್ನು ಸಮಾಜಕ್ಕೆ ಕೊಟ್ಟರು.

ಬಸವಣ್ಣನವರು ಕರ್ಮಸಿದ್ಧಾಂತವನ್ನು ದೂರತಳ್ಳಿ ಕಾಯಕ ಸಿದ್ಧಾಂತವನ್ನು ಜಾರಿಗೆ ತಂದರು. ಪ್ರತಿಯೊಬ್ಬ ವ್ಯಕ್ತಿ ದುಡಿದು ಅದರಿಂದ ಬಂದ ಆದಾಯದಿಂದ ಸಮಾಜಕ್ಕೆ ಸ್ವಲ್ಪ ಭಾಗವಾದರೂ ದಾಸೋಹ ಮಾಡಿದರು. ಏಕದೇವನಿಷ್ಠೆಯನ್ನು ಬೆಳೆಸಿಕೊಂಡು ಅಂಗೈಯಲ್ಲಿ ಇಷ್ಟಲಿಂಗವನ್ನು ಕೊಟ್ಟರು. ಲಿಂಗಮುಟ್ಟಿದವರು ಪೂರ್ವ ಕುಲ ಅಳಿದು ಪುನರ್ಜಾತರಾದರು. ಲಿಂಗಾಯತ ಧರ್ಮದಲ್ಲಿ ನರಜನ್ಮ ಮತ್ತು ಹರಜನ್ಮಗಳಿವೆ.

ಇಷ್ಟಲಿಂಗದೀಕ್ಷೆಯ ಮೂಲಕ ನರಜನ್ಮವನ್ನು ಕಳೆದು ಹರಜನ್ಮವನ್ನು ಪಡೆದುಕೊಳ್ಳಬೇಕು. ಬಸವಣ್ಣನವರು ಲೋಕಕ್ಕೆ ಬೇಕಾದ ವಿಚಾರಗಳನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಲೋಕಕ್ಕೆ ಕೊಟ್ಟರು.

ಬಾಹ್ಯ ಗುರುವಿನ ಅವಶ್ಯಕತೆ ತೋರದೇ ನಿನ್ನರಿವೇ ನಿನಗೆ ಗುರುವಾಗಬೇಕು ಎಂದರು. ಬ್ರಾಹ್ಮಣ ಕುಲದಲ್ಲಿದ್ದ ಸಾಂಪ್ರದಾಯಗಳನ್ನು ವಿರೋಧಿಸಿ, ಪ್ರಶ್ನಿಸಿ ಅದರಿಂದ ಹೊರಬಂದು ಸರ್ವಸಮಾನತೆಯನ್ನು ಸಾರಿ ಲಿಂಗಾಯತ ಧರ್ಮದ ಹುಟ್ಟಿಗೆ ಕಾರಣವಾದರು. ಲಿಂಗಾಯತ ಧರ್ಮದ ತತ್ವ ಸಿದ್ಧಾಂತಕ್ಕೆ ಕಾರಣ ಬಸವಣ್ಣನವರು.

ಇವತ್ತು ಸರಕಾರ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಒಪ್ಪಲಿ ಬಿಡಲಿ. ಬಸವಣ್ಣನವರ ಸಮಕಾಲೀನರು ಬಸವಣ್ಣ ಗುರು, ಲಿಂಗಾಯತ ಧರ್ಮದ ಸ್ಥಾಪಕರು, ಲಿಂಗಾಯತ ಸ್ವತಂತ್ರ ಧರ್ಮ ಎಂದು ಒಪ್ಪಿಕೊಂಡಿದ್ದರು. ಇಡೀ ದೇಶದಲ್ಲೇ ಲಿಂಗಾಯತ ಧರ್ಮದ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ.

ರಾಷ್ಟ್ರೀಯ ಬಸವ ಪ್ರತಿಷ್ಠಾನದವರು ದೇಶ-ವಿದೇಶಗಳಲ್ಲಿ ಶರಣರ ವೈಚಾರಿಕ ವಿಚಾರಗಳ ಬೀಜಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಬಸವತತ್ವ ನಮ್ಮೆಲ್ಲರ ಬದುಕಿಗೆ ಬೆಳಕಾಗಲಿ ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಮಾತನಾಡಿ, ಒಂದು ವಾದವನ್ನು ವಿಧಾನಸಭಾ ವಿಧಾನ ಪರಿಷತ್‌ನಲ್ಲಿ ಮಾಡುವುದು ಸರ್ವೆಸಾಮಾನ್ಯ. ಆದರೆ ಧರ್ಮ ಜಾಗೃತಿಯ ಕಾರ್ಯಕ್ರಮಗಳಲ್ಲಿ ವಾದ ವಿವಾದಕ್ಕೆ ಅವಕಾಶವಿಲ್ಲ. ವಿಚಾರಗಳು ಚರ್ಚೆಯಾಗಿ ತೀರ್ಮಾನ ಆಗಬೇಕು. ಜನರನ್ನು ಜಾಗೃತಿ ಮೂಡಿಸಿ ಸಮಾಜದ ಕಡೆಗೆ ಕರೆದುಕೊಂಡು ಹೋಗಬೇಕು.

ಸಾಮಾಜಿಕ ಪರಿವರ್ತನೆಯನ್ನು ಕೊಟ್ಟ ಬಸವಣ್ಣನವರ ಬಗ್ಗೆ ಮಾತನಾಡುವವರೆಲ್ಲಾ ಒಂದೇ ಸಮುದಾಯಕ್ಕೆ ಸೇರಿದವರಾಗಬೇಕು. ಬಸವಣ್ಣನವರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ ಇಡೀ ಪ್ರಪಂಚಕ್ಕೆ ಬೇಕಾದವರು. ಬಸವಣ್ಣನವರು ಹಾಕಿಕೊಟ್ಟ ಸಂವಿಧಾನದ ಸಪ್ತಸೂತ್ರಗಳು ಪ್ರತಿಯೊಬ್ಬರಲ್ಲೂ ಮೂಡಿದರೆ ಇನ್ನಾವ ಸಂವಿಧಾನದ ಅವಶ್ಯಕತೆ ಬೇಕಾಗಿಲ್ಲ. ಪ್ರೀತಿ, ವಿಶ್ವಾಸ, ಸಂಸ್ಕಾರದ ಕೊರತೆಯಿಂದ ಸಮಾಜದ ಅಧಃಪತನವಾಗುವುದು. ಮಾನವ ಧರ್ಮ ಎಂದರೆ ಪ್ರೀತಿ, ವಿಶ್ವಾಸ, ಸಂಸ್ಕಾರ ಕೊಡುವಂಥದ್ದು. ಅಂತಹ ಧರ್ಮ ಕೊಟ್ಟಂಥವರು ಬಸವಣ್ಣನವರು. ಅವರು ಕೊಟ್ಟ ಜೀವನದ ಸಂವಿಧಾನವನ್ನು ಪಾಲನೆ ಮಾಡುವವರೆಲ್ಲರೂ ಲಿಂಗಾಯತರು.

ಸತ್ಯ ಹೇಳುವುದಕ್ಕೆ ಅಂಜಿಕೆಯುಳ್ಳವನು ನಾಯಕನಾಗಲು ಸಾಧ್ಯವಿಲ್ಲ. ಬಸವಣ್ಣ ಸತ್ಯವನ್ನು ಪ್ರತಿಪಾದಿಸಿದ್ದರಿಂದ ವಿಶ್ವನಾಯಕ, ಸಾಂಸ್ಕೃತಿಕ ನಾಯಕನಾಗಲು ಸಾಧ್ಯವಾಯಿತು. ಪರಿವರ್ತನೆಯ ಬಗ್ಗೆ ಮಾತನಾಡುವವವರು ಹಲವರು, ಪರಿವರ್ತನೆಯನ್ನು ತಾತ್ವಿಕ ಹಂತಕ್ಕೆ ತೆಗೆದುಕೊಂಡು ಹೋಗುವವರು ಕೆಲವರು. ಬಸವಣ್ಣನವರು ಪ್ರತಿಪಾದಿಸಿದ ತತ್ವಗಳ ಅಡಿಯಲ್ಲಿ ನಾವ್ಯಾರು ಹೋಗುತ್ತಿಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಎಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಪ್ರೀತಿ ವಿಶ್ವಾಸ ಒಂದು ದೇಶದ ಕಾನೂನಾಗಬೇಕು. ವಿಚಾರಗಳು ಸ್ಪಷ್ಟವಾಗಿದ್ದರೆ ಅನುಷ್ಠಾನಗೊಳ್ಳುವುದರಲ್ಲಿ ಅನುಮಾನವಿಲ್ಲ. ನಾವೆಲ್ಲರೂ ಯಾಂತ್ರಿಕ ಯುಗದಲ್ಲಿದ್ದೇವೆ. ಮೊಬೈಲ್‌ಗಳ ಮೂಲಕ ವಿಕೃತ ಮನಸ್ಸುಗಳು ಹೆಚ್ಚಾಗ್ತಾ ಇವೆ ಎಂದರು.

ಗೋವಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ; ಅರಬ್ಬೀ ಸಮುದ್ರದ ಅಲೆಗಳಂತೆ ಬಸವಣ್ಣನವರ ವಿಚಾರಗಳನ್ನು ಇಡೀ ರಾಷ್ಟ್ರದಾದ್ಯಂತ ಜನರ ಮನಸ್ಸುಗಳಿಗೆ ಅಪ್ಪಳಿಸುವ ಕಾರ್ಯವನ್ನು ಸಾಣೇಹಳ್ಳಿ ಸ್ವಾಮೀಜಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನದವರು ಮಾಡುತ್ತಿರುವುದು ಹೆಮ್ಮೆಯ ವಿಷಯ. ಮನಸ್ಸು ಮನಸ್ಸುಗಳ ವೈಮನಸ್ಸುಗಳುಂಟಾಗಿ ಮನಸ್ಸು ಕೊಳಕಿನಿಂದ ತುಂಬಿಕೊಂಡಿದ್ದೇವೆ. ಶರಣರ ವಿಚಾರಗಳಿಂದ ಕೊಳಕು ಮನಸ್ಸುಗಳಿಂದ ಸ್ವಚ್ಛಗೊಳಿಸುವ ಕಾರ್ಯವನ್ನು ನಾವೆಲ್ಲರೂ ಮಾಡಿಕೊಳ್ಳಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಸಿದ್ಧು ಯಾಪಲಪರವಿ ಮಾತನಾಡಿ; ಲಿಂಗಾಯತ ಸ್ವತಂತ್ರ ಧರ್ಮ ಮಾಡಬೇಕು ಎನ್ನುವ ಪ್ರಸ್ತಾಪ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರೂ, ದಾವಣಗೆರೆಯಲ್ಲಿ ಶೃಂಗಸಭೆಯನ್ನು ಮಾಡಿ ಗೊಂದಲವನ್ನೆಬಿಸಿರುವ ಕಾರಣದಿಂದ ಲಿಂಗಾಯತ ಧರ್ಮದ ಸ್ವತಂತ್ರ ಧರ್ಮದ ಮಾನ್ಯತೆ ನೆನಗುದಿಗೆ ಬಿದ್ದಿದೆ. ಅದಕ್ಕಾಗಿ ನಾವೆಲ್ಲರೂ ಜಾಗೃತರಾಗಬೇಕು.

ಲಿಂಗಾಯತ ಸ್ವತಂತ್ರದ ಧರ್ಮದ ಮಾನ್ಯತೆ ಬೇಕಾದ ಎಲ್ಲ ಅರ್ಹತೆ, ಆಧಾರಗಳಿದ್ದರೂ ಪಂಚ ಪೀಠಾಧೀಶ್ವರರು ಗೊಂದಲವನ್ನೆಬ್ಬಿಸುತ್ತಿರುವುದು ಬಸವಾಭಿಮಾನಿಗಳ ಮನಸ್ಸಿಗೆ ಘಾಸಿಗೊಳಿಸಿದೆ. ಯಾವುದೇ ರಾಜಕೀಯ ವ್ಯಕ್ತಿಗಳಿದ್ದರೂ ಆಯಾ ಧರ್ಮದ ತತ್ವ ಸಿದ್ಧಾಂತಗಳನ್ನು ಬಿಟ್ಟುಕೊಡದೇ ನಿಷ್ಠೆಯಿಂದಿರುವರು. ಕೇಂದ್ರ ಸರಕಾರ ಲಿಂಗಾಯತ ಧರ್ಮದ ಮಾನ್ಯತೆ ಕೊಟ್ಟರೂ ಕೊಡದೇ ಇದ್ದರೂ ಲಿಂಗಾಯತ ಮಠಾಧೀಶರಿಗೆ ಸ್ಪಷ್ಟತೆ ಕಾಣದೇ ಇರುವುದು ದುರಂತ.

ಆದ್ದರಿಂದ ಗೊಂದಲವನ್ನೆಬ್ಬಿಸಬಾರದು ಎನ್ನುವ ಕಾರಣಕ್ಕಾಗಿ ಸೆಪ್ಟಂಬರ್ ೧ ರಿಂದ ಅಕ್ಟೋಬರ್ ೫ರವರೆಗೆ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಬಸವ ಸಂಸ್ಕೃತಿ ಅಭಿಯಾನ’ ಕೈಗೊಂಡು ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯ. ಸಾಣೇಹಳ್ಳಿ ಶ್ರೀಗಳು, ಗದಗಿನ ತೋಂಟದಾರ್ಯ ಶ್ರೀಗಳು, ಭಾಲ್ಕಿಯ ಶ್ರೀಗಳು ಹಾಗೂ ಮುಂತಾದ ಮಠಾಧೀಶರು ಲಿಂಗಾಯತ ಧರ್ಮದ ಸಷ್ಪತೆಗಳನ್ನು ಅರಿತು ಇದರ ನೇತೃತ್ವ ವಹಿಸುವರು. ಅನೇಕ ಮಠಾಧೀಶರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಲಿಂಗಾಯತ ಧರ್ಮದ ಬಗ್ಗೆ ಇದ್ದ ಅಸಡ್ಡೆಯಿಂದ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.

“ಲಿಂಗಾಯತ ಧರ್ಮದಲ್ಲಿ ‘ಸ್ತ್ರೀ ಸಮಾನತೆ” ಕುರಿತು ಕಾವ್ಯಶ್ರೀ ಮಹಾಗಾವಂಕರ ಹಾಗೂ “ಶರಣರು ಪ್ರತಿಪಾದಿಸಿದ ಲಿಂಗಾಯತ ಧರ್ಮ” ಕುರಿತು ಸಿದ್ಧು ಯಾಪಕಪರವಿ ಮಾತನಾಡಿದರು.

ಆರಂಭದಲ್ಲಿ ಶಿವಸಂಚಾರದ ಹೆಚ್.ಎಸ್. ನಾಗರಾಜ್ ಹಾಗೂ ತಬಲಸಾಥಿ ಶರಣು ವಚನಗೀತೆಗಳನ್ನು ಹಾಡಿದರು. ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ. ಸುರೇಶ ಸ್ವಾಗತಿಸಿದರೆ, ಮಾರಬಘಟ್ಟದ ರುದ್ರಾಚಾರ್ ನಿರೂಪಿಸಿದರು.

ಕೊನೆಯಲ್ಲಿ ಸಾಣೇಹಳ್ಳಿ ಶಿವಕುಮಾರ ಕಲಾಸಂಘದ ಕಲಾವಿದರು ಉರಿಲಿಂಗ ಪೆದ್ದಿ ನಾಟಕ ಪ್ರದರ್ಶನ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *