ಬಾಗಲಕೋಟೆ
ದಲಿತ, ಸ್ತ್ರೀಕುಲೋದ್ಧಾರಕ, ವ್ಯಸನಮುಕ್ತ ಯುವ ಸಮಾಜ ಕನಸುಗಾರ, ಬಸವತತ್ವ ಪರಿಪಾಲಕರಾಗಿದ್ದ ಇಳಕಲ್ ಮಹಾಂತ ಸ್ವಾಮೀಜಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿನ ಸಿದ್ಧರಾಮೇಶ್ವರ ಮಹಾಸಂಸ್ಥಾನದಿಂದ ಶುಕ್ರವಾರ ಶರಣಬಸವ ಅಪ್ಪಗಳ ಆಶ್ರಮದಲ್ಲಿ ಜರುಗಿದ ಲಿಂಗೈಕ್ಯ ಮಹಾಂತ ಸ್ವಾಮೀಜಿಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾಂತ ಸ್ವಾಮೀಜಿ ನಮ್ಮ ಅಸ್ತಿತ್ವದ ಆಸ್ಮಿತೆಯಾಗಿದ್ದಾರೆ. ದಲಿತ ವಟುಗಳಿಗೆ ಸಂಸ್ಕಾರ ನೀಡಿ, ಶಾಖಾ ಮಠಗಳನ್ನು ನೀಡಿದ್ದಾರೆ. ಲಕ್ಷಾಂತರ ದಲಿತ ಜನಾಂಗದವರಿಗೆ ಲಿಂಗ ದೀಕ್ಷೆ ನೀಡಿ ಅವರಲ್ಲಿ ಧಾರ್ಮಿಕ ವೈಜ್ಞಾನಿಕತೆ, ವೈಚಾರಿಕತೆ, ನೈತಿಕತೆ ಹಾಗೂ ಬಸವಭಕ್ತಿಯ ಪ್ರಜ್ಞೆ ತುಂಬಿದ್ದಾರೆ ಎಂದರು.
ದಲಿತ ಮನೆಗಳಲ್ಲಿ ಪೂಜೆ, ಪ್ರಸಾದ ಸ್ವೀಕರಿಸಿ ಧಾರ್ಮಿಕ ಸಮಾನತೆ ಸಂದೇಶ ಸಾರಿದ್ದರು. ಜಾತ್ಯತೀತ ಭಾರತ ನಿರ್ಮಾಣಕ್ಕೆ ತಮ್ಮ ಮಠವೇ ಪ್ರಯೋಗಶಾಲೆ ಮಾಡಿ ಸರ್ವ ಸಮುದಾಯದವರಿಗೆ ಉಚಿತ ಪ್ರಸಾದ ನಿಲಯ ಪ್ರಾರಂಭಿಸಿ ಶಿಕ್ಷಣ ನೀಡಿದ್ದಾರೆ.
ಭೋವಿ, ಲಂಬಾಣಿ, ಮಾದಿಗ ಸಮುದಾಯಗಳಿಗೆ ಧರ್ಮಾಧಿಕಾರಿ ಮಾಡಿ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳಿದರು.
ಪ್ರವಚನಕಾರ ರಾಚಯ್ಯ ಶಾಸ್ತ್ರಿ, ಇಟಗಿ ಭೀಮಾಂಬಿಕೆ ತಾಯಿಯ ಬಾಲ್ಯ ಹಾಗೂ ಶಿಕ್ಷಣದ ಮಹತ್ವ ಕುರಿತು ಬೋಧನೆ ಮಾಡಿದರು. ಗವಾಯಿ ಮಹಾಂತೇಶ ಕರಡಕಲ್ ವಚನ ಹಾಡಿದರು.
ಧರ್ಮದರ್ಶಿಗಳಾದ ಸಂಗನ ಗೌಡರು, ಮಲ್ಲಿಕಾರ್ಜುನ ಕೋಲ್ಹಾರ, ವೀರಣ್ಣ ಕಲ್ಲೂರು, ಮರಿಯಪ್ಪ ಪಾತ್ರೋಟಿ, ಯಲ್ಲಪ್ಪ ಪಾತ್ರೋಟಿ, ಮಹೇಶ ಅಂಗಡಿ, ಯಂಕಣ್ಣ ಗೌಡರ, ಭೀಮಪ್ಪ ಕೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.