ಗಂಗಾವತಿ
ನಾಗರಿಕ ಸಮಾಜ ನಿಜಕ್ಕೂ ತಲೆತಗ್ಗಿಸುವಂತ ವಿಷಯ ಇದಾಗಿದೆ. ಮುಖ್ಯವಾಗಿ ಬಸವಾದಿ ಶರಣರ ತತ್ವವನ್ನು ಜೀವವಾಗಿಸಿಕೊಂಡು, ಆ ತತ್ವಗಳನ್ನು ಕರ್ನಾಟಕದ ಮೂಲೆ ಮೂಲೆಗೂ ಬಿತ್ತಿ ಬೆಳೆಸಿದ ಶ್ರೀ ಗುರುಮಲ್ಲೇಶ್ವರ ಸಂಪ್ರದಾಯದ ಮಠದಲ್ಲಿ ನಡೆದ ಈ ಘಟನೆಗೆ ಆ ಮಠ ಮತ್ತು ಗುರುಮಲ್ಲೇಶ್ವರರ ಭಕ್ತರು ಮತ್ತು ಸ್ವತಃ ಶ್ರೀ ಗುರು ಮಲ್ಲೇಶ್ವರರೇ ತಲೆ ತಗ್ಗಿಸುವಂತ ಘಟನೆ ನಡೆದಿರುವುದು ನಿಜಕ್ಕೂ ದುರಂತ.

ಯಾವ ಜಾತಿ ವ್ಯವಸ್ಥೆಯ ವಿರುದ್ದ ಬಂಡಾಯವೆದ್ದು, ಅಂದಿನ ವೈದಿಕ ಧರ್ಮದಿಂದ ಹೊರಬಂದು, ಒಂದು ಸ್ವತಂತ್ರ ಧರ್ಮವಾಗಿ ಹುಟ್ಟಿದ ಲಿಂಗಾಯತರಲ್ಲಿ ಇಂದು ಮತ್ತದೆ ಶ್ರೇಷ್ಠತೆಯ ವ್ಯಸನದ ಭೂತ ಹಿಡಿದಿರುವುದು ದುರಂತವೆ ಸರಿ.
“ಆ ಜಾತಿ ಈ ಜಾತಿಯವರೆನಬೇಡ ಹದಿನೆಂಟು ಜಾತಿಯೊಳಗಾವ ಜಾತಿಯಾದಾರೂ ಆಗಲಿ ಗುರು ಕಾರುಣ್ಯವ ಅಂಗದ ಮೇಲೆ ಲಿಂಗವ ಧರಿಸಿ ಪುನರ್ಜಾತರಾದ ಬಳಿಕ ಭಕ್ತರಾಗಲಿ ಜಂಗಮವಾಗಲಿ ಗುರುವಿನ ವೇಷವಿದ್ದವರ ಗುರುವೆಂದು ನಂಬಿ ದಾಸೋಹವ ಮಾಡೋದೆ ಸದಾಚಾರ “ವೆಂದ ಧರ್ಮದಲ್ಲಿ ಇಂದಿಗೂ ಆ ಜಾತಿ ವ್ಯಸನದಿಂದ ಲಿಂಗಾಯತರು ಮುಕ್ತರಾಗದಿರುವುದು ಬಸವ ದ್ರೋಹದ ಕೆಲಸ.
ಲಿಂಗಾಯತ ತತ್ವ ಅಪ್ಪಿ, ಒಪ್ಪಿಕೊಂಡು ಬಂದಂತಹ ಸಮುದಾಯಗಳು ಇಂದು ಅತಂತ್ರವಾಗಿದ್ದಾವೆ. ತತ್ವ ಒಪ್ಪಿ ಬಂದವರನ್ನು ಅಪ್ಪಿಕೊಳ್ಳದಿರುವ ಇಂದಿನ ಲಿಂಗಾಯತರ ಮನಸ್ಥಿತಿಗೇನೆನ್ನಬೇಕು ತಿಳಿಯದಾಗಿದೆ.
“ಆವ ಕುಲವಾದರೇನು ಲಿಂಗವಿದ್ದವನೆ ಕುಲಜನು ಕುಲವನರಸುವರೆ ಶರಣರಲ್ಲಿ ಜಾತಿಸಂಕರನಾದ ಬಳಿಕ ಒಕ್ಕುದ ಕೊಂಬೆನವರಲ್ಲಿ ಕೂಸ ಕೊಡುವೆ ಕೂಡಲಸಂಗಮದೇವ ನಂಬುವೆ ನಿಮ್ಮ ಶರಣರನು ” ಎನ್ನುವ ಬಸವಣ್ಣನ ಮಾತುಗಳು ಬರಿ ವೇದಿಕೆಯ ಮೇಲಿನ ಭಾಷಣದ ವಸ್ತುಗಳಾಗಿವೆ ಅನಿಸುತ್ತಿದೆ ಇಂದು. ತತ್ವ ಒಪ್ಪಿ ಬಂದ ತಳಸಮುದಾಯಗಳಲ್ಲಿ ಒಳಗೊಳ್ಳುವ ಪ್ರಕ್ರಿಯೆ ಇಂದಿನ ಲಿಂಗಾಯತರಿಗೆ ಆಗುತ್ತಿಲ್ಲ ಅಂದಾಗ, ಬಸವಣ್ಣ ಏನೂ ಇಂತವರ ಮನದಲ್ಲಿ ನೆಲೆಸಿರುವನೆ ಎಂಬ ಪ್ರಶ್ನೆ ಕಾಡದೆ ಇರದು.
ಇಂದು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಿಜಲಿಂಗ ಸ್ವಾಮಿಯ ಪೀಠ ತ್ಯಾಗದ ವಿಷಯ ತಿಳಿದಾಗ, ಈ ಶೋಷಣೆ ಖಾವಿಧಾರಿಗಳವರೆಗೆ ವಿಸ್ತರಿಸಿದ್ದು ನಾಚಿಕೆಗೇಡಿನ ವಿಷಯ. “ವಿಪ್ರ ಮೊದಲಾಗಿ ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲ ಒಂದೇ “ಎಂಬ ಧರ್ಮದಲ್ಲಿ ಪೂರ್ವಾಶ್ರಮದಿಂದ ಬೇರೆ ಧರ್ಮದವರಾಗಿ, ಬಸವತತ್ವಕ್ಕೆ ಆಕರ್ಷಣೆಯಾಗಿ ಬಸವತತ್ವವನ್ನು ಒಪ್ಪಿ ಆ ಸಿದ್ದಾಂತಗಳನ್ನು ಮೂಲೆ ಮೂಲೆಗೂ ಬಿತ್ತಿ ಬೆಳೆಯ ಬೇಕೆಂಬ ಹಂಬಲದಿಂದ ಶಹಾಪುರ ಗ್ರಾಮದ ಮಹಮ್ಮದ್ ನಿಸಾರ್ ನಿಜಲಿಂಗ ಸ್ವಾಮಿಯಾಗಿ ಲಿಂಗಾಯತನಾಗಿ ತತ್ವ ಬಿತ್ತುವ ಕೆಲಸಕ್ಕೆ ಇಂದು ಮತ್ತದೆ ಜಾತಿ ಕೋಮಿನ ಗ್ರಹಣ ಹಿಡಿದು ಅವರನ್ನು ಪೀಠ ತ್ಯಾಗ ಮಾಡುವಂತೆ ಮಾಡಿದ ವ್ಯವಸ್ಥೆಗೆ ನನ್ನದೊಂದು ಧಿಕ್ಕಾರ. ಹೀಗೆ ಎಲ್ಲಾ ಶರಣರನ್ನು ಎಲ್ಲಾ ಸಮುದಾಯವನ್ನು ಜಾತಿ ಕೋಮುವಿನ ಹೆಸರಲ್ಲಿ ವಿಭಜಿಸುತ್ತಾ ಹೋದರೆ ಲಿಂಗಾಯತಕ್ಕೆ ಅರ್ಥವೇನು?
ಇಂದೂ ನಿಜಲಿಂಗ ಸ್ವಾಮಿಯನ್ನು ಪೀಠತ್ಯಾಗ ಮಾಡುವಂತೆ ಮಾಡಿದ ಪಟ್ಟಭದ್ರ ವ್ಯವಸ್ಥೆ ಮುಂದೊಂದು ದಿನ ಮರುಳ ಶಂಕರದೇವರನ್ನು ಅನ್ಯ ಧರ್ಮದವರೆಂದು ಲಿಂಗಾಯತದಿಂದ ದೂರ ಮಾಡುವಂತ ಕುತಂತ್ರ ರೂಪಿಸಿದರು ಆಶ್ಚರ್ಯಪಡಬೇಕಿಲ್ಲ. ಹೀಗೆ ಎಲ್ಲಾ ಸಮುದಾಯಗಳ ಶರಣರನ್ನು ಜಾತಿ ಕಾರಣದಿಂದ, ಕೋಮು ಕಾರಣದಿಂದ ವಿಭಜಿಸುತ್ತಾ ಹೋದರೆ ಲಿಂಗಾಯತ ತನ್ನ ಅಸ್ಥಿತ್ವವನ್ನೆ ಕಳೆದುಕೊಂಡು ಬಿಡುತ್ತೆ. ಅಸ್ಥಿತ್ವ ಇಲ್ಲದ ಧರ್ಮ ಜೀವವಿಲ್ಲದ ಶವದಂತೆ ಎನ್ನುವ ವಾಸ್ತವ ಅರಿಯಬೇಕಿದೆ.
“ಹಡಪದ ಅಪ್ಪಣ್ಣ, ನೂಲಿಯ ಚೆಂದಯ್ಯಾ, ಡೋಹಾರ ಕಕ್ಕಯ್ಯ, ಮಾದಾರ ಚೆನ್ನಯ್ಯಾ, ಸಮಗಾರ ಹರಳಯ್ಯಾ, ಅಂಬಿಗರ ಚೌಡಯ್ಯಾ, ಮಡಿವಾಳ ಮಾಚಯ್ಯಾ ಇಂತಿ ಈ ಜನಸಾಮಾನ್ಯರು ಬಸವ ಚಳುವಳಿಯ ಶಕ್ತಿಗಳು ಕಲ್ಯಾಣ ಕ್ರಾಂತಿಯ ಕಿಡಿಗಳು .ಈ ಸತ್ಯ ತಿಳಿದ ಮರುದಿನವೆ ಬಸವ ಧರ್ಮ ವಿಶ್ವಧರ್ಮವೆಂದ ಕುಮಾರ ಕಕ್ಕಯ್ಯ ” ಶರಣ ಕಕ್ಕಯ್ಯ ಪೋಳ ಅವರ ಈ ವಚನ ಇಂದಿನವರಿಗೆ ಯಾಕೆ ಅರ್ಥವಾಗುತ್ತಿಲ್ಲ. ಈ ಕಾಯಕ ಸಮುದಾಯದ ಶರಣರೆಲ್ಲ ಲಿಂಗಾಯತವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಾಯಕ ಸಮುದಾಯದ ಶರಣರು ಕಲ್ಯಾಣ ಕ್ರಾಂತಿಯ ಕಿಡಿಗಳು ಬಸವ ಚಳುವಳಿಯ ಶಕ್ತಿಗಳು ಎನ್ನುವ ವಾಸ್ತವವನ್ನು ಒಪ್ಪಿಕೊಂಡು ಅವರನ್ನು ಅಪ್ಪಿಕೊಂಡು ಹೋಗುವ ಜವಾಬ್ದಾರಿತನ ಇಂದಿನ ಲಿಂಗಾಯತ ಸಮುದಾಯದ ಹೆಗಲ ಮೇಲಿದೆ.
ಈ ಭಾಗದಲ್ಲಿ ಜಾತೀಯತೆ ಬಹಳ ಇದೆ, ಸಂಧಾನ ಮಾಡಿಸುವುದು ಅಷ್ಟು ಸುಲಭವಲ್ಲ, ಒಂದು ವೇಳೆ ಅವರು ಮತ್ತೆ ಬಂದರೂ ಜಾತಿವಾದಿಗಳು ಅವರಿಗೆ ತೊಂದರೆ ಕೊಡಬಹುದು.
ಈ ಸಮಸ್ಯೆಯನ್ನು ಬಗೆಹರಿಸಲು ಲಿಂಗಾಯತ ಮಠಾಧೀಶರ ಒಕ್ಕೂಟವು ಮಧ್ಯಪ್ರವೇಶ ಮಾಡುವುದು ಅನಿವಾರ್ಯ