ಸೆಪ್ಟೆಂಬರ್ 1 ಅಭಿಯಾನದ ಚಾಲನೆ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ

ಮಂಜು ಕಲಾಲ
ಮಂಜು ಕಲಾಲ

ಬಸವನಬಾಗೇವಾಡಿ

ಪಟ್ಟಣದ ನಂದೀಶ್ವರ ರಂಗಮಂದಿರದಲ್ಲಿ ಭಾನುವಾರ ಸಂಜೆ ಬಸವ ಸಂಸ್ಕ್ರತಿ ಅಭಿಯಾನದ ಚಾಲನೆ ಕುರಿತಂತೆ ಪೂರ್ವಭಾವಿ ಸಭೆ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಇಡೀ ಜಗತ್ತಿಗೆ ಬಸವ ಸಂಸ್ಕ್ರತಿ ತುಂಬಾ ಅಗತ್ಯವಿದೆ. ಅಭಿಯಾನದ ಚಾಲನೆ ಕಾರ್ಯಕ್ರಮದ ಜವಾಬ್ದಾರಿ ಬಸವನಬಾಗೇವಾಡಿ ಮೇಲಿದೆ. ಇದರ ಯಶಸ್ಸಿಗೆ ನಾನು ಬದ್ಧ. ಎಲ್ಲ ಜನರ ಸಹಕಾರವು ಮುಖ್ಯವಾಗಿದೆ. ತಮ್ಮೆಲ್ಲರ ಪರವಾಗಿ ಕಾರ್ಯಕ್ರಮದ ಯಶಸ್ವಿಗೊಳಿಸುವುದಾಗಿ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಹೇಳಿದರು.

ಬಸವೇಶ್ವರರ ವಿಚಾರಗಳು ಕೇವಲ ಪಠ್ಯಪುಸ್ತಕಕ್ಕೆ, ಪತ್ರಿಕೆಗೆ ಸಿಮೀತವಾಗಬಾರದು. ಇವರ ವಿಚಾರಗಳು ಇಡೀ ವಿಶ್ವಕ್ಕೆ ಮುಟ್ಟುವಂತಾಗಬೇಕೆಂದು ಸಿಎಂ ಸಿದ್ದರಾಮಯ್ಯನವರಿಗೆ, ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ನಾನು ಮೂರು ಸಲ ಪತ್ರ ನೀಡಿದ್ದೇನೆ. ಕಾಗಿನೆಲೆ, ಹೇಮರೆಡ್ಡಿ, ಕೆಂಪೇಗೌಡ ಅವರಿಗೆ ಸರ್ಕಾರ ನೂರಾರು ಕೋಟಿ ಅನುದಾನ ನೀಡುತ್ತದೆ. ಜಾತ್ಯತೀತ ಸಮಾಜ ನಿರ್ಮಿಸಿದ, ಜಾತಿ ರಹಿತ ಸಮಾಜ ಸೃಷ್ಟಿಸಲು ಶ್ರಮಿಸಿದ ಬಸವೇಶ್ವರರ ಪರವಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಬೇಕಿದೆ ಎಂದರು.

ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ನಾಗನೂರಿನ ಪೂಜ್ಯ ಅಲ್ಲಮಪ್ರಭು ಸ್ವಾಮೀಜಿ ಬಸವ ಜನಿಸಿದ ಬಸವನಬಾಗೇವಾಡಿಯಿಂದ ಸೆ.೧ ರಂದು ಅಭಿಯಾನದಂಗವಾಗಿ ಬಸವ ರಥಕ್ಕೆ ಚಾಲನೆ ನೀಡಲಾಗುವದು. ಅಭಿಯಾನದ ಚಾಲನೆ ಕಾರ್ಯಕ್ರಮವನ್ನು ಎಲ್ಲರೂ ಸೇರಿಕೊಂಡು ಯಶಸ್ವಿಗೊಳಿಸಬೇಕೆಂದು

ಅವರು, ಕಳೆದ ವರ್ಷ ರಾಜ್ಯ ಸರ್ಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡಿದೆ. ಈ ಘೋಷಣೆ ಕೇವಲ ಆದೇಶದಲ್ಲಿ ಮಾತ್ರ ಉಳಿಯಬಾರದು ಎಂಬ ಉದ್ದೇಶವಿಟ್ಟುಕೊಂಡು ಮಠಾಧಿಪತಿಗಳ ಒಕ್ಕೂಟದ ಎಲ್ಲ ಮಠಾಧೀಶರರು ಸಭೆ ಸೇರಿ ಬಸವ ಸಂಸ್ಕ್ರತಿ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದರು.

ಈ ಅಭಿಯಾನವು ಬಾಲ್ಕಿಯ ಪಟ್ಟದ್ದೇವರು ನೇತೃತ್ವದಲ್ಲಿ ಸುಮಾರು ೧೦೦ಕ್ಕೂ ಹೆಚ್ಚಿನ ಮಠಾಧೀಶರರ ಸಮ್ಮುಖದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ತೆರಳಲಿದೆ. ಎಲ್ಲ ಜನತೆ ಸೇರಿಕೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.

ಅಥಣಿ ಮೋಟಗಿಮಠದ ಪೂಜ್ಯ ಚನ್ನಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ರಾಜ್ಯದ ಸಾಂಸ್ಕ್ರತಿಕ ನಾಯಕರಷ್ಟೇ ಅಲ್ಲ ವಿಶ್ವದ ಸಾಂಸ್ಕ್ರತಿಕ ನಾಯಕರಾಗಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮಠಾಧೀಶರರು ಸಭೆ ಸೇರಿ ಈ ಅಭಿಯಾನ ಹಮ್ಮಿಕೊಳ್ಳುವ ಸಂಕಲ್ಪ ಮಾಡಲಾಯಿತು.

ಅಭಿಯಾನವು ಬಸವಣ್ಣನವರು ಜನಿಸಿದ ಬಸವನಬಾಗೇವಾಡಿಯಿಂದಲೇ ಆರಂಭವಾಗಬೇಕೆಂದು ಎಲ್ಲ ಮಠಾಧೀಶರರು ಒಮ್ಮತದಿಂದ ನಿರ್ಧಾರ ಮಾಡಿದ್ದರಿಂದ ಸೆ.೧ ರಂದು ಈ ಅಭಿಯಾನವು ಇಲ್ಲಿಂದ ಚಾಲನೆ ಆಗುತ್ತಿದೆ. ಎಲ್ಲರೂ ಗಟ್ಟಿಯಾಗಿ ನಿಂತುಕೊಂಡು ಅಭಿಯಾನದ ಚಾಲನೆ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಮಾಡುವ, ಜೊತೆಗೆ ಇಡೀ ವಿಶ್ವವೇ ಈ ನೆಲದ ಕಡೆಗೆ ನೋಡುವಂತೆ ಮಾಡಬೇಕೆಂದರು.

ಸ್ಥಳೀಯ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವನಬಾಗೇವಾಡಿ ಪಟ್ಟಣಕ್ಕೆ ಬಸವ ಸಂಸ್ಕ್ರತಿ ಅಭಿಯಾನವು ಮಹತ್ವದ ಕಾರ್ಯಕ್ರಮವಾಗಿದೆ. ಅಭಿಯಾನದ ಚಾಲನೆ ಕಾರ್ಯಕ್ರಮ ಯಶಸ್ವಿಗೊಳಿಸಿದರೆ ಇಡೀ ವಿಶ್ವಕ್ಕೆ ಉತ್ತಮ ಸಂದೇಶ ಹೋಗುತ್ತದೆ. ಅಭಿಯಾನದ ಚಾಲನೆ ಕಾರ್ಯಕ್ರಮಕ್ಕೆ ನಾಡಿನ ಪ್ರತಿಷ್ಠಿತ ಮಠಗಳ ಮಠಾಧಿಪತಿಗಳು ಸೇರಿದಂತೆ ೪೦೦ಕ್ಕೂ ಹೆಚ್ಚು ಶ್ರೀಗಳು ಆಗಮಿಸುತ್ತಿದ್ದಾರೆ. ಇದರೊಂದಿಗೆ ಸಾಕಷ್ಟು ಜನರು ಭಾಗಿಯಾಗುತ್ತಾರೆ. ಶ್ರೀಗಳಿಗೆ, ಪ್ರಮುಖ ಜನರಿಗೆ ವಸತಿ, ವಾಸ್ತವ್ಯ ಮಾಡುವ ಅಗತ್ಯವಿದೆ. ಸೆ.೧ ರಂದು ನಿರಂತರ ದಾಸೋಹ ನಡೆಯಬೇಕು. ಈ ಕಾರ್ಯಕ್ರಮದ ಯಶಸ್ವಿಗೆ ಮುಂಬರುವ ದಿನಗಳಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯಕ್ರಮದ ಯಶಸ್ವಿಗೊಳಿಸಬೇಕಿದೆ. ಆ.೧೭ ರಂದು ಇದೇ ಸ್ಥಳದಲ್ಲಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಮತ್ತೊಂದು ಪೂರ್ವಭಾವಿ ಸಭೆ ಸಂಜೆ ೪ ಗಂಟೆಗೆ ನಡೆಯಲಿದೆ ಎಂದರು.

ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸನಗೌಡ ಹರನಾಳ, ರೈತ ಮುಖಂಡ ಅರವಿಂದ ಕುಲಕರ್ಣಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಇತರರು ಮಾತನಾಡಿದರು.

ಸಭೆಯಲ್ಲಿ ವಿ.ಬಿ. ಮರ್ತುರ, ಬಸವರಾಜ ನಾಲತವಾಡ, ಶಿವನಗೌಡ ಬಿರಾದಾರ, ಎಂ,ಬಿ. ತೋಟದ, ರಾಜು ಗಣಾಚಾರಿ, ಸಾವಿತ್ರಿ ಕಲ್ಯಾಣಶೆಟ್ಟಿ, ಬಸಮ್ಮ ಹಂಜಗಿ ಇತರರು ಸಲಹೆ ಸೂಚನೆ ನೀಡಿದರು.

ಸಭೆಯಲ್ಲಿ ಚನ್ನಬಸವ ಸ್ವಾಮೀಜಿ, ಸಿದ್ದರಾಮ ಸ್ವಾಮೀಜಿ, ಎಫ್.ಡಿ. ಮೇಟಿ, ಸಂಗಮೇಶ ಓಲೇಕಾರ, ಸುರೇಶ ಹಾರಿವಾಳ, ಜಗದೀಶ ಪಾಟೀಲ, ಜಗದೇವಿ ಗುಂಡಳ್ಳಿ ಇತರರು ಇದ್ದರು.

ರವಿ ರಾಠೋಡ ಸ್ವಾಗತಿಸಿದರು. ಶಂಕರಗೌಡ ಬಿರಾದಾರ ನಿರೂಪಿಸಿದರು. ಎಂ.ಜಿ. ಆದಿಗೊಂಡ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *