ಸ್ವಯಂ ದಾಸೋಹದಿಂದ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಕರೆ

ಬೆಳಗಾವಿ

ಸೋಮವಾರ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ತಾಲೂಕಾ ಮಟ್ಟದ ಸಭೆಯನ್ನು ಶ್ರೀ ನಿಜಗುಣಿ ಶಿವಯೋಗಿಶ್ವರ ಮಠದಲ್ಲಿ ಅಭಿಯಾನದ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.

ಸಭೆಯ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಾಗತಿಕ ಲಿಂಗಾಯತ ಮಹಾಸಭೆಯ ತಾಲೂಕಾ ಅಧ್ಯಕ್ಷರಾದ ಬಿ.ಜಿ. ವಾಲಿಇಟಗಿ, “ವಿಶ್ವಗುರು ಬಸವಣ್ಣನವರನ್ನು ಸರ್ಕಾರ ʼಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿ ಒಂದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮುಂದಾಳತ್ವದಲ್ಲಿ ನಾಡಿನ ಎಲ್ಲ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 11ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಭಿಯಾನದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು” ಕರೆಕೊಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರು ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜ ರೊಟ್ಟಿಯವರು ಮಾತನಾಡಿ, “ಶರಣರ ವೇಷಭೂಷಣ, ಮೆರವಣಿಗೆ, ಜಾನಪದ ಕಲಾಪ್ರದರ್ಶನ, ನಾಟಕ, ಸಂವಾದ ಸೇರಿದಂತೆ ವೇದಿಕೆ ಕಾರ್ಯಕ್ರಮಗಳಿರುತ್ತವೆ. ಜಿಲ್ಲೆಯ ಬಸವ ಭಕ್ತರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಕುರಿತಾಗಿ ಅಡವೇಶ ಇಟಗಿ ಹಾಗೂ ಸುರೇಶ ಇಟಗಿ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಪ್ರಚಾರ ಹಾಗೂ ನಿರಂತರವಾಗಿ ಪೂರ್ವಭಾವಿ ಸಭೆಗಳನ್ನು ನಡೆಸಿ ಪಕ್ಷಾತೀತವಾಗಿ ಶ್ರಮಿಸುತ್ತೇವೆಂದರು.

ಸಾನಿಧ್ಯ ವಹಿಸಿದ್ದ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, “ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಬಸವ ಭಕ್ತರೆಲ್ಲರೂ ತನು ಮನ ಧನದಿಂದ ಸೇವೆಯನ್ನು ನೀಡಬೇಕು. ಬಸವಾದಿ ಶಿವಶರಣರ ಆಶಯದಂತೆ ನಾವೆಲ್ಲರೂ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದರು, ನಾಡಿನಲ್ಲಿ ಕಾಯಕ ಸಂಸ್ಕೃತಿ ಅಚ್ಚುಗೊಂಡಿದ್ದು, ಸಮಾಜದಲ್ಲಿ ಸ್ವಯಂಪ್ರೇರಿತ ದಾಸೋಹ ಸಂಸ್ಕೃತಿಯನ್ನು ಬೆಳೆಸುವ ಅನಿವಾರ್ಯತೆ ಇದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಮಠದ ನಿಜಗುಣ ದೇವರು ಸಾನಿಧ್ಯ ವಹಿಸಿಕೊಂಡಿದ್ದರು. ಅಶೋಕ ಮಳಗಲಿ, ಮುರಿಗೆಪ್ಪ ಬಾಳಿ, ಜಯಶ್ರೀ ಜಪ್ತಿ, ಉಪಸ್ಥಿತರಿದ್ದರು. ಜಾಗತಿಕ ಲಿಂಗಾಯತ ಮಹಾಸಭಾ, ಗುರು ಬಸವ ಬಳಗ, ನಿಜಗುಣಿ ಶಿವಯೋಗಿ ಸೇವಾ ಸಮಿತಿ, ಮತ್ತಿತರ ಬಸವಪರ ಸಂಘಟನೆಗಳ ಮುಖಂಡರು, ಸದಸ್ಯರು, ಗ್ರಾಮದ ಗುರುಹಿರಿಯರು ಪಾಲ್ಗೊಂಡಿದ್ದರು.

ಶಿವಯೋಗಿ ಬೋಡ್ಕಿ ಸ್ವಾಗತಿಸಿದರು, ಪಾರ್ವತಿ ಮಠಪತಿ ಪ್ರಾರ್ಥಿಸಿದರು, ಶರಣು ಸಮರ್ಪಣೆಯನ್ನ ಎನ್.ಎಫ್. ಉಪ್ಪಿನ ನಡೆಸಿಕೊಟ್ಟರು, ಶಿಕ್ಷಕರಾದ ಪ್ರವೀಣ ರೊಟ್ಟಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.