ಅಭಿಯಾನ ಪೂರ್ವಸಭೆಯಲ್ಲಿ ‘ಲಿಂಗಾಯತ’ ಬರೆಸಲು ಸೂಚನೆ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ಮುಂದಿನ ದಿನಗಳಲ್ಲಿ ನಡೆಯಲಿರುವ ಜಾತಿ ಗಣತಿಯಲ್ಲಿ ಎಲ್ಲರೂ ಸಹ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದೇ ಬರೆಸಬೇಕು. ಜಾತಿ ಕಾಲಂನಲ್ಲಿ ಆಯಾ ಉಪಪಂಗಡಗಳ ಹೆಸರನ್ನು ಬರೆಸುವಂತೆ ಸಾಣೇಹಳ್ಳಿಯ ಪೂಜ್ಯ ಡಾ. ಪಂಡಿತಾರಾಧ್ಯ ಶ್ರೀಗಳು ಸಲಹೆ ನೀಡಿದರು.

ಅವರು ಸೆಪ್ಟೆಂಬರ್ 15 ರಂದು ದಾವಣಗೆರೆಯಲ್ಲಿ ನಡೆಯಲಿರುವ ‘ಬಸವ ಸಂಸ್ಕೃತಿ ಅಭಿಯಾನ’ದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯ ವಹಿಸಿ, ಅಭಿಯಾನದ ಉದ್ದೇಶ ಹಾಗೂ ಅಭಿಯಾನದ ರೂಪುರೇಷೆ ವಿವರಿಸಿದರು. ಆಗ ಸಭಿಕರು ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಹೇಳಿದರು.

ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಇಲ್ಲದಿದ್ದರೆ ಎಂದು ಇನ್ನೊಬ್ಬ ಸಭಿಕರ ಪ್ರಶ್ನೆಗೆ, ಮುಂದಿನ ದಿನಗಳಲ್ಲಿ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ತಿಳಿಸಲಾಗುವುದು ಎಂದರು.

ಮುಂದುವರೆದು ಮಾತನಾಡಿದ ಅವರು ಬಸವ ಸಂಸ್ಕೃತಿ ಅಭಿಯಾನ ಸಂದರ್ಭದಲ್ಲಿ ವಿವಿಧ ಮಠಾಧೀಶರು ಭಾಗವಹಿಸುವರು, ಅವರಿಗೆ ವಸತಿ ಸೌಲಭ್ಯ, ಪ್ರಸಾದ ವ್ಯವಸ್ಥೆ, ಸೇರಿದಂತೆ ಎಲ್ಲಾ ಕಾರ್ಯ ವ್ಯವಸ್ಥೆ ಬಗ್ಗೆ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜೊತೆಗೆ ಸಂವಾದ, ಮೆರವಣಿಗೆ ಬಗ್ಗೆ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಸಾನಿಧ್ಯ ವಹಿಸಿದ್ದ ಮತ್ತೋರ್ವ ಪೂಜ್ಯರಾದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ರಾಜ್ಯದಲ್ಲಿಯೇ ಮಾದರಿಯಾಗಿ ನಮ್ಮ ಜಿಲ್ಲೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಯಲಿದೆ ಎಂದರು.

ಸಾನಿಧ್ಯ ವಹಿಸಿದ್ದ ಪಾಂಡೊಮಟ್ಟಿ ಕಂಬತ್ತಳ್ಳಿ ವಿರಕ್ತಮಠದ ಡಾ. ಗುರುಬಸವ ಸ್ವಾಮಿಗಳು, ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಸಲಹೆಗಳನ್ನು ನೀಡಿದರು.

ಸಭೆಯ‌ ಅಧ್ಯಕ್ಷತೆ ವಹಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಅಣಬೇರು ರಾಜಣ್ಣ ಅವರು, ಎಲ್ಲಾ ಭೇದಗಳನ್ನು ಮರೆತು ಒಗ್ಗಟ್ಟಿನಿಂದ ಹೋದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ನಾವು ಮಾಡುವ ಉಪಕಾರ ಎಂದರು.

ವಚನ ಸಂವಾದದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವಚನ ಪುಸ್ತಕ ದಾಸೋಹ ಮಾಡುವುದಾಗಿ ಲಿಂಗಾನಂದ ಕಮ್ಮತ್ತಳ್ಳಿ ತಿಳಿಸಿದರು.

ಸಭೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಮಿತಿ ಗೌರವಾಧ್ಯಕ್ಷರಾದ ಅಥಣಿ ವೀರಣ್ಣನವರು ಸೇರಿದಂತೆ ಬಸವ ಸಂಸ್ಕೃತಿ ಅಭಿಯಾನದ ವಿವಿಧ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ತು, ಬಸವ ಬಳಗದ ಅಧ್ಯಕ್ಷರಾದ ಹುಚ್ಚಪ್ಪ ಮಾಸ್ತರು ಸೇರಿದಂತೆ ಬಸವ ಬಳಗದ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶರಣ ಮಂಜುನಾಥ ಕುರ್ಕಿ, ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು, ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಐಗೂರು ಚಂದ್ರಶೇಖರಪ್ಪ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಪದಾಧಿಕಾರಿಗಳು, ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *