ಕಾಲಂಗುಟೆ
ಗೋವಾ ಇಲ್ಲಿನ ನೀಲಮ್ಸ್ ಗ್ರ್ಯಾಂಡ್ ಕಾಲಂಗುಟೆ ಸಭಾಂಗಣದಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಅರಿವು, ಸಂಘಟನೆ, ಅನುಷ್ಠಾನ ಕುರಿತು ಎರಡನೆಯ ದಿನದ ವಿಚಾರ ಸಂಕಿರಣ ಸೋಮವಾರ ನಡೆಯಿತು.
ಸಾನ್ನಿಧ್ಯ ವಹಿಸಿ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ; ಬಸವಣ್ಣನವರು ಎಲ್ಲೂ ಮೇಲು ಎಂದು ಭಾವಿಸಿದವರಲ್ಲ. ಕೀಳಾಗಿ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಹುಟ್ಟಿನ ಮೂಲವನ್ನು ನಿರಾಕರಿಸಿ ಅಪವರ್ಗೀಕರಣ ಮಾಡಿಕೊಳ್ಳುವುದರ ಮೂಲಕ ಇಡೀ ಸಮಾಜವನ್ನು ಎತ್ತಿಹಿಡಿಯುವ ಕೆಲಸ ಮಾಡಿದರು.
ಪರಧನ, ಪರಸ್ತ್ರೀಯ ಮೋಹವನ್ನು ಬಿಟ್ಟು, ಏಕದೇವನಿಷ್ಠೆಯ ತತ್ವಗಳನ್ನು ಸಾಕಾರಗೊಳಿಸಿಕೊಂಡರೆ ಆಗ ಲಿಂಗಾಯತ ಧರ್ಮ ಸ್ವತಂತ್ರದ ಮಾನ್ಯತೆಗೆ ಬೇಡುವಂಥ ಅವಶ್ಯಕತೆಯಿಲ್ಲ. ನಮ್ಮಲ್ಲಿ ಅಜ್ಞಾನ, ಮೂಢನಂಬಿಕೆ, ಪರಂಪರೆಯ ಕತ್ತಲೆ ಆವರಿಸಿಕೊಂಡಿದೆ. ಅಂತಹ ಕತ್ತಲನ್ನು ತನ್ನ ಅರಿವಿನ ಮೂಲಕ ಕಳೆದುಕೊಳ್ಳಬೇಕು. ಸತ್ಯ ಎನ್ನುವುದು ಸಂಪ್ರದಾಯವಾದಿಗಳಿಗೆ ಹಿಡಿಸದು. ಸತ್ಯ ಹೇಳುವುದಕ್ಕೆ ಯಾವುದಕ್ಕೂ ಅಂಜದೇ, ಅಳುಕದೇ ಬಸವಣ್ಣನೆಂಬ ಆನೆಯ ಮೇಲೆ ಹೋಗುವಾಗ ನಾಯಿಗಳು ಬೊಗಳಿದರೆ ಅವುಗಳಿಗೆ ಬೆದರದೇ, ಬೆಚ್ಚದೇ ಮುನ್ನಗ್ಗಬೇಕು ಎಂದರು.

‘ಲಿಂಗಾಯತ ಧರ್ಮದ ನೆಲೆ’ ಕುರಿತು ಮಾತನಾಡಿದ ಚಿಂತಕ ಬಸವರಾಜ ಸಾದರ ಮಾತನಾಡಿ; ಲಿಂಗಾಯತ ಸ್ವತಂತ್ರ ಧರ್ಮ ಎನ್ನುವ ವಿಷಯ ಬಹಳ ವರ್ಷಗಳಿಂದ ಇರುವಂಥದ್ದು. ಆದರೆ ಅದಕ್ಕೆ ಅಂತಿಮ ತೀರ್ಮಾನ ಇನ್ನು ಆಗದೇ ಇರುವುದು ದುರದೃಷ್ಟಕರ.
ಸಂವಿಧಾನದ ಉದ್ದೇಶ ಸ್ವಾತಂತ್ರ್ಯ ಸಮಾನತೆ, ಸಹೋದರತ್ವ, ನ್ಯಾಯ. ಆದರೆ ಕರ್ನಾಟಕದ ಬಸವ ಪರಂಪರೆಯಲ್ಲಿ ಗೆದ್ದು ಆಯ್ಕೆಯಾದ ಲೋಕಸಭಾ ಸದಸ್ಯರು ಲಿಂಗಾಯತ ಸ್ವತಂತ್ರ ಧರ್ಮ ಇದ್ದರೂ ಮತಬ್ಯಾಂಕ್ಗಾಗಿ ಅದರ ಚಕಾರು ಎತ್ತದೇ ಬಾಯಿ ಮುಚ್ಚಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಬಸವಣ್ಣನವರು ಸ್ವಧರ್ಮವನ್ನು ತಿರಸ್ಕರಿಸಿ ಹೊರಗೆ ಬಂದ ದಿನದಂದೇ ಲಿಂಗಾಯತ ಧರ್ಮ ಹುಟ್ಟಿದ್ದು.
ಪ್ರಶ್ನಿಸುವುದು, ಪ್ರತಿಕ್ರಿಯಿಸುವುದು, ನಿರಾಕರಣೆಯ ಮೂಲಕ ಲಿಂಗಾಯತ ಧರ್ಮವನ್ನು ಕಟ್ಟಿಕೊಟ್ಟರು. ಆಧುನಿಕ ಸಂವಿಧಾನದ ಪರ್ಯಾಯವಾಗಿ ಅವತ್ತೇ ಒಂದು ಸಂವಿಧಾನವನ್ನು ಶರಣರು ಕೊಟ್ಟರು.
ಸತ್ಯದ ನಿಲುವನ್ನು ಅರಿಯದೇ ಪರಂಪರೆಯ ದುಷ್ಟಶಕ್ತಿಗಳನ್ನು ದೂರತಳ್ಳಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ೧೦ ಸಾವಿರ ಪ್ರಶ್ನೆಗಳನ್ನು ವಚನಗಳಲ್ಲಿ ಶರಣರು ಸೃಷ್ಟಿಸಿದರು. ಅದಕ್ಕೆ ಉತ್ತರವನ್ನು ಕಂಡುಕೊಂಡಿದ್ದರು.
ವಚನಸಾಹಿತ್ಯ ಭಾಷಿಕ ಹಾಗೂ ಧಾರ್ಮಿಕ ನೆಲೆಯಲ್ಲಿ ಅಷ್ಟೇ ಅಲ್ಲ; ಕ್ರಾಂತಿಯ ನೆಲೆಯಲ್ಲಿ ಹುಟ್ಟಿಕೊಂಡ ಸಾಹಿತ್ಯ. ಶರಣರು ವಚನಗಳು ಲೌಕಿಕ ಹಾಗೂ ಆನುಭಾವಿಕಕ್ಕೂ ಉತ್ತರ ಕೊಡುತ್ತವೆ.
ಬಸವಣ್ಣ ಅಪರಾಧಿಗಳನ್ನು ಜೈಲಿಗೆ ಹಾಕದೇ ಮನಃಪರಿವರ್ತನೆಗೆ ಅವಕಾಶ ಮಾಡಿಕೊಡುವರು. ಮನುಸ್ಮೃತಿಯಲ್ಲಿ ಹೆಣ್ಣಿನ ಬಗ್ಗೆ ತುಂಬಾ ನಿಕೃಷ್ಠವಾಗಿ ಬರೆಯುವನು. ಆದರೆ ವಚನ ಸಾಹಿತ್ಯದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ ಕೊಟ್ಟಿದ್ದು ೧೨ನೆಯ ಶತಮಾನ. ೧೨ನೆಯ ಶತಮಾನದ ಶರಣರು ಸತ್ಯದ ನಿಲುವುಗಳನ್ನು ಅರಿತಿದ್ದರು. ಬಸವಣ್ಣ ಅಪವರ್ಗೀಕರಣಗೊಳಿಸಿಕೊಂಡು ಅವರೊಂದಿಗೆ ಸಮೀಕರಿಸಿಕೊಂಡು ದೊಡ್ಡ ಕ್ರಾಂತಿಯನ್ನುಂಟು ಮಾಡಿದರು.
ನಮ್ಮಲ್ಲಿ ಮಾಡಿ ತೋರಿಸಲಾಗದೇ ಇರುವ ಸಿದ್ಧಾಂತಗಳನ್ನು ಹೇಳಿದ್ದಾರೆ. ಆದರೆ ೧೨ನೆಯ ಶತಮಾನದ ಶರಣರು ಸಿದ್ಧಾಂತಗಳನ್ನು ಹೇಳಿ ಸಾಧಿಸಿ ತೋರಿಸಿದ್ದಾರೆ. ಈ ಸೃಷ್ಟಿ ಸಂಪತ್ತು ಬ್ರಾಹ್ಮಣ ಎಂದು ಮನು ಬರೆಯುವನು. ಶರಣರು ಬಯಲು ಧರ್ಮವನ್ನು ಸ್ಥಾಪಿಸಿದರು. ಬಯಲು ತತ್ವದಡಿಯಲ್ಲಿ ಎಲ್ಲರೂ ಜೀವಿಸುವ ಹಕ್ಕು ಇದೆ. ಶರಣರ ಸಾಮಾಜಿಕ ಚಿಂತನೆಯಲ್ಲಿ ವೈಜ್ಞಾನಿಕ ಚಿಂತನೆಗಳಿದ್ದವು. ಸಮಾನತೆಯ ನೆಲೆಯಲ್ಲಿ ಕಾಣದೇ ಹೆಚ್ಚು ನೀಡಿದರೆ ಅದನ್ನು ಹೇಸಿಗೆ ಎಂದು ಭಾವಿಸಿಕೊಂಡಿದ್ದರು. ಶರಣರು ಸಣ್ಣವರೆಂದು ಭಾವಿಸಿದ್ದರಿಂದಲೇ ದೊಡ್ಡ ವ್ಯಕ್ತಿಗಳಾಗಿದ್ದರು.
ನೊಂದವರು, ಬೆಂದವರು, ಶೋಷಿತರನ್ನು ಅಪ್ಪಿ, ಒಪ್ಪಿ ಸಮಾನತೆಯನ್ನು ಕೊಟ್ಟರು. ಶರಣರು ಶ್ರಮಕ್ಕೆ ಸಮಾನವಾದ ಆದಾಯವನ್ನು ಮಾತ್ರ ನಿರೀಕ್ಷಿಸುತ್ತಿದ್ದರು. ಶರಣರು ಶರೀರವನ್ನು ಗುಡಿಯನ್ನಾಗಿ ಮಾಡಿಕೊಂಡು ಅರಿವನ್ನೇ ದೇವರನ್ನು ಮಾಡಿಕೊಂಡರು. ಆಗ ಕಾಯವೇ ಕೈಲಾಸವಾಗುವುದು.
ಸಿರಿಗೆರೆಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಬಸವಣ್ಣನವರನ್ನು ‘ಗೃಹಸ್ಥ ಜಗದ್ಗುರು’ ಎನ್ನುವರು. ಬಸವಣ್ಣನವರು ಸಂಸಾರದಲ್ಲಿದ್ದುಕೊಂಡೇ ಇಡೀ ಜಗತ್ತಿಗೆ ಜಗದ್ಗುರುಗಳಾದರು. ಜಗತ್ತಿನ ಎಲ್ಲ ಧರ್ಮಗಳು ನೆತ್ತಿಯ ಬಗ್ಗೆ ಮಾತನಾಡಿವೆ. ಆದರೆ ಕಾಯಕ ಬಗ್ಗೆ ಹೇಳಿದ್ದು ಲಿಂಗಾಯತ ಧರ್ಮ. ನೆತ್ತಿಯ ಹಸಿವಿಗಿಂತ ಹೊಟ್ಟೆಯ ಹಸಿವು ಮುಖ್ಯ ಎಂದು ಅರಿತು ಕಾಯಕ ಮಾಡಬೇಕೆಂದರೆ ನೆತ್ತಿಯ ಹಸಿವಿಗಾಗಿ ಲಿಂಗ ಪೂಜೆಯ ಮಾಡಬೇಕು ಎಂದರು. ತತ್ವಗಳ ಆಚರಣೆಯಲ್ಲಿ ಕಷ್ಟಗಳಿಲ್ಲ. ಅದಕ್ಕೆ ಮನಸ್ಸು ಇರಬೇಕು. ಶರಣರು ನಡೆ ನುಡಿಯನ್ನು ಒಂದಾಗಿಸಿಕೊಂಡಿದ್ದರು ಎಂದರು.

ಲಿಂಗಾಯತ ಧರ್ಮ-ಸಂವಿಧಾನದ ಮಾನ್ಯತೆ ಕುರಿತು ಸಾಹಿತಿ ಎಸ್ ಜಿ ಸಿದ್ಧರಾಮಯ್ಯ ಮಾತನಾಡಿ; ವಚನಗಳು ಸಹ ಉತ್ಪನ್ನಗಳು. ಧರ್ಮದ ಪಠ್ಯಗಳು. ಬಸವಣ್ಣನವರ ವಚನಗಳೆಲ್ಲಾ ನೋಡಿದರೆ ಅದೊಂದು ಆತ್ಮಕತೆ. ಸಮುದಾಯದ ಕಥನ, ಧರ್ಮದ ಕಥನ. ವಚನಗಳಿಗೆ ಒಂದು ಶಕ್ತಿ ಇದೆ. ವಚನಗಳನ್ನು ಸಾಹಿತ್ಯಿಕ ದೃಷ್ಟಿಯಿಂದ ನೋಡುವುದಕ್ಕಿಂತ ಬೇರೆ ಬೇರೆ ಆಯಾಮಗಳಲ್ಲಿ ನೋಡಿ, ಅಧ್ಯಯನ ಮಾಡಿ, ಅನುಷ್ಠಾನಕ್ಕೆ ತರಬೇಕು.
ಲಿಂಗಾಯತ ಧರ್ಮ ಇನ್ನು ಸಂವಿಧಾನದ ಮಾನ್ಯತೆ ಇನ್ನು ಯಾಕೆ ಸಿಕ್ಕಿಲ್ಲ? ಎನ್ನುವುದನ್ನು ಪ್ರತಿಯೊಬ್ಬರು ಪ್ರಶ್ನೆ ಹಾಕಿಕೊಳ್ಳಬೇಕು. ಇದಕ್ಕೆ ಉತ್ತರ ವಚನಗಳಲ್ಲೇ ಸಿಗುತ್ತದೆ. ಲಿಂಗಾಯತ ಧರ್ಮ ಇನ್ನಿತರ ಧರ್ಮಕ್ಕಿಂತ ಹೇಗೆ ಭಿನ್ನ ಎನ್ನುವುದನ್ನು ಅರಿಯಬೇಕಾದರೆ ವಚನಗಳನ್ನು ನೋಡಬೇಕಾಗುತ್ತದೆ. ಚರಿತ್ರೆಯನ್ನು ತಿಳಿದುಕೊಂಡರೆ ವರ್ತಮಾನ ಅರ್ಥವಾಗುತ್ತದೆ. ವರ್ತಮಾನ ಅರ್ಥವಾದರೆ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಚಾತುರ್ವಣದ ಪದ್ಧತಿಯ ವಿರುದ್ಧವಾಗಿ ಹುಟ್ಟಿಕೊಂಡಿದ್ದು ಲಿಂಗಾಯತ ಧರ್ಮ. ಲಿಂಗಾಯತ ಧರ್ಮ ಸಂಘಟನಾತ್ಮಕವಾಗಿ ಸೃಷ್ಠಿಗೊಂಡ ಧರ್ಮ. ಇದರ ನೇತೃತ್ವ ವಹಿಸಿ ಅದಕ್ಕೆ ಸ್ವರೂಪ ಕೊಟ್ಟು ಸಂಘಟನಾತ್ಮಕ ಶಕ್ತಿಯನ್ನು ಕೊಟ್ಟರು.
ಸಮುದಾಯ ತತ್ವ ಚಿಂತನೆಗೆ ತಾತ್ವಿಕ ಗಟ್ಟಿತನವನ್ನು ಲಿಂಗಾಯತ ಧರ್ಮದಲ್ಲಿ ಕಾಣುತ್ತೇವೆ. ಕಾಯ ಇರುವವರೆಗೂ ಕಾಯಕ ಮಾಡಬೇಕು ಎನ್ನುವ ತತ್ವ ಶರಣ ಧರ್ಮದಲ್ಲಿದೆ. ಬೇರೆ ಬೇರೆ ಧರ್ಮಗಳಲ್ಲಿ ಬಿಕ್ಕುಗಳಿವೆ. ಆದರೆ ಶರಣ ಧರ್ಮದಲ್ಲಿ ಭಿಕ್ಷೆಗೆ ಅವಕಾಶವಿಲ್ಲ. ದಾನಕ್ಕೆ ಅವಕಾಶವಿರದೇ ದಾಸೋಹಕ್ಕೆ ಅವಕಾಶ ಇದೆ. ಕಾಯಕ ಮತ್ತು ದಾಸೋಹದ ತತ್ವವನ್ನು ಉತ್ಪಾದಿಸುತ್ತಾರೆ. ಸಮಾನತೆಯ ನೆಲೆಯೊಳಗೆ ಕಾಯಕವನ್ನು ಜಾರಿಗೆ ತಂದರು. ಕರ್ಮಸಿದ್ಧಾಂತಕ್ಕೆ ವಿರುದ್ಧವಾಗಿ ಹುಟ್ಟಿಕೊಂಡಿದ್ದು ಕಾಯಕ ಸಿದ್ಧಾಂತ. ದಾನಕ್ಕೆ ಪರ್ಯಾಯವಾಗಿ ದಾಸೋಹ ತತ್ವವನ್ನು ಜಾರಿಗೆ ತಂದರು. ವೈದಿಕ ಧರ್ಮಕ್ಕೆ ವಿರುದ್ಧವಾಗಿ ಹುಟ್ಟಿಕೊಂಡ ಧರ್ಮ. ಸಾಂಸ್ಕೃತಿಕ ದಾಸ್ಯದಿಂದ ಬಿಡುಗಡೆಗಾಗಿ ಹೋರಾಟ ಮಾಡಿದರು.
ಲಿಂಗಾಯತರು ವೈದಿಕ ಪಠ್ಯವನ್ನು ವಿರೋಧಿಸಿ ತಿರಸ್ಕರಿಸಿದರು. ಆದರೆ ಜೈನರು ಮುರಿದುಕಟ್ಟುವ ಪ್ರಯತ್ನವನ್ನು ಮಾಡಿದರು. ಸಾಂಸ್ಕೃತಿಕ ದಾಸ್ಯದಿಂದ ನಾವು ಇನ್ನು ಬಿಡುಗಡೆ ಹೊಂದದೇ ಇರುವುದು ದುರಂತ. ನಮ್ಮೊಳಗಡೆ ಇರುವ ಮೌಢ್ಯಗಳಿಗೆ ಗುಂಡುಹೊಡೆದುಕೊಳ್ಳಬೇಕು. ಪ್ರತಿಯೊಬ್ಬರು ಒಳಗಣ್ಣಿನ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು.
ಅನ್ಯಾಯಕ್ಕೆ ಒಳಗಾಗಿದ್ದ ಜನಸ್ತೋಮವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಎಲ್ಲರು ಒಳಗೊಂಡ ಮನೆಯಾದ್ದರಿಂದ ಅದು ಮಹಾಮನೆಯಾಯಿತು. ಬಸವಣ್ಣನವರ ಇಟ್ಟ ಹೆಜ್ಜೆ ಚಾತುರ್ವಣಕ್ಕೆ ವಿರುದ್ಧವಾಗಿ ಇಟ್ಟ ಹೆಜ್ಜೆ. ಧರ್ಮ ಎಂದರೆ ನಮ್ಮ ತಿಳಿವಳಿಕೆಯನ್ನು ಹೊಸತು ಮಾಡುವಂಥದ್ದು. ಮೂಢನಂಬಿಕೆ, ವಾಸ್ತು, ವಾರ ತಿಥಿ, ನಕ್ಷತ್ರ, ಹೋಮ, ಹವನ ವಿರೋಧಿಸುವ ಧರ್ಮ. ಲಿಂಗಾಯತ ಧರ್ಮ ಏಕದೇವೋಪಾಸನೆಯ ಧರ್ಮ. ಜಾತಿಕುಲಗಳಿಲ್ಲ. ಲಿಂಗಭೇದಕ್ಕೆ ಅವಕಾಶವಿಲ್ಲ. ಮಹಿಳೆಗೆ ಧಾರ್ಮಿಕವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾನತೆಯನ್ನು ಸಾರಿದ ಧರ್ಮ. ಅಂಗೈಯಲ್ಲಿ ಇಷ್ಟಲಿಂಗ ಕೊಟ್ಟು ಸಮಾನತೆಯನ್ನು ಸಾರಿದ ಧರ್ಮ. ವ್ಯಕ್ತಿ ಸಾಮಾಜೀಕರಣ ಇದೆಯೇ ಹೊರತು ದೈವೀಕರಣ ಇಲ್ಲ. ಕಲ್ಯಾಣ, ಮಹಾಮನೆಗಳು ಕಲ್ಪನೆಗಳಲ್ಲ ವಾಸ್ತವಗಳು. ಮೊದಲು ನಮ್ಮನ್ನು ತಿಳಿದುಕೊಳ್ಳಬೇಕು.
ಇಷ್ಟೆಲ್ಲಾ ಸಾಕ್ಷ್ಯಾಧಾರಗಳಿದ್ದರೂ ಯಾಕೆ ಸ್ವತಂತ್ರಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಕೊಡುತ್ತಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಧರ್ಮದ ಅಸ್ತಿತ್ವ ಹಕ್ಕಾಗಿ ಪಡೆಯಬೇಕೇ ಹೊರತು ಬೇಡಿ ಪಡೆಯುವುದಲ್ಲ ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಆರ್. ಪೋಲಿಸಪಾಟೀಲ ಮಾತನಾಡಿ; ಮನುಷ್ಯತ್ವದ ಬಗ್ಗೆ ಚರ್ಚೆ ಮಾಡುವುದು ವಚನ ಸಾಹಿತ್ಯದ ಉದ್ದೇಶ. ಮೂಲಭೂತ ಹಕ್ಕುಗಳ ಬಗ್ಗೆ ಎಲ್ಲ ಧರ್ಮದಲ್ಲಿಯೂ ಇದೆ. ನಮ್ಮದು ಶ್ರೇಷ್ಠ ಎಂದು ಹೇಳಿಕೊಳ್ಳುತ್ತೇವೆ. ಯಾವ ಧರ್ಮವೂ ಕನಿಷ್ಠ ಅಲ್ಲ ಎನ್ನುವ ಅರಿವಿರಬೇಕು. ಮನುಷ್ಯ ಧರ್ಮ, ಸಮಾನತೆಯ ಧರ್ಮ, ತನ್ನನ್ನು ತಾನು ಸುಧಾರಿಸಿಕೊಳ್ಳುವುದರ ಬಗ್ಗೆ ಮಾತನಾಡುವಾಗ ಬಸವಣ್ಣನವರನ್ನು ಬಿಟ್ಟು ಮಾತನಾಡುವುದು ಕಷ್ಟ.
ನಮ್ಮಲ್ಲಿ ನಾಯಕರಾದವರು ಮೂರ್ಖ ಹಾಗೂ ದುಷ್ಟರಾಗುತ್ತಿರುವುದು ದುರಂತ. ನಾಯಕನಾದವನು ಪ್ರಜ್ಞಾವಂತನಾಗಬೇಕು. ಲಿಂಗಾಯತ ಸ್ವತಂತ್ರಧರ್ಮ ಮಾನ್ಯತೆ ಪಡೆಯುವುದರಲ್ಲಿ ತುಂಬ ಹಿಂದುಳಿದಿದ್ದೇವೆ. ಸ್ವತಂತ್ರಧರ್ಮದ ಮಾನ್ಯತೆ ಕೊಡುವವರಿಗೆ ಮನವರಿಕೆ ಮಾಡಿಕೊಳ್ಳಬೇಕು. ಮಾನ್ಯತೆ ಪಡೆಯುವವರಿಗೆ ಅರಿವಿರಬೇಕು.
‘ಆಧುನಿಕ ಅನುಭವ ಮಂಟಪದ ಮುಂದಿನ ಯೋಜನೆಗಳ’ ಕುರಿತು ಡಾ. ಬಾಬಾಸಾಹೇಬ ಗಡ್ಡೆ ಯವರು ಕಂಪ್ಯೂಟರ್ನಲ್ಲಿ ಪಿಪಿಟಿಯ ಮೂಲಕ ಯೋಚನೆಗಳನ್ನು ತೋರಿಸುತ್ತಾ ವಿವರಿಸಿದರು.
ಆರಂಭದಲ್ಲಿ ಶಿವಸಂಚಾರದ ನಾಗರಾಜ ಹೆಚ್.ಎಸ್. ಹಾಗೂ ರೇಖಾ ವಚನಗೀತೆಗಳನ್ನು ಹಾಡಿದರು. ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ. ಸುರೇಶ್ ಸ್ವಾಗತಿಸಿದರೆ ಸಿದ್ಧು ಯಾಪಲರವಿ ನಿರೂಪಿಸಿದರು. ವೇದಿಕೆಯ ಮೇಲೆ ಅಲ್ಲಮಪ್ರಭು ನಾವದಗೇರಿ ಉಪಸ್ಥಿತರಿದ್ದರು.
ನಾವು ಎಂದು ಸ್ವತಂತ್ರ ಧರ್ಮದವರು ಆಗುತ್ತೇವೆ? ಇದಕ್ಕೆ ನಾವು ಬಲವಾಗಿ ನಮ್ಮ ಸಿದ್ಧಾಂತಃ ಗಳನ್ನು ಪ್ರತಿಫಡಿಸಬೇಕು. ನಿಜ ಯಾರೂ ನಮ್ಮನ್ನು ಕೇಳುತ್ತಿಲ್ಲ ಎನ್ನಿಸುತ್ತಿದೆ.