ಕಲಬುರಗಿ
ಭಾರತ ಅಷ್ಟೇ ಏಕೆ? ಇಡೀ ವಿಶ್ವವೇ ಪ್ರತಿಪಾದಿಸುವ ಮೌಲ್ಯಾಧಾರಿತ ಆಶಯಗಳನ್ನು ಸಮಾಜದಲ್ಲಿ ನೆಲೆಗೊಳಿಸಿದ ಬಸವಣ್ಣನವರು ಪರ್ಯಾಯ ಸಂಸ್ಕೃತಿಯನ್ನು ಕಟ್ಟಿದರು. ಅಂತೆಯೇ ಸರ್ಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ ಎಂದು ಪತ್ರಕರ್ತ ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಶ್ರಾವಣ ಮಾಸದ ಪ್ರಯುಕ್ತ ಇಲ್ಲಿನ ವಚನೋತ್ಸವ ಪ್ರತಿಷ್ಠಾನದ ವತಿಯಿಂದ ಸ್ವಸ್ತಿಕ್ ನಗರದ ಪ್ರವೀಣ ಪ್ರಭಾಕರ ನಂದಿ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ವಚನೋತ್ಸವ ಕಾರ್ಯಕ್ರಮದಲ್ಲಿ “ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ” ವಿಷಯ ಕುರಿತು ಮಾತನಾಡಿದ ಅವರು, ಬಸವಣ್ಣ ಕೇವಲ ಕರ್ನಾಟಕಕ್ಕೆ ಅಥವಾ ಒಂದು ವರ್ಗ, ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಕನ್ನಡ, ಕರ್ನಾಟಕದ ಸಾಕ್ಷಿಪ್ರಜ್ಞೆ ಮಾತ್ರವಲ್ಲ ಅರಿವಿನ ಪ್ರಜ್ಞೆಯಾಗಿದ್ದಾರೆ ಎಂದು ವಿವರಿಸಿದರು.
ಬಸವಣ್ಣ ಎಂದರೆ ನಾಲ್ಕು ಕಾಲಿನ ಎತ್ತಲ್ಲ. ಕೆಳಗೆ ಬಿದ್ದವರನ್ನು ಮೇಲಕ್ಕೆತ್ತಿ ಸಮಾನಾವಕಾಶ ಕಲ್ಪಿಸಿದ ಮಹಾನ್ ವ್ಯಕ್ತಿ. ಅವರ ಹೆಸರನ್ನು ಕೇವಲ ವ್ಯಕ್ತಿ ಸೂಚಕವಾಗಿ ನೋಡದೆ ಕನ್ನಡ ಸಂಸ್ಕೃತಿ ಪ್ರತಿಪಾದಿಸಿದ ಮೌಲ್ಯಗಳ ರೂಪಕವಾಗಿ ನೋಡಬೇಕು. ನಮ್ಮ ನಾಡಿನಲ್ಲಿ ಸೌಹಾರ್ದ ಪರಂಪರೆ ಕಟ್ಟುವ ಮೂಲಕ ವಿಶ್ವ ಬಂಧುತ್ವ ನೆಲೆಗೊಳಿಸಿದರು.

ಬಸವಣ್ಣನವರು ಇತರರಿಗೆ ದಾರಿ ತೋರಿಸುವ, ಪ್ರೇರೇಪಿಸುವ, ಉತ್ಸಾಹ, ಛಲ ತುಂಬುವ ಮತ್ತು ಗುರಿಗಳನ್ನು ಸಾಧಿಸಲು ಮಾರ್ಗದರ್ಶನ ನೀಡುವ ಬಹು ದೊಡ್ಡ ಶಕ್ತಿಯಾಗಿದ್ದರು.
ಎಲ್ಲ ಕಾಯಕದ ಶರಣರನ್ನು ಒತ್ತಟ್ಟಿಗೆ ಕೂಡಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದ ಶ್ರೇಷ್ಠ ಸಂಸ್ಕೃತಿ ಕೊಟ್ಟ ಬಸವಣ್ಣನವರು ಕುವೆಂಪು ಅವರು ಹೇಳುವಂತೆ ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ, ಬಟ್ಟೆಗೆಟ್ಟವರಿಗೊಂದು ದೊಂದು ದಿಕ್ಕಾಗಿ ಬಂದ ಕ್ರಾಂತಿ ವೀರರು ಎಂದು ಶಿವರಂಜನ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಂತಲಿಂಗ ಪಾಟೀಲ ಕೋಳಕೂರ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಸಮಾನತೆಯ ತತ್ವ ಪ್ರತಿಪಾದಿಸಿದ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಿಚ್ಚಳಗೊಳಿಸಿದ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ನಾಡಿನಲ್ಲಿ ಬಹುತ್ವ ನೆಲೆಗೊಳಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.
ವಚನೋತ್ಸವ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಬಸವರಾಜ ಧೂಳಾಗುಂಡಿ ಸ್ವಾಗತಿಸಿದರು. ಸಂಚಾಲಕ ಶಿವರಾಜ ಅಂಡಗಿ ನಿರೂಪಿಸಿದರು. ಕಲ್ಯಾಣಪ್ಪ ಬಿರಾದಾರ ಪ್ರಾರ್ಥನೆಗೀತೆ ಹಾಡಿದರು. ವಿಶ್ವನಾಥ ಮಂಗಲಗಿ ವಂದಿಸಿದರು.
ಈರಣ್ಣ ತೊರವಿ, ಮಲ್ಲಿಕಾರ್ಜುನ, ಬಸಯ್ಯಸ್ವಾಮಿ ಹುಬ್ಬಳ್ಳಿಮಠ, ಮಹಾಂತಪ್ಪ ಬಸವಪಟ್ಟಣ ಮತ್ತಿತರರು ಇದ್ದರು.