ಚೆನ್ನಮ್ಮನ ಕಿತ್ತೂರು:
ಕ್ರಿ.ಶ. 1824ರಲ್ಲಿ “ಸೂರ್ಯ ಮುಳುಗದ ಸಾಮ್ರಾಜ್ಯ” ಎಂದೇ ಖ್ಯಾತವಾಗಿದ್ದ ಬ್ರಿಟಿಷ್ ಚಕ್ರಾಧಿಪತ್ಯದ ವಿರುದ್ಧ ಮೊದಲ ಬಾರಿ ಸಿಡಿದೆದ್ದ ಕಿತ್ತೂರು ರಾಣಿ ಚೆನ್ನಮ್ಮ ಈ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಹೈಕೋರ್ಟ್ ನ್ಯಾಯವಾದಿ ಕೆ. ಎಸ್. ಕೋರಿಶೆಟ್ಟರ ಅಭಿಪ್ರಾಯಪಟ್ಟರು.
ಸಮೀಪದ ನೇಗಿನಹಾಳ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ತಮ್ಮ ನಿವಾಸದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ “ಶ್ರೀಗುರು ಬಸವ ಭಾವಪೂಜಾ ಅನುಭಾವ, ಶ್ರೀಗುರು ಬಸವ ಶ್ರೀರಕ್ಷೆ ಧಾರಣೆ” ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡುತ್ತಿದ್ದರು.
“ಸ್ವಾತಂತ್ರ್ಯ ಎಂಬುದುನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಸಂಧರ್ಭದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ರಾಣಿ ಚೆನ್ನಮ್ಮ ಇಷ್ಟಲಿಂಗ ಪೂಜಾನಿಷ್ಠೆ ಹೊಂದಿದ್ದ ಮಹಾಶರಣೆಯಾಗಿದ್ದಳು, ಮಾತ್ರವಲ್ಲ ಉಳವಿ ಶ್ರೀ ಚನ್ನಬಸವೇಶ್ವರರ ಪರಮಭಕ್ತೆಯಾಗಿದ್ದಳು” “ಆದರೆ ಇತಿಹಾಸವನ್ನು ಪಠ್ಯಕ್ರಮದಲ್ಲಿ ಸರಿಯಾಗಿ ಭೋಧಿಸಬೇಕು. ರಾಣಿ ಚೆನ್ನಮ್ಮಳೇ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬುದನ್ನು ನಾಡಿನ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ನಾದರೂ ತಿಳಿಸಬೇಕು, ಈ ದಿಸೆಯಲ್ಲಿ ಇತಿಹಾಸದಲ್ಲಿ ಮುಚ್ಚಿ ಹೋದ ಸತ್ಯವನ್ನು ಹೊರತರಬೇಕು” ಎಂದು ಅವರು ಆಗ್ರಹಿಸಿದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಬಸವಧರ್ಮ ಪೀಠದ ಜಂಗಮ ಮೂರ್ತಿ ಶ್ರೀ ಪ್ರಭುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರಾವಣ ಮಾಸದಲ್ಲಿ ಶಾಸಕರ ಮನೆಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿದೆ, ಅವರು ರಾಜಕೀಯವಾಗಿ ಇನ್ನೂ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಬೈಲಹೊಂಗಲ ತಾಲ್ಲೂಕ ಮುಖಂಡ ವೀರೇಶ ಹಲಕಿ ಮಾತನಾಡಿ, “ಲಿಂಗಾಯತವು ಸ್ವತಂತ್ರ ಧರ್ಮವಾಗಿದ್ದು ಇದು ಜಾತಿಯಲ್ಲ, ಇದಕ್ಕೆ ಸಂವಿಧಾನಬದ್ಧ ಮಾನ್ಯತೆ ದೊರೆಯುವವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ” ಎಂದರು.
ರಾಷ್ಟ್ರೀಯ ಬಸವದಳದ ಮುಖಂಡ ಅಶೋಕ ಅಳ್ನಾವರ ಮಾತನಾಡಿ, “ಲಿಂಗಾಯತ ಧರ್ಮವು ಅವೈದಿಕ ಧರ್ಮವಾಗಿದ್ದು ಇದಕ್ಕೆ ಮಾನ್ಯತೆ ಸಿಕ್ಕರೆ ಸಮಾಜದ ಮುಂದಿನ ಪೀಳಿಗೆಗೆ ತುಂಬಾ ಅನುಕೂಲ ಆಗಲಿದೆ” ಎಂಬುದನ್ನು ವಿವರಿಸಿದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಶ್ರಾವಣ ಮಾಸದ ಈ ಶುಭ ಸಂಧರ್ಭದಲ್ಲಿ ತಮ್ಮ ಮನೆಯಲ್ಲಿ ಹಮ್ಮಿಕೊಂಡ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡ ಸರ್ವರಿಗೂ ಕೃತಜ್ಞತೆ ಅರ್ಪಿಸಿದರು.
ಶಾಸಕರ ಧರ್ಮಪತ್ನಿ ಹಾಗೂ ಮಾಜಿ ಜಿ.ಪಂ. ಸದಸ್ಯೆ ಶ್ರೀಮತಿ ರೋಹಿಣಿ ತಾಯಿ ಪಾಟೀಲ ಪ್ರಾರಂಭದಲ್ಲಿ ಸ್ವಾಗತಿಸಿ, ಎಲ್ಲರಿಗೂ ರಕ್ಷಾಬಂಧನ ಹಬ್ಬದ ಪ್ರಯುಕ್ತ ರುದ್ರಾಕ್ಷಿಯುಕ್ತ ರಾಖಿ ಕಟ್ಟಿದರು.
ವೇದಿಕೆಯಲ್ಲಿ ಮಡಿವಾಳೇಶ್ವರ ಮಠದ ವೀರಪ್ಪ ಪಟ್ಟೇದ ಸೇರಿದಂತೆ ಹಲವಾರು ಶರಣು ಶರಣೆಯರು ಉಪಸ್ಥಿತರಿದ್ದರು.