‘ನುಲಿಯ ಚಂದಯ್ಯ ತತ್ವ ಅನುಷ್ಠಾನದಿಂದ ಸಮಾಜ ಸುಭಿಕ್ಷು’

ಸುಪ್ರೀತ ಪತಂಗೆ
ಸುಪ್ರೀತ ಪತಂಗೆ

ಬೀದರ

ನುಲಿಯ ಚಂದಯ್ಯ ಅವರ ತತ್ವಗಳ ಅನುಷ್ಠಾನದಿಂದ ಸಮಾಜ ಹಾಗೂ ದೇಶ ಸುಭಿಕ್ಷು ಆಗುವುದರಲ್ಲಿ ಸಂದೇಹವೇ ಇಲ್ಲ ಎಂದು ಸಾಹಿತಿ ರಮೇಶ ಮಠಪತಿ ಅಭಿಪ್ರಾಯಪಟ್ಟರು.

ಲಿಂಗಾಯತ ಮಹಾಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಶನಿವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಅವರ ಜಯಂತಿ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ವಚನ ಪಾರಾಯಣ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಹನ್ನೆರಡನೆಯ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರಾಗಿದ್ದ ನುಲಿಯ ಚಂದಯ್ಯ, ಬಸವಣ್ಣನವರ ಕಾಯಕ ಸಿದ್ಧಾಂತದ ಪ್ರತೀಕವಾಗಿದ್ದರು. ಪ್ರತಿಯೊಬ್ಬರೂ ದುಡಿದು, ದಾಸೋಹ ಮಾಡಿಯೇ ಉಣ್ಣಬೇಕು ಎನ್ನುವುದು ಅವರ ಸಂದೇಶವಾಗಿದೆ ಎಂದು ಹೇಳಿದರು.

ಕಾಯಕಕ್ಕೆ ತಕ್ಕಂತೆ ಪ್ರತಿಫಲ ಪಡೆಯಬೇಕೇ ವಿನಃ ಹೆಚ್ಚು ಪ್ರತಿಫಲ ಪಡೆದು ಶೋಷಣೆ ಮಾಡಬಾರದು ಎಂದಿದ್ದರು ಎಂದು ತಿಳಿಸಿದರು.

ಪ್ರತಿ ದಿನ ನದಿಯ ದಡದಲ್ಲಿ ಬೆಳೆದ ನುಲಿಯನ್ನು ತಂದು ಹೊಸೆದು, ಹಗ್ಗ ಕಣ್ಣಿ ಸಿದ್ಧಪಡಿಸಿ, ಮಾರಾಟ ಮಾಡುತ್ತಿದ್ದರು. ಬಂದ ಆದಾಯದಲ್ಲಿ ಮೊದಲು ದಾಸೋಹಗೈದು, ಪ್ರಸಾದ ಸೇವಿಸುವುದು ಅವರ ನಿತ್ಯದ ನೇಮವಾಗಿತ್ತು ಎಂದು ಹೇಳಿದರು.

ಚಂದಯ್ಯನವರ ಕಾಯಕ-ದಾಸೋಹ ನಿಷ್ಠೆ ಅಪಾರವಾಗಿತ್ತು. ಕಾಯಕದಲ್ಲಿ ನಿರತನಾದಡೆ ಗುರು-ಲಿಂಗ-ಜಂಗಮ ಬಂದರೂ ಹಂಗು ಹರಿಯಬೇಕೆಂದು ಕಾಯಕದಲ್ಲಿ ಮಗ್ನರಾಗುತ್ತಿದ್ದರು ಎಂದು ತಿಳಿಸಿದರು.

ಒಮ್ಮೆ ಅವರು ಕಾಯಕದಲ್ಲಿ ನಿರತರಾಗಿದ್ದಾಗ ಕೊರಳ ಇಷ್ಟಲಿಂಗ ಜಾರಿ ಬಿದ್ದಿತ್ತು. ಕಾಯಕಕ್ಕೆ ಅಡ್ಡಿಯಾದೆಯೆಂದು ಶಿವನನ್ನೇ ಬಿಟ್ಟರು. ಲಿಂಗಯ್ಯನೇ ನನ್ನನ್ನು ಎತ್ತಿಕೋ ಎಂದು ಬೆಂಬತ್ತಿದ ಪ್ರಸಂಗ ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಪರುಷ ಕಟ್ಟೆಯ ಚನ್ನಬಸವಣ್ಣ ಮಾತನಾಡಿ, ಇಂದು ನೂಲ ಹುಣ್ಣಿಮೆ ಅಂದರೆ ರಾಖಿ ಪೂರ್ಣಿಮೆಯೂ ಇದೆ. ಇದು, ಪ್ರೀತಿ, ಸಹೋದರತೆಯನ್ನು ಸಾರುವ ಸಂಭ್ರಮದ ಹಬ್ಬ. ಸಹೋದರಿಯರೆಲ್ಲ ಹೊಸ ಬಟ್ಟೆ ಧರಿಸಿ ತಮ್ಮ ಅಣ್ಣ-ತಮ್ಮಂದಿರಿಗೆ ರಕ್ಷೆಯನ್ನು ಕಟ್ಟಿ ಹಾರೈಸುವ ದಿನ ಎಂದು ತಿಳಿಸಿದರು.

ಪರಸ್ಪರ ಆಯುಷ್ಯ, ಆರೋಗ್ಯ ಹಾಗೂ ರಕ್ಷಣೆಗಾಗಿ ಪ್ರಾರ್ಥಿಸುವುದರಿಂದ ಅಣ್ಣ-ತಂಗಿಯರ ಸಂಬಂಧ ಗಟ್ಟಿಗೊಳ್ಳುತ್ತದೆ ಎಂದು ಹೇಳಿದರು.

ಜ್ಞಾನ ಕಾರಂಜಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಾಣಿಕಪ್ಪ ಗೋರನಾಳೆ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮನ ಬಳಗದ ಲಾವಣ್ಯ ಮುಖ್ಯ ಅತಿಥಿಯಾಗಿದ್ದರು. ಅಶೋಕ ಎಲಿ, ಸಿ.ಎಸ್. ಗಣಾಚಾರಿ, ಚನ್ನಬಸಪ್ಪ ಹಂಗರಗಿ, ಮಾರುತಿ ಪಾಟೀಲ ಸಮ್ಮುಖ ವಹಿಸಿದ್ದರು.

ನೀಲಮ್ಮನ ಬಳಗದ ಸಹೋದರಿಯರು ಪ್ರಾರ್ಥನೆ ಹಾಗೂ ವಚನ ಗಾಯನ ನಡೆಸಿಕೊಟ್ಟರು. ಬಸವಪ್ರಸಾದ ಕೊಪ್ಪಳ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *