ಬೀದರ
ನುಲಿಯ ಚಂದಯ್ಯ ಮಹಾಶರಣರು ಹನ್ನೆರಡನೆ ಶತಮಾನದ ಅನುಭವ ಮಂಟಪದಲ್ಲಿ ಗುರು ಬಸವಣ್ಣನವರ ನೇತೃತ್ವದಲ್ಲಿ ಲಿಂಗಾನುಭವ ಗೋಷ್ಟಿಯಲ್ಲಿ ಭಾಗಿಯಾಗುತ್ತಿದ್ದರು. ಕಾಯಕ ಮತ್ತು ದಾಸೋಹದಲ್ಲಿ ಅಭಿಮಾನ ಹೊಂದಿದ್ದರು. ದೇವನು ಮೆಚ್ಚುವಂತಹ ಕಾಯಕ ಮಾಡಿ ಅವನ ಅನುಗ್ರಹಕ್ಕೆ ಪಾತ್ರರಾಗಿದ್ದರು.
ಕಲ್ಯಾಣ ಕ್ರಾಂತಿಯಲ್ಲಿ ವಚನ ಸಾಹಿತ್ಯ ರಕ್ಷಣೆಗಾಗಿ ಖಡ್ಗ ಹಿಡಿದು ಹೋರಾಟ ಮಾಡಿದವರು. ಅಕ್ಕನಾಗಮ್ಮನ ಜೊತೆ ಬೆಂಗಾವಲಾಗಿ ಕೊನೆಯವರೆಗೂ ಉಳಿದವರೆಂದರೆ ಚಂದಯ್ಯ ಶರಣರು ಎಂದು
ಕಲ್ಯಾಣ ಮಹಾಮನೆ ಗುಣತೀರ್ಥವಾಡಿ-ಬಸವಕಲ್ಯಾಣದ ಪೂಜ್ಯ ಬಸವಪ್ರಭು ಸ್ವಾಮೀಜಿ ಹೇಳಿದರು.

ಕೋಳಾರ ಕೆ. ಗ್ರಾಮದಲ್ಲಿ ನಡೆದ ಬಸವಾದಿ ಶರಣ ನುಲಿಯ ಚಂದಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ, ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಚಂದಯ್ಯ ಸಮಾಜ ಅತ್ಯಂತ ತುಳಿತಕ್ಕೊಳಪಟ್ಟ ಸಮಾಜವಾಗಿದೆ. ಆ ಸಮಾಜಕ್ಕೆ ಬಸವ ಧರ್ಮ ಸಂಸ್ಕಾರ ನೀಡಿ ಮೇಲೆ ತರುವ ಜವಬ್ದಾರಿ ನಮ್ಮ ಮೇಲೆ ಇದೆ ಎಂದು ಸ್ವಾಮೀಜಿ ಹೇಳಿದರು.

ಬಸವ ಮಂಟಪದಿಂದ ಪ್ರಾರಂಭವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ನುಲಿಯ ಚಂದಯ್ಯ ಭಾವಚಿತ್ರದೊಂದಿಗೆ ಬಸವೇಶ್ವರ ವೃತ್ತದ ಮೂಲಕ ನುಲಿಯ ಚಂದಯ್ಯ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಯಿತು.
ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಶರಣ ಅಶೋಕ ಶಂಭು ಅವರು ಮೆರವಣಿಗೆಗೆ ಚಾಲನೆ ಕೊಟ್ಟರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಶಾಂತ ಶರಗಾರ, ರಾಷ್ಟ್ರೀಯ ಬಸವದಳದ ಸಂತೋಷ ಶಂಭು, ಬಸವ ಮಂಟಪದ ಕಂಟೆಪ್ಪ, ನುಲಿಯ ಸಮಾಜದ ಮುಖಂಡ ಬಾಬು, ಡೋಹಾರ ಕಕ್ಕಯ್ಯ ಸಮಾಜದ ಅಧ್ಯಕ್ಷರು, ನುಲಿಯ ಚಂದಯ್ಯ ಸಮಾಜದ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.