ಬೆಂಗಳೂರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ನುಲಿಯ ಚಂದಯ್ಯ ಶರಣರ ಜಯಂತಿ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊರಮ-ಕೊರಚ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ 100*200 ಅಳತೆಯ ನಿವೇಶನವನ್ನು ಉಚಿತವಾಗಿ ನೀಡುವ ಭರವಸೆ ನೀಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ಮತ್ತೊಮ್ಮೆ ತಂದು ಭರವಸೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ನುಲಿಯ ಚಂದಯ್ಯ ಅವರು ಕಾಯಕಯೋಗಿ. ಅವರು ಬಾಳಿದ ಬಾಳು, ಬೋಧಿಸಿದ ನೀತಿ, ರಚಿಸಿದ ವಚನಗಳು ಸರ್ವಕಾಲಕ್ಕೂ ಸರ್ವಸ್ಥಳಕ್ಕೂ ಸಲ್ಲುವಂತಹದು. ಕಾಯಕ ಹಾಗೂ ದಾಸೋಹದ ತತ್ವವನ್ನು ನುಲಿಯ ಚಂದಯ್ಯ ಪ್ರತಿಪಾದಿಸಿದ್ದರು. ಅವರ ತತ್ವ, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಒಳ ಮೀಸಲಾತಿ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದ್ದು, ಮುಖ್ಯಮಂತ್ರಿ ಯಾವ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ತಂಗಡಗಿ ಹೇಳಿದರು.
‘ಭೋವಿ, ಕೊರಮ, ಕೊರಚ ಹಾಗೂ ಲಂಬಾಣಿ ಸಮುದಾಯಗಳೊಂದಿಗೆ ನಾನಿದ್ದೇನೆ. ನಾವು ಒಂದೇ ತಕ್ಕಡಿಯಲ್ಲಿದ್ದೇವೆ. ಒಳ ಮೀಸಲಾತಿ ವಿಚಾರವಾಗಿ ಯಾವ ಸಮುದಾಯದವರು ಕೂಡ ಆತಂಕಪಡುವ ಅಗತ್ಯವಿಲ್ಲ’ ಎಂದರು.

ಬಾಗಲಕೋಟೆ ಜಿಲ್ಲೆಯಲ್ಲಿರುವ ಶಹನಾಯಿ ವಾದಕ ಸನಾದಿ ಅಪ್ಪಣ್ಣ ಅವರ ಸಮಾಧಿಯನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಬಾಗಲಕೋಟೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಮರು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಮತ್ತು ಶ್ರೀ ಶರಣ ನುಲಿಯ ಚಂದಯ್ಯ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷರಾದ ಜಿ. ಚಂದ್ರಣ್ಣ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳು ಮತ್ತು ಶ್ರೀ ಶರಣ ನುಲಿಯ ಚಂದಯ್ಯ ಜಯಂತಿ ಆಚರಣಾ ಸಮಿತಿಯ ಪ್ರಧಾನ ಸಂಚಾಲಕರಾದ ಎಂ. ವೆಂಕಟೇಶ್, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ, ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ಮುನಿರಾಜು, ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ಭಜಂತ್ರಿ, ಸಮುದಾಯದ ಮುಖಂಡರಾದ ಮತ್ತು ನಿವೃತ್ತ ಅಧಿಕಾರಿಗಳಾದ ಅಂಜನ್ ಕುಮಾರ್, ಎಕೆಎಂಎಸ್ ನ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಕಿರಣ್ ಕುಮಾರ್ ಕೊತ್ತಗೆರೆ, ಸುಪ್ರೀಂ ಕೋರ್ಟಿನ ನ್ಯಾಯವಾದಿಗಳಾದ ರಾಮಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಂ. ಗಾಯಿತ್ರಿ, ಸಮುದಾಯದ ಇತರೆ ಮುಖಂಡರು, ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.