ಶರಣರು ಕಂದಾಚಾರ ವಿರೋಧಿಗಳು: ಗಿರಿಜಾ ಹಿರೇಮಠ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ

ಎಲ್ಲಾ ಕಾಯಕ ವರ್ಗದ ಶರಣರಿಗೆ ಮಾರ್ಗದರ್ಶನ ಮಾಡಿದ ಕೀರ್ತಿ ಧರ್ಮಗುರು ಬಸವಣ್ಣನವರಿಗೆ ಸಲ್ಲುತ್ತದೆ.

ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ತೊಲಗಿಸಿ ಮಾನವನ ಆತ್ಮೋದ್ದಾರ ಜೊತೆಗೆ ಸಮಾಜೋದ್ಧಾರವನ್ನು ಕೈಗೊಳ್ಳುವಂತೆ ಮಾಡಿದವರು ಬಸವಣ್ಣನವರು.

ಶರಣರ ವಚನಗಳು ಹಿಂದೆ, ಇಂದು, ಮುಂದೂ ಕೂಡಾ ಮಾನವನ ಕಲ್ಯಾಣಕ್ಕೆ ಮಾರ್ಗದರ್ಶನ ಮಾಡುತ್ತವೆಂದು ಗಿರಿಜಾ ಹಿರೇಮಠ ಅವರು ನುಡಿದರು.

ಅವರು ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ನಗರಸಭೆ ಸದಸ್ಯರಾದ ಚಂದ್ರಣ್ಣ ಬ. ತಡಸದ ಇವರ ಮನೆಯಲ್ಲಿ ನಡೆದ ಬಸವಣ್ಣನವರ ೮೫೮ನೇ ಸ್ಮರಣೆಯಂಗವಾಗಿ ‘ವಚನ ಶ್ರಾವಣ-೨೦೨೫’ರ ೧೬ನೇ ದಿನದ ಕಾರ್ಯಕ್ರಮದಲ್ಲಿ, “ವಾರವೆಂದರಿಯೆ, ದಿನವೆಂದರಿಯೆ, ಏನೆಂದರಿಯೆನಯ್ಯಾ, ಇರುಳೆಂದರಿಯೆ, ಹಗಲೆಂದರಿಯೆ, ಏನೆಂದರಿಯೆನಯ್ಯಾ, ನಿಮ್ಮ ಪೂಜಿಸಿ ಎನ್ನವ ಮರೆದೆ ಕೂಡಲಸಂಗಮದೇವಾ”.

ಈ ವಚನ ನಿರ್ವಚನಗೈಯುತ್ತಾ, ಈ ಭುವಿಯಲ್ಲಿ ಮಾನವನಿಂದ ನಿರ್ಮಿತವಾದ ದಿನ, ವಾರ, ನಕ್ಷತ್ರ, ತಿಥಿ, ಘಳಿಗೆ, ಒಳ್ಳೆಯದಿನ, ಕೆಟ್ಟ ದಿನ ಇತ್ಯಾದಿಗಳನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಸೃಷ್ಠಿಸಿದ್ದಾನೆ. ಇವೆಲ್ಲದರ ನಡುವೆ ನಮ್ಮ ಮೂಲಚೈತನ್ಯ ಸ್ವರೂಪವಾದ ದೇವರನ್ನು ಕಾಣದಂತಾಗಿದ್ದೇವೆ. ಇಂದು ಮೌಢ್ಯತೆಯ ಸುಳಿಯಲ್ಲಿ ಸಿಲುಕಿ ಮನುಷ್ಯ ಮಾನವಿಯತೆಯನ್ನು ಮರೆಯುತ್ತಿದ್ದಾನೆ. ಡಾಂಭಿಕ ಭಕ್ತಿಯಲ್ಲಿ ಮುಳುಗೇಳುತ್ತಿದ್ದಾನೆ. ಇವೇ ಆಡಂಭರದ ಆಚರಣೆಗಳಲ್ಲಿ ನಮ್ಮ ಆಯುಷ್ಯ ಕಳೆದುಹೋಗುತ್ತಿದೆ. ಹಗಲೆಲ್ಲ ಹಸಿವಿಂಗೆ ಕುದಿದು, ಇರುಳೆಲ್ಲ ನಿದ್ರೆಗೆ ಕುದಿದು ಉಳಿದೆಲ್ಲಾ ಹೊತ್ತು ಅಸನ ವ್ಯಸನಕ್ಕೆ ಕುದ್ದು ಹೋಗುವರು. ಕೊನೆಗೆ ತಮ್ಮ ಜೀವನವನ್ನು ಲೌಕಿಕದ ಕಡೆ ಸಾಗುವಂತೆ ಮಾಡಿಕೊಳ್ಳುವರು. ನಿಜವಾದ ಆ ಪರಮಾತ್ಮನ ದೇವರ ಕಲ್ಪನೆ ನಮಗಾಗಲಾರದು. ಇದಕ್ಕೆ ದೇವರು ದಿನ, ವಾರ, ನಕ್ಷತ್ರ, ಒಳ್ಳೆಯ ದಿನ, ಕೆಟ್ಟ ದಿನಗಳೆಂದುಕೊಳ್ಳುವುದಕ್ಕೆ ಸಿಮೀತವಾಗಿಲ್ಲ.

ಇವೆಲ್ಲವನ್ನು ಮೀರಿ ಆ ಶಿವ ‘ಜಗದಗಲ ವ್ಯಾಪಿಸಿಕೊಂಡಿದ್ದಾನೆ’ ಆ ಚೈತನ್ಯ ತನ್ನೊಳಗೆ ಇಟ್ಟುಕೊಂಡು ಅರಿವಿನ ಕುರುಹಾಗಿ ಇಷ್ಟಲಿಂಗವನ್ನು ಕೊಟ್ಟು ಏಕದೇವೋಪಾಸನೆ ತತ್ವವನ್ನು ಅನುಸರಿಸಬೇಕೆಂದು (ಪೂಜಿಸಬೇಕೆಂದು) ಬಸವಣ್ಣನವರು ಈ ವಚನದ ಮೂಲಕ ಹೇಳಿದ್ದಾರೆಂದರು.

ಶರಣತತ್ವ ಚಿಂತಕರಾದ ಅಶೋಕ ಬರಗುಂಡಿ, ಶೇಖರ ಕವಳಿಕಾಯಿ, ಜಯಶ್ರೀ ಅಂಗಡಿ ಇದೇ ವಚನದ ಕುರಿತು ಇನ್ನಷ್ಟು ಚಿಂತನೆಗೈದರು.

ಬಸವದಳದ ಶರಣೆಯರಿಂದ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭ, ಕು. ರಾಜೇಶ್ವರಿ ತಡಸದ ಸ್ವಾಗತ, ನಿರೂಪಣೆ ಗೌರಕ್ಕ ಬಡಿಗಣ್ಣವರ ಮಾಡಿದರು.

ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಬಸವದಳದ ಕಾರ್ಯಕರ್ತರು, ಬಸವೇಶ್ವರ ನಗರದ ಜನತೆ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *