ಶಿವಮೊಗ್ಗದಲ್ಲಿ ಅಭಿಯಾನ ಯಶಸ್ವಿಗೊಳಿಸಲು ಪಣತೊಟ್ಟ ಬಸವ ಸಂಘಟನೆಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಶಿವಮೊಗ್ಗ


ನಗರದ ಬೆಕ್ಕಿನಕಲ್ಮಠದಲ್ಲಿ ರವಿವಾರ ನಡೆದ ಸಂಘಟನೆಗಳ ಸಭೆಯು ಒಕ್ಕೊರಲಿನಿಂದ, ಶರಣರ ನಾಡು ಶಿವಮೊಗ್ಗದಲ್ಲಿ ಸೆಪ್ಟೆಂಬರ್ 17ರ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಪಣತೊಡಲಾಯಿತು.

ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿಯವರು ಮಾತನಾಡಿ, “ಬಸವ ಸಂಸ್ಕೃತಿ ನಮ್ಮನ್ನು ಅಂತರಂಗ ಬಹಿರಂಗದಲ್ಲಿ ಶುದ್ಧಗೊಳಿಸುವ ಉದಾತ್ತ ಮೌಲ್ಯಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ನಡೆಯುವ ಈ ಅಭಿಯಾನವನ್ನು ಹೆಚ್ಚು ಯುವಜನರ ಸಹಭಾಗಿತ್ವದೊಂದಿಗೆ ನಡೆಸೋಣ” ಎಂದರು.

“ಜೊತೆಯಲ್ಲಿ ಯುವ ಜನತೆಗೆ ಪ್ರಬಂಧ ಸ್ಪರ್ಧೆ ಮತ್ತು ಸ್ಥಳದಲ್ಲೇ ಶರಣರ ಚಿತ್ರ ರಚನಾ ಸ್ಪರ್ಧೆಗಳನ್ನು ಏರ್ಪಡಿಸುವುದು ಸೂಕ್ತ ಎಂದು” ಸಭೆಗೆ ಸಲಹೆ ನೀಡಿದರು.

ನಂತರ ಮಾತನಾಡಿದ ಡಾ. ಶೇಖರ್ ಅವರು “ನಮ್ಮ ಪರಂಪರೆಯ ಮೌಲ್ಯಗಳನ್ನು ಸದೃಢ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಬಳಸಿಕೊಳ್ಳೋಣ, ಅದಕ್ಕೆ ಈ ಅಭಿಯಾನ ಪ್ರೇರಣೆ ನೀಡಲಿದೆ” ಎಂದರು.

ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮಿಗಳವರು ಕಾರ್ಯಕ್ರಮದ ಸ್ವರೂಪದ ಕುರಿತು ಮಾತನಾಡಿ, “ಅತ್ಯಂತ ಪರಿಣಾಮಕಾರಿಯಾಗಿ ನಡೆಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅದಕ್ಕೆ ಬೇಕಾದ ಎಲ್ಲರೀತಿಯ ವ್ಯವಸ್ಥೆಗಳನ್ನು ಮಾಡಿದ್ದು, ಒಕ್ಕೂಟದ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಮಾಡಬೇಕು, ಸಮಾಜದ ಎಲ್ಲ ಸಮುದಾಯದ ಜನಗಳು ಪಾಲ್ಗೊಳ್ಳಬೇಕೆಂದು” ಕರೆನೀಡಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮಹಾಪೋಷಕರಾದ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು “ಅಭಿಯಾನಕ್ಕೆ ನಮ್ಮೆಲ್ಲರ ಅಸ್ಮಿತೆ ರೂಪಿಸುವ ಶಕ್ತಿಯಿದ್ದು ಅತಿಹೆಚ್ಚಿನ ಸಖ್ಯೆಯಲ್ಲಿ ಸರ್ವಜನಾಂಗಗಳೂ ಸೇರಿ ಯಶಸ್ವಿಗೊಳಿಸೋಣ” ಎಂದು ಕರೆ ನೀಡಿದರು.

ಸಂಸದ ಬಿ. ವೈ. ರಾಘವೇಂದ್ರ ಅವರನ್ನು ಮಹಾ ಪೋಷಕರಾಗಿ, ವಿಧಾನಪರಿಷತ್ ಮಾಜಿ ಶಾಸಕ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಅರನ್ನು ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಸ್ಥಳೀಯ ಶಾಸಕರುಗಳು, ವಿಧಾನ ಪರಿಷತ್ ಶಾಸಕರುಗಳು, ಮಾಜಿ ಶಾಸಕರುಗಳು, ಸಮಾಜದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಸಮಿತಿಯ ಉಪಾಧ್ಯಕ್ಷರನ್ನಾಗಿಯೂ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ. ಎಸ್. ಷಡಾಕ್ಷರಿಯವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಚ್. ಸಿ. ಯೋಗೇಶ್ ಅವರನ್ನು ಖಜಾಂಚಿಯನ್ನಾಗಿ ನೇಮಿಸಲಾಯಿತು.

ಸಭೆಯಲ್ಲಿ ಜಡೆ ಸಂಸ್ಥಾನ ಮಠದ ಪೂಜ್ಯ ಡಾ. ಮಹಾಂತ ಸ್ವಾಮಿಗಳವರು, ಹಾರನಹಳ್ಳಿ ಚೌಕಿ ಮಠದ ಪೂಜ್ಯ ನೀಲಕಂಠ ಸ್ವಾಮಿಗಳವರು, ಬಸವಕೇಂದ್ರ ಶಿವಮೊಗ್ಗ- ಭದ್ರಾವತಿ, ಶರಣ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ಕದಳಿ ಮಹಿಳಾ ವೇದಿಕೆ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜಸೇವಾ ಸಂಘ, ಬಸವ ಸಂಗಮ, ಅಕ್ಕಮಹಾದೇವಿ ಬಳಗ, ಮೊದಲಾದ ಸಂಘಟನೆಗಳ ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *