ಬಸವಕಲ್ಯಾಣ
ಬಸವಕಲ್ಯಾಣದ ಅರಿವಿನ ಮನೆಯಲ್ಲಿ ಶ್ರಾವಣ ಸೋಮವಾರದ ನಿಮಿತ್ಯ ಶಿವಯೋಗ ಸಾಧಕರ ಕೂಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾಣ ಲಿಂಗಪೂಜೆ ಪ್ರಾತ್ಯಕ್ಷತೆಯನ್ನು ತೋರಿಸಿಕೊಟ್ಟು ಮಾತನಾಡಿದ ರಮೇಶ ಮಠಪತಿಯವರು,
“ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ. ಇಂದಿಗೂ ಬಸವಭಕ್ತರಿಗೆ ಶ್ರದ್ಧಾ ಕೇಂದ್ರವಾಗಿದೆ. ನಾಡಿನ ಅನೇಕ ಕಡೆಯಿಂದ ಬಂದ ಶರಣಬಳಗವೆಲ್ಲ ಕಲ್ಯಾಣದ ಮಣ್ಣನ್ನು ತಲೆಯ ಮೇಲೆ ಸಿಂಪಡಿಸಿಕೊಳ್ಳುತ್ತಾರೆ. ಕಾರಣ ಶರಣರು ನಡೆದಾಡಿದ ಪಾವನ ಭೂಮಿ ಎಂದು ಶ್ರದ್ಧಾ ಭಕ್ತಿಯಿಂದ ಕಲ್ಯಾಣಕ್ಕೆ ಬರುತ್ತಾರೆ. ಇಂಥ ಕಲ್ಯಾಣದ ನೆಲದಲ್ಲಿ ಹುಟ್ಟಿರುವ ನಾವೇ ಪುಣ್ಯವಂತರು” ಎಂದರು.
“ಅರಿವಿನ ಮನೆ ಬಸವಣ್ಣನವರು ಕುಳಿತು ಶಿವಯೋಗ ಸಾಧನೆ ಮಾಡಿರುವ ಪವಿತ್ರ ಗವಿಯಾಗಿದೆ. ಇಲ್ಲಿ ನಾವು ನೀವೆಲ್ಲ ಸೇರಿ ಶಿವಯೋಗ ಸಾಧನೆ ಮಾಡಿಕೊಳ್ಳುತ್ತಿರುವುದು ಆನಂದವನ್ನುಂಟು ಮಾಡಿದೆ. ಬಸವಣ್ಣನವರು ಭಕ್ತಿ ಭಂಡಾರಿ ಎಂದು ಹೇಳುತ್ತೇವೆ. ಭಕ್ತಿ ಕೆಟ್ಟಡೆ ಎಲ್ಲವೂ ಕೆಡುವುದು. ಇಂದು ಅನೇಕರು ಭಕ್ತಿಯಿಂದ ಪತಿತರಾಗಿ ಶುಷ್ಕರಾಗುತಿದ್ದಾರೆ. ಆದರೆ ಪೂಜ್ಯಶ್ರೀ ಅಕ್ಕ ಅನ್ನಪೂರ್ಣ ತಾಯಿಯವರು ಪ್ರವಚನಗಳ ಪ್ರಾರಂಭಕ್ಕೂ ಪೂರ್ವದಲ್ಲಿ ಅರಿವಿನ ಮನೆಗೆ ಬಂದು ಶಿವಯೋಗ ಮಾಡಿ ಪ್ರವಚನವನ್ನು ಮಾಡುತ್ತಿದ್ದರು. ಅವರ ಸಂಕಲ್ಪದಂತೆ ಪೂಜ್ಯಶ್ರೀ ಪ್ರಭುದೇವ ಸ್ವಾಮೀಜಿ ನಮ್ಮ ನಿಮ್ಮೆಲ್ಲರನ್ನ ಅದೇ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತೋಷದ ವಿಷಯ” ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯಶ್ರೀ ಪ್ರಭುದೇವ ಮಹಾಸ್ವಾಮೀಜಿ, “ಕಲ್ಯಾಣ ಕೈಲಾಸವಾಗಿತ್ತು, 12ನೇ ಶತಮಾನದಲ್ಲಿ ಜಗತ್ತಿನ ಮೂಲೆ ಮೂಲೆಯಿಂದ ಶರಣ ಬಳಗವೆಲ್ಲ ಕಲ್ಯಾಣಕ್ಕೆ ಧಾವಿಸಿ ಬಂದರು. ಕಾರಣ, ಬಸವಣ್ಣನವರ ಮೇಲಿನ ಅಪರಿಮಿತ ಪ್ರೇಮ. ಶರಣರ ಬರುವಿಕೆಗಾಗಿ ಹಗಲಿರುಳು ಕಾಯುವವರು ಮಹಾಮನೆ ಮುಂದೆ ಗಿಳಿಯ ಹಂಜರವಿಟ್ಟು ದೀಪಕ್ಕೆ ಎಣ್ಣೆಯ ಸುರಿದು ಶರಣರು ಬರುವರೆಂದು ಕಾಯುತ್ತಿದ್ದರು. ಒಣಗಿದ ಎಲೆಯ ಸಪ್ಪಳವಾದರೂ ಶರಣರನ್ನು ಆಗಲಿದ್ದೇನೋ ಎಂಬ ದುಗುಡದಿಂದ ಹೊರಬಂದು ನೋಡುತಿದ್ದರು. ಶರಣರು ಬಂದು ಶಿವ ಎಂದರೆ ಎನಗೆ ಸಂತೋಷವಾಗುತ್ತದೆ ಎಂದು ವಚನದ ಮುಖಾಂತರ ಹೇಳುತ್ತಾರೆ ಬಸವಣ್ಣನವರು.
ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆಯನ್ನು ಕೊಟ್ಟ ನೆಲದಲ್ಲಿ ಅಹಂಕಾರದಿಂದ ಅಡ್ಡ ಪಲ್ಲಕ್ಕಿಯಲ್ಲಿ ಮೆರೆಯುವುದು ಬಸವ ಭಕ್ತರ ಮನಸ್ಸಿಗೆ ನೋವುಂಟು ಮಾಡುವ ಯಾವುದೇ ಕಾರ್ಯ ಕಲ್ಯಾಣದಲ್ಲಿ ನಡೆಯಬಾರದು. ಜಗತ್ತಿನಾದ್ಯಂತ ಬಸವ ಕಲ್ಯಾಣದ ಕುರಿತು ಎಲ್ಲರ ಮನದಲ್ಲಿ ಅಭಿಮಾನದ ಹಾಗೂ ಭಕ್ತಿ ಭಾವವಿದೆ. ಬಸವಕಲ್ಯಾಣ, ಕೂಡಲಸಂಗಮ, ಉಳವಿ ಕ್ಷೇತ್ರಗಳು, ಶರಣರು ನಡೆದಾಡಿದ ಪಾವನಭೂಮಿ. ಈ ಭೂಮಿಯಲ್ಲಿ ಶರಣರ ತತ್ವಗಳಿಗೆ ಚುತಿಯಾಗುವಂತಹ ಯಾವುದೇ ಕಾರ್ಯಗಳು ನಡೆಯಬಾರದು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯ ಅಧ್ಯಕ್ಷರಾದ ಬಸವರಾಜ ಕೊರ್ಕೆ ಭಾಗವಹಿಸಿ ಪ್ರಸಾದ ವ್ಯವಸ್ಥೆ ಮಾಡಿದರು. ನಿರ್ದೇಶಕರಾದ
ಕಾಶಪ್ಪ ಸಕ್ಕರಭಾವಿ, ಶರಣು ದುರ್ಗೆ, ಶಿಖರೇಶ್ವರ ರಾಜೊಳೆ, ಬಾಬುರಾವ ರಾಜೊಳೆ, ಸುಭಾಷ ಪತಂಗೆ, ಪ್ರಶಾಂತ ಪಾಟೀಲ, ಶಂಕರ ಪತಂಗೆ, ಚಂದ್ರಕಾಂತ ಕಾಣಜೆ, ಗೋರಟಾ ಗ್ರಾಮದ ನೀಲಮ್ಮನ ಬಳಗದ ಶರಣೆಯರು ಮತ್ತಿತರರು ಭಾಗವಹಿಸಿದ್ದರು.