ವನಜಭಾವಿ ಗ್ರಾಮದಲ್ಲಿ ವಚನ ಜ್ಯೋತಿ ಕಾರ್ಯಕ್ರಮ

ಯಲಬುರ್ಗಾ

ಶ್ರಾವಣ ಮಾಸದ ಅಂಗವಾಗಿ ಮನೆಯಿಂದ ಮನೆಗೆ, ಮನದಿಂದ ಮನಕ್ಕೆ ವಚನ ಜ್ಯೋತಿ 18ನೇ ದಿನದ ಕಾರ್ಯಕ್ರಮ ವನಜಭಾವಿ ಗ್ರಾಮದ ಗಿರಿಮಲ್ಲಪ್ಪ ಪರಂಗಿ ಅವರ ಮನೆಯಲ್ಲಿ ನಡೆಯಿತು.

ರಾಷ್ಟ್ರೀಯ ಬಸವದಳ, ಯುವ ಘಟಕ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮದ ಪ್ರಥಮದಲ್ಲಿ ಬಸವಗುರು ಪೂಜೆ, ಲಿಂಗಪೂಜೆ ನಂತರ ವಚನ ಪಠಣದೊಂದಿಗೆ, ಬಸವಾದಿ ಶಿವ ಶರಣರಲ್ಲೊಬ್ಬರಾದ ಶರಣೆ ಕುಂಬಾರ ಗಂಡಯ್ಯನ ಧರ್ಮ ಪತ್ನಿ ಕೇತಲಾದೇವಿಯ ಜೀವನ ಚರಿತ್ರೆಯನ್ನು ಚಿಂತನ ವಿಷಯವಾಗಿ ತೆಗೆದುಕೊಂಡು, ಪ್ರಾಸ್ತಾವಿಕವಾಗಿ ದೇವಪ್ಪ ಕೋಳೂರು ಮಾತನಾಡುತ್ತ, ಶರಣೆ ಕೇತಲಾದೇವಿ ಕಲ್ಯಾಣದಲ್ಲಿ ವಿಶ್ವಗುರು ಬಸವಣ್ಣನವರ ಪ್ರಭಾವದಿಂದ, ತನ್ನ ಕುಂಬಾರಿಕೆ ಕಾಯಕದ ಮೂಲಕ ವಚನ ರಚಿಸುವಂತಹ ಶಕ್ತಿ ಹೊಂದಿದ್ದರು. ಅಂಗದ ಮೇಲೆ ಲಿಂಗ ಧರಿಸಿ, ಲಿಂಗಾಂಗ ಸಾಮರಷ್ಯದಿಂದ ನಿರಾಕಾರ ದೇವನನ್ನು ಸಾಕ್ಷಾತ್ಕಾರ ಮಾಡಿಕೊಂಡವರು. ಇಂತಹ ಮಹಾತ್ಮರ ವಾಣಿಯನ್ನು ನಾವು ಮೈಗೂಡಿಸಿಕೊಂಡು ಬಾಳಿ ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ನಿವೃತ್ತ ಪಿಎಸೈ ಬಸವನಗೌಡ ಪೋಲಿಸ್ ಪಾಟೀಲ ಅವರು, ಕಾಯಕಪ್ರೇಮಿ ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿ ಶರಣ ದಂಪತಿ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಇಂದಿಗೂ ಜನಜೀವನದ ಭಾಗವಾಗಿದ್ದಾರೆ. ಒಕ್ಕಲಿಗರು ತಮ್ಮ ಬೆಳೆಗಳ ರಕ್ಷಣೆಗಾಗಿ ಹೊಲಗಳಲ್ಲಿ ಒಂದು ಕೋಲಿಗೆ ಗಡಿಗೆ ಮಗುಚಿ ಹಾಕಿ, ಸುಣ್ಣ ಬಳಿದು, ‘ಬೆದರು ಬೊಂಬೆ’ಯನ್ನು ಮಾಡಿ ನಿಲ್ಲಿಸುತ್ತಾರೆ. ಆ ಗಡಿಗೆಯನ್ನು ಅವರು “ಗುಂಡ”ನೆಂದು ಕರೆದು, ಕುಂಬಾರ ಗುಂಡಯ್ಯ ರಕ್ಷಣೆ ಮಾಡುತ್ತಾನೆಂದು ನಂಬುತ್ತಾರೆ.

ಬೆಚ್ಚುಹಾಕಿದ ಗಡಿಗಿ ಮುಚ್ಚಿಟ್ಟ ಹೊಲ ಹುಲುಸು ಬಚ್ಚಾದ ಬೆಳೆಯ ಕಣವುಕ್ಕಿ- ಗುಂಡಯ್ಯ ಹೆಚ್ಚಾಯ್ತು ನಿನ್ನ ಶಿವಭಕ್ತಿ ಎಂದು ಹಾಡುವ ಜನಪದರು, “ಗುಂಡಯ್ಯನ ಗಡಿಗೆ ಹೊಲವನ್ನು ಕಾಯುವುದು ಮಾತ್ರವಲ್ಲ, ಚಳಿಗಾಲದಲ್ಲಿ ಬೆಳೆಗಳಿಗೆ ಬೆಚ್ಚನೆಯ ಹಿತಕರವಾದ ಗಾಳಿಯನ್ನು ಬೀಸಿ ತರುತ್ತಾನೆ” ಎಂದೂ ನಂಬುತ್ತಾರೆ. ಆ ಚಳಿಗಾಲದ ಗಾಳಿಯನ್ನು “ಕುಂಬಾರನ ಗಾಳಿ”ಯೆಂದೇ ಕರೆಯುತ್ತಾರೆ. ಆ ರಸಗಾಳಿ ವರ್ಷಕ್ಕೊಮ್ಮೆ ಬೀಸಿದರೆ, ಕುಂಬಾರ ಗುಂಡಯ್ಯನ ಭಕ್ತಿರಸ ಗಾಳಿ ಹಗಲಿರುಳು ಬೀಸುತ್ತದೆ, ಬೀಸುತ್ತಿರಲಿ ಎನ್ನುವ ಆಶಯ ಜನಪದರ ಹಾಡಿನಲ್ಲಿ ತೋರಿಬರುತ್ತದೆ. ಹೀಗೆ ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿಯವರು ತಮ್ಮ ಶಿವಭಕ್ತಿಯಿಂದ ಜನಮಾನಸದಲ್ಲಿ ಅಮರವಾಗಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಶರಣಪ್ಪ ಕುಂಬಾರ ವನಜಭಾವಿ ಇವರು ವಹಿಸಿದ್ದರು. ಕಾರ್ಯಕ್ರಮದ ಗೌರವಾನ್ವಿತರಾಗಿ ಶರಣ ರೇಣುಕಪ್ಪ ಮಂತ್ರಿ, ಯಮನೂರಪ್ಪ ಸಾಹುಕಾರ, ಬಸವರಾಜ ಹೂಗಾರ ಇವರು ವೇದಿಕೆ ಹಂಚಿಕೊಂಡು ಮಾತನಾಡಿದರು.

ವನಜಭಾವಿ ಗ್ರಾಮದ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳಾದ ಹನಮಂತಪ್ಪ ಮೇಟಿ, ಶರಣ ನಿಂಗಪ್ಪ ಪರಂಗಿ, ಚಿದಾನಂದಗೌಡ ಗೊಂದಿ, ಯಲ್ಲಪ್ಪ ಅತ್ತಿಗುಡ್ಡದ, ಶರಣಪ್ಪ ಗೊಂದಿ, ಅಮರೇಶ್ ನಿಡಶೇಸಿ, ಬಸವರಾಜ ಕುರಿ, ಈರನಗೌಡ ಗೌಡ್ರು, ಜಗದೀಶ್ ಗೌಡ್ರ, ಪರಮೇಶ್ವರ ಉಚ್ಚಲಕುಂಟಿ, ಯಮನಮ್ಮ ಗೌಡ್ರ ಸೇರಿದಂತೆ ಗ್ರಾಮದ ಗುರು ಹಿರಿಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *