ಶಿವಮೊಗ್ಗ
ಧರ್ಮದ ಪರಿಧಿಯನ್ನು ವಿಸ್ತರಿಸಿ, ಅದನ್ನು ನೇರವಾಗಿ ಮಾನವೀಯ ಜೀವನಮೌಲ್ಯಗಳಿಗೆ ಕೊಂಡೊಯ್ದ ಹಿರಿಮೆ ವಚನ ಚಳವಳಿಗೆ ಸೇರುತ್ತದೆ ಎಂದು ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ಬಸವ ಕೇಂದ್ರದಲ್ಲಿ ವಚನ ದರ್ಶನ ಪ್ರವಚನ ಶಿವಾನುಭವ ಸಪ್ತಾಹಕ್ಕೆ ಗುರುವಾರ ಸಂಜೆ ಚಾಲನೆ ನೀಡಿ ‘ಧರ್ಮ’ ಎಂಬ ವಿಷಯ ಕುರಿತು ಅವರು ಪ್ರವಚನ ನೀಡಿದರು.
ಕೇವಲ ವಿಧಿವಿಧಾನ, ಪೂಜೆ-ಪಠಣಗಳ ಪಾರ್ಶ್ವದಲ್ಲಿದ್ದ ಧರ್ಮವನ್ನು ವಚನಕಾರರು ಮಾನವೀಯತೆಯ ನೆಲೆಯಲ್ಲಿ ಪುನರ್ ನಿರ್ಮಾಣ ಮಾಡಿದರು ಎಂದು ವಿವರಿಸಿದರು.
ವಚನಸಾಹಿತ್ಯದಲ್ಲಿ ಧರ್ಮವೆಂದರೆ – ಸತ್ಯ, ಅಹಿಂಸಾ, ಕರುಣೆ, ಸಮಾನತೆ, ಪರಿಶುದ್ಧತೆ, ಶ್ರಮ ಹಾಗೂ ಪ್ರಾಮಾಣಿಕ ಜೀವನವಿಧಾನ. ಶರಣರ ದೃಷ್ಟಿಯಲ್ಲಿ “ಧರ್ಮವೆಂದರೆ ನನ್ನೊಳಗಿನ ಸತ್ಯವನ್ನು ಬದುಕುವುದು” ಎಂಬ ಸಂದೇಶ ಸ್ಪಷ್ಟವಾಗಿ ಕಾಣುತ್ತದೆ ಎಂದರು.
ವಚನಕಾರರು ಧರ್ಮವನ್ನು ಜಾತಿ–ಮತ ಭೇದದಿಂದ ಮುಕ್ತಗೊಳಿಸಿ, ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡುವಂತೆ ಸಾರಿದರು. ವಚನಕಾರರ ದೃಷ್ಟಿಯಲ್ಲಿ ಕರ್ಮಕ್ಕಿಂತ ಉದ್ದೇಶ ಮುಖ್ಯ ಎಂದರು.
ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯ, ಅಸಮಾನತೆ ಅವರಿಗೆ ಅಸಹ್ಯ. ಧರ್ಮದ ನಿಜಸ್ವರೂಪ – ಹೃದಯದ ಶುದ್ಧತೆ, ನಿಷ್ಠಾವಂತ ಶ್ರಮ, ಸಮಾಜದ ಹಿತವೇ ಧರ್ಮದ ಮೂಲ ಆಶಯ ಎಂದು ವಚನಕಾರರು ಪ್ರತಿಪಾದಿಸಿದವರು ಎಂದು ವಿಶ್ಲೇಷಿಸಿದರು.
ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು. ಪುಷ್ಪಾ, ಗಣೇಶ, ಜಯದೇವಪ್ಪ ನ್ಯಾಮತಿ ಅವರ ದತ್ತಿಯಡಿ ಈ ಪ್ರವಚನ ನಡೆಯಿತು.
ಕಾರ್ಯಕ್ರಮದಲ್ಲಿ ಶರಣ ಶರಣೆಯರು ಉಪಸ್ಥಿತರಿದ್ದರು.