ಬೀದರಿನಲ್ಲಿ ಅಭಿಯಾನ ಕಚೇರಿ ಉದ್ಘಾಟನೆ, ಭಿತ್ತಿಪತ್ರ, ಕರಪತ್ರ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಬಸವ ಸಂಸ್ಕೃತಿಯ ಪ್ರಚಾರ ಎಲ್ಲೆಡೆ ಇನ್ನಷ್ಟು ತೀವ್ರಗತಿಯಲ್ಲಿ ಆಗಬೇಕಿದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ನಗರದ ಐ.ಎಂ.ಎ. ಹಾಲ್‍ನಲ್ಲಿ ಬುಧವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಕಚೇರಿ ಉದ್ಘಾಟನೆ, ಭಿತ್ತಿಪತ್ರ ಹಾಗೂ ಕರಪತ್ರ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಶ್ರೇಷ್ಠ ಬಸವ ಸಂಸ್ಕೃತಿ ಬೆಳೆಸುವ ಕಾರ್ಯಕ್ಕೆ ಬಸವಾನುಯಾಯಿಗಳೆಲ್ಲ ಕೈಜೋಡಿಸಬೇಕಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿದ ಪ್ರಯುಕ್ತ ಬಸವ ಸಂಸ್ಕೃತಿಯನ್ನು ಮನೆ ಮನೆಗೆ ತಲುಪಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಬಸವ ಸಂಸ್ಕೃತಿ ಅಭಿಯಾನಕ್ಕೆ ಸೆಪ್ಟೆಂಬರ್ 1 ರಂದು ಬಸವನಬಾಗೆವಾಡಿಯಲ್ಲಿ ಚಾಲನೆ ದೊರೆಯಲಿದ್ದು, ಸೆಪ್ಟೆಂಬರ್ 3ಕ್ಕೆ ಬೀದರ ನಗರಕ್ಕೆ ಬರಲಿದೆ ಎಂದು ಹೇಳಿದರು.

ಬೀದರ ಬಸವ ಸಂಸ್ಕೃತಿಯ ಗಟ್ಟಿ ನೆಲವಾಗಿದೆ. ಬಸವಪರ ಕಾರ್ಯಗಳು ಇಲ್ಲಿ ಅಭೂತಪೂರ್ವ ಯಶಸ್ಸು ಕಂಡಿವೆ. ಬೀದರನ ಬಸವ ಸಂಸ್ಕೃತಿ ಅಭಿಯಾನವನ್ನೂ ಎಲ್ಲರೂ ಜತೆಗೂಡಿ ಯಶಸ್ವಿಗೊಳಿಸಬೇಕಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಅಧ್ಯಕ್ಷರೂ ಆದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಸೆ. 3 ರಂದು ಬೆಳಿಗ್ಗೆ 11ಕ್ಕೆ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಬಸವ ಸಂಸ್ಕೃತಿ ಹಾಗೂ ವಚನ ಕುರಿತು ಮಠಾಧೀಶರು, ಗಣ್ಯರು ಹಾಗೂ ವಿದ್ಯಾರ್ಥಿಗಳ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಂಜೆ 4ಕ್ಕೆ ಬಸವೇಶ್ವರ ವೃತ್ತದಿಂದ ಬಿ.ವಿ. ಭೂಮರಡ್ಡಿ ಕಾಲೇಜು ವರೆಗೆ ಬೃಹತ್ ಮೆರವಣಿಗೆ ಜರುಗಲಿದೆ. ಅಭಿಯಾನದ ಅಲಂಕೃತ ರಥ, ಬೃಹತ್ ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿ, ವಚನ ಸಾಹಿತ್ಯ ಮೊದಲಾದವು ಪ್ರಮುಖ ಆಕರ್ಷಣೆ ಆಗಲಿವೆ ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ಒಂದು ಸಾವಿರ ಮಹಿಳೆಯರು ಪಾರಂಪರಿಕ ಇಳಕಲ್ ಸೀರೆ, ಒಂದು ಸಾವಿರ ಪುರುಷರು ಧೋತರ-ಅಂಗಿ ಧರಿಸಿ ಪಾಲ್ಗೊಳ್ಳಲಿದ್ದಾರೆ. ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ, ಅಕ್ಕಮಹಾದೇವಿ, ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಕಿತ್ತೂರು ರಾಣಿ ಚೆನ್ನಮ್ಮ, ಫ.ಗು. ಹಳಕಟ್ಟಿ, ಹರ್ಡೆಕರ್ ಮಂಜಪ್ಪ, ಸೇರಿದಂತೆ ನಾಡಿನ ಕೀರ್ತಿ ಬೆಳಗಿದ 21 ಶರಣ-ಶರಣೆಯರು, ಮಹಾ ಪುರುಷರು, ಹೋರಾಟಗಾರರು, ಸಾಹಿತಿಗಳು, ಸಾಧಕರ ಪಾತ್ರಧಾರಿಗಳು ಕುದುರೆ ಮೇಲೆ ಕುಳಿತು ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯಲಿದ್ದಾರೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ಡಿಜೆ ಇರುವುದಿಲ್ಲ. ಜಯಘೋಷ, ಮಂತ್ರ, ವಚನ ಪಠಣ, ಕೋಲಾಟ ಮತ್ತಿತರ ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಸಂಜೆ 6ಕ್ಕೆ ಬಿ.ವಿ. ಭೂಮರಡ್ಡಿ ಕಾಲೇಜು ಮೈದಾನದಲ್ಲಿ ವೇದಿಕೆ ಸಮಾರಂಭ ಜರುಗಲಿದೆ. ಅಭಿಯಾನದ ಪ್ರಚಾರಾರ್ಥವಾಗಿ ಚಿತ್ರಕಲಾ ಹಾಗೂ ರಂಗೋಲಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾತಂಬ್ರಾದ ಶಿವಯೋಗೀಶ್ವರ ಸ್ವಾಮೀಜಿ, ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ, ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು.

ಅಭಿಯಾನದ ಭಿತ್ತಿಪತ್ರ ಹಾಗೂ ಕರಪತ್ರ ಬಿಡುಗಡೆ ಮಾಡಲಾಯಿತು. ಕಲಾವಿದ ಶಿವಲಿಂಗ ಯರಗಲ್ ವಚನ ಸಂಗೀತ ನಡೆಸಿಕೊಟ್ಟರು.

ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಬಸವ ಮಹಾಂತ ಸ್ವಾಮೀಜಿ, ಸುಗುಣಾತಾಯಿ, ಮುಖಂಡರಾದ ಶಿವಶರಣಪ್ಪ ವಾಲಿ, ಬಿ.ಜಿ. ಶೆಟಕಾರ, ಬಾಬುವಾಲಿ, ಜೈರಾಜ ಖಂಡ್ರೆ, ಶರಣಪ್ಪ ಮಿಠಾರೆ, ರಾಜೇಂದ್ರ ಜೊನ್ನಿಕೇರಿ, ದಿಗಂಬರ ಮಡಿವಾಳ, ಉಷಾ ಮಿರ್ಚೆ, ದೇವಕಿ ನಾಗೂರೆ, ಸುವರ್ಣಾ ಧನ್ನೂರ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ನೂರಾರು ಶರಣ ಶರಣೆಯರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *